ಆದಿಕಾಂಡ 35
35
ಯಾಕೋಬನು ತನ್ನ ಮನೆಯಲ್ಲಿ ಅನ್ಯದೇವರುಗಳ ಪೂಜೆಯನ್ನು ತಪ್ಪಿಸಿ ಬೇತೇಲಿಗೆ ಬಂದದ್ದು
1ದೇವರು ಯಾಕೋಬನಿಗೆ - ನೀನು ಈ ಸ್ಥಳವನ್ನು ಬಿಟ್ಟು ಗಟ್ಟಾಹತ್ತಿ ಬೇತೇಲಿಗೆ ಹೋಗಿ ಅಲ್ಲೇ ವಾಸಮಾಡು. ನೀನು ನಿನ್ನ ಅಣ್ಣನಾದ ಏಸಾವನ ಬಳಿಯಿಂದ ಓಡಿಹೋದ ಕಾಲದಲ್ಲಿ ದೇವರು ಅಲ್ಲಿ ನಿನಗೆ ದರ್ಶನಕೊಟ್ಟನಲ್ಲಾ; ಆತನಿಗಾಗಿ ಯಜ್ಞವೇದಿಯನ್ನು ಕಟ್ಟಿಸು ಎಂದು ಹೇಳಿದನು. 2ಆಗ ಯಾಕೋಬನು ತನ್ನ ಮನೆಯವರಿಗೂ ತನ್ನ ಸಂಗಡ ಇದ್ದವರೆಲ್ಲರಿಗೂ - ನಿಮ್ಮಲ್ಲಿರುವ ಅನ್ಯದೇವರುಗಳನ್ನು ತಳ್ಳಿಬಿಟ್ಟು ನಿಮ್ಮನ್ನು ಶುದ್ಧೀಕರಿಸಿಕೊಂಡು ಮಡಿವಸ್ತ್ರಗಳನ್ನು ಹಾಕಿಕೊಳ್ಳಿರಿ; ನಾವು ಬೇತೇಲಿಗೆ ಹೊರಟುಹೋಗೋಣ. 3ಕಷ್ಟಕಾಲದಲ್ಲಿ ನನ್ನ ವಿಜ್ಞಾಪನೆಯನ್ನು ಲಾಲಿಸಿ ನಾನು ಹೋದ ಮಾರ್ಗದಲ್ಲೆಲ್ಲಾ ನನ್ನ ಸಂಗಡ ಇದ್ದ ದೇವರಿಗೆ ಅಲ್ಲಿ ಯಜ್ಞವೇದಿಯನ್ನು ಕಟ್ಟಿಸುತ್ತೇನೆ ಎಂದು ಹೇಳಿದನು. 4ಆಗ ಅವರು ತಮ್ಮಲ್ಲಿದ್ದ ಎಲ್ಲಾ ಅನ್ಯದೇವರುಗಳನ್ನೂ ತಮ್ಮ ಕಿವಿಗಳಲ್ಲಿದ್ದ ಮುರುವುಗಳನ್ನೂ ಯಾಕೋಬನಿಗೆ ಒಪ್ಪಿಸಲು ಅವನು ಅವುಗಳನ್ನು ಶೆಕೆಮ್ ಪಟ್ಟಣದ ಹತ್ತಿರವಿರುವ ಏಲಾವೃಕ್ಷದ ಬುಡದಲ್ಲಿ ಹೂಳಿಟ್ಟನು. 5ಆಮೇಲೆ ಅವರು ಪ್ರಯಾಣ ಮಾಡುತ್ತಿರುವಾಗ ದೇವರು ಹುಟ್ಟಿಸಿದ ಭಯವು ಸುತ್ತುಮುತ್ತಣ ಊರುಗಳಲ್ಲಿ ಇದ್ದದರಿಂದ ಆ ಊರುಗಳವರು ಯಾಕೋಬನ ಮಕ್ಕಳನ್ನು ಹಿಂದಟ್ಟಿ ಬರಲಿಲ್ಲ. 6ಯಾಕೋಬನೂ ಅವನ ಸಂಗಡ ಇದ್ದ ಜನರೆಲ್ಲರೂ ಕಾನಾನ್‍ದೇಶದಲ್ಲಿರುವ ಬೇತೇಲೆಂಬ ಲೂಜಿಗೆ ಮುಟ್ಟಿದರು. 7ಅವನು ತನ್ನ ಅಣ್ಣನ ಬಳಿಯಿಂದ ಓಡಿಹೋಗಲು ದೇವರು ಅಲ್ಲೇ ಅವನಿಗೆ ಪ್ರತ್ಯಕ್ಷನಾದದರಿಂದ ಅವನು ಅಲ್ಲಿ ಯಜ್ಞವೇದಿಯನ್ನು ಕಟ್ಟಿಸಿ ಆ ಸ್ಥಳಕ್ಕೆ ಏಲ್ ಬೇತೇಲ್#35.7 ಏಲ್ ಬೇತೇಲ್ ಅಂದರೆ, ಬೇತೇಲಿನ ದೇವರು. ಎಂದು ಹೆಸರಿಟ್ಟನು.
