YouVersion Logo
Search Icon

ಮತ್ತಾಯ 18

18
ಪರಲೋಕದಲ್ಲಿ ದೊಡ್ಡವನು
1ಅದೇ ಸಮಯದಲ್ಲಿ ಶಿಷ್ಯರು ಯೇಸುವಿನ ಬಳಿಗೆ ಬಂದು, “ಪರಲೋಕ ರಾಜ್ಯದಲ್ಲಿ ಅತಿ ದೊಡ್ಡವನು ಯಾರು?” ಎಂದು ಕೇಳಿದರು.
2ಆಗ ಯೇಸು ಒಂದು ಚಿಕ್ಕ ಮಗುವನ್ನು ತಮ್ಮ ಬಳಿಗೆ ಕರೆದು, ಅದನ್ನು ಅವರ ಮಧ್ಯದಲ್ಲಿ ನಿಲ್ಲಿಸಿ, 3“ನೀವು ಪರಿವರ್ತನೆ ಹೊಂದಿ ಚಿಕ್ಕಮಕ್ಕಳಂತೆ ಆಗದಿದ್ದರೆ, ಪರಲೋಕ ರಾಜ್ಯದೊಳಗೆ ಪ್ರವೇಶಿಸುವುದಿಲ್ಲವೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ. 4ಯಾರು ಈ ಚಿಕ್ಕಮಗುವಿನಂತೆ ತಮ್ಮನ್ನು ತಾವು ತಗ್ಗಿಸಿಕೊಳ್ಳುವರೋ ಅವರೇ ಪರಲೋಕ ರಾಜ್ಯದಲ್ಲಿ ಅತಿ ದೊಡ್ಡವರಾಗಿರುವರು. 5ಯಾರಾದರೂ ಇಂಥ ಚಿಕ್ಕ ಮಗುವನ್ನು ನನ್ನ ಹೆಸರಿನಲ್ಲಿ ಸ್ವೀಕರಿಸಿಕೊಂಡರೆ ನನ್ನನ್ನೇ ಸ್ವೀಕರಿಸಿಕೊಳ್ಳುತ್ತಾರೆ.
ಪಾಪಕ್ಕೆ ಕಾರಣವಾಗಿರುವುದು
6“ಆದರೆ ನನ್ನಲ್ಲಿ ನಂಬಿಕೆಯಿಡುವ ಈ ಚಿಕ್ಕವರಲ್ಲಿ ಒಬ್ಬರಿಗೆ ಯಾರಾದರೂ ಪಾಪಕ್ಕೆ ಕಾರಣರಾದರೆ, ಅಂಥವರ ಕೊರಳಿಗೆ ಬೀಸುವ ಕಲ್ಲನ್ನು ನೇತುಹಾಕಿ ಅವರನ್ನು ಸಮುದ್ರದ ಆಳದಲ್ಲಿ ಮುಳುಗಿಸಿಡುವುದೇ ಲೇಸು, ಎಂದರು. 7ಪಾಪಕ್ಕೆ ಕಾರಣವಾಗಿರುವ ಜಗತ್ತಿಗೆ ಕಷ್ಟ! ಇಂಥ ವಿಷಯಗಳು ಅನಿವಾರ್ಯ. ಆದರೆ ಪಾಪಕ್ಕೆ ಕಾರಣವಾಗಿರುವವರ ಗತಿಯನ್ನು ಏನೆಂದು ಹೇಳಲಿ! 8ನಿಮ್ಮ ಕೈಯಾಗಲೀ ಕಾಲಾಗಲೀ ನಿಮ್ಮನ್ನು ಪಾಪಕ್ಕೆ ಕಾರಣವಾದರೆ ಅದನ್ನು ಕಡಿದುಹಾಕಿರಿ. ಎರಡು ಕೈಯುಳ್ಳವರಾಗಿ ಇಲ್ಲವೆ ಎರಡು ಕಾಲುಳ್ಳವರಾಗಿ ನಿತ್ಯ ಬೆಂಕಿಯಲ್ಲಿ ಹಾಕಿಸಿಕೊಳ್ಳುವುದಕ್ಕಿಂತ ಕುಂಟರಾಗಿ ಇಲ್ಲವೆ ಊನರಾಗಿ ಜೀವದಲ್ಲಿ ಪ್ರವೇಶಿಸುವುದು ನಿಮಗೆ ಲೇಸು. 