ಮತ್ತಾಯ 16
16
ಸೂಚಕಕಾರ್ಯವನ್ನು ಕೇಳಿದ್ದು
1ಸದ್ದುಕಾಯರೊಂದಿಗೆ ಫರಿಸಾಯರು ಸಹ ಬಂದು ಯೇಸುವನ್ನು ಪರೀಕ್ಷಿಸುವುದಕ್ಕಾಗಿ, ಪರಲೋಕದಿಂದ ತಮಗೆ ಒಂದು ಸೂಚಕಕಾರ್ಯವನ್ನು ತೋರಿಸಬೇಕೆಂದು ಕೇಳಿದರು.
2ಯೇಸು ಉತ್ತರವಾಗಿ ಅವರಿಗೆ, “ಸಂಜೆಯಾದಾಗ ಆಕಾಶವು ಕೆಂಪಾಗಿದ್ದರೆ, ‘ಒಳ್ಳೆಯ ಹವಾಮಾನ ಇರುವುದು’ ಎಂದೂ 3ಬೆಳಿಗ್ಗೆ ಆಕಾಶವು ಮೋಡ ಕವಿದು ಕೆಂಪಾಗಿದ್ದರೆ, ‘ಇಂದು ಬಿರುಗಾಳಿ ಇರುವುದು’ ಎಂದೂ ನೀವು ಹೇಳುತ್ತೀರಿ. ಆಕಾಶದಲ್ಲಾಗುವ ಸೂಚನೆಗಳನ್ನು ನೀವು ಗ್ರಹಿಸಬಲ್ಲಿರಿ, ಆದರೆ ಕಾಲದ ಸೂಚನೆಗಳನ್ನು ನೀವು ಗ್ರಹಿಸಲಾರಿರಿ. 4ವ್ಯಭಿಚಾರಿಯಾದ ಈ ಕೆಟ್ಟ ಸಂತತಿಯು ಸೂಚಕಕಾರ್ಯವನ್ನು ಹುಡುಕುತ್ತದೆ, ಆದರೆ ಪ್ರವಾದಿ ಯೋನನಲ್ಲಿ ಆದ ಸೂಚಕಕಾರ್ಯವೇ ಹೊರತು ಬೇರೆ ಯಾವ ಸೂಚಕಕಾರ್ಯವೂ ಇದಕ್ಕೆ ಸಿಕ್ಕುವುದಿಲ್ಲ,” ಎಂದು ಹೇಳಿ, ಯೇಸು ಅವರನ್ನು ಬಿಟ್ಟು ಹೊರಟು ಹೋದರು.
ಫರಿಸಾಯರ ಮತ್ತು ಸದ್ದುಕಾಯರ ಹುಳಿಯ ವಿಷಯ
5ಶಿಷ್ಯರು ರೊಟ್ಟಿಬುತ್ತಿಯನ್ನು ಕಟ್ಟಿಕೊಳ್ಳುವುದನ್ನು ಮರೆತು ಆಚೆದಡಕ್ಕೆ ಬಂದಿದ್ದರು. 6ಆಗ ಯೇಸು ಅವರಿಗೆ, “ಫರಿಸಾಯರ ಮತ್ತು ಸದ್ದುಕಾಯರ ಹುಳಿಹಿಟ್ಟಿನ ಬಗ್ಗೆ ಎಚ್ಚರಿಕೆ ವಹಿಸಿ ಜಾಗರೂಕರಾಗಿರಿ,” ಎಂದು ಹೇಳಿದರು.
7ಅದಕ್ಕೆ ಅವರು ತಮ್ಮತಮ್ಮಲ್ಲಿಯೇ, “ನಾವು ರೊಟ್ಟಿ ತಂದಿಲ್ಲವೆಂದು ಹೀಗೆ ಹೇಳುತ್ತಾರೆ,” ಎಂದು ಮಾತನಾಡಿಕೊಂಡರು.
