YouVersion Logo
Search Icon

ಮತ್ತಾಯ 15

15
ಶುದ್ಧವೂ ಅಶುದ್ಧವೂ
1ಯೆರೂಸಲೇಮಿನಿಂದ ಫರಿಸಾಯರು ಮತ್ತು ನಿಯಮ ಬೋಧಕರು ಯೇಸುವಿನ ಬಳಿಗೆ ಬಂದು, 2“ನಿನ್ನ ಶಿಷ್ಯರು ಪೂರ್ವಿಕರ ಸಂಪ್ರದಾಯವನ್ನು ಏಕೆ ಮೀರುತ್ತಾರೆ? ಅವರು ಊಟಕ್ಕೆ ಮುಂಚೆ ತಮ್ಮ ಕೈಗಳನ್ನು ಏಕೆ ತೊಳೆದುಕೊಳ್ಳುವುದಿಲ್ಲ?” ಎಂದರು.
3ಅದಕ್ಕೆ ಯೇಸು ಪ್ರತ್ಯುತ್ತರವಾಗಿ, “ನಿಮ್ಮ ಸಂಪ್ರದಾಯದ ನಿಮಿತ್ತವಾಗಿ ನೀವು ದೇವರ ಆಜ್ಞೆಯನ್ನು ಏಕೆ ಮೀರುತ್ತೀರಿ? 4‘ನಿಮ್ಮ ತಂದೆತಾಯಿಗಳನ್ನು ಸನ್ಮಾನಿಸಬೇಕು,’#15:4 ವಿಮೋ 20:12; ಧರ್ಮೋ 5:16 ಎಂದೂ ‘ತಂದೆತಾಯಿಗಳನ್ನು ದೂಷಿಸುವವನಿಗೆ ಮರಣದಂಡನೆ ಆಗಬೇಕು,’#15:4 ವಿಮೋ 21:17; ಯಾಜಕ 20:9 ಎಂದು ದೇವರು ಹೇಳಿದ್ದಾರೆ. 5ಆದರೆ ನೀವು, ಯಾರಾದರೂ ತನ್ನ ತಂದೆಗೆ ಇಲ್ಲವೆ ತಾಯಿಗೆ, ನಾನು ನಿಮ್ಮ ಸಹಾಯಕ್ಕಾಗಿ ಇಟ್ಟಿದ್ದನ್ನು, ‘ದೇವರಿಗೆ ಕೊಟ್ಟಿದ್ದೇನೆ’ ಎಂದು ಹೇಳುವುದಾದರೆ, 6‘ಅವನು ತನ್ನ ತಂದೆಯನ್ನಾಗಲಿ ತಾಯಿಯನ್ನಾಗಲಿ ಗೌರವಿಸಬೇಕಾಗಿಲ್ಲ’ ಎಂದು ಹೇಳುತ್ತೀರಿ. ಹೀಗೆ ನಿಮ್ಮ ಸಂಪ್ರದಾಯದ ನಿಮಿತ್ತವಾಗಿ ದೇವರ ವಾಕ್ಯವನ್ನು ನಿರರ್ಥಕಮಾಡುತ್ತೀರಿ. 7ಕಪಟಿಗಳೇ, ನಿಮ್ಮ ವಿಷಯವಾಗಿ ಯೆಶಾಯನು ಸರಿಯಾಗಿ ಪ್ರವಾದಿಸಿದ್ದಾನೆ:
8“ ‘ಈ ಜನರು ತಮ್ಮ ತುಟಿಗಳಿಂದ ನನ್ನನ್ನು ಸನ್ಮಾನಿಸುತ್ತಾರೆ,
ಆದರೆ ಅವರ ಹೃದಯವು ನನ್ನಿಂದ ದೂರವಾಗಿದೆ.
9ಅವರು ಮನುಷ್ಯರ ಆಜ್ಞೆಗಳನ್ನು ಉಪದೇಶಗಳನ್ನಾಗಿ ಬೋಧಿಸುವುದರಿಂದ
ನನ್ನನ್ನು ಆರಾಧಿಸುವುದು ವ್ಯರ್ಥ.’#15:9 ಯೆಶಾಯ 29:13
10ಯೇಸು ಜನಸಮೂಹವನ್ನು ಕರೆದು ಅವರಿಗೆ, “ಕೇಳಿ ತಿಳಿದುಕೊಳ್ಳಿರಿ. 11ಬಾಯೊಳಕ್ಕೆ ಹೋಗುವಂಥದ್ದು ಮನುಷ್ಯನನ್ನು ಅಶುದ್ಧ ಮಾಡುವುದಿಲ್ಲ, ಆದರೆ ಬಾಯೊಳಗಿಂದ ಹೊರಗೆ ಬರುವಂಥದ್ದೇ ಮನುಷ್ಯನನ್ನು ಅಶುದ್ಧ ಮಾಡುತ್ತದೆ,” ಎಂದು ಹೇಳಿದರು.
