ಮತ್ತಾಯ 17
17
ಯೇಸು ರೂಪಾಂತರ ಹೊಂದಿದ್ದು
1ಯೇಸು ಆರು ದಿನಗಳಾದ ಮೇಲೆ ಪೇತ್ರ, ಯಾಕೋಬ, ಅವನ ಸಹೋದರ ಯೋಹಾನನನ್ನೂ ಪ್ರತ್ಯೇಕವಾಗಿ ಕರೆದುಕೊಂಡು ಎತ್ತರವಾದ ಒಂದು ಬೆಟ್ಟಕ್ಕೆ ಹೋದರು. 2ಅಲ್ಲಿ ಯೇಸು ಅವರ ಮುಂದೆ ರೂಪಾಂತರಗೊಂಡರು. ಅವರ ಮುಖವು ಸೂರ್ಯನಂತೆ ಪ್ರಕಾಶಿಸಿತು. ಅವರ ಉಡುಪು ಬೆಳಕಿನಂತೆ ಬೆಳಗಿತು. 3ಇದಲ್ಲದೆ ಮೋಶೆಯೂ ಎಲೀಯನೂ ಅವರಿಗೆ ಕಾಣಿಸಿಕೊಂಡು ಯೇಸುವಿನೊಂದಿಗೆ ಮಾತನಾಡುತ್ತಿದ್ದರು.
4ಪೇತ್ರನು ಯೇಸುವಿಗೆ, “ಕರ್ತನೇ, ನಾವು ಇಲ್ಲಿಯೇ ಇರುವುದು ಒಳ್ಳೆಯದು. ನಿಮಗೆ ಮನಸ್ಸಿದ್ದರೆ ನಾನು ನಿಮಗೊಂದು, ಮೋಶೆಗೊಂದು, ಎಲೀಯನಿಗೊಂದರಂತೆ ಮೂರು ಗುಡಾರಗಳನ್ನು ಕಟ್ಟುವೆನು,” ಎಂದು ಹೇಳಿದನು.
5ಪೇತ್ರನು ಇನ್ನೂ ಮಾತನಾಡುತ್ತಿರುವಾಗಲೇ, ಪ್ರಕಾಶಮಾನವಾದ ಮೇಘವು ಅವರ ಮೇಲೆ ಕವಿಯಿತು. ಆಗ, “ಈತನು ಪ್ರಿಯನಾಗಿರುವ ನನ್ನ ಮಗನು. ಈತನನ್ನು ನಾನು ಸಂಪೂರ್ಣವಾಗಿ ಮೆಚ್ಚಿದ್ದೇನೆ. ಈತನ ಮಾತನ್ನು ನೀವು ಕೇಳಿರಿ,” ಎಂದು ಮೇಘದೊಳಗಿಂದ ಒಂದು ಧ್ವನಿ ಕೇಳಿತು.
6ಶಿಷ್ಯರು ಇದನ್ನು ಕೇಳಿ ಬಹಳವಾಗಿ ಹೆದರಿ ಬೋರಲು ಬಿದ್ದರು. 7ಆಗ ಯೇಸು ಬಂದು ಅವರನ್ನು ಮುಟ್ಟಿ, “ಏಳಿರಿ, ಹೆದರಬೇಡಿರಿ,” ಎಂದು ಹೇಳಿದರು. 8ಅವರು ತಮ್ಮ ಕಣ್ಣೆತ್ತಿ ನೋಡಿದಾಗ ಯೇಸುವನ್ನೇ ಹೊರತು ಮತ್ತಾರನ್ನೂ ಕಾಣಲಿಲ್ಲ.
9ಅವರು ಬೆಟ್ಟದಿಂದ ಇಳಿದು ಬರುತ್ತಿದ್ದಾಗ, ಯೇಸು ಅವರಿಗೆ, “ಮನುಷ್ಯಪುತ್ರನಾದ ನಾನು ಸತ್ತವರೊಳಗಿಂದ ಎದ್ದು ಬರುವವರೆಗೆ ಈ ದರ್ಶನವನ್ನು ಯಾರಿಗೂ ಹೇಳಬಾರದು,” ಎಂದು ಅವರಿಗೆ ಆಜ್ಞಾಪಿಸಿದರು.
10ಆಗ ಯೇಸುವಿನ ಶಿಷ್ಯರು ಅವರಿಗೆ, “ಎಲೀಯನು ಮೊದಲು ಬರುವುದು ಅಗತ್ಯವೆಂದು ನಿಯಮ ಬೋಧಕರು ಏಕೆ ಹೇಳುತ್ತಾರೆ?” ಎಂದು ಕೇಳಿದರು.
