ಜೆಕರ್ಯ 1
1
ನೂತನ ದೇವಾಲಯವನ್ನು ಕಟ್ಟುವ ಕಾಲದ ಪ್ರವಾದನೆಗಳು
(1—8)
ಯೆಹೋವನ ಕಡೆಗೆ ಪುನಃ ತಿರುಗಬೇಕೆಂಬ ಎಚ್ಚರಿಕೆ
1ದಾರ್ಯಾವೆಷನ ಆಳಿಕೆಯ ಎರಡನೆಯ ವರುಷದ ಎಂಟನೆಯ ತಿಂಗಳಲ್ಲಿ ಯೆಹೋವನು ಇದ್ದೋವಿನ ಮೊಮ್ಮಗನೂ ಬೆರಕ್ಯನ ಮಗನೂ ಆದ ಜೆಕರ್ಯನೆಂಬ ಪ್ರವಾದಿಗೆ ಈ ವಾಕ್ಯವನ್ನು ದಯಪಾಲಿಸಿದನು - 2ಯೆಹೋವನು ನಿಮ್ಮ ಪಿತೃಗಳ ಮೇಲೆ ಬಹುಕೋಪಗೊಂಡಿದ್ದಾನೆ. 3ಆದಕಾರಣ ನೀನು ನಿನ್ನ#1.3 ಮೂಲ: ಅವರಿಗೆ. ಜನರಿಗೆ ಹೀಗೆ ಹೇಳು - ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ - ನನ್ನ ಕಡೆಗೆ ಪುನಃ ತಿರುಗಿರಿ; ಇದು ಸೇನಾಧೀಶ್ವರ ಯೆಹೋವನ ನುಡಿ; ನಾನು ನಿಮ್ಮ ಕಡೆಗೆ ಪುನಃ ತಿರುಗುವೆನು; ಇದು ಸೇನಾಧೀಶ್ವರ ಯೆಹೋವನ ನುಡಿ. 4ನಿಮ್ಮ ಪಿತೃಗಳಂತಿರಬೇಡಿರಿ; ಪೂರ್ವಕಾಲದ ಪ್ರವಾದಿಗಳು ಅವರಿಗೆ - ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ - ನಿಮ್ಮ ದುರ್ಮಾರ್ಗ ದುಷ್ಕೃತ್ಯಗಳಿಂದ ಹಿಂದಿರುಗಿರಿ ಎಂದು ಸಾರಿದರೂ ಅವರು ನನ್ನ ಮಾತನ್ನು ಕಿವಿಗೊಟ್ಟು ಕೇಳಲಿಲ್ಲ; ಇದು ಯೆಹೋವನ ನುಡಿ. 5ನಿಮ್ಮ ಪಿತೃಗಳು ಎಲ್ಲಿ? ಪ್ರವಾದಿಗಳು ನಿತ್ಯಜೀವಿಗಳೋ? 6ಆದರೆ ನನ್ನ ಸೇವಕರಾದ ಪ್ರವಾದಿಗಳಿಗೆ ಆಜ್ಞಾಪಿಸಿದ ನನ್ನ ವಾಕ್ಯಗಳೂ ವಿಧಿಗಳೂ ನಿಮ್ಮ ಪಿತೃಗಳನ್ನು ಹಿಂದಟ್ಟಿ ಹಿಡಿದು#1.6 ಮೂಲ: ಹಿಡಿದವಷ್ಟೆ. ನಿತ್ಯವಾಗಿವೆಯಷ್ಟೆ; ಅವರು ತಿರುಗಿಕೊಂಡು - ಸೇನಾಧೀಶ್ವರ ಯೆಹೋವನು ನಮ್ಮ ದುರ್ಮಾರ್ಗ ದುಷ್ಕೃತ್ಯಗಳಿಗೆ ತಕ್ಕ ಹಾಗೆ ನಮಗೆ ಏನು ಮಾಡಬೇಕೆಂದು ಸಂಕಲ್ಪಿಸಿದನೋ ಅದನ್ನು ನಮಗೆ ಮಾಡಿದ್ದಾನಲ್ಲಾ ಅಂದುಕೊಂಡರು.