9ನಿಮ್ಮ ಕಣ್ಣು ನಿಮ್ಮ ಪಾಪಕ್ಕೆ ಕಾರಣವಾದರೆ ಅದನ್ನು ಕಿತ್ತುಬಿಡಿರಿ. ನೀವು ಎರಡು ಕಣ್ಣುಳ್ಳವರಾಗಿ ನರಕದ ಬೆಂಕಿಯಲ್ಲಿ ಹಾಕಿಸಿಕೊಳ್ಳುವುದಕ್ಕಿಂತ ಒಂದು ಕಣ್ಣುಳ್ಳವರಾಗಿ ಜೀವದಲ್ಲಿ ಪ್ರವೇಶಿಸುವುದು ನಿಮಗೆ ಲೇಸು.
ಕಳೆದುಹೋದ ಕುರಿಯ ಸಾಮ್ಯ
10“ಚಿಕ್ಕವರಲ್ಲಿ ಒಬ್ಬನನ್ನಾದರೂ ನೀವು ಹೀನೈಸದಂತೆ ನೋಡಿಕೊಳ್ಳಿರಿ. ಪರಲೋಕದಲ್ಲಿರುವ ಅವರ ದೂತರು ಪರಲೋಕದ ನನ್ನ ತಂದೆಯ ಮುಖವನ್ನು ಯಾವಾಗಲೂ ನೋಡುತ್ತಿದ್ದಾರೆ. 11ತಪ್ಪಿಹೋದದ್ದನ್ನು ಹುಡುಕಿ ರಕ್ಷಿಸುವುದಕ್ಕಲ್ಲವೇ ಮನುಷ್ಯಪುತ್ರನಾದ ನಾನು ಬಂದೆನು,” ಎಂದು ಹೇಳಿದರು.#18:11 ಕೆಲವು ಹಸ್ತಪ್ರತಿಗಳಲ್ಲಿ ಈ ವಾಕ್ಯ ಸೇರ್ಪಡೆಯಾಗಿರುವುದಿಲ್ಲ.
12“ಆಗ ನಿಮಗೆ ಏನು ಅನಿಸುತ್ತದೆ? ಒಬ್ಬ ಮನುಷ್ಯನಿಗೆ ನೂರು ಕುರಿಗಳಿರಲಾಗಿ, ಅವುಗಳಲ್ಲಿ ಒಂದು ತಪ್ಪಿಸಿಕೊಂಡುಹೋದರೆ, ಅವನು ತೊಂಬತ್ತೊಂಬತ್ತು ಕುರಿಗಳನ್ನು ಬಿಟ್ಟು ಬೆಟ್ಟಗಳಿಗೆ ಹೋಗಿ, ತಪ್ಪಿಸಿಕೊಂಡದ್ದನ್ನು ಹುಡುಕುವುದಿಲ್ಲವೇ? 13ಅವನು ಅದನ್ನು ಕಂಡರೆ, ತಪ್ಪಿಸಿಕೊಳ್ಳದ ತೊಂಬತ್ತೊಂಬತ್ತು ಕುರಿಗಳಿಗಿಂತ ಈ ಒಂದು ಕುರಿಯ ವಿಷಯದಲ್ಲಿ ಹೆಚ್ಚು ಸಂತೋಷ ಪಡುತ್ತಾನೆಂದು ನಿಮಗೆ ನಿಜವಾಗಿ ಹೇಳುತ್ತೇನೆ. 14ಅದರಂತೆಯೇ ಈ ಚಿಕ್ಕವರಲ್ಲಿ ಒಬ್ಬರಾದರೂ ನಾಶವಾಗುವುದು ಪರಲೋಕದಲ್ಲಿರುವ ನಿಮ್ಮ ತಂದೆಯ ಚಿತ್ತವಲ್ಲ.
ಸಹೋದರನು ನಿಮಗೆ ವಿರುದ್ಧವಾಗಿ ಪಾಪಮಾಡಿದರೆ
