YouVersion Logo
Search Icon

ಆದಿಕಾಂಡ 34

34
1ಯಾಕೋಬನಿಗೆ ಲೇಯಳಲ್ಲಿ ಹುಟ್ಟಿದ ದೀನಳು ಒಂದಾನೊಂದು ದಿವಸ ಆ ದೇಶದ ಸ್ತ್ರೀಯರನ್ನು ನೋಡುವದಕ್ಕೆ ಹೊರಗೆ ಬಂದಾಗ 2ದೇಶಾಧಿಪತಿಯಾಗಿರುವ ಹಿವ್ವಿಯನಾದ ಹಮೋರನ ಮಗ ಶೆಕೆಮನು ಆಕೆಯನ್ನು ನೋಡಿ ತೆಗೆದುಕೊಂಡು ಹೋಗಿ ಕೂಡಿ ಮಾನಭಂಗ ಪಡಿಸಿದನು. 3ಅವನ ಮನಸ್ಸು ಯಾಕೋಬನ ಮಗಳಾದ ದೀನಳ ಮೇಲೆಯೇ ಇತ್ತು; ಆ ಹುಡುಗಿಯನ್ನು ಮೋಹಿಸಿ ಆಕೆಯ ಸಂಗಡ ಮನವೊಲಿಸುವ ಮಾತುಗಳನ್ನಾಡಿದನು. 4ಅವನು ತನ್ನ ತಂದೆಯಾದ ಹಮೋರನನ್ನು - ನೀನು ಆ ಹುಡುಗಿಯನ್ನು ನನಗೆ ಮದುವೆ ಮಾಡಿಸಬೇಕೆಂದು ಕೇಳಿಕೊಂಡನು. 5ಯಾಕೋಬನು ತನ್ನ ಮಗಳಾದ ದೀನಳಿಗೆ ಶೆಕೆಮನಿಂದ ಮಾನಭಂಗವಾದ ವರ್ತಮಾನವನ್ನು ಕೇಳಿದಾಗ ಅವನ ಗಂಡುಮಕ್ಕಳು ಅಡವಿಯಲ್ಲಿ ದನಗಳನ್ನು ಕಾಯುತ್ತಿದ್ದರು. ಅವರು ಬರುವ ತನಕ ಅವನು ಸುಮ್ಮನೇ ಇದ್ದನು. 6ಅಷ್ಟರಲ್ಲಿ ಶೆಕೆಮನ ತಂದೆಯಾದ ಹಮೋರನು ಯಾಕೋಬನ ಸಂಗಡ ಮಾತಾಡುವದಕ್ಕೆ ಊರಿಂದ ಹೊರಗೆ ಬಂದನು. 7ಯಾಕೋಬನ ಗಂಡುಮಕ್ಕಳು ತಂಗಿಯ ಸಂಗತಿಯನ್ನು ಕೇಳಿ ಅಡವಿಯಿಂದ ಬಂದಾಗ ವ್ಯಥೆಪಟ್ಟು ಬಹಳ ಕೋಪಗೊಂಡರು. ಶೆಕೆಮನು ಯಾಕೋಬನ ಮಗಳನ್ನು ಕೂಡಿ ಇಸ್ರಾಯೇಲ್ಯರೊಳಗೆ ಬಹಳ ಅವಮಾನಕರವಾದ ಕೆಲಸವನ್ನು ನಡಿಸಿದನು; ಅದು ಆಗಬಾರದ ಕಾರ್ಯ.
