BibleProject | ತಲೆಕೆಳಗೆ ಮಾಡುವ ವಿಭಿನ್ನ ರಾಜ್ಯ / ಭಾಗ 1 - ಲೂಕನುPrøve

BibleProject | ತಲೆಕೆಳಗೆ ಮಾಡುವ ವಿಭಿನ್ನ ರಾಜ್ಯ / ಭಾಗ 1 - ಲೂಕನು

Dag 15 av 20

"ಲೂಕನ ಸುವಾರ್ತೆಯ ಈ ವಿಭಾಗದಲ್ಲಿ, ಯೇಸು ಯೆರೂಸಲೇಮಿಗೆ ಬೆಳೆಸಿದ ತನ್ನ ಸುದೀರ್ಘ ಪ್ರಯಾಣದ ಕೊನೆಯ ಹಂತಕ್ಕೆ ಬಂದನು. ಆತನು ಕತ್ತೆಯ ಮೇಲೆ ಕುಳಿತು ಎಣ್ಣೆ ಮರದ ಗುಡ್ಡದಿಂದ ಯೆರೂಸಲೇಮ್‌ ಪಟ್ಟಣದ ಕಡೆಗೆ ಹೊರಟನು. ಆತನು ಹೋಗುತ್ತಿದ್ದ ಆ ದಾರಿಯಲ್ಲಿ, ದೊಡ್ಡ ಜನಸಮೂಹವು "ಕರ್ತನ ಹೆಸರಿನಲ್ಲಿ ಬರುವ ಅರಸನಿಗೆ ಆಶೀರ್ವಾದ" ಎಂದು ಹಾಡುತ್ತಾ ರಾಜ ಮರ್ಯಾದೆಯಿಂದ ಆತನನ್ನು ಸ್ವಾಗತಿಸಿದರು. ಇಸ್ರಾಯೇಲಿನ ಪುರಾತನ ಪ್ರವಾದಿಗಳು ಒಂದು ದಿನ ದೇವರು ತಾನೇ ತನ್ನ ಜನರನ್ನು ರಕ್ಷಿಸಲು ಮತ್ತು ಲೋಕವನ್ನು ಆಳಲು ಬರುತ್ತಾನೆ ಎಂದು ವಾಗ್ದಾನ ಮಾಡಿದ್ದನ್ನು ಜನಸಮೂಹವು ನೆನಪಿಸಿಕೊಂಡಿತ್ತು. ನ್ಯಾಯವನ್ನೂ ಸಮಾಧಾನವನ್ನೂ ತರಲು ಕತ್ತೆಯ ಮೇಲೆ ಸವಾರಿ ಮಾಡುತ್ತಾ ಯೆರೂಸಲೇಮಿಗೆ ಬರುವ ಅರಸನ ಕುರಿತು ಪ್ರವಾದಿಯಾದ ಜೆಕರ್ಯನು ಹೇಳಿದ್ದನು. ಈ ನಿರೀಕ್ಷೆಗಳನ್ನೆಲ್ಲಾ ಯೇಸು ನೆರವೇರಿಸುತ್ತಿದ್ದಾನೆಂದು ಅವರು ತಿಳಿದುಕೊಂಡಿದ್ದರಿಂದ ಜನಸಮೂಹದವರು ಹಾಡಿ ಕೊಂಡಾಡಿದರು.

