ಆದಿಕಾಂಡ 38
38
ಯೆಹೂದ ಮತ್ತು ತಾಮಾರ್
1ಇತ್ತ ಯೆಹೂದನು ತನ್ನ ಅಣ್ಣತಮ್ಮಂದಿರನ್ನು ಬಿಟ್ಟು ಅದುಲ್ಲಾಮ್ ಊರಿನವನಾದ ಹೀರಾ ಎಂಬವನ ಬಳಿ ವಾಸಮಾಡಲು ಹೋದನು. 2ಅಲ್ಲಿ ಕಾನಾನ್ಯಳಾದ ಒಬ್ಬ ಮಹಿಳೆಯನ್ನು ಕಂಡು ಮದುವೆಯಾದನು. ಅವಳ ತಂದೆಯ ಹೆಸರು ಶೂಗ. 3ಆಕೆ ಯೆಹೂದನಿಗೆ ಒಂದು ಗಂಡು ಮಗುವನ್ನು ಹೆತ್ತಳು. ಅದಕ್ಕೆ ‘ಏರ’ ಎಂದು ಹೆಸರಿಡಲಾಯಿತು. 4ಆಕೆ ಗರ್ಭಧರಿಸಿ ಎರಡನೆಯ ಗಂಡು ಮಗುವನ್ನು ಹೆರಲು ಅದಕ್ಕೆ ‘ಓನಾನ’ ಎಂದು ಹೆಸರಿಡಲಾಯಿತು. 5ಮತ್ತೊಮ್ಮೆ ಆಕೆ ಗರ್ಭಿಣಿಯಾಗಿ ಗಂಡು ಮಗುವನ್ನು ಹೆತ್ತಳು. ಅದಕ್ಕೆ ‘ಶೇಲಹ’ ಎಂದು ಹೆಸರಿಟ್ಟಳು. ಆಕೆ ಈ ಮಗುವನ್ನು ಹೆರುವಾಗ ಯೆಹೂದನು ಕೆಜೀಬ್ ಊರಿನಲ್ಲಿದ್ದನು.
6ಯೆಹೂದನು ತನ್ನ ಜೇಷ್ಠಪುತ್ರ ಏರನಿಗೆ ‘ತಾಮಾರ್’ ಎಂಬ ಹೆಣ್ಣನ್ನು ತಂದು ಮದುವೆಮಾಡಿದನು. 7ಆದರೆ ಯೆಹೂದನ ಈ ಹಿರಿಯ ಮಗ ಸರ್ವೇಶ್ವರ ಸ್ವಾಮಿಯ ದೃಷ್ಟಿಯಲ್ಲಿ ಕೆಟ್ಟವನಾಗಿದ್ದನು. ಆದ್ದರಿಂದ ಸರ್ವೇಶ್ವರ ಅವನನ್ನು ಸಾವಿಗೀಡುಮಾಡಿದರು. 8ಬಳಿಕ ಯೆಹೂದನು ಓನಾನನಿಗೆ, “ನೀನು ನಿನ್ನ ಅತ್ತಿಗೆಯನ್ನು ಮದುವೆ ಮಾಡಿಕೊಂಡು ಮೈದುನ ಧರ್ಮಕ್ಕನುಸಾರ ನಿನ್ನ ಅಣ್ಣನಿಗೆ ಸಂತತಿಯನ್ನು ಹುಟ್ಟಿಸು,” ಎಂದನು. 9ಆದರೆ ಓನಾನನು, ಹೀಗೆ ಆಗುವ ಸಂತಾನ ತನ್ನದಾಗುವುದಿಲ್ಲವೆಂದು ತಿಳಿದುಕೊಂಡನು. ಅಣ್ಣನಿಗೆ ಸಂತತಿ ಹುಟ್ಟಿಸಲು ಅವನು ಒಪ್ಪಲಿಲ್ಲ. ತನ್ನ ಅತ್ತಿಗೆಯಲ್ಲಿ ಸಂಭೋಗ ಮಾಡುವಾಗಲೆ ತನ್ನ ವೀರ್ಯವನ್ನು ಹಾಸಿಗೆಪಾಲು ಮಾಡುತ್ತಿದ್ದನು.