15“ನಿನ್ನ ಸಹೋದರ ಅಥವಾ ಸಹೋದರಿ ಪಾಪಮಾಡಿದರೆ, ನೀವಿಬ್ಬರೇ ಇರುವಾಗ ಹೋಗಿ ಅವರನ್ನು ಖಂಡಿಸು. ಅವರು ನಿನಗೆ ಕಿವಿಗೊಟ್ಟರೆ ನೀನು ನಿನ್ನ ಸಹೋದರ ಅಥವಾ ಸಹೋದರಿಯನ್ನು ಗೆದ್ದುಕೊಂಡಿರುವೆ. 16ಆದರೆ ಅವರು ನಿನಗೆ ಕಿವಿಗೊಡದೆ ಹೋದರೆ, ನಿನ್ನೊಂದಿಗೆ ಇಬ್ಬರನ್ನು ಕರೆದುಕೊಂಡು ಹೋಗು. ಹೀಗೆ, ‘ಇಬ್ಬರ ಇಲ್ಲವೆ ಮೂವರ ಸಾಕ್ಷಿಗಳ ಬಾಯಿಂದ ಪ್ರತಿಯೊಂದು ಮಾತು ಸ್ಥಾಪಿತವಾಗಲಿ.’#18:16 ಧರ್ಮೋ 19:15 17ಅವರು ಅವರಿಗೂ ಕಿವಿಗೊಡದೆ ಹೋದರೆ ಅದನ್ನು ಸಭೆಗೆ ತಿಳಿಸು. ಅವರು ಸಭೆಗೂ ಕಿವಿಗೊಡದೆ ಹೋದರೆ, ಅವನು ನಿನಗೆ ಅನ್ಯನಂತೆಯೂ ಸುಂಕದವನಂತೆಯೂ ಇರಲಿ.
18“ನೀವು ಭೂಮಿಯಲ್ಲಿ ಯಾವುದನ್ನು ಬಂಧಿಸುತ್ತೀರೋ ಅದು ಪರಲೋಕದಲ್ಲಿಯೂ ಬಂಧಿತವಾಗುವುದು. ನೀವು ಭೂಮಿಯಲ್ಲಿ ಏನನ್ನು ಬಿಚ್ಚುತ್ತೀರೋ ಅದು ಪರಲೋಕದಲ್ಲಿಯೂ ಬಿಚ್ಚಲಾಗುವುದು ಎಂದು ನಿಮಗೆ ನಿಜವಾಗಿ ಹೇಳುತ್ತೇನೆ.
19“ಇನ್ನೂ ನಾನು ನಿಮಗೆ ನಿಜವಾಗಿ ಹೇಳುವುದೇನೆಂದರೆ: ನಿಮ್ಮಲ್ಲಿ ಇಬ್ಬರು ತಾವು ಬೇಡಿಕೊಳ್ಳುವ ಯಾವುದೇ ವಿಷಯಕ್ಕಾಗಿ ಭೂಮಿಯಲ್ಲಿ ಒಂದೇ ಮನಸ್ಸುಳ್ಳವರಾಗಿದ್ದರೆ, ಅದು ಪರಲೋಕದಲ್ಲಿರುವ ನನ್ನ ತಂದೆಯಿಂದ ಅವರಿಗೆ ಆಗುವುದು. 20ಏಕೆಂದರೆ ಇಬ್ಬರಾಗಲಿ ಮೂವರಾಗಲಿ ನನ್ನ ಹೆಸರಿನಲ್ಲಿ ಎಲ್ಲಿ ಸೇರಿ ಬರುತ್ತಾರೋ ಅವರ ಮಧ್ಯದಲ್ಲಿ ನಾನು ಇದ್ದೇನೆ,” ಎಂದರು.
ಕರುಣಿಸದ ಸೇವಕನ ಸಾಮ್ಯ