ಆದರೆ ಎಲ್ಲರೂ ಆತನನ್ನು ಒಪ್ಪಿಕೊಳ್ಳಲಿಲ್ಲ. ಧಾರ್ಮಿಕ ನಾಯಕರು ಯೇಸುವಿನ ಆಳ್ವಿಕೆಯು ತಮ್ಮ ಅಧಿಕಾರಕ್ಕೆ ಅಪಾಯವಾಗಿದೆ ಎಂದು ಕಂಡು, ಆತನನ್ನು ಅಧಿಕಾರಿಗಳಿಗೆ ಹಿಡಿದುಕೊಡಲು ಮಾರ್ಗಗಳನ್ನು ಹುಡುಕಿದರು. ಯೇಸು ಮುಂದೆ ಆಗುವುದನ್ನು ಕಂಡನು. ಇಸ್ರಾಯೇಲರು ತನ್ನನ್ನು ರಾಜನಾಗಿ ಸ್ವೀಕರಿಸುವುದಿಲ್ಲವೆಂದೂ ಅವರು ತನ್ನನ್ನು ನಿರಾಕರಿಸಿದ್ದು ಅವರನ್ನು ವಿನಾಶದ ಹಾದಿಗೆ ನಡೆಸುವುದ್ದರಿಂದ ಅವರು ನಾಶವಾಗುವರು ಎಂದು ಆತನಿಗೆ ತಿಳಿದಿತ್ತು. ಅದು ಆತನ ಹೃದಯವನ್ನು ಜಜ್ಜಿತು. ಮತ್ತು .... ಅದು ಆತನಿಗೆ ಕೋಪವನ್ನೆಬ್ಬಿಸಿತು. ಆತನು ಯೆರೂಸಲೇಮಿಗೆ ಬಂದ ಕೂಡಲೇ ದೇವಾಲಯದ ಅಂಗಳದತ್ತ ಧಾವಿಸಿ, ಹಣ ವಿನಿಮಯಕಾರರನ್ನು ಹೊಡೆದೊಡಿಸಿ ಇಡೀ ಯಜ್ಞದ ವ್ಯವಸ್ಥೆಯನ್ನು ಚಿಲ್ಲಾಪಿಲ್ಲಾಗೊಳಿಸಿದನು. ಆತನು ಅಂಗಳದ ಮಧ್ಯದಲ್ಲಿ ನಿಂತು, "ನನ್ನ ಆಲಯವು ಪ್ರಾರ್ಥನಾಲಯವಾಗಿರಬೇಕು, ಆದರೆ ನೀವು ಅದನ್ನು ಕಳ್ಳರ ಗವಿ ಮಾಡಿದ್ದೀರಿ" ಎಂದು ಹೇಳಿ ಅವರನ್ನು ವಿರೋಧಿಸಿದನು. ಆತನು ಇಲ್ಲಿ ಪ್ರವಾದಿಯಾದ ಯೆರೆಮೀಯನ ಮಾತುಗಳನ್ನು ಪುನರುಚ್ಚಿಸಿ ಹೇಳುತ್ತಿದ್ದಾನೆ, ಅವನು ಸಹ ಇಸ್ರಾಯೇಲಿನ ಧಾರ್ಮಿಕ ಮತ್ತು ರಾಜಕೀಯ ಶಕ್ತಿಯ ಕೇಂದ್ರಸ್ಥಾನವಾದ ಇದೇ ಸ್ಥಳದಲ್ಲಿ ನಿಂತುಕೊಂಡು ಇಸ್ರಾಯೇಲಿನ ನಾಯಕರ ಬಗ್ಗೆ ಅದೇ ರೀತಿಯಲ್ಲಿ ವಿಮರ್ಶಿಸಿದ್ದನು.

