YouVersion Logo
Search Icon

ಕೀರ್ತನೆಗಳು 62

62
ದೇವರ ಆಶ್ರಯದಲ್ಲಿರುವವರ ಮನಶ್ಶಾಂತಿ
(ಕೀರ್ತ. 49)
ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ತೆಗೆದದ್ದು; ಯೆದುತೂನನ ರೀತಿಯಲ್ಲಿ ಹಾಡತಕ್ಕದ್ದು; ದಾವೀದನ ಕೀರ್ತನೆ
(ಕೀರ್ತ. 39, 77)
1ನನ್ನ ಮನಸ್ಸು ದೇವರನ್ನೇ ನಂಬಿ ಶಾಂತವಾಗಿರುವದು.
ನನ್ನ ರಕ್ಷಣೆಯು ಆತನಿಂದಲೇ.
2ಆತನೇ ನನಗೆ ಶರಣನೂ ರಕ್ಷಕನೂ ದುರ್ಗವೂ;
ನಾನು ಕದಲಿದರೂ ಬೀಳೆನು.
3ನೀವೆಲ್ಲರೂ ಒಬ್ಬ ಪುರುಷನ ಮೇಲೆ ಬಿದ್ದು
ಅವನು ಬಾಗಿದ ಗೋಡೆಯೋ ಕುಸಿದ ಪ್ರಾಕಾರವೋ ಎಂಬಂತೆ
ಅವನನ್ನು ಹೊಡೆದು ಕೆಡವಬೇಕೆಂದಿರುವದು ಇನ್ನೆಷ್ಟರವರೆಗೆ?
4ಅವನನ್ನು ಉನ್ನತಸ್ಥಾನದಿಂದ ದೊಬ್ಬುವದೇ ಅವರ ಆಲೋಚನೆ.
ಸುಳ್ಳಾಡುವದು ಅವರಿಗೆ ಅತಿಸಂತೋಷ;
ಬಾಯಿಂದ ಹರಸಿ ಮನಸ್ಸಿನಿಂದ ಶಪಿಸುತ್ತಾರೆ. ಸೆಲಾ.
5ನನ್ನ ಮನವೇ, ದೇವರನ್ನೇ ನಂಬಿ ಶಾಂತವಾಗಿರು.
ನನ್ನ ನಿರೀಕ್ಷೆಯು ನೆರವೇರುವದು ಆತನಿಂದಲೇ.
6ಆತನೇ ನನಗೆ ಶರಣನೂ ರಕ್ಷಕನೂ ದುರ್ಗವೂ;
ನಾನು ಕದಲುವದಿಲ್ಲ.
7ನನ್ನ ರಕ್ಷಣೆಗೂ ಮಾನಕ್ಕೂ ದೇವರೇ ಆಧಾರ;
ನನಗೆ ಬಲವಾದ ದುರ್ಗವೂ ಆಶ್ರಯವೂ ದೇವರಲ್ಲಿಯೇ.
8ಜನರೇ, ಯಾವಾಗಲೂ ಆತನನ್ನೇ ನಂಬಿ ನಿಮ್ಮ ಹೃದಯವನ್ನು ಆತನ ಮುಂದೆ ಬಿಚ್ಚಿರಿ;
ದೇವರು ನಮ್ಮ ಆಶ್ರಯವು. ಸೆಲಾ.
9ನರರು ಬರೀ ಉಸಿರೇ;
ನರಾಧಿಪತಿಗಳು ಬರೀ ಮಾಯವೇ.
ಅವರೆಲ್ಲರನ್ನು ತ್ರಾಸಿನಲ್ಲಿ ತೂಗಿ ನೋಡಿದರೆ ಉಸಿರಿಗಿಂತಲೂ ಲಘು.
10ಅನ್ಯಾಯದಿಂದ ಸಂಪಾದಿಸಿದ್ದನ್ನು ನೆಚ್ಚಬೇಡಿರಿ;
ಸುಲಿಗೆಯಿಂದ ಗಳಿಸಿ ಸೊಕ್ಕಿರಬೇಡಿರಿ;
ಹೆಚ್ಚಿದ ಆಸ್ತಿಯಲ್ಲಿ ಮನಸ್ಸಿಡಬೇಡಿರಿ.
11ಸರ್ವಾಧಿಕಾರವು ದೇವರದೇ ಎಂದು ದೇವರು ಒಮ್ಮೆ ಅಲ್ಲ, ಎರಡಾವರ್ತಿ ಹೇಳಿದ್ದನ್ನು ಕೇಳಿದ್ದೇನೆ.
12ಕರ್ತನೇ, ನೀನು ಪ್ರೀತಿಸ್ವರೂಪನಾಗಿ
ಪ್ರತಿಯೊಬ್ಬನಿಗೆ ಅವನವನ ಕೃತ್ಯಗಳಿಗೆ ತಕ್ಕ ಪ್ರತಿಫಲವನ್ನು ಕೊಡುವಂಥವನಲ್ಲವೇ.

Highlight

Share

Copy

None

Want to have your highlights saved across all your devices? Sign up or sign in