ಪ್ರವಾದಿಯ ಎಂಟು ಕನಸುಗಳು
(1.7—6.8)
ನಾಲ್ವರು ಸವಾರರ ವಿಷಯವಾದ ಕನಸು
7ದಾರ್ಯಾವೆಷನ ಆಳಿಕೆಯ ಎರಡನೆಯ ವರುಷದ ಹನ್ನೊಂದನೆಯ ತಿಂಗಳಿನ ಅಂದರೆ ಶೆಬಾಟ್ ತಿಂಗಳಿನ ಇಪ್ಪತ್ತನಾಲ್ಕನೆಯ ದಿನದಲ್ಲಿ ಯೆಹೋವನ ವಾಕ್ಯವು ಇದ್ದೋವಿನ ಮೊಮ್ಮಗನೂ ಬೆರೆಕ್ಯನ ಮಗನೂ ಆದ ಜೆಕರ್ಯನೆಂಬ ಪ್ರವಾದಿಗೆ ಕಂಡುಬಂತು.
8ರಾತ್ರಿಯಲ್ಲಿ ನನಗೆ ದರ್ಶನವಾಯಿತು - ಇಗೋ, ಕೆಂಪು ಕುದುರೆಯನ್ನು ಹತ್ತಿದ ಒಬ್ಬ ಪುರುಷನು ತಗ್ಗಿನಲ್ಲಿರುವ ಸುಗಂಧ ವೃಕ್ಷಗಳ ನಡುವೆ ನಿಂತಿದ್ದನು; ಅವನ ಹಿಂದೆ ಕೆಂಪು ಕಪಿಲ ಬಿಳಿ ಕುದುರೆಗಳನ್ನು#1.8 ಮೂಲ: ಕುದುರೆಗಳಿದ್ದವು. ಹತ್ತಿದವರಿದ್ದರು. 9ನನಗೆ [ಕನಸಿನ ಅರ್ಥವನ್ನು] ವಿವರಿಸುವ ದೇವದೂತನನ್ನು - ಸ್ವಾಮೀ, ಇವರು ಯಾರು ಎಂದು ನಾನು ಕೇಳಲು ಅವನು ನನಗೆ - ಇವರು ಇಂಥವರೆಂದು ನಿನಗೆ ತೋರಿಸುವೆನು ಎಂಬದಾಗಿ ಹೇಳಿದನು. 10ಕೂಡಲೆ ಸುಗಂಧವೃಕ್ಷಗಳ ನಡುವೆ ನಿಂತಿದ್ದವನು - ಇವರು ಲೋಕಸಂಚಾರಾರ್ಥವಾಗಿ ಯೆಹೋವನಿಂದ ಕಳುಹಿಸಲ್ಪಟ್ಟವರು ಎಂದು ಉತ್ತರಕೊಟ್ಟನು. 11ಆಗ ಅವರು ಸುಗಂಧವೃಕ್ಷಗಳ ನಡುವೆ ನಿಂತಿದ್ದ ಆ ಯೆಹೋವನ ದೂತನಿಗೆ - ನಾವು ಲೋಕದಲ್ಲಿ ಸಂಚರಿಸಿ ಬಂದಿದ್ದೇವೆ; ಇಗೋ, ಲೋಕವೆಲ್ಲಾ ನೆಮ್ಮದಿಯಾಗಿ ಸುಮ್ಮನಿದೆ ಎಂದು ಅರಿಕೆಮಾಡಿದರು. 12ಇದನ್ನು ಕೇಳಿ ಯೆಹೋವನ ದೂತನು - ಸೇನಾಧೀಶ್ವರ ಯೆಹೋವನೇ, ನೀನು ಎಪ್ಪತ್ತು ವರುಷಗಳಿಂದ ರೋಷಗೊಂಡಿರುವ ಯೆರೂಸಲೇಮು ಮೊದಲಾದ ಯೆಹೂದದ ಪಟ್ಟಣಗಳನ್ನು ಎಷ್ಟು ಕಾಲ ಕರುಣಿಸದೆ ಇರುವಿ ಎಂದು ಬಿನ್ನವಿಸಲು 13ನನಗೆ ವಿವರಿಸುವ ದೂತನಿಗೆ ಯೆಹೋವನು ಕರುಣೆಯ ಒಳ್ಳೆಯ ಮಾತುಗಳಿಂದ ಉತ್ತರಕೊಟ್ಟನು. 14ಆಗ ಆ ದೂತನು ನನಗೆ ಈ ಅಪ್ಪಣೆಮಾಡಿದನು - ನೀನು ಹೀಗೆ ಸಾರು - ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ - ಯೆರೂಸಲೇವಿುಗೂ ಚೀಯೋನಿಗೂ ಅವಮಾನವಾಯಿತಲ್ಲಾ ಎಂದು ಬಹಳವಾಗಿ ಕುದಿಯುತ್ತೇನೆ. 