ಧಾರ್ಮಿಕ ನಾಯಕರು ಯೇಸು ಅವರನ್ನು ವಿರೋಧಿಸಿ ಹೇಳಿದ ವಿಷಯವನ್ನು ಅರ್ಥಮಾಡಿಕೊಂಡರು, ಆದರೆ ಅವರು ಅದರಿಂದ ಕಲಿತುಕೊಳ್ಳಲಿಲ್ಲ. ಪುರಾತನ ಇಸ್ರಾಯೇಲಿನ ನಾಯಕರು ಯೆರೆಮೀಯನಿಗೆ ವಿರುದ್ಧವಾಗಿ ಸಂಚು ರೂಪಿಸಿದಂತೆಯೇ, ಅವರೂ ಸಹ ಯೇಸುವನ್ನು ಮುಗಿಸಲು ಪ್ರಯತ್ನಿಸಿದರು. ಇಸ್ರಾಯೇಲಿನ ನಾಯಕರ ನಡವಳಿಕೆಯನ್ನು ವಿವರಿಸಲು, ದೂರದೇಶಕ್ಕೆ ಪ್ರಯಾಣಕ್ಕೆ ಹೋಗುವುದಕ್ಕಿಂತ ಮೊದಲು ತನ್ನ ದ್ರಾಕ್ಷಿತೋಟವನ್ನು ಗುತ್ತಿಗೆ ಕೊಟ್ಟ ಒಬ್ಬ ಯಜಮಾನನ ಕುರಿತಾದ ಒಂದು ಸಾಮ್ಯವನ್ನುಯೇಸು ಹೇಳಿದನು. ಹಣ್ಣಿನ ಕುರಿತಾದ ವಿವರವನ್ನು ಕೇಳಲು ಯಜಮಾನನು ತನ್ನ ದ್ರಾಕ್ಷಿತೋಟಕ್ಕೆ ಆಳುಗಳನ್ನು ಕಳುಹಿಸಿದನು, ಆದರೆ ಗುತ್ತಿಗೆದಾರರು ಆಳುಗಳನ್ನು ಹಿಡಿದು ಹೊಡೆದು ಬರಿಗೈಯಲ್ಲಿ ಕಳುಹಿಸಿದರು. ಆದ್ದರಿಂದ ಯಜಮಾನನು ತನ್ನ ಸ್ವಂತ ಮಗನಿಗೆ ಹೆಚ್ಚು ಗೌರವವನ್ನು ಕೊಡುಬಹುದು ಎಂದು ನೆನಸಿ ಆತನನ್ನು ದ್ರಾಕ್ಷಿತೋಟಕ್ಕೆ ಕಳುಹಿಸಿಕೊಟ್ಟನು, ಆದರೆ ಅದನ್ನು ಗುತ್ತಿಗೆದಾರರು ವಾರಸುದಾರನನ್ನು ಕೊಂದುಹಾಕುವ ಮೂಲಕ ದ್ರಾಕ್ಷಿತೋಟವನ್ನು ದೋಚುವ ಅವಕಾಶವಾಗಿ ಕಂಡರು. ಅವರು ಯಜಮಾನನ ಪ್ರಿಯ ಮಗನನ್ನು ಹೊರಗೆ ತಳ್ಳಿ ಕೊಂದುಹಾಕಿದರು. ಯೇಸು ಈ ಕಥೆಯಲ್ಲಿ ದುಷ್ಟರಾದ ದ್ರಾಕ್ಷಿತೋಟದ ಗುತ್ತಿಗೆದಾರರನ್ನು, ರೂಢಿಯಂತೆ ದೇವರು ಕಳುಹಿಸಿದ ಎಲ್ಲ ಪ್ರವಾದಿಗಳನ್ನು ತಿರಸ್ಕರಿಸಿ, ಈಗ ದೇವರ ಪ್ರಿಯ ಮಗನನ್ನು ಕೊಲ್ಲಲು ಸಿದ್ಧರಾಗಿರುವ ಇಸ್ರಾಯೇಲರ ಧಾರ್ಮಿಕ ನಾಯಕರಿಗೆ ಹೋಲಿಸಿ ಹೇಳಿದನು. ಧಾರ್ಮಿಕ ನಾಯಕರು ತಮ್ಮ ಪಿತೃಗಳು ಮಾಡಿದ್ದ ಅದೇ ತಪ್ಪುಗಳನ್ನು ಮಾಡುತ್ತಿದ್ದಾರೆಂದೂ ಹೆಚ್ಚಿನ ಅಧಿಕಾರವನ್ನು ಪಡೆದುಕೊಳ್ಳುವುದಕ್ಕಾಗಿ ಅವರು ಆಶಿಸುವಂಥದ್ದು ಅವರ ವಿನಾಶಕ್ಕೆ ಕಾರಣವಾಗುತ್ತದೆ ಎಂದೂ ಯೇಸು ಸ್ಪಷ್ಟಪಡಿಸಿದನು.

ಓದಿರಿ, ಯೋಚಿಸಿರಿ ಮತ್ತು ಪ್ರತಿಕ್ರಿಯಿಸಿರಿ:

•ಯೇಸು ಕತ್ತೆಯ ಮೇಲೆ ಹತ್ತಿ ಸವಾರಿ ಮಾಡುತ್ತಾ ಯೆರೂಸಲೇಮಿಗೆ ಬರುತ್ತಿರುವ ಸಂಗತಿಯ ದೃಷ್ಟಿಕೋನದಲ್ಲಿ ಜೆಕರ್ಯ 9:9-10 ಓದಿರಿ. ನೀವು ಅದರಲ್ಲಿ ಏನನ್ನು ಗಮನಿಸಿದ್ದೀರಿ?

•ಯೆರೆಮೀಯ 7:1-11 ಅನ್ನು ಲೂಕನ ಸುವಾರ್ತೆಯಿಂದ ಇಂದಿನ ಧ್ಯಾನಕ್ಕಾಗಿ ಆರಿಸಿಕೊಂಡಿರುವ ವಾಕ್ಯಭಾಗದ ದೃಷ್ಟಿಕೋನದಿಂದ ಓದಿರಿ. ನೀವು ಅದರಲ್ಲಿ ಏನನ್ನು ಗಮನಿಸಿದ್ದೀರಿ?