8ಹಮೋರನು ಅವರಿಗೆ - ನನ್ನ ಮಗನಾದ ಶೆಕೆಮನು ನಿಮ್ಮ ಹುಡುಗಿಯನ್ನು ಬಹಳ ಅಪೇಕ್ಷೆಯಿಂದ ಮೋಹಿಸಿದ್ದಾನೆ; ಆಕೆಯನ್ನು ಅವನಿಗೆ ಮದುವೆಮಾಡಿಕೊಡಬೇಕೆಂದು ಕೇಳಿಕೊಳ್ಳುತ್ತೇನೆ. 9ಇದಲ್ಲದೆ ನೀವು ನಮ್ಮಲ್ಲೇ ವಾಸವಾಗಿದ್ದು ನಿಮ್ಮ ಹೆಣ್ಣು ಮಕ್ಕಳನ್ನು ನಮಗೆ ಕೊಡುತ್ತಾ ನಮ್ಮ ಹೆಣ್ಣುಮಕ್ಕಳನ್ನು ನೀವು ತೆಗೆದುಕೊಳ್ಳುತ್ತಾ ಬೀಗರಾಗಿರಬೇಕು. 10ದೇಶವೆಲ್ಲಾ ನಿಮ್ಮ ಮುಂದೆ ಅದೆ; ಅದರಲ್ಲಿ ವಾಸಿಸಿ ವ್ಯಾಪಾರಮಾಡಿ ಆಸ್ತಿಯನ್ನು ಸಂಪಾದಿಸಿಕೊಳ್ಳಬಹುದು ಎಂದು ಹೇಳಿದನು. 11ಶೆಕೆಮನು ಆ ಹುಡುಗಿಯ ತಂದೆಗೂ ಅಣ್ಣಂದಿರಿಗೂ - ನಿಮ್ಮ ದಯೆ ನನ್ನ ಮೇಲೆ ಇರಲಿ; ನೀವು ಹೇಳುವಷ್ಟು ಕೊಡುತ್ತೇನೆ; 12ಹೆಣ್ಣಿಗಾಗಿ ತೆರವನ್ನೂ ಕಾಣಿಕೆಯನ್ನೂ ನೀವು ಹೇಳುವ ಮೇರೆಗೆ ಎಷ್ಟಾದರೂ ಕೊಡುತ್ತೇನೆ. ಹೇಗೂ ಆ ಹುಡುಗಿಯನ್ನು ನನಗೆ ಮದುವೆ ಮಾಡಿಕೊಡಬೇಕು ಎಂದು ಹೇಳಿದನು.
13ಶೆಕೆಮನು ತಮ್ಮ ತಂಗಿಯಾದ ದೀನಳನ್ನು ಕೆಡಿಸಿದ್ದರಿಂದ ಯಾಕೋಬನ ಮಕ್ಕಳು ಅವನಿಗೂ ಅವನ ತಂದೆಯಾದ ಹಮೋರನಿಗೂ ಕಪಟದಿಂದ ಉತ್ತರಕೊಟ್ಟು - 14ಸುನ್ನತಿಯಿಲ್ಲದವನಿಗೆ ನಮ್ಮ ತಂಗಿಯನ್ನು ಕೊಡುವದಕ್ಕಾಗುವದಿಲ್ಲ; ಹಾಗೆ ಕೊಡುವದು ನಮಗೆ ಅಪಮಾನ. 15ನಿಮ್ಮಲ್ಲಿ ಪುರುಷರೆಲ್ಲರೂ ಸುನ್ನತಿ ಮಾಡಿಸಿಕೊಂಡು ನಮ್ಮಂತೆ ಆಗಬೇಕು. 16ಹೀಗಾಗುವ ಪಕ್ಷದಲ್ಲಿ ಮಾತ್ರ ನಾವು ನಿಮ್ಮ ಮಾತಿಗೆ ಒಪ್ಪಿ ನಮ್ಮ ಹೆಣ್ಣು ಮಕ್ಕಳನ್ನು ನಿಮಗೆ ಕೊಡುತ್ತಾ ನಿಮ್ಮ ಹೆಣ್ಣುಮಕ್ಕಳನ್ನು ನಾವು ತೆಗೆದುಕೊಳ್ಳುತ್ತಾ ನಿಮ್ಮಲ್ಲಿ ವಾಸಮಾಡಿ ನಿಮ್ಮೊಂದಿಗೆ ಒಂದೇ ಕುಲವಾಗಿರುವೆವು. 17ನೀವು ನಮ್ಮ ಮಾತಿಗೆ ಒಪ್ಪದೆ ಸುನ್ನತಿ ಮಾಡಿಸಿಕೊಳ್ಳದೆ ಹೋದರೆ ನಾವು ನಮ್ಮ ಹುಡುಗಿಯನ್ನು ಕರೆದುಕೊಂಡು ಹೊರಟುಹೋಗುತ್ತೇವೆ ಅಂದರು.