11ಯೇಸು ಉತ್ತರವಾಗಿ ಅವರಿಗೆ, “ಎಲೀಯನು ಮೊದಲು ಬಂದು ಎಲ್ಲವುಗಳನ್ನು ಪುನಃ ಸ್ಥಾಪಿಸುವುದು ನಿಜವೇ. 12ಆದರೆ ಎಲೀಯನು ಆಗಲೇ ಬಂದಾಯಿತು; ಅವರು ಅವನನ್ನು ಅರಿಯದೆ ತಮಗೆ ಇಷ್ಟಬಂದಂತೆ ಅವನಿಗೆ ಮಾಡಿದ್ದಾಯಿತು. ಅದರಂತೆಯೇ ಮನುಷ್ಯಪುತ್ರನಾದ ನಾನು ಸಹ ಅವರಿಂದ ಕಷ್ಟವನ್ನು ಅನುಭವಿಸುವೆನು ಎಂದು ನಾನು ನಿಮಗೆ ಹೇಳುತ್ತೇನೆ,” ಎಂದರು. 13ಸ್ನಾನಿಕ ಯೋಹಾನನ ವಿಷಯದಲ್ಲಿ ಯೇಸು ತಮ್ಮೊಂದಿಗೆ ಮಾತನಾಡಿದನೆಂದು ಶಿಷ್ಯರು ಆಗ ಗ್ರಹಿಸಿಕೊಂಡರು.
ಮೂರ್ಛಾರೋಗಿಯಾದ ಹುಡುಗನ ಸ್ವಸ್ಥತೆ
14ಅವರು ಜನಸಮೂಹದ ಬಳಿಗೆ ಬಂದಾಗ, ಒಬ್ಬ ಮನುಷ್ಯನು ಯೇಸುವಿನ ಬಳಿಗೆ ಬಂದು ಮೊಣಕಾಲೂರಿ, 15“ಕರ್ತನೇ, ನನ್ನ ಮಗನ ಮೇಲೆ ಕರುಣೆಯಿಡು. ಏಕೆಂದರೆ ಅವನು ಮೂರ್ಛಾರೋಗದಿಂದ ಬಹಳವಾಗಿ ಕಷ್ಟಪಡುತ್ತಾನೆ. ಅನೇಕ ಸಾರಿ ಬೆಂಕಿಯಲ್ಲಿಯೂ ನೀರಿನಲ್ಲಿಯೂ ಬೀಳುತ್ತಾನೆ. 16ನಾನು ಅವನನ್ನು ನಿಮ್ಮ ಶಿಷ್ಯರ ಬಳಿಗೆ ಕರೆತಂದೆನು. ಆದರೆ ಅವರು ಅವನನ್ನು ಸ್ವಸ್ಥ ಮಾಡದೆ ಹೋದರು,” ಎಂದು ಹೇಳಿದನು.
17ಆಗ ಯೇಸು, “ವಿಶ್ವಾಸವಿಲ್ಲದ ಮೂರ್ಖ ಸಂತತಿಯೇ, ಇನ್ನೂ ಎಷ್ಟು ಕಾಲ ನಾನು ನಿಮ್ಮೊಂದಿಗಿರಲಿ? ಎಷ್ಟು ಕಾಲ ನಾನು ನಿಮ್ಮನ್ನು ಸಹಿಸಲಿ? ಅವನನ್ನು ನನ್ನ ಬಳಿಗೆ ಕರೆದುಕೊಂಡು ಬನ್ನಿರಿ,” ಎಂದು ಹೇಳಿದರು. 18ಆಗ ಯೇಸು ದೆವ್ವವನ್ನು ಗದರಿಸಲಾಗಿ ಅದು ಹುಡುಗನೊಳಗಿಂದ ಹೊರಟುಹೋಯಿತು. ಆಗ ಆ ಹುಡುಗನು ಅದೇ ಗಳಿಗೆಯಲ್ಲಿಯೇ ಗುಣಮುಖನಾದನು.
19ತರುವಾಯ ಶಿಷ್ಯರು ಪ್ರತ್ಯೇಕವಾಗಿ ಯೇಸುವಿನ ಬಳಿಗೆ ಬಂದು, “ಅದನ್ನು ಓಡಿಸುವುದಕ್ಕೆ ನಮ್ಮಿಂದ ಏಕೆ ಆಗಲಿಲ್ಲ?” ಎಂದು ಕೇಳಿದರು.
20ಯೇಸು ಅವರಿಗೆ, “ನಿಮ್ಮ ಅಪೂರ್ಣನಂಬಿಕೆಯೇ ಇದಕ್ಕೆ ಕಾರಣ. ಸಾಸಿವೆ ಕಾಳಿನಷ್ಟು ನಂಬಿಕೆ ನಿಮಗಿರುವುದಾದರೆ ನೀವು ಈ ಬೆಟ್ಟಕ್ಕೆ, ‘ಇಲ್ಲಿಂದ ಆ ಸ್ಥಳಕ್ಕೆ ಹೋಗು’ ಎಂದು ಹೇಳಿದರೆ ಅದು ಹೋಗುವುದು. ಯಾವುದೂ ನಿಮಗೆ ಅಸಾಧ್ಯವಾಗಿರುವುದಿಲ್ಲ. 21ಆದರೂ ದೇವರ ಪ್ರಾರ್ಥನೆ ಉಪವಾಸಗಳಿಂದ ಹೊರತು ಬೇರೆ ಯಾವುದರಿಂದಲೂ ಈ ರೀತಿಯಾದ ದೆವ್ವ ಹೊರಟು ಹೋಗುವುದಿಲ್ಲ,” ಎಂದರು.#17:21 ಕೆಲವು ಹಸ್ತಪ್ರತಿಗಳಲ್ಲಿ ಈ ವಾಕ್ಯ ಸೇರ್ಪಡೆಯಾಗಿರುವುದಿಲ್ಲ.