•ಲೂಕನ ಸುವಾರ್ತೆಯನ್ನು ಓದಿದ ನಂತರ, ಯೇಸುವಿನ ಶಿಷ್ಯರು ಧಾರ್ಮಿಕ ನಾಯಕರ ಪ್ರತಿಕ್ರಿಯೆಗೆ ಕೊಟ್ಟಪ್ರತಿಕ್ರಿಯೆಗಳನ್ನು ವಿವರಿಸಿ ಹೋಲಿಕೆ ಮಾಡಿರಿ. ಈ ವ್ಯಕ್ತಿಗಳ ಪಾತ್ರಗಳು ನಿಮ್ಮ ಸ್ವಂತ ಪ್ರತಿಫಲನಕ್ಕೂ ವಿಮರ್ಶೆಗೂ ಹೇಗೆ ಕನ್ನಡಿಯಂತೆ ಕಾರ್ಯನಿರ್ವಹಿಸುತ್ತವೆ? ಇಂದು ನೀವು ಯೇಸುವಿಗೆ ಹೇಗೆ ಸ್ಪಂದಿಸುತ್ತೀರಿ?

•ನಿಮ್ಮ ಓದುವಿಕೆಯೂ ಪ್ರತಿಫಲನವೂ ಪ್ರಾರ್ಥಿಸುವಂತೆ ನಿಮ್ಮನ್ನು ಪ್ರೇರೇಪಿಸಲಿ. ನಿಮ್ಮನ್ನು ಭಯವಿಸ್ಮಿತರನ್ನಾಗಿ ಮಾಡಿದ್ದಂಥದ್ದರ ಬಗ್ಗೆ ದೇವರಿಗೆ ಹೇಳಿರಿ, ಧಾರ್ಮಿಕ ನಾಯಕರೊಂದಿಗೆ ನಿಮಗಿರುವಂಥ ಹೋಲಿಕೆಗಳ ಬಗ್ಗೆ ಪ್ರಾಮಾಣಿಕವಾಗಿ ತಿಳಿಸಿರಿ ಮತ್ತು ಆತನನ್ನು ನಿಮ್ಮ ಜೀವನದ ರಾಜನಾಗಿ ಗೌರವಿಸಲು ಬೇಕಾದ ಸಹಾಯವನ್ನು ಆತನ ಬಳಿ ಬೇಡಿಕೊಳ್ಳಿರಿ."

Dag 14Dag 16

Om denne planen

BibleProject | ತಲೆಕೆಳಗೆ ಮಾಡುವ ವಿಭಿನ್ನ ರಾಜ್ಯ / ಭಾಗ 1 - ಲೂಕನು

ಲೂಕನ ಸುವಾರ್ತೆಯನ್ನು 20 ದಿನಗಳಲ್ಲಿ ಓದುವಂತೆ ವ್ಯಕ್ತಿಗಳನ್ನು, ಸಣ್ಣ ಗುಂಪುಗಳನ್ನು ಮತ್ತು ಕುಟುಂಬಗಳನ್ನು ಪ್ರೇರೇಪಿಸಲು ತಲೆಕೆಳಗೆ ಮಾಡುವ ವಿಭಿನ್ನ ರಾಜ್ಯ ಭಾಗ 1 ಅನ್ನು ಬೈಬಲ್ ಪ್ರಾಜೆಕ್ಟ್ ರಚಿಸಿದೆ. ಅದರಲ್ಲಿ ಪಾಲ್ಗೊಳ್ಳುವವರು ಯೇಸುವನ್ನು ಕಂಡುಕೊಳ್ಳುವುದಕ್ಕೆ ಮತ್ತು ಲೂಕನ ಅತ್ಯುತ್ತವಾದ ಸಾಹಿತ್ಯ ರಚನೆಯನ್ನೂ ವಿಚಾರಧಾರೆಯನ್ನೂ ತಿಳಿದುಕೊಳ್ಳುವುದಕ್ಕೆ ಸಹಾಯ ಮಾಡಲು ಈ ಯೋಜನೆಯಲ್ಲಿ ಅನಿಮೇಟೆಡ್ ವೀಡಿಯೊಗಳು, ಗಹನವಾದ ಜ್ಞಾನವುಳ್ಳ ಸಾರಾಂಶಗಳು ಮತ್ತು ಚಿಂತನಾತ್ಮಕ ಪ್ರಶ್ನೆಗಳು ಇವೆ.

More