21ತರುವಾಯ ಪೇತ್ರನು ಯೇಸುವಿನ ಬಳಿಗೆ ಬಂದು, “ಕರ್ತನೇ, ನನ್ನ ಸಹೋದರ ಅಥವಾ ಸಹೋದರಿ ನನಗೆ ವಿರೋಧವಾಗಿ ಪಾಪಮಾಡಿದರೆ ನಾನು ಎಷ್ಟು ಸಲ ಅವರನ್ನು ಕ್ಷಮಿಸಬೇಕು? ಏಳು ಸಲವೋ?” ಎಂದು ಕೇಳಿದನು.
22ಅದಕ್ಕೆ ಯೇಸು, “ಏಳು ಸಲವಲ್ಲ, ಏಳೆಪ್ಪತ್ತು ಸಲ ಎಂದು ನಾನು ನಿಮಗೆ ಹೇಳುತ್ತೇನೆ.
23“ಆದ್ದರಿಂದ ಪರಲೋಕ ರಾಜ್ಯವು ತನ್ನ ಸೇವಕರಿಂದ ಲೆಕ್ಕ ತೆಗೆದುಕೊಳ್ಳಬೇಕೆಂದಿದ್ದ ಒಬ್ಬ ಅರಸನಿಗೆ ಹೋಲಿಕೆಯಾಗಿದೆ. 24ಅವನು ಲೆಕ್ಕ ತೆಗೆದುಕೊಳ್ಳಲು ಪ್ರಾರಂಭಿಸಿದಾಗ, ಹತ್ತು ಕೋಟಿ ಚಿನ್ನದ ನಾಣ್ಯಗಳ#18:24 ಗ್ರೀಕ್ ಭಾಷೆಯಲ್ಲಿ ಹತ್ತು ಸಾವಿರ ತಲಾಂತು. ದೊಡ್ಡ ಮೊತ್ತದ ಹಣ ಸಾಲ ಕೊಡಬೇಕಾದವನನ್ನು ಅವನ ಬಳಿಗೆ ತಂದರು. 25ಆದರೆ ಕೊಡುವುದಕ್ಕೆ ಅವನಲ್ಲಿ ಏನೂ ಇಲ್ಲದ್ದರಿಂದ ಅವನನ್ನೂ ಅವನ ಹೆಂಡತಿಯನ್ನೂ ಮಕ್ಕಳನ್ನೂ ಅವನಿಗಿದ್ದದ್ದೆಲ್ಲವನ್ನೂ ಮಾರಿ ಸಾಲ ತೀರಿಸಬೇಕೆಂದು ಅರಸನು ಅಪ್ಪಣೆಕೊಟ್ಟನು.
26“ಆಗ ಆ ಸೇವಕನು ಮೊಣಕಾಲೂರಿ, ‘ನನ್ನನ್ನು ಸ್ವಲ್ಪ ಸಹಿಸಿಕೊಳ್ಳಿರಿ. ನಾನು ನಿನ್ನ ಸಾಲವನ್ನೆಲ್ಲಾ ತೀರಿಸಿಬಿಡುತ್ತೇನೆ,’ ಎಂದು ಹೇಳಿದನು. 27ಆಗ ಅರಸನು ಸೇವಕನ ಮೇಲೆ ಕನಿಕರಪಟ್ಟು, ಅವನನ್ನು ಬಿಡುಗಡೆ ಮಾಡಿ ಅವನ ಸಾಲವನ್ನೆಲ್ಲಾ ಮನ್ನಿಸಿಬಿಟ್ಟನು.
28“ಆದರೆ ಅದೇ ಸೇವಕನು ಹೊರಗೆ ಹೋಗಿ, ತನಗೆ ಸುಮಾರು ನೂರು ಬೆಳ್ಳಿ ನಾಣ್ಯಗಳನ್ನು#18:28 ಒಂದು ದಿನಾರಿಯ ಬೆಳ್ಳಿ ನಾಣ್ಯವು ಒಂದು ದಿನದ ಕೂಲಿಗೆ ಸಮವಾಗಿತ್ತು ಸಾಲ ಕೊಡಬೇಕಾಗಿದ್ದ ತನ್ನ ಜೊತೆಯ ಸೇವಕರಲ್ಲಿ ಒಬ್ಬನನ್ನು ಕಂಡು, ಅವನನ್ನು ಹಿಡಿದು ಕುತ್ತಿಗೆ ಹಿಸುಕಿ, ‘ನನ್ನ ಸಾಲವನ್ನು ತೀರಿಸು,’ ಎಂದನು.