10ಈ ನಡತೆ ಸರ್ವೇಶ್ವರ ಸ್ವಾಮಿಯ ದೃಷ್ಟಿಯಲ್ಲಿ ಕೆಟ್ಟದಾಗಿತ್ತು. ಆದ್ದರಿಂದ ಸರ್ವೇಶ್ವರ ಅವನನ್ನೂ ಸಾವಿಗೀಡುಮಾಡಿದರು. 11ಅನಂತರ ಯೆಹೂದನು, ಬಹುಶಃ ಶೇಲಹನು ಕೂಡ ತನ್ನ ಅಣ್ಣಂದಿರಂತೆ ಸತ್ತಾನೆಂದು ಆಲೋಚಿಸಿ, ತನ್ನ ಸೊಸೆ ತಾಮಾರಳಿಗೆ, “ನನ್ನ ಮಗ ಶೇಲಹನು ಪ್ರಾಯಸ್ಥನಾಗುವ ತನಕ ನೀನು ವಿಧವೆಯಾಗಿ ತೌರುಮನೆಯಲ್ಲಿರು,” ಎಂದು ನೆವಹೇಳಿದನು. ಅಂತೆಯೇ ಅವಳು ತೌರುಮನೆಗೆ ಹೋಗಿ ಅಲ್ಲೇ ವಾಸಮಾಡಿದಳು.
12ಬಹಳ ದಿನಗಳಾದ ಮೇಲೆ ಯೆಹೂದನ ಹೆಂಡತಿಯಾಗಿದ್ದ ಶೂಗನ ಮಗಳು ತೀರಿಹೋದಳು. ದುಃಖಶಮನವಾದ ಮೇಲೆ ಯೆಹೂದನು, ತನ್ನ ಕುರಿಗಳಿಗೆ ಉಣ್ಣೇ ಕತ್ತರಿಸುವವರಿದ್ದ ತಿಮ್ನಾ ಊರಿಗೆ ಹೋದನು. ಅದುಲ್ಲಾಮ್ಯದ ತನ್ನ ಗೆಳೆಯ ಹೀರಾ ಅವನ ಜೊತೆಯಲ್ಲಿ ಹೋದನು. 13ಮಾವನು ತನ್ನ ಕುರಿಗಳ ಉಣ್ಣೇ ಕತ್ತರಿಸುವುದಕ್ಕಾಗಿ ತಿಮ್ನಾ ಊರಿಗೆ ಹೊರಟಿದ್ದಾರೆಂಬ ಸಮಾಚಾರ ತಾಮಾರಳಿಗೆ ಮುಟ್ಟಿತು. 14ಆಗ ಆಕೆ, ‘ಶೇಲಹನು ಪ್ರಾಯಸ್ಥನಾಗಿದ್ದರೂ ನನ್ನನ್ನು ಅವನಿಗೆ ಮದುವೆ ಮಾಡಿಕೊಡಲಿಲ್ಲವಲ್ಲಾ’ ಎಂದುಕೊಂಡು ತನ್ನ ವಿಧವೆ ವಸ್ತ್ರಗಳನ್ನು ತೆಗೆದಿಟ್ಟಳು. ಮುಸುಕನ್ನು ಹಾಕಿಕೊಂಡು ತನ್ನನ್ನೇ ಮರೆಸಿಕೊಂಡಳು. ತಿಮ್ನಾ ಊರಿನ ದಾರಿಯಲ್ಲಿ ಇರುವ ಏನಯಿಮ್ ಊರಿನ ಬಾಗಿಲ ಬಳಿಯಲ್ಲೆ ಕುಳಿತುಕೊಂಡಳು.