15ನೆಮ್ಮದಿಯಾಗಿರುವ ಜನಾಂಗಗಳ ಮೇಲೆ ನನಗೆ ಬಲು ಸಿಟ್ಟೇರಿದೆ; ನಾನು [ಯೆರೂಸಲೇವಿುನ ಮೇಲೆ] ಸ್ವಲ್ಪ ಮಾತ್ರ ಸಿಟ್ಟುಗೊಂಡು ಮಾಡಿಸಬೇಕೆಂದಿದ್ದ ಕೇಡಿಗಿಂತ ಅವು ಹೆಚ್ಚಾಗಿ ಮಾಡಿದವಷ್ಟೆ. 16ಹೀಗಿರಲು ಯೆಹೋವನು ಇಂತೆನ್ನುತ್ತಾನೆ - ನಾನು ಕನಿಕರವುಳ್ಳವನಾಗಿ ಯೆರೂಸಲೇವಿುಗೆ ಹಿಂದಿರುಗಿದ್ದೇನೆ; ನನ್ನ ಆಲಯವು ಅಲ್ಲಿ ಕಟ್ಟಲ್ಪಡುವದು; ಯೆರೂಸಲೇವಿುನಲ್ಲಿ ನೂಲು ಎಳೆಯಲ್ಪಡುವದು; ಇದು ಸೇನಾಧೀಶ್ವರ ಯೆಹೋವನ ನುಡಿ. 17ಮತ್ತೊಮ್ಮೆ ಹೀಗೆ ಸಾರು - ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ - ಇನ್ನು ನನ್ನ ಪಟ್ಟಣಗಳಲ್ಲಿ ಶುಭವು ತುಂಬಿ ತುಳುಕುವದು; ಯೆಹೋವನು ಇನ್ನು ಚೀಯೋನನ್ನು ಸಂತೈಸುವನು, ಯೆರೂಸಲೇಮನ್ನು ಮತ್ತೆ ತನಗಾಗಿ ಆರಿಸಿಕೊಳ್ಳುವನು.
ನಾಲ್ಕು ಕೊಂಬುಗಳ ಮತ್ತು ನಾಲ್ವರು ಕಮ್ಮಾರರ ವಿಷಯವಾದ ಕನಸು
18ನಾನು ಕಣ್ಣೆತ್ತಿನೋಡಲು ಇಗೋ, ನಾಲ್ಕು ಕೊಂಬುಗಳು ಕಾಣಿಸಿದವು. 19ವಿವರಿಸುವ ದೂತನನ್ನು ಕುರಿತು ಇವು ಏನು ಎಂದು ನಾನು ಕೇಳಿದ್ದಕ್ಕೆ ಅವನು - ಇವು ಯೆಹೂದ ಇಸ್ರಾಯೇಲು ಯೆರೂಸಲೇಮುಗಳನ್ನು ಚದರಿಸಿರುವ ಕೊಂಬುಗಳು ಎಂದು ಉತ್ತರಕೊಟ್ಟನು. 20ಅನಂತರ ಯೆಹೋವನು ನನಗೆ ನಾಲ್ಕು ಮಂದಿ ಕಮ್ಮಾರರನ್ನು ತೋರಿಸಿದನು. 21ಆಗ ನಾನು - ಇವರು ಏನು ಮಾಡುವದಕ್ಕೆ ಬಂದಿದ್ದಾರೆ ಎಂದು ಕೇಳಲು ಅವನು - ಈ ಕೊಂಬುಗಳು ಯೆಹೂದದವರಲ್ಲಿ ಯಾರೂ ತಲೆಯೆತ್ತದಂತೆ ಅವರನ್ನು ಚದರಿಸಿವೆಯಷ್ಟೆ; ಇವರಾದರೋ ಯೆಹೂದ ದೇಶದವರನ್ನು ಚದರಿಸಬೇಕೆಂದು ತಲೆಯೆತ್ತಿದ#1.21 ಮೂಲ: ಕೊಂಬೆತ್ತಿದ. ಕೀರ್ತ. 75.4,5 ನೋಡಿರಿ. ಜನಾಂಗಗಳ ಕೊಂಬುಗಳನ್ನು ಹೆದರಿಸಿ ಕೆಡವುವದಕ್ಕೆ ಬಂದಿದ್ದಾರೆ ಎಂದು ಹೇಳಿದನು.
Currently Selected:
ಜೆಕರ್ಯ 1: KANJV-BSI
Highlight
Share
Copy
Want to have your highlights saved across all your devices? Sign up or sign in
Kannada J.V. Bible © The Bible Society of India, 2016.
Used by permission. All rights reserved worldwide.