29“ಆಗ ಅವನ ಜೊತೆಯ ಸೇವಕನು ಮೊಣಕಾಲೂರಿ ಅವನಿಗೆ, ‘ನನ್ನನ್ನು ಸ್ವಲ್ಪ ಸಹಿಸಿಕೊಳ್ಳಿರಿ. ನಾನು ಸಾಲವನ್ನೆಲ್ಲಾ ತೀರಿಸಿಬಿಡುತ್ತೇನೆ,’ ಎಂದು ಅವನನ್ನು ಬೇಡಿಕೊಂಡನು.
30“ಆದರೆ ಅವನು ಅದಕ್ಕೆ ಒಪ್ಪದೆ ಹೊರಟುಹೋಗಿ, ತನ್ನ ಸಾಲವನ್ನು ತೀರಿಸುವವರೆಗೆ ಅವನನ್ನು ಸೆರೆಮನೆಯಲ್ಲಿ ಹಾಕಿಸಿದನು. 31ಅವನ ಜೊತೆಯ ಸೇವಕರು ನಡೆದದ್ದನ್ನು ನೋಡಿ, ಬಹಳ ವ್ಯಥೆಪಟ್ಟು ಹೋಗಿ ತಮ್ಮ ಅರಸನಿಗೆ ನಡೆದದ್ದೆಲ್ಲವನ್ನು ವರದಿಮಾಡಿದರು.
32“ಆಗ ಅರಸನು ಅವನನ್ನು ತನ್ನ ಬಳಿಗೆ ಕರೆದು ಅವನಿಗೆ, ‘ದುಷ್ಟ ಸೇವಕನೇ, ನೀನು ನನ್ನನ್ನು ಬೇಡಿಕೊಂಡಿದ್ದರಿಂದ ನಾನು ನಿನ್ನ ಸಾಲವನ್ನೆಲ್ಲಾ ಮನ್ನಿಸಿದೆನು. 33ನಾನು ನಿನ್ನ ಮೇಲೆ ಕರುಣೆ ತೋರಿಸಿದಂತೆಯೇ ನೀನು ಸಹ ನಿನ್ನ ಜೊತೆ ಸೇವಕನ ಮೇಲೆ ಕರುಣೆ ತೋರಿಸಬೇಕಿತ್ತಲ್ಲವೇ?’ ಎಂದು ಹೇಳಿ, 34ಕೋಪಗೊಂಡು ತನಗೆ ಕೊಡಬೇಕಾದ ಸಾಲವನ್ನೆಲ್ಲಾ ತೀರಿಸುವ ತನಕ ಅರಸನು ಅವನನ್ನು ಕಠಿಣ ಶಿಕ್ಷೆಗೆ ಒಳಪಡಿಸಲು ಸೆರೆಮನೆಯ ಅಧಿಕಾರಿಯ ವಶಕ್ಕೆ ಒಪ್ಪಿಸಿದನು.
35“ಅದರಂತೆಯೇ ನಿಮ್ಮಲ್ಲಿ ಪ್ರತಿಯೊಬ್ಬರು ಹೃದಯಪೂರ್ವಕವಾಗಿ ತನ್ನ ಸಹೋದರನನ್ನು ಕ್ಷಮಿಸದೆ ಹೋದರೆ ಪರಲೋಕದಲ್ಲಿರುವ ನನ್ನ ತಂದೆಯು ಸಹ ನಿಮಗೆ ಹಾಗೆಯೇ ಮಾಡುವರು,” ಎಂದರು.

Currently Selected:

ಮತ್ತಾಯ 18: KSB

Highlight

Share

Copy

None

Want to have your highlights saved across all your devices? Sign up or sign in