12ತರುವಾಯ ಯೇಸುವಿನ ಶಿಷ್ಯರು ಬಂದು, “ಫರಿಸಾಯರು ನಿಮ್ಮ ಈ ಮಾತನ್ನು ಕೇಳಿ ಬೇಸರಗೊಂಡರೆಂದು ನಿಮಗೆ ತಿಳಿಯಿತೇ?” ಎಂದು ಕೇಳಿದರು.
13ಅದಕ್ಕೆ ಯೇಸು ಉತ್ತರವಾಗಿ ಅವರಿಗೆ, “ಪರಲೋಕದ ನನ್ನ ತಂದೆಯು ನೆಡದೆ ಇರುವ ಪ್ರತಿಯೊಂದು ಗಿಡವು ಬೇರುಸಹಿತವಾಗಿ ಕಿತ್ತುಹಾಕಲಾಗುವುದು. 14ಅವರನ್ನು ಬಿಡಿರಿ, ಅವರು ಕುರುಡರಿಗೆ ದಾರಿತೋರಿಸುವ ಕುರುಡರು. ಕುರುಡನು ಕುರುಡನಿಗೆ ದಾರಿತೋರಿಸಿದರೆ ಅವರಿಬ್ಬರೂ ಹಳ್ಳಕ್ಕೆ ಬೀಳುವರು,” ಎಂದು ಹೇಳಿದರು.
15ಪೇತ್ರನು, “ಈ ಸಾಮ್ಯವನ್ನು ನಮಗೆ ವಿವರಿಸು,” ಎಂದನು.
16ಅದಕ್ಕೆ ಯೇಸು, “ನೀವು ಸಹ ಇನ್ನೂ ಬುದ್ಧಿಯಿಲ್ಲದವರಾಗಿದ್ದೀರಾ?” ಎಂದು ಕೇಳಿ, 17“ಬಾಯೊಳಕ್ಕೆ ಹೋಗಿ ಹೊಟ್ಟೆಯಲ್ಲಿ ಸೇರುವುದೆಲ್ಲವೂ ವಿಸರ್ಜಿತವಾಗುವುದೆಂದು ನೀವು ಇನ್ನೂ ಗ್ರಹಿಸಲಿಲ್ಲವೋ? 18ಆದರೆ ಬಾಯೊಳಗಿಂದ ಹೊರಗೆ ಹೊರಡುವಂಥವು ಹೃದಯದೊಳಗಿಂದ ಬಂದು ಮನುಷ್ಯನನ್ನು ಅಶುದ್ಧ ಮಾಡುತ್ತವೆ. 19ಏಕೆಂದರೆ ಹೃದಯದೊಳಗಿಂದ ದುರಾಲೋಚನೆಗಳು, ಕೊಲೆ, ವ್ಯಭಿಚಾರ, ಅನೈತಿಕತೆ, ಕಳ್ಳತನ, ಸುಳ್ಳುಸಾಕ್ಷಿ, ದೂರು ಇವು ಹೊರ ಬರುತ್ತವೆ. 20ಇವುಗಳೇ ಮನುಷ್ಯನನ್ನು ಅಶುದ್ಧ ಮಾಡುತ್ತವೆ; ಆದರೆ ಕೈತೊಳೆದುಕೊಳ್ಳದೆ ಊಟಮಾಡುವುದು ಮನುಷ್ಯನನ್ನು ಅಶುದ್ಧ ಮಾಡುವುದಿಲ್ಲ,” ಎಂದರು.
ಕಾನಾನ್ಯ ಸ್ತ್ರೀಯ ನಂಬಿಕೆ
21ಯೇಸು ಅಲ್ಲಿಂದ ಹೊರಟು ಟೈರ್ ಸೀದೋನ್ ಪ್ರದೇಶಕ್ಕೆ ಬಂದರು. 22ಆಗ, ಕಾನಾನ್ಯ ಸ್ತ್ರೀಯೊಬ್ಬಳು#15:22 ಯೆಹೂದ್ಯ ಅಲ್ಲದ ಸ್ತ್ರೀ ಬಂದು ಅವರಿಗೆ, “ಸ್ವಾಮೀ, ದಾವೀದನ ಪುತ್ರನೇ, ನನ್ನನ್ನು ಕರುಣಿಸು. ನನ್ನ ಮಗಳು ದೆವ್ವದ ಕಾಟದಿಂದ ಬಹಳವಾಗಿ ಸಂಕಟಪಡುತ್ತಿದ್ದಾಳೆ,” ಎಂದು ಕೂಗಿಕೊಂಡಳು.