15ಯೆಹೂದನು ಆಕೆಯನ್ನು ನೋಡಿದಾಗ ಆಕೆಯ ಮುಖದ ಮೇಲೆ ಮುಸುಕು ಇತ್ತು; ಸೊಸೆ ಎಂದು ತಿಳಿಯದೆ ಹೋಯಿತು. 16ಆಕೆ ವೇಶ್ಯೆ ಎಂದೇ ಭಾವಿಸಿ, ದಾರಿಯಿಂದ ಓರೆಯಾಗಿ, ಆಕೆಯ ಬಳಿಗೆ ಹೋಗಿ, “ಸಂಭೋಗಕ್ಕೆ ಬರುತ್ತೀಯಾ?" ಎಂದು ಕರೆದನು. “ಬರಬೇಕಾದರೆ ಏನು ಕೊಡುತ್ತೀಯಾ?" ಎಂದಳು ಆಕೆ. 17“ಹಿಂಡಿನಿಂದ ಒಂದು ಹೋತಮರಿಯನ್ನು ಕಳಿಸುತ್ತೇನೆ,” ಎಂದ ಆತ. ಆಗ ಆಕೆ, "ಅದನ್ನು ಕಳಿಸುವ ತನಕ ನನ್ನಲ್ಲಿ ಏನಾದರು ಒತ್ತೆಯಿಡಬೇಕು,” ಎಂದಳು. 18“ಏನು ಒತ್ತೆಯಿಡಬೇಕು?” ಎಂದು ಅವನು ಕೇಳಲು ಆಕೆ, “ನಿನ್ನ ಮುದ್ರೆ ಉಂಗುರ, ಅದರ ದಾರ ಮತ್ತು ನಿನ್ನ ಕೈಕೋಲು, ಈ ಮೂರನ್ನೂ ಇಡು,” ಎಂದಳು. ಅವನು ಅವುಗಳನ್ನು ಕೊಟ್ಟು ಆಕೆಯನ್ನು ಸಂಭೋಗಿಸಿದನು. ಆಕೆ ಅವನಿಗೆ ಗರ್ಭವತಿ ಆದಳು. 19ಮನೆಗೆ ಬಂದ ಮೇಲೆ ತಾನು ಹಾಕಿಕೊಂಡಿದ್ದ ಮುಸುಕನ್ನು ತೆಗೆದಿಟ್ಟು ವಿಧವೆಯ ವಸ್ತ್ರಗಳನ್ನು ಮತ್ತೆ ಉಟ್ಟುಕೊಂಡಳು.
20ಯೆಹೂದನು ತಾನು ಇಟ್ಟಿದ್ದ ಒತ್ತೆಯನ್ನು ಆ ಹೆಂಗಸಿನಿಂದ ಬಿಡಿಸಿಕೊಳ್ಳುವ ಸಲುವಾಗಿ ತನ್ನ ಗೆಳೆಯ ಆ ಅದುಲ್ಲಾಮ್ಯನ ಸಂಗಡ ಹೋತಮರಿಯನ್ನು ಕಳಿಸಿದನು. ಆಕೆ ಅವನಿಗೆ ಸಿಕ್ಕಲಿಲ್ಲ. 21ಅವನು ಅವಳ ಊರಿನವರನ್ನು, “ಏನಯಿಮ್ ಬಳಿ ದಾರಿಪಕ್ಕದಲ್ಲಿ ಕುಳಿತಿದ್ದ ವೇಶ್ಯೆ ಎಲ್ಲಿ?” ಎಂದು ವಿಚಾರಿಸಿದನು. ಅವರು, “ಇಲ್ಲಿ ಯಾವ ವೇಶ್ಯೆಯೂ ಇಲ್ಲ,” ಎಂದು ಉತ್ತರಕೊಟ್ಟರು.
22ಅವನು ಯೆಹೂದನ ಬಳಿಗೆ ಹಿಂದಿರುಗಿ ಬಂದು, “ನಾನು ಅವಳನ್ನು ಕಾಣಲಿಲ್ಲ; ವಿಚಾರಿಸಿದಾಗ ಆ ಊರಿನವರು ಇಲ್ಲಿ ಯಾವ ವೇಶ್ಯೆಯೂ ಇಲ್ಲವೆಂದರು,” ಎಂದು ವರದಿಮಾಡಿದನು. 23ಅದಕ್ಕೆ ಯೆಹೂದನು, “ಇನ್ನು ನಾವು ಪರಿಹಾಸ್ಯಕ್ಕೆ ಗುರಿಯಾದೇವು; ನಾನಿಟ್ಟ ಒತ್ತೆಯನ್ನು ಅವಳೇ ಇಟ್ಟುಕೊಳ್ಳಲಿ; ನಾನಂತೂ ಹೋತಮರಿಯನ್ನು ಕಳಿಸಿದ್ದಾಯಿತು; ನಿನ್ನಿಂದಲು ಅವಳನ್ನು ಕಂಡುಹಿಡಿಯಲಾಗಲಿಲ್ಲ,” ಎಂದು ಸುಮ್ಮನಾದನು.