18ಅವರು ಹೇಳಿದ್ದು ಹಮೋರನಿಗೂ ಅವನ ಮಗನಾದ ಶೆಕೆಮನಿಗೂ ಒಳ್ಳೇದೆಂದು ತೋಚಿತು. 19ಆ ಯೌವನಸ್ಥನು ಯಾಕೋಬನ ಮಗಳಲ್ಲಿ ಅನುರಕ್ತನಾಗಿದ್ದದರಿಂದ ಅವರು ಹೇಳಿದಂತೆ ಮಾಡುವದಕ್ಕೆ ತಡೆಮಾಡಲಿಲ್ಲ. ಅವನೇ ತನ್ನ ತಂದೆಯ ಮನೆಯವರೆಲ್ಲರಲ್ಲಿ ಘನವಂತನಾಗಿದ್ದನು. 20ಹಮೋರನೂ ಅವನ ಮಗನಾದ ಶೆಕೆಮನೂ ಊರುಬಾಗಿಲಿಗೆ ಹೋಗಿ ಊರಿನವರೆಲ್ಲರ ಸಂಗಡ ಮಾತಾಡಿ - 21ಆ ಜನರು ನಮ್ಮೊಡನೆ ಸಮಾಧಾನದಿಂದಿದ್ದಾರೆ; ಅವರು ನಮ್ಮ ದೇಶದಲ್ಲೇ ವಾಸಮಾಡಿಕೊಂಡು ವ್ಯಾಪಾರ ಮಾಡಲಿ; ಈ ದೇಶವು ಅವರಿಗೂ ನಮಗೂ ಸಾಕಾಗುವಷ್ಟು ವಿಸ್ತಾರವಾಗಿದೆಯಷ್ಟೆ; ನಾವು ಅವರ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಳ್ಳೋಣ, ನಮ್ಮ ಹೆಣ್ಣು ಮಕ್ಕಳನ್ನು ಅವರಿಗೆ ಕೊಡೋಣ. 22ಆದರೆ ಅವರು ಸುನ್ನತಿ ಮಾಡಿಸಿಕೊಂಡವರಾದ್ದರಿಂದ ನಮ್ಮಲ್ಲಿಯೂ ಪುರುಷರೆಲ್ಲರು ಸುನ್ನತಿ ಮಾಡಿಸಿಕೊಳ್ಳಬೇಕೆನ್ನುತ್ತಾರೆ; ಹೀಗಾದರೆ ಮಾತ್ರ ಅವರು ನಮ್ಮಲ್ಲಿ ವಾಸಿಸುವದಕ್ಕೂ ನಮ್ಮ ಸಂಗಡ ಒಂದೇ ಕುಲವಾಗುವದಕ್ಕೂ ಒಪ್ಪುವರು. 23ಅವರ ಕುರಿದನಗಳೂ ಅವರ ಆಸ್ತಿಯೂ ಅವರ ಎಲ್ಲಾ ಪಶುಗಳೂ ನಮ್ಮವುಗಳೇ ಆಗುವವಲ್ಲವೇ. ಅವರು ನಮ್ಮಲ್ಲಿ ವಾಸಮಾಡುವ ಹಾಗೆ ನಾವು ಅವರ ಮಾತಿಗೆ ಒಪ್ಪಿಕೊಳ್ಳೋಣ ಎಂದು ಹೇಳಿದರು. 24ಹಮೋರನೂ ಅವನ ಮಗನಾದ ಶೆಕೆಮನೂ ಹೇಳಿದ ಮಾತಿಗೆ ಊರಿನವರೆಲ್ಲರೂ ಸಮ್ಮತಿಪಟ್ಟದ್ದರಿಂದ ಅವರಲ್ಲಿದ್ದ ಪುರುಷರೆಲ್ಲರೂ ಸುನ್ನತಿಮಾಡಿಸಿಕೊಂಡರು.