23ಆದರೆ ಯೇಸು ಆಕೆಗೆ ಉತ್ತರ ಕೊಡಲಿಲ್ಲ. ಆಗ ಶಿಷ್ಯರು ಯೇಸುವಿನ ಬಳಿ ಬಂದು, “ಆಕೆಯನ್ನು ಕಳುಹಿಸಿಬಿಡು, ಆಕೆಯು ನಮ್ಮ ಹಿಂದೆ ಕೂಗಿಕೊಂಡು ಬರುತ್ತಾಳೆ” ಎಂದು ಕೇಳಿಕೊಂಡರು.
24ಯೇಸು ಉತ್ತರವಾಗಿ, “ತಪ್ಪಿಸಿಕೊಂಡ ಕುರಿಗಳಂತಿರುವ ಇಸ್ರಾಯೇಲಿನ ಮನೆತನದವರ ಬಳಿಗೆ ಮಾತ್ರ ನನ್ನನ್ನು ಕಳುಹಿಸಲಾಗಿದೆ,” ಎಂದರು.
25ಆಕೆಯು ಬಂದು ಯೇಸುವಿನ ಮುಂದೆ ಮೊಣಕಾಲೂರಿ, “ಸ್ವಾಮೀ, ನನಗೆ ಸಹಾಯಮಾಡು!” ಎಂದು ಕೇಳಿಕೊಂಡಳು.
26ಆಗ ಯೇಸು, “ಮಕ್ಕಳು ತಿನ್ನುವ ರೊಟ್ಟಿಯನ್ನು ನಾಯಿಮರಿಗಳಿಗೆ ಹಾಕುವುದು ಸರಿಯಲ್ಲ,” ಎಂದು ಹೇಳಿದರು.
27ಆಗ ಆಕೆಯು, “ಸ್ವಾಮೀ, ಅದು ನಿಜವೇ, ಆದರೂ ತಮ್ಮ ಯಜಮಾನರ ಮೇಜಿನಿಂದ ಬೀಳುವ ರೊಟ್ಟಿತುಂಡುಗಳನ್ನು ನಾಯಿಮರಿಗಳು ತಿನ್ನುತ್ತವಲ್ಲಾ,” ಎಂದಳು.
28ಯೇಸು ಉತ್ತರವಾಗಿ ಆಕೆಗೆ, “ಅಮ್ಮಾ ನಿನ್ನ ನಂಬಿಕೆಯು ದೊಡ್ಡದು! ನೀನು ಇಷ್ಟಪಟ್ಟಂತೆಯೇ ನಿನಗಾಗಲಿ,” ಎಂದು ಹೇಳಿದರು. ಆಕೆಯ ಮಗಳು ಅದೇ ಗಳಿಗೆಯಲ್ಲಿ ಗುಣಹೊಂದಿದಳು.
ಯೇಸು ನಾಲ್ಕು ಸಾವಿರ ಜನರಿಗೆ ಊಟ ಕೊಟ್ಟಿದ್ದು
29ಯೇಸು ಅಲ್ಲಿಂದ ಹೊರಟು ಗಲಿಲಾಯ ಸರೋವರದ ಸಮೀಪಕ್ಕೆ ಬಂದು, ಬೆಟ್ಟವನ್ನು ಹತ್ತಿ ಅಲ್ಲಿ ಕುಳಿತುಕೊಂಡರು. 30ಆಗ ಜನರ ದೊಡ್ಡ ಸಮೂಹಗಳು ಕುಂಟರನ್ನು, ಕುರುಡರನ್ನು, ಮೂಕರನ್ನು, ಊನವಾದವರನ್ನು ಮತ್ತು ಬೇರೆ ಅನೇಕ ರೋಗಿಗಳನ್ನು ತಮ್ಮೊಂದಿಗೆ ಕರೆದುಕೊಂಡು ಬಂದು ಯೇಸುವಿನ ಪಾದದ ಬಳಿಯಲ್ಲಿ ಬಿಟ್ಟರು. ಯೇಸು ಅವರನ್ನೆಲ್ಲಾ ಸ್ವಸ್ಥಪಡಿಸಿದರು. 31ಮೂಕರು ಮಾತನಾಡುವುದನ್ನೂ ಊನವಾದವರು ಸ್ವಸ್ಥರಾಗಿರುವುದನ್ನೂ ಕುಂಟರು ನಡೆದಾಡುವುದನ್ನೂ ಕುರುಡರು ಕಾಣುವುದನ್ನೂ ಜನಸಮೂಹದವರು ಕಂಡು ಆಶ್ಚರ್ಯಪಟ್ಟರು. ಅವರು ಇಸ್ರಾಯೇಲಿನ ದೇವರನ್ನು ಕೊಂಡಾಡಿದರು.
