ಜೋಸೆಫನದು ಸೊಗಸಾದ ಮೈಕಟ್ಟು, ಸುಂದರವಾದ ರೂಪು. ಹೀಗಿರಲು ಅವನ ದಣಿಯ ಪತ್ನಿ ಅವನ ಮೇಲೆ ಕಣ್ಣುಹಾಕಿದಳು. "ನನ್ನೊಡನೆ ಹಾಸಿಗೆಗೆ ಬಾ,” ಎಂದು ಕರೆದಳು. ಜೋಸೆಫನು ಒಪ್ಪಲಿಲ್ಲ. “ನನ್ನ ಒಡೆಯ ತನ್ನ ಆಸ್ತಿಪಾಸ್ತಿಯನ್ನೆಲ್ಲ ನನ್ನ ವಶಕ್ಕೆ ಒಪ್ಪಿಸಿದ್ದಾರೆ; ನಾನಿರುವುದರಿಂದ ಮನೆಯ ಎಲ್ಲ ವಿಷಯಗಳಲ್ಲಿ ನಿಶ್ಚಿಂತರಾಗಿದ್ದಾರೆ. ಈ ಮನೆಯಲ್ಲಿ ನನಗಿಂತ ಹೆಚ್ಚಿನ ಅಧಿಕಾರ ಪಡೆದವರು ಒಬ್ಬರೂ ಇಲ್ಲ; ನಿಮ್ಮನ್ನು ಬಿಟ್ಟು ಮಿಕ್ಕ ಎಲ್ಲವನ್ನು ನನಗೆ ಅಧೀನಮಾಡಿದ್ದಾರೆ. ನೀವು ಅವರ ಧರ್ಮಪತ್ನಿ ಅಲ್ಲವೆ? ಹೀಗಿರುವಲ್ಲಿ, ನಾನು ಇಂತಹ ಮಹಾದುಷ್ಕೃತ್ಯವೆಸಗಿ ದೇವರಿಗೆ ವಿರುದ್ಧ ಹೇಗೆ ಪಾಪಮಾಡಲಿ?” ಎಂದು ಆಕೆಗೆ ಉತ್ತರಕೊಟ್ಟ.