25ಮೂರನೆಯ ದಿನದಲ್ಲಿ ಅವರು ಗಾಯದಿಂದ ಬಹು ಬಾಧೆಪಡುತ್ತಿರುವಾಗ ಯಾಕೋಬನ ಮಕ್ಕಳಲ್ಲಿ ದೀನಳ ಅಣ್ಣಂದಿರಾದ ಸಿಮೆಯೋನ್, ಲೇವಿ ಎಂಬ ಇಬ್ಬರು ಕೈಯಲ್ಲಿ ಕತ್ತಿಹಿಡುಕೊಂಡು ನಿರ್ಭಯವಾಗಿದ್ದ ಆ ಊರಿನವರ ಮೇಲೆ ಬಿದ್ದು 26ಹಮೋರ್ ಮತ್ತು ಅವನ ಮಗನಾದ ಶೆಕೆಮ್ ಸಹಿತವಾಗಿ ಪುರುಷರೆಲ್ಲರನ್ನೂ ದಾಕ್ಷಿಣ್ಯವಿಲ್ಲದೆ ಕೊಂದು ಶೆಕೆಮನ ಮನೆಯಿಂದ ದೀನಳನ್ನು ಕರೆದುಕೊಂಡು ಹೊರಟುಹೋದರು. 27ಅವರು ಹತವಾದನಂತರ ಯಾಕೋಬನ ಮಕ್ಕಳು ಬಂದು - ಇವರು ನಮ್ಮ ತಂಗಿಯನ್ನು ಅವಮಾನಪಡಿಸಿದರಲ್ಲಾ ಎಂದು ಹೇಳಿ ಊರನ್ನು ಸೂರೆಮಾಡಿಬಿಟ್ಟರು. 28ಅವರ ಕುರಿ ದನ ಕತ್ತೆಗಳನ್ನೂ ಊರಲ್ಲಿಯೂ ಅಡವಿಯಲ್ಲಿಯೂ ಇದ್ದ ಅವರ ಆಸ್ತಿಯೆಲ್ಲವನ್ನೂ ಸುಲುಕೊಂಡು 29ಅವರ ಮಕ್ಕಳನ್ನೂ ಹೆಂಡರನ್ನೂ ಸೆರೆಹಿಡಿದು ಮನೆಯಲ್ಲಿದ್ದದ್ದನ್ನೆಲ್ಲಾ ಬಾಚಿಕೊಂಡರು.
30ಯಾಕೋಬನು ಸಿಮೆಯೋನ್ ಲೇವಿಯರಿಗೆ - ನೀವು ಈ ದೇಶದ ನಿವಾಸಿಗಳಾದ ಕಾನಾನ್ಯರಲ್ಲಿಯೂ ಪೆರಿಜೀಯರಲ್ಲಿಯೂ ನನ್ನ ಹೆಸರು ದುರ್ವಾಸನೆಯಾಗುವಂತೆ ಮಾಡಿ ನನ್ನನ್ನು ಅಪಾಯಕ್ಕೆ ಗುರಿಮಾಡಿದ್ದೀರಿ. ನನಗಿರುವ ಜನರು ಸ್ವಲ್ಪವೇ; ಈ ದೇಶದವರು ಒಟ್ಟಾಗಿ ನನ್ನ ಮೇಲೆ ಬಂದು ನನ್ನನ್ನು ಹೊಡೆದರೆ ನಾನೂ ನನ್ನ ಮನೆಯವರೆಲ್ಲರೂ ನಾಶವಾಗುವೆವು ಅಲ್ಲವೇ ಎಂದು ಹೇಳಲು 31ಅವರು - ನಮ್ಮ ತಂಗಿಯನ್ನು ಸೂಳೆಯಂತೆ ನಡಿಸಬಹುದೋ ಎಂದು ಹೇಳಿದರು.

Highlight

Share

Copy

None

Want to have your highlights saved across all your devices? Sign up or sign in