BibleProject | ತಲೆಕೆಳಗೆ ಮಾಡುವ ವಿಭಿನ್ನ ರಾಜ್ಯ / ಭಾಗ 1 - ಲೂಕನುPrøve

BibleProject | ತಲೆಕೆಳಗೆ ಮಾಡುವ ವಿಭಿನ್ನ ರಾಜ್ಯ / ಭಾಗ 1 - ಲೂಕನು

Dag 12 av 20

"ಯೇಸುವಿನ ರಾಜ್ಯವು ಪೀಡನೆಗೊಳಗಾದವರಿಗೆ ಶುಭ ವಾರ್ತೆಯಾಗಿದ್ದು, ದೇವರ ಅಗತ್ಯವು ನಮಗಿದೆ ಎಂದು ಅರ್ಥಮಾಡಿಕೊಳ್ಳುವ ಪ್ರತಿಯೊಬ್ಬರಿಗೂ ಆ ರಾಜ್ಯದ ಬಾಗಿಲು ತೆರೆಯಲ್ಪಟ್ಟಿರುತ್ತದೆ. ಇದನ್ನು ವಿವರಿಸುವುದಕ್ಕಾಗಿ, ಯೇಸು ತನ್ನ ಕ್ಷಮಾಪಣೆಯನ್ನು, ಗುಣಪಡಿಸುವಿಕೆಯನ್ನು ಮತ್ತು ಕರುಣೆಯನ್ನು ಹೊಂದಿಕೊಂಡಂಥ ರೋಗಿಗಳೊಂದಿಗೂ ಬಡವರೊಂದಿಗೂ ಯೇಸು ಔತಣ ಕೂಟದಲ್ಲಿ ಪಾಲ್ಗೊಂಡಿದ್ದರ ಕುರಿತು ಲೂಕನು ಹೇಳುತ್ತಿರುವನು. ಅದಕ್ಕೆ ವ್ಯತಿರಿಕ್ತವಾಗಿ, ತನ್ನ ಸಂದೇಶವನ್ನು ತಿರಸ್ಕರಿಸಿದ ಮತ್ತು ತನ್ನ ಸೇವೆ ರೀತಿಯ ಕುರಿತು ವಾದಿಸಿದ ಧಾರ್ಮಿಕ ಮುಖಂಡರೊಂದಿಗೂ ಸಹ ಯೇಸು ಔತಣ ಕೂಟದಲ್ಲಿ ಪಾಲ್ಗೊಂಡನು. ದೇವರ ರಾಜ್ಯವೆಂದರೆ ಏನೆಂಬುದು ಅವರಿಗೆ ಅರ್ಥವಾಗಲಿಲ್ಲ, ಆದ್ದರಿಂದ ಆತನು ಅವರಿಗೆ ಒಂದು ಸಾಮ್ಯವನ್ನು ಹೇಳಿದನು. ಆ ಸಾಮ್ಯವು ಹೀಗಿದೆ.