ಯೇಸು ತಮ್ಮ ಮರಣವನ್ನು ಎರಡನೆಯ ಬಾರಿ ಮುಂತಿಳಿಸಿದ್ದು
22ಅವರು ಗಲಿಲಾಯದಲ್ಲಿ ಒಟ್ಟಿಗೆ ಸೇರಿದ್ದಾಗ ಯೇಸು ಅವರಿಗೆ, “ಮನುಷ್ಯಪುತ್ರನಾದ ನನ್ನನ್ನು ಜನರ ಕೈಗಳಿಗೆ ಒಪ್ಪಿಸಿಕೊಡಲಾಗುವುದು. 23ಅವರು ನನ್ನನ್ನು ಕೊಲ್ಲುವರು, ಆದರೆ ಮೂರನೆಯ ದಿನದಲ್ಲಿ ನಾನು ತಿರುಗಿ ಜೀವಿತನಾಗಿ ಎದ್ದು ಬರುವೆನು,” ಎಂದು ಹೇಳಿದರು. ಅದಕ್ಕೆ ಶಿಷ್ಯರು ಬಹಳ ದುಃಖಪಟ್ಟರು.
ಯೇಸು ದೇವಾಲಯದ ತೆರಿಗೆ ಕೊಟ್ಟದ್ದು
24ತರುವಾಯ ಯೇಸು ಕಪೆರ್ನೌಮಿಗೆ ಬಂದಾಗ, ದೇವಾಲಯದ ತೆರಿಗೆಗಾಗಿ ಎರಡು ಬೆಳ್ಳಿ ನಾಣ್ಯಗಳನ್ನು#17:24 ಮೂಲಭಾಷೆಯಲ್ಲಿ ದ್ರಹ್ಮ. ಒಂದು ದ್ರಹ್ಮ ನಾಣ್ಯದ ಮೌಲ್ಯವು, ಒಂದು ದಿನದ ಕೂಲಿ ವಸೂಲಿಮಾಡುವವರು ಪೇತ್ರನ ಬಳಿಗೆ ಬಂದರು. ಅವರು ಪೇತ್ರನಿಗೆ, “ನಿಮ್ಮ ಬೋಧಕನು ತೆರಿಗೆ ಕಟ್ಟುವುದಿಲ್ಲವೋ?” ಎಂದು ಕೇಳಿದರು.
25ಅದಕ್ಕೆ ಪೇತ್ರನು, “ಹೌದು, ಕಟ್ಟುತ್ತಾರೆ,” ಎಂದನು.
ಅವನು ಮನೆಯೊಳಕ್ಕೆ ಬಂದಾಗ ಯೇಸು ಮುಂದಾಗಿಯೇ ಅವನಿಗೆ, “ಸೀಮೋನನೇ ನಿನಗೆ ಹೇಗೆ ತೋರುತ್ತದೆ? ಭೂಲೋಕದ ರಾಜರು ಯಾರಿಂದ ಕಂದಾಯವನ್ನು ಇಲ್ಲವೆ ತೆರಿಗೆಯನ್ನು ವಸೂಲಿ ಮಾಡುತ್ತಾರೆ? ತಮ್ಮ ಪುತ್ರರಿಂದಲೋ ಇಲ್ಲವೆ ಪರರಿಂದಲೋ?” ಎಂದು ಕೇಳಿದರು.
26“ಪರರಿಂದ,” ಎಂದು ಪೇತ್ರನು ಹೇಳಿದನು.
ಯೇಸು ಅವನಿಗೆ, “ಹಾಗಾದರೆ ಪುತ್ರನು ಕಟ್ಟಬೇಕಾಗಿಲ್ಲ. 27ಆದರೂ ನಾವು ಅವರನ್ನು ಅಭ್ಯಂತರಪಡಿಸದಂತೆ, ನೀನು ಸರೋವರಕ್ಕೆ ಹೋಗಿ ಗಾಳವನ್ನು ಹಾಕು. ಆಗ ಮೊದಲು ಬರುವ ಮೀನನ್ನು ಹಿಡಿ. ನೀನು ಅದರ ಬಾಯನ್ನು ತೆರೆದಾಗ ಅದರಲ್ಲಿ ನಾಲ್ಕು ಬೆಳ್ಳಿ ನಾಣ್ಯಗಳನ್ನು ಕಾಣುವೆ. ಅದನ್ನು ತಂದು ನನ್ನ ಮತ್ತು ನಿನ್ನ ಪರವಾಗಿ ಅವರಿಗೆ ಕೊಡು,” ಎಂದು ಹೇಳಿದರು.
Currently Selected:
ಮತ್ತಾಯ 17: KSB
Highlight
Share
Copy
Want to have your highlights saved across all your devices? Sign up or sign in
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.