ಜೆಕರ್ಯ 2
2
ಅಳತೆಯ ನೂಲಿನವನ ವಿಷಯವಾದ ಕನಸು
1ನಾನು ಕಣ್ಣೆತ್ತಿನೋಡಲು ಇಗೋ, ಕೈಯಲ್ಲಿ ಅಳತೆಯ ನೂಲನ್ನು ಹಿಡಿದುಕೊಂಡಿದ್ದವನು ಕಾಣಿಸಿದನು. 2ನಾನು ಅವನನ್ನು - ಎಲ್ಲಿಗೆ ಹೋಗುತ್ತೀ ಎಂದು ಕೇಳಲು ಅವನು ನನಗೆ - ಯೆರೂಸಲೇವಿುನ ಅಗಲ ಉದ್ದ ಇಷ್ಟಿಷ್ಟಿರಬೇಕೆಂದು ಅಳೆದು ನೋಡುವದಕ್ಕೆ ಹೋಗುತ್ತೇನೆ ಎಂಬದಾಗಿ ಹೇಳಿದನು. 3ಇಗೋ, ವಿವರಿಸುವ ದೇವದೂತನು ಮುಂದರಿದು ತನ್ನನ್ನು ಎದುರುಗೊಳ್ಳುವದಕ್ಕೆ ಬಂದ ಮತ್ತೊಬ್ಬ ದೇವದೂತನಿಗೆ ಹೀಗೆ ಹೇಳಿದನು - 4ನೀನು ಓಡು, ಆ ಯುವಕನಿಗೆ ಈ ಮಾತನ್ನು ತಿಳಿಸು - ಯೆರೂಸಲೇವಿುನಲ್ಲಿರುವ ಜನ ಮತ್ತು ಪಶುಗಳ ಸಂಖ್ಯೆಯು ಅಪಾರವಾಗಿರುವದರಿಂದ ಅದು ಪೌಳಿಗೋಡೆ ಇಲ್ಲದ ಹಳ್ಳಿಪಳ್ಳಿಗಳಂತೆ ಹರಡಿಕೊಂಡು ನೆಲೆಯಾಗಿರುವದು. 5ನಾನೇ ಅದರ ಸುತ್ತುಮುತ್ತಲು ಅಗ್ನಿಪ್ರಾಕಾರವೂ ಅದರೊಳಗೆ ವೈಭವವೂ ಆಗಿರುವೆನು ಎಂಬದು ಯೆಹೋವನ ನುಡಿ.
ಬಾಬೆಲಿನಲ್ಲಿ ನಿಂತವರು ಚೀಯೋನಿಗೆ ಬರಬೇಕೆಂಬ ಎಚ್ಚರಿಕೆ
6ಎಲೈ, ಎಲೈ, ಉತ್ತರದೇಶದಿಂದ ಓಡಿಬನ್ನಿರಿ; ಇದು ಯೆಹೋವನ ನುಡಿ;
ಚತುರ್ದಿಕ್ಕಿನ ಗಾಳಿಗಳಂತೆ ನಿಮ್ಮನ್ನು ಚದರಿಸಿದ್ದೇನಲ್ಲಾ; ಇದು ಯೆಹೋವನ ನುಡಿ.
7ಎಲೈ, ಬಾಬೆಲ್‍ಪುರಿಯಲ್ಲಿ#2.7 ಅಥವಾ: ಬಾಬೆಲಿನಲ್ಲಿ ಮಗಳಂತೆ ವಾಸಿಸುವ ಚೀಯೋನೇ. ವಾಸಿಸುವ ಚೀಯೋನಿನವರೇ, ತಪ್ಪಿಸಿಕೊಂಡು ಬನ್ನಿರಿ.
8ನಿಮ್ಮನ್ನು ತಾಕುವವನು ಯೆಹೋವನ ಕಣ್ಣುಗುಡ್ಡನ್ನು ತಾಕುವವನಾಗಿದ್ದಾನೆ.
ಆದಕಾರಣ [ತನ್ನ] ಪ್ರಸಿದ್ಧಿಗಾಗಿ ನನ್ನನ್ನು ಕಳುಹಿಸಿದ ಸೇನಾಧೀಶ್ವರ ಯೆಹೋವನು ನಿಮ್ಮನ್ನು ಸೂರೆಮಾಡಿದ ಜನಾಂಗಗಳ ವಿಷಯವಾಗಿ -
9ಆಹಾ, ನಾನು ಇವರ ಮೇಲೆ ಕೈಬೀಸುವೆನು;
ಇವರು ತಮಗೆ ಅಡಿಯಾಳಾದವರಿಗೆ ಸೂರೆಯಾಗುವರು ಎಂದು ಹೇಳುತ್ತಾನೆ;
ಆಗ ಸೇನಾಧೀಶ್ವರ ಯೆಹೋವನು ನನ್ನನ್ನು ಕಳುಹಿಸಿದ್ದಾನೆಂಬದು ನಿಮಗೆ ಗೊತ್ತಾಗುವದು.
10ಯೆಹೋವನು ಇಂತೆನ್ನುತ್ತಾನೆ - ಚೀಯೋನ್ ನಗರಿಯೇ, ಉಲ್ಲಾಸಗೊಳ್ಳು, ಹರ್ಷಧ್ವನಿಗೈ!
ಇಗೋ, ನಾನು ಬಂದು ನಿನ್ನ ಮಧ್ಯದಲ್ಲಿ ವಾಸಿಸುವೆನು.
11ಆ ಕಾಲದಲ್ಲಿ ಬಹು ಜನಾಂಗಗಳು ಯೆಹೋವನಾದ ನನ್ನನ್ನು ಆಶ್ರಯಿಸಿಕೊಂಡು
ನನ್ನ ಜನವಾಗುವವು; ನಾನು ನಿನ್ನ ಮಧ್ಯದಲ್ಲಿ ವಾಸಿಸುವೆನು;
ಆಗ ಸೇನಾಧೀಶ್ವರ ಯೆಹೋವನೇ ನನ್ನನ್ನು ನಿನ್ನ ಬಳಿಗೆ ಕಳುಹಿಸಿದ್ದಾನೆಂಬದು ನಿನಗೆ ಗೊತ್ತಾಗುವದು.
12ಯೆಹೋವನು ಮೀಸಲಾದ ದೇಶದಲ್ಲಿ ಯೆಹೂದವನ್ನು ತನ್ನ ಸ್ವಾಸ್ತ್ಯವನ್ನಾಗಿ ಅನುಭವಿಸುವನು,
ಯೆರೂಸಲೇಮನ್ನು ಮತ್ತೆ ತನಗಾಗಿ ಆರಿಸಿಕೊಳ್ಳುವನು.
13ಯೆಹೋವನು ತನ್ನ ಪರಿಶುದ್ಧ ನಿವಾಸದಿಂದ ಎದ್ದು ಹೊರಟಿದ್ದಾನೆ;
ನರಪ್ರಾಣಿಗಳೇ, ನೀವೆಲ್ಲಾ ಆತನ ಮುಂದೆ ಮೌನವಾಗಿರಿ.
Currently Selected:
ಜೆಕರ್ಯ 2: KANJV-BSI
Highlight
Share
Copy
Want to have your highlights saved across all your devices? Sign up or sign in
Kannada J.V. Bible © The Bible Society of India, 2016.
Used by permission. All rights reserved worldwide.