ಒಬ್ಬ ತಂದೆಗೆ ಇಬ್ಬರು ಗಂಡು ಮಕ್ಕಳಿದ್ದರು. ಹಿರಿಯ ಮಗನು ನಂಬಿಗಸ್ತನೂ ತಂದೆಯನ್ನು ಗೌರವಿಸುವವನೂ ಆಗಿದ್ದನು, ಆದರೆ ಕಿರಿಯ ಮಗ ಪೋಲಿಯಾಗಿದ್ದನು. ಅವನು ತನ್ನ ಆಸ್ತಿಪಾಸ್ತಿಯನ್ನೆಲ್ಲಾ ಕಾಲಕ್ಕೆ ಮೊದಲೇ ಬಾಚಿಕೊಂಡು, ದೂರದೇಶಕ್ಕೆ ಹೋಗಿ ಮೋಜುಮಸ್ತಿ ಮಾಡಿ ಅದನ್ನೆಲ್ಲಾ ಹಾಳುಮಾಡಿ ಮೂರ್ಖನಾದನು. ಆಗ ಬರಗಾಲ ಬಂತು, ಅಷ್ಟು ಹೊತ್ತಿಗಾಗಲೇ ಆ ಮಗನ ಬಳಿಯಿದ್ದ ಹಣವೆಲ್ಲ ಖಾಲಿಯಾಗಿ ಹೋಗಿತ್ತು, ಆದ್ದರಿಂದ ಅವನು ಬೇರೊಬ್ಬರ ಹಂದಿಗಳನ್ನು ಮೇಯಿಸುವ ಕೆಲಸವನ್ನು ಮಾಡಲಾರಂಭಿಸಿದನು. ಒಂದು ದಿನ ಅವನಿಗೆ ಎಷ್ಟು ಹಸಿವು ಆಯಿತೆಂದರೆ ಹಂದಿಯು ತಿನ್ನುತ್ತಿದ್ದ ಊಟದ ಎಂಜಿಲನ್ನು ತಿನ್ನಲು ಮುಂದಾದನು, ಆಗ ಅವನಿಗೆ ಇದಕ್ಕಿಂತ ಮನೆಯಲ್ಲಿ ತನ್ನ ತಂದೆಗೋಸ್ಕರ ಕೆಲಸ ಮಾಡಿದರೆ ಎಷ್ಟೋ ಮೇಲು ಎಂಬ ಯೋಚನೆ ಬಂತು. ಆದ್ದರಿಂದ ಅವನು ಹೇಗೆ ಕ್ಷಮೆಯನ್ನು ಕೇಳಬೇಕೆಂದು ಪೂರ್ವಾಭ್ಯಾಸ ಮಾಡುತ್ತಾ ಮನೆಗೆ ಹಿಂದಿರುಗಿ ಹೊರಟನು. ಮಗನು ಇನ್ನೂ ದೂರದಲ್ಲಿದ್ದಾಗಲೇ ತಂದೆಯು ಅವನನ್ನು ನೋಡಿ ತುಂಬಾ ಸಂತೋಷಪಟ್ಟನು. ಅವನ ಮಗ ಇನ್ನೂ ಜೀವಂತವಾಗಿದ್ದಾನೆ! ಅವನು ಬರಗಾಲದಲ್ಲೂ ಬದುಕುಳಿದಿದ್ದಾನೆ! ತಂದೆಯು ಅವನ ಬಳಿಗೆ ಓಡಿ ಅವನನ್ನು ತಬ್ಬಿಕೊಂಡು ಮುದಿಡುವುದನ್ನು ನಿಲ್ಲಿಸಲೇ ಇಲ್ಲ. ಮಗನು ಮಾತನಾಡಲಾರಂಭಿಸಿ, “ಅಪ್ಪಾ, ನಿನ್ನ ಮಗನಾಗಿರಲು ನಾನು ಯೋಗ್ಯನಲ್ಲ. ನಾನು ಕೂಲಿಯಾಳಾಗಿ ನಿನಗಾಗಿ ಕೆಲಸ ಮಾಡಲೇ...” ಎಂದು ಹೇಳಿ ಮುಗಿಸುವ ಮೊದಲೇ, ತಂದೆಯು ತನ್ನ ಆಳುಗಳನ್ನು ಕರೆದು ತನ್ನ ಮಗನಿಗಾಗಿ ಶ್ರೇಷ್ಠವಾದ ನಿಲುವಂಗಿಯನ್ನು, ಹೊಸ ಕೆರವನ್ನು ಮತ್ತು ಸುಂದರವಾದ ಉಂಗುರವನ್ನು ತೆಗೆದುಕೊಂಡು ಬನ್ನಿರಿ ಎಂದು ಆಜ್ಞಾಪಿಸಿದನು. ತನ್ನ ಮಗನು ಮನೆಗೆ ಹಿಂದಿರುಗಿ ಬಂದಿದ್ದರ ಸಂಭ್ರಮವನ್ನು ಆಚರಿಸುವ ಸಮಯವು ಆದಾಗಿದ್ದರಿಂದ ಅವರು ಅತ್ಯುತ್ತಮವಾದ ಔತಣಕೂಟವನ್ನು ಸಿದ್ಧಪಡಿಸಬೇಕಾಗಿತ್ತು. ಔತಣಕೂಟವು ಪ್ರಾರಂಭವಾಗುತ್ತಿದ್ದಂತೆ, ಹಿರಿಯ ಮಗನು ಬೆಳಗಿನಿಂದ ದಿನ ಪೂರ್ತಿ ಕಠಿಣವಾಗಿ ಕೆಲಸ ಮಾಡಿ ತಿರುಗಿ ಬಂದಾಗ ಈ ಸಂಗೀತವೆಲ್ಲವೂ ಆಹಾರವೆಲ್ಲವೂ ಪೋಲಿಹೋಗಿದ್ದ ತನ್ನ ತಮ್ಮನಿಗಾಗಿ ಏರ್ಪಡಿಸಲಾಗಿದೆ ಎಂದು ತಿಳಿದು ಕೋಪಗೊಂಡು ಆ ಸಂಭ್ರಮಾಚರಣೆಯಲ್ಲಿ ಪಾಲ್ಗೊಳಲು ನಿರಾಕರಿಸಿದನು. ತಂದೆಯು ಹೊರಗೆ ಬಂದು ತನ್ನ ಹಿರಿಯ ಮಗನನ್ನು ಕಂಡು, “ಮಗನೇ, ನೀನು ಈಗಾಗಲೇ ನಮ್ಮ ಕುಟುಂಬದಲ್ಲಿಯೇ ಇರುವಿ. ನನ್ನದೆಲ್ಲಾ ನಿನ್ನದೇ! ಆದರೆ ನಾವು ನಿನ್ನ ತಮ್ಮನು ತಿರುಗಿ ಬಂದಿರುವುದನ್ನು ಹಬ್ಬಮಾಡಿ ಆಚರಿಸಬೇಕಾದದ್ದು ಸರಿಯೇ. ಯಾಕೆಂದರೆ ಅವ ನು ಕಳೆದುಹೋಗಿದ್ದನು, ಆದರೆ ಈಗ ಅವನು ಸಿಕ್ಕಿದ್ದಾನೆ. ಅವನು ಸತ್ತವನಾಗಿದ್ದನು, ಆದರೆ ಈಗ ಅವನು ಜೀವಂತವಾಗಿದ್ದಾನೆ” ಎಂದನು.