8ಅಲ್ಲಿ ರೆಬೆಕ್ಕಳ ದಾದಿಯಾದ ದೆಬೋರಳು ಸತ್ತುಹೋಗಲು ಅವರು ಆಕೆಗೆ ಬೇತೇಲಿನ ತಗ್ಗಿನಲಿರುವ ಅಲ್ಲೋನ್ ಮರದ ಬುಡದಲ್ಲಿ ಸಮಾಧಿಮಾಡಿ ಅದಕ್ಕೆ ಅಲ್ಲೋನ್ ಬಾಕೂತ್#35.8 ಅಲ್ಲೋನ್ ಬಾಕೂತ್ ಅಂದರೆ, ಗೋಳಾಟದ ಮರ. ಎಂದು ಹೆಸರಿಟ್ಟರು.
ದೇವರು ಅಬ್ರಹಾಮ್ ಇಸಾಕರಿಗೆ ಮಾಡಿದ್ದ ವಾಗ್ದಾನಗಳನ್ನು ಯಾಕೋಬನಿಗೂ ಮಾಡಿದ್ದು
9ಯಾಕೋಬನು ಪದ್ದನ್ಅರಾವಿುನಿಂದ ಬಂದಾಗ ದೇವರು ತಿರಿಗಿ ಅವನಿಗೆ ದರ್ಶನ ಕೊಟ್ಟು ಅವನನ್ನು ಆಶೀರ್ವದಿಸಿದನು. 10ದೇವರು ಅವನಿಗೆ - ನಿನ್ನ ಹೆಸರು ಯಾಕೋಬನಲ್ಲವೇ; ಇನ್ನು ಮೇಲೆ ನೀನು ಯಾಕೋಬನೆನಿಸಿಕೊಳ್ಳದೆ ಇಸ್ರಾಯೇಲನೆನಿಸಿಕೊಳ್ಳಬೇಕು ಎಂದು ಹೇಳಿ ಅವನಿಗೆ ಇಸ್ರಾಯೇಲ ಎಂದು ಹೆಸರಿಟ್ಟನು. 11ಇದಲ್ಲದೆ ನಾನು ಸರ್ವಶಕ್ತನಾದ ದೇವರು. ನೀನು ಬಹು ಸಂತಾನವುಳ್ಳವನಾಗಿ ಹೆಚ್ಚು. ನಿನ್ನಿಂದ ಜನಾಂಗವುಂಟಾಗುವದು; ಅನೇಕ ಜನಾಂಗಗಳೂ ಅರಸರೂ ನಿನ್ನಿಂದ ಹುಟ್ಟುವರು. 12ನಾನು ಅಬ್ರಹಾಮ್ ಇಸಾಕರಿಗೆ ವಾಗ್ದಾನಮಾಡಿದ ದೇಶವನ್ನು ನಿನಗೂ ನಿನ್ನ ತರುವಾಯ ಬರುವ ನಿನ್ನ ಸಂತತಿಗೂ ಕೊಡುವೆನು ಎಂದು ಹೇಳಿ 13ತಾನು ಅವನ ಸಂಗಡ ಮಾತಾಡಿದ ಸ್ಥಳದಿಂದ ಮೇಲಕ್ಕೇರಿ ಹೋದನು. 14ಯಾಕೋಬನು ತನ್ನ ಸಂಗಡ ದೇವರು ಮಾತಾಡಿದ ಸ್ಥಳದಲ್ಲಿ ಕಲ್ಲಿನ ಕಂಬವನ್ನು ನಿಲ್ಲಿಸಿ ಅದರ ಮೇಲೆ ಪಾನಕಾಭಿಷೇಕಮಾಡಿ ಎಣ್ಣೇ ಹೊಯಿದನು. 15ಅವನು ತನ್ನ ಸಂಗಡ ದೇವರು ಮಾತಾಡಿದ ಸ್ಥಳಕ್ಕೆ ಬೇತೇಲೆಂದು ಹೆಸರಿಟ್ಟನು.