8ಯೇಸು ಅವರು ಮಾತನಾಡಿದ್ದನ್ನು ತಿಳಿದುಕೊಂಡು ಅವರಿಗೆ, “ಅಲ್ಪ ವಿಶ್ವಾಸದವರೇ, ನೀವು ರೊಟ್ಟಿ ಇಲ್ಲವೆಂದು ನಿಮ್ಮಲ್ಲಿ ಏಕೆ ಮಾತನಾಡಿಕೊಳ್ಳುತ್ತೀರಿ? 9ಐದು ರೊಟ್ಟಿಗಳನ್ನು ಐದು ಸಾವಿರ ಜನರಿಗೆ ಹಂಚಿದಾಗ, ಎಷ್ಟು ಬುಟ್ಟಿಗಳನ್ನು ತುಂಬಿದಿರೆಂದು ನೀವು ಇನ್ನೂ ಗ್ರಹಿಸಲಿಲ್ಲವೇ? ನಿಮಗೆ ನೆನಪಿಲ್ಲವೇ? 10ಇದಲ್ಲದೆ ಏಳು ರೊಟ್ಟಿಗಳನ್ನು ನಾಲ್ಕು ಸಾವಿರ ಜನರಿಗೆ ಹಂಚಿದಾಗ ಎಷ್ಟು ಬುಟ್ಟಿಗಳನ್ನು ತುಂಬಿದಿರಿ? 11ನಾನು ರೊಟ್ಟಿಯ ವಿಷಯದಲ್ಲಿ ಅಲ್ಲ, ಫರಿಸಾಯರ ಮತ್ತು ಸದ್ದುಕಾಯರ ಹುಳಿಹಿಟ್ಟಿನ ವಿಷಯದಲ್ಲಿ ಎಚ್ಚರವಾಗಿರಬೇಕೆಂದು ಹೇಳಿದ್ದನ್ನು ನೀವು ಗ್ರಹಿಸದೆ ಇರುವುದು ಹೇಗೆ?” ಎಂದು ಕೇಳಿದರು. 12ಆಗ ಅವರು, ರೊಟ್ಟಿ ಹುಳಿಯ ವಿಷಯದಲ್ಲಿ ಅಲ್ಲ, ಆದರೆ ಫರಿಸಾಯರ ಮತ್ತು ಸದ್ದುಕಾಯರ ಬೋಧನೆಯ ವಿಷಯದಲ್ಲಿ ತಾವು ಎಚ್ಚರವಾಗಿರಬೇಕೆಂದು ಯೇಸು ಹೇಳಿದ್ದನ್ನು ಗ್ರಹಿಸಿಕೊಂಡರು.
ಪೇತ್ರನ ಅರಿಕೆ
13ಯೇಸು ಕೈಸರೈಯ ಫಿಲಿಪ್ಪಿ ಪ್ರಾಂತಗಳಿಗೆ ಬಂದಾಗ ತಮ್ಮ ಶಿಷ್ಯರಿಗೆ, “ಮನುಷ್ಯಪುತ್ರನಾದ ನನ್ನನ್ನು ಯಾರೆಂದು ಜನರು ಹೇಳುತ್ತಾರೆ?” ಎಂದು ಕೇಳಿದರು.
14ಅದಕ್ಕೆ ಅವರು, “ಕೆಲವರು ಸ್ನಾನಿಕನಾದ ಯೋಹಾನನು ಎಂದು ಹೇಳುತ್ತಾರೆ, ಇನ್ನು ಕೆಲವರು ಎಲೀಯನು ಎನ್ನುತ್ತಾರೆ, ಬೇರೆಯವರು ಯೆರೆಮೀಯನು, ಇಲ್ಲವೆ ಪ್ರವಾದಿಗಳಲ್ಲಿ ಒಬ್ಬನು ಎಂದು ಹೇಳುತ್ತಾರೆ” ಎಂದರು.
15ಯೇಸು ಅವರಿಗೆ, “ಆದರೆ ನೀವು ನನ್ನನ್ನು ಯಾರೆನ್ನುತ್ತೀರಿ?” ಎಂದು ಕೇಳಿದರು.