ಈ ಕಥೆಯಲ್ಲಿ, ಯೇಸು ಧಾರ್ಮಿಕ ನಾಯಕರನ್ನು ಹಿರಿಯ ಮಗನಿಗೆ ಹೋಲಿಸಿ ಹೇಳುತ್ತಿದ್ದಾನೆ. ಯೇಸು ಹೊರಗೆ ತಳಲ್ಪಟ್ಟವರನ್ನು ಸ್ವೀಕರಿಸುವುದನ್ನು ಧಾರ್ಮಿಕ ನಾಯಕರು ಕಂಡು ಆತನ ಮೇಲೆ ಎಷ್ಟು ಅಸಮಾಧಾನಗೊಂಡಿದ್ದರು ಎಂಬುದನ್ನು ಯೇಸು ತಿಳಿದುಕೊಂಡಿದ್ದನು, ಆದರೆ ಅವರು ಸಹ ಹೊರಗೆ ತಳಲ್ಪಟ್ಟವರನ್ನು ತನ್ನಂತೆಯೇ ಕಾಣಬೇಕೆಂದು ಯೇಸು ಬಯಸಿದನು. ಸಮಾಜದಿಂದ ಹೊರ ಹಾಕಲ್ಪಟ್ಟವರು ತಮ್ಮ ತಂದೆಯ ಬಳಿಗೆ ಮರಳಿ ಬರುತ್ತಿರುವರು. ಅವರು ಜೀವಂತವಾಗಿದ್ದಾರೆ! ಎಲ್ಲರಿಗೂ ಹಚ್ಚಲು ಬೇಕಾದಷ್ಟು ಮೇಲುಗಳು ದೇವರಒಳ್ಳೆಯತನದಲ್ಲಿದೆ. ಆತನ ಬಳಿ ಇರುವಂಥದ್ದೆಲ್ಲವೂ ಆತನು ಯಾರನ್ನು ತನ್ನ ಮಕ್ಕಳೆಂದು ಕರೆಯುವನೋ ಅವರಿಗೆ ಸೇರಿದಾಗಿದೆ. ಆತನ ರಾಜ್ಯದಲ್ಲಿ ಪಾಲ್ಗೊಂಡು ಅದನ್ನು ಆಸ್ವಾದಿಸಲು ಬೇಕಾಗಿರುವ ಏಕೈಕ ವಿಷಯವೇನಂದರೆ ದೀನತೆಯಿಂದ ಅದನ್ನು ಸ್ವೀಕರಿಸಿಕೊಳ್ಳುವುದೇ ಆಗಿದೆ.

ಓದಿರಿ, ಯೋಚಿಸಿರಿ ಮತ್ತು ಪ್ರತಿಕ್ರಿಯಿಸಿರಿ:

•ಯೇಸುವಿನ ಸಾಮ್ಯದಲ್ಲಿರುವ ಹಿರಿಯ ಮಗನೊಂದಿಗೂ ಕಿರಿಯ ಮಗನೊಂದಿಗೂ ನಿಮ್ಮನ್ನು ನೀವು ಯಾವ ವಿಧದಲ್ಲಿ ಹೋಲಿಸಿಕೊಂಡು ಹೇಳಬಹುದು?

•ಕಿರಿಯ ಮಗನು ತನ್ನ ತಂದೆಯನ್ನು ಬಿಟ್ಟು ಹೋದನು ಆದರೆ ಅವನಿಗೆ ಕಷ್ಟ ಬಂದಾಗ ಅವನು ಹೇಗೆ ತನ್ನ ಮನಸ್ಸನ್ನು ಬದಲಾಯಿಸಿಕೊಂಡನು ಎಂಬುದನ್ನು ಗಮನಿಸಿರಿ. ತಂದೆಯಾದ ದೇವರ ಕಡೆಗೆ ತಿರುಗಿಕೊಳ್ಳುವಂತೆ ಕಷ್ಟವು ನಿಮಗೆ ಸಹಾಯ ಮಾಡಿದೆಯೇ? ಕಿರಿಯ ಮಗನನ್ನು ತಂದೆಯು ಸ್ವಾಗತಿಸಿದ ರೀತಿಯು ನಿಮ್ಮ ಮೇಲೆ ಎಂಥ ಪ್ರಭಾವ ಬೀರುತ್ತದೆ (15:20-24 ನೋಡಿರಿ)?