ರಾಹೇಲಳು ಮೃತಪಟ್ಟದ್ದು; ಯಾಕೋಬನ ಮಕ್ಕಳ ವಿವರ; ಇಸಾಕನು ಮೃತಪಟ್ಟದ್ದು
16ಅವರು ಬೇತೇಲಿನಿಂದ ಪ್ರಯಾಣ ಮಾಡುತ್ತಿರಲು ಎಫ್ರಾತೂರಿಗೆ ಸೇರುವದಕ್ಕೆ ಇನ್ನೂ ಸ್ವಲ್ಪ ದೂರವಿದ್ದಾಗ ರಾಹೇಲಳಿಗೆ ಹೆರಿಗೇ ಕಾಲಬಂತು. 17ಆಕೆ ಹೆರಿಗೆಯ ಬೇನೆಯಿಂದ ಬಹು ಕಷ್ಟಪಡುತ್ತಿರುವಾಗ ಸೂಲಗಿತ್ತಿಯು ಆಕೆಗೆ - ಅಂಜಬೇಡ; ಇನ್ನೊಂದು ಗಂಡು ಮಗುವು ಹುಟ್ಟುವದಲ್ಲಾ ಎಂದು ಹೇಳಿದಳು. 18ಆದರೆ ರಾಹೇಲಳು ಸತ್ತುಹೋದಳು; ಪ್ರಾಣಹೋಗುತ್ತಿರುವಾಗ ಆಕೆಯು ಆ ಮಗುವಿಗೆ ಬೆನೋನಿ#35.18 ಬೆನೋನಿ ಅಂದರೆ, ನನ್ನ ದುಃಖದ ಮಗನು. ಎಂದು ಹೆಸರಿಟ್ಟಳು; ಆದರೆ ಅದರ ತಂದೆಯು ಅದಕ್ಕೆ ಬೆನ್ಯಾಮೀನ್#35.18 ಬೆನ್ಯಾಮೀನ್ ಅಂದರೆ, ಬಲಭುಜವು. ಎಂದು ಹೆಸರಿಟ್ಟನು. ಹಾಗೆ ರಾಹೇಲಳು ಮೃತಪಟ್ಟಳು. 19ಬೇತ್ಲೆಹೇಮೆಂಬ ಎಫ್ರಾತಿಗೆ ಹೋಗುವ ದಾರಿಯಲ್ಲಿ ಆಕೆಗೆ ಸಮಾಧಿಮಾಡಿದರು. 20ಯಾಕೋಬನು ಆಕೆಯ ಸಮಾಧಿಯ ಮೇಲೆ ಕಂಬವನ್ನು ನಿಲ್ಲಿಸಿದನು; ಅದು ಇಂದಿನವರೆಗೂ ರಾಹೇಲಳ ಸಮಾಧಿಸ್ತಂಭವೆನಿಸಿಕೊಳ್ಳುತ್ತದೆ.