16ಅದಕ್ಕೆ ಸೀಮೋನ ಪೇತ್ರನು ಉತ್ತರವಾಗಿ, “ನೀವು ಕ್ರಿಸ್ತ ಮತ್ತು ಜೀವಂತ ದೇವರ ಪುತ್ರರಾಗಿದ್ದೀರಿ,” ಎಂದು ಉತ್ತರಕೊಟ್ಟನು.
17ಯೇಸು ಅವನಿಗೆ, “ಯೋನನ ಮಗ ಸೀಮೋನನೇ, ನೀನು ಧನ್ಯನು. ಏಕೆಂದರೆ ಇದನ್ನು ಪ್ರಕಟಿಸಿದ್ದು ಮಾನವರಲ್ಲ. ಪರಲೋಕದಲ್ಲಿರುವ ನನ್ನ ತಂದೆಯೇ ಇದನ್ನು ನಿನಗೆ ಪ್ರಕಟಿಸಿದರು. 18ನಾನು ಸಹ ನಿನಗೆ ಹೇಳುವುದೇನಂದರೆ, ನೀನು ಪೇತ್ರನು.#16:18 ಪೇತ್ರ ಅಂದರೆ, ಬಂಡೆ ಎಂದು ಅರ್ಥ ಈ ಬಂಡೆಯ ಮೇಲೆ ನಾನು ನನ್ನ ಸಭೆಯನ್ನು ಕಟ್ಟುವೆನು. ಪಾತಾಳದ ದ್ವಾರಗಳು ಅದನ್ನು ಜಯಿಸಲಾರವು. 19ನಾನು ನಿನಗೆ ಪರಲೋಕ ರಾಜ್ಯದ ಬೀಗದ ಕೈಗಳನ್ನು ಕೊಡುವೆನು; ನೀನು ಭೂಮಿಯಲ್ಲಿ ಯಾವುದನ್ನು ಬಂಧಿಸುತ್ತೀಯೋ ಅದು ಪರಲೋಕದಲ್ಲಿಯೂ ಬಂಧಿತವಾಗುವುದು. ನೀನು ಭೂಮಿಯಲ್ಲಿ ಏನನ್ನು ಬಿಚ್ಚುತ್ತೀಯೋ ಅದು ಪರಲೋಕದಲ್ಲಿಯೂ ಬಿಚ್ಚಲಾಗುವುದು,” ಎಂದರು. 20ತರುವಾಯ ಯೇಸು, ತಾನೇ ಕ್ರಿಸ್ತ ಎಂಬುದನ್ನು ಯಾರಿಗೂ ಹೇಳಬಾರದೆಂದು ತಮ್ಮ ಶಿಷ್ಯರಿಗೆ ಆಜ್ಞಾಪಿಸಿದರು.
ಯೇಸು ತಮ್ಮ ಮರಣವನ್ನು ಮುಂತಿಳಿಸಿದ್ದು
21ತಾವು ಯೆರೂಸಲೇಮಿಗೆ ಹೋಗಿ ಹೇಗೆ ಹಿರಿಯರಿಂದಲೂ ಮುಖ್ಯಯಾಜಕರಿಂದಲೂ ನಿಯಮ ಬೋಧಕರಿಂದಲೂ ಬಹು ಕಷ್ಟಗಳನ್ನು ಅನುಭವಿಸಿ ಕೊಲೆಗೀಡಾಗಿ ಮೂರನೆಯ ದಿನದಲ್ಲಿ ಜೀವಂತವಾಗಿ ಎದ್ದು ಬರುವುದು ಅವಶ್ಯವಾಗಿದೆ ಎಂದು ಯೇಸು ಅಂದಿನಿಂದ ತಮ್ಮ ಶಿಷ್ಯರಿಗೆ ತಿಳಿಸಲಾರಂಭಿಸಿದರು.