•ಈ ಕಥೆಯಲ್ಲಿ ಹಿರಿಯ ಮಗನು ತೋರುವ ಕೋಪವನ್ನು ಗಮನಿಸಿರಿ (15:28-30 ನೋಡಿರಿ). ಯಾರಾದರೂ ತಾವು ಅರ್ಹರಲ್ಲದ ಯಾವುದನ್ನಾದರೂ ಹೊಂದಿಕೊಂಡಾಗ ನಿಮಗೆ ಎಂದಾದರೂ ಬೇಸರವಾಗಿದ್ದೀಯಾ? ಹಾಗಿದ್ದಲ್ಲಿ, ಹಿರಿಯ ಮಗನಿಗೆ ತಂದೆಯು ಕೊಟ್ಟ ಉತ್ತರವು ನಿಮಗೆ ಹೇಗೆ ಅನ್ವಯಿಸುತ್ತದೆ (15: 31-32 ನೋಡಿರಿ)?

•ನಿಮ್ಮ ಓದುವಿಕೆಯೂ ಪ್ರತಿಫಲನವೂ ಪ್ರಾರ್ಥಿಸುವಂತೆ ನಿಮ್ಮನ್ನು ಪ್ರೇರೇಪಿಸಲಿ. ದೇವರ ಅಪಾರವಾದ ಕರುಣೆಯು ನಿಮ್ಮನ್ನು ಯಾವ ರೀತಿ ಆಶ್ಚರ್ಯಚಕಿತರನ್ನಾಗಿ ಮಾಡಿದೆ ಎಂಬುದರ ಕುರಿತು ದೇವರೊಡನೆ ಮಾತನಾಡಿರಿ, ಇತರರಿಗೆ ದಯೆ ತೋರಿ ಸ್ವೀಕರಿಸುವುದರಲ್ಲಿ ನಿಮಗಿರುವ ಹೆಣಗಾಟದ ಕುರಿತು ಪ್ರಾಮಾಣಿಕವಾಗಿ ತಿಳಿಸಿರಿ ಮತ್ತು ಕರುಣೆಯಲ್ಲಿ ಬೆಳೆಯಲು ನಿಮಗೆ ಏನೋ ಬೇಕೋ ಅದನ್ನು ಆತನ ಬಳಿ ಬೇಡಿಕೊಳ್ಳಿರಿ."

Dag 11Dag 13

Om denne planen

BibleProject | ತಲೆಕೆಳಗೆ ಮಾಡುವ ವಿಭಿನ್ನ ರಾಜ್ಯ / ಭಾಗ 1 - ಲೂಕನು

ಲೂಕನ ಸುವಾರ್ತೆಯನ್ನು 20 ದಿನಗಳಲ್ಲಿ ಓದುವಂತೆ ವ್ಯಕ್ತಿಗಳನ್ನು, ಸಣ್ಣ ಗುಂಪುಗಳನ್ನು ಮತ್ತು ಕುಟುಂಬಗಳನ್ನು ಪ್ರೇರೇಪಿಸಲು ತಲೆಕೆಳಗೆ ಮಾಡುವ ವಿಭಿನ್ನ ರಾಜ್ಯ ಭಾಗ 1 ಅನ್ನು ಬೈಬಲ್ ಪ್ರಾಜೆಕ್ಟ್ ರಚಿಸಿದೆ. ಅದರಲ್ಲಿ ಪಾಲ್ಗೊಳ್ಳುವವರು ಯೇಸುವನ್ನು ಕಂಡುಕೊಳ್ಳುವುದಕ್ಕೆ ಮತ್ತು ಲೂಕನ ಅತ್ಯುತ್ತವಾದ ಸಾಹಿತ್ಯ ರಚನೆಯನ್ನೂ ವಿಚಾರಧಾರೆಯನ್ನೂ ತಿಳಿದುಕೊಳ್ಳುವುದಕ್ಕೆ ಸಹಾಯ ಮಾಡಲು ಈ ಯೋಜನೆಯಲ್ಲಿ ಅನಿಮೇಟೆಡ್ ವೀಡಿಯೊಗಳು, ಗಹನವಾದ ಜ್ಞಾನವುಳ್ಳ ಸಾರಾಂಶಗಳು ಮತ್ತು ಚಿಂತನಾತ್ಮಕ ಪ್ರಶ್ನೆಗಳು ಇವೆ.

More