21ಅಲ್ಲಿಂದ ಇಸ್ರಾಯೇಲನು ಪ್ರಯಾಣ ಮಾಡಿ ವಿುಗ್ದಲ್ಏದರಿನ#35.21 ವಿುಗ್ದಲ್ ಏದರ್ ಅಂದರೆ, ಹಿಂಡನ್ನು ಕಾಯುವದಕ್ಕಾಗಿ ಇಟ್ಟಿರುವ ಹೂಡೆ. ಮೀಕ. 4.8 ನೋಡಿರಿ. ಆಚೆಯಲ್ಲಿ ತನ್ನ ಗುಡಾರವನ್ನು ಹಾಕಿಸಿದನು. 22ಇಸ್ರಾಯೇಲನು ಆ ದೇಶದಲ್ಲಿ ವಾಸವಾಗಿದ್ದಾಗ ರೂಬೇನನು ತನ್ನ ತಂದೆಯ ಉಪಪತ್ನಿಯಾದ ಬಿಲ್ಹಳಲ್ಲಿ ಸಂಗವಿುಸಿದನು; ಮತ್ತು ಆ ಸಂಗತಿಯು ಇಸ್ರಾಯೇಲನಿಗೆ ತಿಳಿದುಬಂತು.
ಯಾಕೋಬನ ಗಂಡು ಮಕ್ಕಳು ಹನ್ನೆರಡು ಮಂದಿ. 23ಅವರು ಯಾರಾರಂದರೆ - ಯಾಕೋಬನ ಚೊಚ್ಚಲಮಗನಾದ ರೂಬೇನ್; ಆಮೇಲೆ ಸಿಮೆಯೋನ್, ಲೇವಿ, ಯೆಹೂದಾ, ಇಸ್ಸಾಕಾರ್, ಜೆಬುಲೂನ್; ಇವರು ಲೇಯಳಲ್ಲಿ ಹುಟ್ಟಿದವರು. 24ಯೋಸೇಫ, ಬೆನ್ಯಾಮೀನ್ ಇವರಿಬ್ಬರು ರಾಹೇಲಳಲ್ಲಿ ಹುಟ್ಟಿದವರು. 25ದಾನ್, ನಫ್ತಾಲಿಯರು ರಾಹೇಲಳ ದಾಸಿಯಾದ ಬಿಲ್ಹಳಲ್ಲಿ ಹುಟ್ಟಿದವರು. 26ಗಾದ್, ಆಶೇರ್ ಇವರಿಬ್ಬರು ಲೇಯಳ ದಾಸಿಯಾದ ಜಿಲ್ಪಳಲ್ಲಿ ಹುಟ್ಟಿದವರು. ಪದ್ದನ್ಅರಾವಿುನಲ್ಲಿ ಯಾಕೋಬನಿಗೆ ಹುಟ್ಟಿದ ಮಕ್ಕಳು ಇವರೇ.
27ಯಾಕೋಬನು ತನ್ನ ತಂದೆಯಾದ ಇಸಾಕನ ಬಳಿಗೆ ಮಮ್ರೆಗೆ ಬಂದನು. ಮಮ್ರೆಯು ಹೆಬ್ರೊನೆಂಬ ಕಿರ್ಯತರ್ಬಕ್ಕೆ ಸೇರಿರುವದು; ಅದೇ ಅಬ್ರಹಾಮ್ ಇಸಾಕರು ಪರದೇಶಸ್ಥರಾಗಿ ವಾಸವಾಗಿದ್ದ ಸ್ಥಳ.
28ಇಸಾಕನು ದಿನತುಂಬಿದ ಮುದುಕನಾಗಿದ್ದು ನೂರ ಎಂಭತ್ತನೆಯ ವರುಷದಲ್ಲಿ ಪ್ರಾಣಬಿಟ್ಟು ತನ್ನ ಪಿತೃಗಳ ಬಳಿಗೆ ಸೇರಿದನು. 29ಅವನ ಮಕ್ಕಳಾದ ಏಸಾವ ಯಾಕೋಬರು ಅವನಿಗೆ ಸಮಾಧಿಮಾಡಿದರು.
Currently Selected:
ಆದಿಕಾಂಡ 35: KANJV-BSI
Highlight
Share
Copy
Want to have your highlights saved across all your devices? Sign up or sign in
Kannada J.V. Bible © The Bible Society of India, 2016.
Used by permission. All rights reserved worldwide.