ಆದಿಕಾಂಡ 39

39
ಜೋಸೆಫ್ ಮತ್ತು ಪೋಟೀಫರನ ಪತ್ನಿ
1ಅತ್ತ ಜೋಸೆಫನನ್ನು ತೆಗೆದುಕೊಂಡುಹೋದ ಇಷ್ಮಾಯೇಲ್ಯರು ಈಜಿಪ್ಟ್ ದೇಶವನ್ನು ಸೇರಿದಾಗ ಅವನನ್ನು ಈಜಿಪ್ಟಿನ ಪೋಟೀಫರ್ ಎಂಬವನಿಗೆ ಮಾರಿಬಿಟ್ಟರು. ಪೋಟೀಫರನು ಫರೋಹನ ಆಸ್ಥಾನದ ಒಬ್ಬ ಉದ್ಯೋಗಿ ಮತ್ತು ಅಂಗರಕ್ಷಕರ ದಳಪತಿ. 2ಸರ್ವೇಶ್ವರ ಸ್ವಾಮಿ ಜೋಸೆಫನ ಸಂಗಡ ಇದ್ದ ಕಾರಣ, ಅವನು ಏಳಿಗೆಯಾಗಿ ತನ್ನ ಈಜಿಪ್ಟಿನ ದಣಿಯ ಮನೆಯಲ್ಲಿ ಒಬ್ಬ ಸೇವಕನಾದ. 3ಜೋಸೆಫನ ಸಂಗಡ ಸರ್ವೇಶ್ವರ ಇದ್ದು ಅವನು ಮಾಡುವ ಕೆಲಸವನ್ನೆಲ್ಲ ಫಲಕಾರಿಯಾಗಿ ಮಾಡುತ್ತಾರೆಂಬುದು ಅವನ ದಣಿಗೆ ತಿಳಿಯಿತು. 4ಜೋಸೆಫ್ ಅವನ ಕೃಪೆಗೆ ಪಾತ್ರನಾದ. ದಣಿ ಅವನನ್ನು ತನ್ನ ಆಪ್ತಸೇವಕನನ್ನಾಗಿ ನೇಮಿಸಿಕೊಂಡ. ಅದು ಮಾತ್ರವಲ್ಲ, ತನ್ನ ಮನೆಯಲ್ಲೇ ಮೇಲ್ವಿಚಾರಕನನ್ನಾಗಿ ಮಾಡಿ, ತನ್ನ ಆಸ್ತಿಪಾಸ್ತಿಯನ್ನೆಲ್ಲ ಅವನ ವಶಕ್ಕೆ ಒಪ್ಪಿಸಿದ. 5ಹೀಗೆ ತನ್ನ ಮನೆಮಂದಿರದ ಮೇಲೂ ಆಸ್ತಿಪಾಸ್ತಿಯ ಮೇಲೂ ಜೋಸೆಫನನ್ನೇ ಆಡಳಿತಗಾರನನ್ನಾಗಿ ನೇಮಿಸಿದ. ಜೋಸೆಫನ ಪ್ರಯುಕ್ತ ಸರ್ವೇಶ್ವರ ಆ ಈಜಿಪ್ಟಿನವನ ಮನೆತನವನ್ನು ಹರಸಿದರು. ಮನೆಯಲ್ಲೂ ಸರ್ವೇಶ್ವರ ಸ್ವಾಮಿಯ ಆಶೀರ್ವಾದವಿತ್ತು. 6ಪೋಟೀಫರನು ಹೀಗೆ ತನ್ನದನ್ನೆಲ್ಲ ಜೋಸೆಫನ ವಶಕ್ಕೆ ಒಪ್ಪಿಸಿ, ‘ಅವನು ಇದ್ದಾನಲ್ಲಾ’ ಎಂದುಕೊಂಡು, ತಾನು ತಿನ್ನುತ್ತಿದ್ದ ಆಹಾರ ಒಂದನ್ನು ಬಿಟ್ಟು, ಬೇರೆ ಏನನ್ನೂ ಕುರಿತು ಚಿಂತಿಸದೆ ಇದ್ದ.