32ಯೇಸು ತಮ್ಮ ಶಿಷ್ಯರನ್ನು ಕರೆದು, “ನಾನು ಈ ಜನಸಮೂಹವನ್ನು ನೋಡಿ ಕನಿಕರಪಡುತ್ತೇನೆ. ಮೂರು ದಿನಗಳಿಂದ ಇವರು ನನ್ನೊಂದಿಗಿದ್ದಾರೆ. ಇವರಿಗೆ ಊಟಕ್ಕೆ ಏನೂ ಇಲ್ಲ, ದಾರಿಯಲ್ಲಿ ಅವರು ಬಳಲಿ ಹೋಗುವರು. ಇವರನ್ನು ಉಪವಾಸವಾಗಿ ಕಳುಹಿಸುವುದಕ್ಕೆ ನನಗೆ ಮನಸ್ಸಿಲ್ಲ,” ಎಂದರು.
33ಅದಕ್ಕೆ ಶಿಷ್ಯರು, “ಇಂಥಾ ದೊಡ್ಡ ಸಮೂಹವನ್ನು ತೃಪ್ತಿಪಡಿಸುವಂತೆ ಈ ನಿರ್ಜನ ಪ್ರದೇಶದಲ್ಲಿ ನಮಗೆ ಎಲ್ಲಿಂದ ರೊಟ್ಟಿ ಸಿಕ್ಕೀತು?” ಎಂದರು.
34ಯೇಸು ಅವರಿಗೆ, “ನಿಮ್ಮ ಹತ್ತಿರ ಎಷ್ಟು ರೊಟ್ಟಿಗಳಿವೆ?” ಎಂದು ಕೇಳಿದರು.
ಶಿಷ್ಯರು, “ಏಳು ರೊಟ್ಟಿಗಳು ಮತ್ತು ಕೆಲವು ಸಣ್ಣ ಮೀನುಗಳಿವೆ,” ಎಂದರು.
35ಯೇಸು ಜನಸಮೂಹವು ನೆಲದ ಮೇಲೆ ಕುಳಿತುಕೊಳ್ಳುವಂತೆ ಅಪ್ಪಣೆಕೊಟ್ಟರು. 36ಅನಂತರ ಯೇಸು ಆ ಏಳು ರೊಟ್ಟಿಗಳನ್ನು ಮತ್ತು ಮೀನುಗಳನ್ನು ತೆಗೆದುಕೊಂಡು ದೇವರಿಗೆ ಸ್ತೋತ್ರಮಾಡಿ, ಅವುಗಳನ್ನು ಮುರಿದು ತಮ್ಮ ಶಿಷ್ಯರಿಗೆ ಕೊಡಲು ಶಿಷ್ಯರು ಜನಸಮೂಹಕ್ಕೆ ಕೊಟ್ಟರು. 37ಅವರೆಲ್ಲರೂ ಊಟಮಾಡಿ ತೃಪ್ತರಾದರು. ಅನಂತರ ಶಿಷ್ಯರು ಮಿಕ್ಕ ತುಂಡುಗಳನ್ನು ಕೂಡಿಸಲಾಗಿ ಏಳು ಬುಟ್ಟಿಗಳು ತುಂಬಿದವು. 38ಊಟಮಾಡಿದವರು ಸ್ತ್ರೀಯರೂ ಮಕ್ಕಳೂ ಅಲ್ಲದೆ ನಾಲ್ಕು ಸಾವಿರ ಗಂಡಸರಿದ್ದರು. 39ತರುವಾಯ ಯೇಸು ಜನಸಮೂಹವನ್ನು ಕಳುಹಿಸಿಬಿಟ್ಟು ದೋಣಿಯನ್ನು ಹತ್ತಿ ಮಗದಾನ್ ಊರಿಗೆ ಬಂದರು.

Currently Selected:

ಮತ್ತಾಯ 15: KSB

Highlight

Share

Copy

None

Want to have your highlights saved across all your devices? Sign up or sign in