24ಸುಮಾರು ಮೂರು ತಿಂಗಳಾದ ಬಳಿಕ, ಯೆಹೂದನಿಗೆ ತನ್ನ ಸೊಸೆ ತಾಮಾರಳು ವ್ಯಭಿಚಾರದಿಂದ ಗರ್ಭವತಿಯಾಗಿದ್ದಾಳೆಂಬ ಸಮಾಚಾರ ಬಂದಿತು. ಅವನು, “ಅವಳನ್ನು ಎಳೆದು ತನ್ನಿ; ಸುಟ್ಟುಹಾಕಬೇಕು,” ಎಂದನು.
25ಅಂತೆಯೇ ಎಳೆದು ತರುವಾಗ ಆಕೆ ತನ್ನ ಮಾವನಿಗೆ ಒತ್ತೆಯ ವಸ್ತುಗಳನ್ನು ಕಳುಹಿಸುತ್ತಾ, “ಇವು ಯಾವನವೊ ಅವನಿಂದಲೇ ನಾನು ಗರ್ಭಿಣಿಯಾದುದು; ಮುದ್ರೆಯುಂಗುರ, ಅದರ ದಾರ ಮತ್ತು ಕೈಗೋಲು ಇವುಗಳನ್ನು ಗುರುತಿಸಿ ತಿಳಿದುಕೊಳ್ಳಬಹುದು,” ಎಂದು ಹೇಳಿಕಳಿಸಿದಳು.
26ಯೆಹೂದನು ಅವುಗಳ ಗುರುತುಹಚ್ಚಿದನು. “ನಾನು ನನ್ನ ಮಗ ಶೇಲಹನನ್ನು ಆಕೆಗೆ ಮದುವೆ ಮಾಡದೆಹೋದೆ. ಈ ಕಾರಣ ನನಗಿಂತ ಆಕೆಯೇ ನೀತಿವಂತಳು,” ಎಂದುಕೊಂಡನು. ಇದಾದ ಬಳಿಕ ಅವನು ಆಕೆಯೊಡನೆ ಸಂಸರ್ಗವಿಲ್ಲದೆ ಇದ್ದನು.
27ತಾಮಾರಳಿಗೆ ಹೆರಿಗೆ ಕಾಲ ಬಂದಾಗ ಆಕೆಯ ಗರ್ಭದಲ್ಲಿ ಅವಳಿಜವಳಿ ಮಕ್ಕಳಿರುವುದು ಕಂಡುಬಂದಿತು. 28ಆಕೆ ಹೆರುವಾಗ ಒಂದು ಮಗು ಕೈಚಾಚಿತು. ಸೂಲಗಿತ್ತಿ, “ಇದು ಮೊದಲು ಬಂದದ್ದು,” ಎಂದು ಹೇಳಿ ಅದರ ಕೈಗೆ ಕೆಂಪು ನೂಲನ್ನು ಕಟ್ಟಿದಳು. 29ಆದರೆ ಅದು ಕೈಯನ್ನು ಹಿಂದಕ್ಕೆ ತೆಗೆದುಕೊಂಡಿತು. ಅದರೊಡನೆ ಇದ್ದ ಇನ್ನೊಂದು ಕೂಸು ಹೊರಗೆ ಬಂದಿತು. ಇದನ್ನು ಕಂಡ ಸೂಲಗಿತ್ತಿ, “ನೀನು ಕಿತ್ತುಕೊಂಡು ಬಂದಿರುತ್ತೀಯಲ್ಲಾ,” ಎಂದಳು. ಈ ಕಾರಣ ಆ ಮಗುವಿಗೆ ‘ಪೆರೆಚ್’ ಎಂದು ಹೆಸರಾಯಿತು. 30ತರುವಾಯ ಕೈಗೆ ಕೆಂಪುನೂಲು ಕಟ್ಟಿಸಿಕೊಂಡ ಕೂಸು ಹುಟ್ಟಿತು. ಅದಕ್ಕೆ ‘ಜೆರಹ’ ಎಂದು ಹೆಸರಾಯಿತು.
المحددات الحالية:
ಆದಿಕಾಂಡ 38: KANCLBSI
تمييز النص
شارك
نسخ

هل تريد حفظ أبرز أعمالك على جميع أجهزتك؟ قم بالتسجيل أو تسجيل الدخول
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.