7ಜೋಸೆಫನದು ಸೊಗಸಾದ ಮೈಕಟ್ಟು, ಸುಂದರವಾದ ರೂಪು. ಹೀಗಿರಲು ಅವನ ದಣಿಯ ಪತ್ನಿ ಅವನ ಮೇಲೆ ಕಣ್ಣುಹಾಕಿದಳು. "ನನ್ನೊಡನೆ ಹಾಸಿಗೆಗೆ ಬಾ,” ಎಂದು ಕರೆದಳು. 8ಜೋಸೆಫನು ಒಪ್ಪಲಿಲ್ಲ. “ನನ್ನ ಒಡೆಯ ತನ್ನ ಆಸ್ತಿಪಾಸ್ತಿಯನ್ನೆಲ್ಲ ನನ್ನ ವಶಕ್ಕೆ ಒಪ್ಪಿಸಿದ್ದಾರೆ; ನಾನಿರುವುದರಿಂದ ಮನೆಯ ಎಲ್ಲ ವಿಷಯಗಳಲ್ಲಿ ನಿಶ್ಚಿಂತರಾಗಿದ್ದಾರೆ. 9ಈ ಮನೆಯಲ್ಲಿ ನನಗಿಂತ ಹೆಚ್ಚಿನ ಅಧಿಕಾರ ಪಡೆದವರು ಒಬ್ಬರೂ ಇಲ್ಲ; ನಿಮ್ಮನ್ನು ಬಿಟ್ಟು ಮಿಕ್ಕ ಎಲ್ಲವನ್ನು ನನಗೆ ಅಧೀನಮಾಡಿದ್ದಾರೆ. ನೀವು ಅವರ ಧರ್ಮಪತ್ನಿ ಅಲ್ಲವೆ? ಹೀಗಿರುವಲ್ಲಿ, ನಾನು ಇಂತಹ ಮಹಾದುಷ್ಕೃತ್ಯವೆಸಗಿ ದೇವರಿಗೆ ವಿರುದ್ಧ ಹೇಗೆ ಪಾಪಮಾಡಲಿ?” ಎಂದು ಆಕೆಗೆ ಉತ್ತರಕೊಟ್ಟ. 10ಆಕೆ ಜೋಸೆಫನ ಸಂಗಡ ದಿನದಿನವೂ ಅದೇ ಮಾತನ್ನು ಎತ್ತುತ್ತಿದ್ದಳು. ಆದರೆ ಅವನು ಅವಳಿಗೆ ಕಿವಿಗೊಡಲಿಲ್ಲ. ಇವಳ ಸಂಸರ್ಗಕ್ಕಾಗಲಿ ಅವಳ ಬಳಿ ಇರುವುದಕ್ಕಾಗಲಿ ಒಪ್ಪಲಿಲ್ಲ.
11ಇಂತಿರಲು, ಒಂದು ದಿನ ಜೋಸೆಫನು ತನ್ನ ಕೆಲಸದ ಮೇಲೆ ಬಂದಾಗ ಮನೆಯ ಸೇವಕರಾರೂ ಒಳಗೆ ಇರಲಿಲ್ಲ. ಆಕೆ ಅವನ ಬಟ್ಟೆಯನ್ನು ಹಿಡುಕೊಂಡು “ಹಾಸಿಗೆಗೆ ಬಾ,” ಎಂದು ಕರೆದಳು. ಅವನು ತನ್ನ ಬಟ್ಟೆಯನ್ನು ಅವಳ ಕೈಯಲ್ಲೇ ಬಿಟ್ಟು ತಪ್ಪಿಸಿಕೊಂಡು ಓಡಿಹೋದ. 12“ಬಟ್ಟೆಯನ್ನು ನನ್ನ ಕೈಯಲ್ಲಿ ಬಿಟ್ಟು ತಪ್ಪಿಸಿಕೊಂಡು ಹೋಗಿಬಿಟ್ಟನಲ್ಲಾ!” ಎಂದುಕೊಂಡ ಆಕೆ, 13ಮನೆಯ ಸೇವಕರನ್ನು ಕರೆದಳು. 14“ನೋಡಿ, ನನ್ನ ಯಜಮಾನರು ಮಾಡಿರುವ ಕೆಲಸ, ಒಬ್ಬ ಹಿಬ್ರಿಯನನ್ನು ಮನೆಗೆ ಸೇರಿಸಿಕೊಂಡು ನಮ್ಮನ್ನು ಅವಮಾನಕ್ಕೆ ಗುರಿಮಾಡಿದ್ದಾರೆ. ಅವನು ಅತ್ಯಾಚಾರಕ್ಕಾಗಿ ನನ್ನ ಹತ್ತಿರಕ್ಕೆ ಬಂದ; ನಾನು ಗಟ್ಟಿಯಾಗಿ ಕೂಗಿಕೊಂಡೆ. 15ನಾನು ಕೂಗುವುದನ್ನು ಕೇಳಿ ತನ್ನ ಬಟ್ಟೆಯನ್ನು ನನ್ನ ಬಳಿಯಲ್ಲೇ ಬಿಟ್ಟು ತಪ್ಪಿಸಿಕೊಂಡು ಓಡಿಹೋದ,” ಎಂದು ಅವರಿಗೆ ಹೇಳಿದಳು.