22ಆಗ ಪೇತ್ರನು ಯೇಸುವಿನ ಕೈಹಿಡಿದು, “ಹಾಗೆ ಆಗಬಾರದು ಸ್ವಾಮೀ! ಅದು ನಿಮಗೆ ಎಂದಿಗೂ ಸಂಭವಿಸಬಾರದು!” ಎಂದು ಹೇಳಿ ಯೇಸುವನ್ನು ಗದರಿಸಲಾರಂಭಿಸಿದನು.
23ಆಗ ಯೇಸು ತಿರುಗಿಕೊಂಡು ಪೇತ್ರನಿಗೆ, “ಸೈತಾನನೇ, ನನ್ನಿಂದ ತೊಲಗಿಹೋಗು! ನೀನು ನನಗೆ ಅಡ್ಡಿಯಾಗಿದ್ದೀ; ನಿನ್ನ ಆಲೋಚನೆ ಮನುಷ್ಯರದೇ ಹೊರತು ದೇವರದಲ್ಲ,” ಎಂದರು.
24ತರುವಾಯ ಯೇಸು ತಮ್ಮ ಶಿಷ್ಯರಿಗೆ, “ಯಾರಾದರೂ ನನ್ನ ಶಿಷ್ಯರಾಗುವುದಕ್ಕೆ ಬಯಸಿದರೆ, ಅವರು ತಮ್ಮನ್ನು ತಾವೇ ನಿರಾಕರಿಸಿ ತಮ್ಮ ಶಿಲುಬೆಯನ್ನು ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ. 25ತಮ್ಮ ಪ್ರಾಣವನ್ನು ಉಳಿಸಿಕೊಳ್ಳುವವರು ಅದನ್ನು ಕಳೆದುಕೊಳ್ಳುವರು, ಆದರೆ ನನ್ನ ನಿಮಿತ್ತವಾಗಿ ಯಾರಾದರೂ ತಮ್ಮ ಪ್ರಾಣವನ್ನು ಕಳೆದುಕೊಳ್ಳುವವರು ಅದನ್ನು ಕಂಡುಕೊಳ್ಳುವರು. 26ಒಬ್ಬ ವ್ಯಕ್ತಿ ಲೋಕವನ್ನೆಲ್ಲಾ ಸಂಪಾದಿಸಿಕೊಂಡರೂ ತಮ್ಮ ಸ್ವಂತ ಆತ್ಮವನ್ನೇ ನಷ್ಟಪಡಿಸಿಕೊಂಡರೆ ಅವರಿಗೆ ಲಾಭವೇನು? ಇಲ್ಲವೆ ತಮ್ಮ ಆತ್ಮಕ್ಕೆ ಬದಲಾಗಿ ಏನು ಕೊಡುವರು? 27ಮನುಷ್ಯಪುತ್ರನಾದ ನಾನು ನನ್ನ ತಂದೆಯ ಮಹಿಮೆಯಲ್ಲಿ ನನ್ನ ದೂತರೊಡನೆ ಬಂದಾಗ, ನಾನು ಪ್ರತಿಯೊಬ್ಬರಿಗೂ ಅವರವರ ಕೆಲಸಗಳಿಗೆ ತಕ್ಕಂತೆ ಪ್ರತಿಫಲವನ್ನು ಕೊಡುವೆನು.
28“ನಿಮಗೆ ನಿಜವಾಗಿ ಹೇಳುತ್ತೇನೆ: ಇಲ್ಲಿ ನಿಂತವರಲ್ಲಿ ಕೆಲವರು ಮನುಷ್ಯಪುತ್ರನಾದ ನಾನು ನನ್ನ ರಾಜ್ಯದಲ್ಲಿ ಬರುವುದನ್ನು ಕಾಣುವವರೆಗೆ ಮರಣವನ್ನು ಹೊಂದುವುದೇ ಇಲ್ಲ,” ಎಂದರು.
Currently Selected:
ಮತ್ತಾಯ 16: KSB
Highlight
Share
Copy
Want to have your highlights saved across all your devices? Sign up or sign in
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.