16ಜೋಸೆಫನ ದಣಿ ಮನೆಗೆ ಬರುವವರೆಗೂ ಆ ಬಟ್ಟೆಯನ್ನು ತನ್ನಲ್ಲೇ ಇಟ್ಟುಕೊಂಡಿದ್ದಳು. 17ಪತಿ ಬಂದಾಗ ಆಕೆ ಅವನಿಗೆ ಅದೇ ಮಾತನ್ನು ಹೇಳುತ್ತಾ, “ನೀವು ಮನೆಗೆ ಸೇರಿಸಿಕೊಂಡ ಆ ಹಿಬ್ರಿಯ ಸೇವಕನು ನನ್ನನ್ನು ಮಾನಭಂಗಪಡಿಸುವುದಕ್ಕಾಗಿ ನನ್ನ ಬಳಿಗೆ ಬಂದ. ನಾನು ಕೂಗಿಕೊಂಡೆ. 18ಕೂಗುತ್ತಲೇ ತನ್ನ ಬಟ್ಟೆಯನ್ನು ಬಿಟ್ಟು ತಪ್ಪಿಸಿಕೊಂಡು ಓಡಿಹೋದ,” ಎಂದು ದೂರು ಇತ್ತಳು.
19“ನಿಮ್ಮ ಸೇವಕ ನನಗೆ ಹೀಗೆ ಮಾಡಿದ,” ಎಂಬ ಆಕೆಯ ಮಾತನ್ನು ಕೇಳಿ ಜೋಸೆಫನ ದಣಿ ಕಿಡಿಕಿಡಿಯಾದ. 20ಅವನನ್ನು ಬಂಧಿಸಿದ. ರಾಜಖೈದಿಗಳನ್ನು ಕಟ್ಟಿಹಾಕಿಸುತ್ತಿದ್ದ ಸೆರೆಮನೆಯಲ್ಲಿ ಅವನನ್ನು ಹಾಕಿಸಿದ. ಜೋಸೆಫನು ಸೆರೆಯಲ್ಲಿ ಇರಬೇಕಾಯಿತು.
21ಆದರೂ ಸರ್ವೇಶ್ವರ, ಜೋಸೆಫನ ಸಂಗಡ ಇದ್ದರು. ಅವನಿಗೆ ಅಪಾರ ಪ್ರೀತಿ ತೋರಿಸಿ, ಅವನಿಗೆ ಸೆರೆಯಜಮಾನನ ದಯೆ ದೊರಕುವಂತೆ ಮಾಡಿದರು. 22ಆ ಸೆರೆಯಜಮಾನ ಸೆರೆಯಲ್ಲಿದ್ದ ಎಲ್ಲರನ್ನು ಜೋಸೆಫನ ವಶಕ್ಕೆ ಬಿಟ್ಟನು. ಅಲ್ಲಿಯ ಕೆಲಸಕಾರ್ಯವೆಲ್ಲ ಜೋಸೆಫನ ನೇತೃತ್ವದಲ್ಲಿ ನಡೆಯುವಂತಾಯಿತು. 23ಸರ್ವೇಶ್ವರ ಜೋಸೆಫನೊಂದಿಗೆ ಇದ್ದರು. ಅವನು ಕೈಗೊಂಡ ಕೆಲಸವೆಲ್ಲ ಜಯವಾಗುವಂತೆ ಮಾಡುತ್ತಿದ್ದರು. ಈ ಕಾರಣ ಸೆರೆಮನೆಯ ಯಜಮಾನ ಅಲ್ಲಿಯ ಎಲ್ಲ ವಿಷಯದಲ್ಲೂ ನಿಶ್ಚಿಂತನಾಗಿದ್ದನು.

المحددات الحالية:

ಆದಿಕಾಂಡ 39: KANCLBSI

تمييز النص

شارك

نسخ

None

هل تريد حفظ أبرز أعمالك على جميع أجهزتك؟ قم بالتسجيل أو تسجيل الدخول