ಆದಿಕಾಂಡ 40
40
ಖೈದಿಗಳ ಕನಸು - ಜೋಸೆಫನಿತ್ತ ಅರ್ಥ
1ಈ ಘಟನೆಗಳಾದ ಬಳಿಕ ಈಜಿಪ್ಟಿನ ಅರಸನಾದ ಫರೋಹನ ಮುಖ್ಯಪಾನದಾಯಕ ಮತ್ತು ಮುಖ್ಯ ಅಡಿಗೆಭಟ್ಟ ಯಾವುದೋ ವಿಷಯದಲ್ಲಿ ತಮ್ಮ ದಣಿಗೆ ದ್ರೋಹಮಾಡಿದ್ದರು. 2ಫರೋಹನು ಆ ಇಬ್ಬರು ನೌಕರರ ಮೇಲೆ, ಅಂದರೆ ಪಾನಸೇವಕರಲ್ಲಿ ಮುಖ್ಯಸ್ಥನ ಮೇಲೆಯೂ ಅಡಿಗೆಭಟ್ಟರ ಮುಖ್ಯಸ್ಥನ ಮೇಲೆಯೂ ಕೋಪಗೊಂಡು, 3ಅವರನ್ನು ಅಂಗರಕ್ಷಕರ ದಳಪತಿಯ ವಠಾರದಲ್ಲಿದ್ದ ಸೆರೆಯಲ್ಲಿ ಹಾಕಿಸಿದ್ದನು. 4ದಳಪತಿ ಜೋಸೆಫನನ್ನು ಅವರ ಉಪಚಾರಕ್ಕೆ ನೇಮಿಸಿದ್ದನು. ಜೋಸೆಫನು ಅವರಿಗೆ ಸೇವೆಮಾಡಬೇಕಾಗಿತ್ತು.
5ಕೆಲವು ಕಾಲವದ ಮೇಲೆ, ಆ ಇಬ್ಬರು ನೌಕರರಿಗೂ ಅಂದರೆ, ಈಜಿಪ್ಟಿನ ಅರಸ ಸೆರೆಗೆ ಹಾಕಿಸಿದ್ದ ಪಾನಸೇವಕನಿಗೂ ಅಡಿಗೆಭಟ್ಟನಿಗೂ, ಒಂದೇ ರಾತ್ರಿ ಕನಸುಬಿತ್ತು. ಅವರ ಕನಸುಗಳಿಗೆ ಬೇರೆಬೇರೆ ಅರ್ಥವಿತ್ತು. 6ಬೆಳಿಗ್ಗೆ ಜೋಸೆಫನು ಅವರ ಬಳಿಗೆ ಬಂದಾಗ ಚಿಂತಾಕ್ರಾಂತರಾಗಿರುವುದು ಕಾಣಿಸಿತು. 7ಅದನ್ನು ಗಮನಿಸಿದ ಜೋಸೆಫನು, “ಈ ದಿನ ನಿಮ್ಮ ಮುಖ ಕಳೆಗುಂದಿದೆ ಏಕೆ?” ಎಂದು ತನ್ನೊಂದಿಗೆ ಸೆರೆಯಲ್ಲಿದ್ದ ಆ ನೌಕರರನ್ನು ಕೇಳಿದ. 8ಅವರು, “ನಮಗೆ ಸ್ವಪ್ನಬಿತ್ತು; ಅದರ ಅರ್ಥ ಹೇಳುವವರು ಯಾರೂ ಇಲ್ಲ,” ಎಂದರು. ಜೋಸೆಫನು ಅವರಿಗೆ, “ಸ್ವಪ್ನಗಳ ಅರ್ಥ ದೇವರಿಂದ ದೊರಕಬಹುದಲ್ಲವೆ? ದಯವಿಟ್ಟು ನಿಮ್ಮ ಸ್ವಪ್ನಗಳನ್ನು ನನಗೆ ತಿಳಿಸಿ,” ಎಂದ.
9ಆಗ ಆ ಮುಖ್ಯ ಪಾನಸೇವಕ ಜೋಸೆಫನಿಗೆ, “ನನ್ನ ಕನಸಿನಲ್ಲಿ ಒಂದು ದ್ರಾಕ್ಷಾಲತೆ ನನ್ನೆದುರಿಗೆ ಇರುವುದನ್ನು ಕಂಡೆ. 10ಅದಕ್ಕೆ ಮೂರು ಕವಲುಗಳಿದ್ದವು. ಅದು ಚಿಗುರುತ್ತಲೇ ಹೂಗಳನ್ನು ಬಿಟ್ಟಿತು. ಆ ಹೂಗಳು ಗೊಂಚಲುಗಳಾಗಿ ಹಣ್ಣಾದವು. 11ಫರೋಹನ ಪಾನಪಾತ್ರೆ ನನ್ನ ಕೈಯಲ್ಲಿತ್ತು. ನಾನು ಆ ಗೊಂಚಲುಗಳನ್ನು ಕೊಯ್ದು ಪಾತ್ರೆಯಲ್ಲಿ ಹಿಂಡಿ ಆ ಪಾತ್ರೆಯನ್ನು ಫರೋಹನ ಕೈಗೆ ಒಪ್ಪಿಸಿದೆ,” ಎಂದು ಹೇಳಿದ.
12ಅದಕ್ಕೆ ಜೋಸೆಫನು, “ಆ ಕನಸಿನ ಅರ್ಥ ಇದು: ಆ ಮೂರು ಕೊಂಬೆಗಳು ಮೂರು ದಿನಗಳು; 13ಇನ್ನು ಮೂರು ದಿನಗಳೊಳಗೆ ನೀನು ತಲೆಯೆತ್ತುವಂತೆ ಫರೋಹನು ಮಾಡುವನು; ನಿನ್ನನ್ನು ಮರಳಿ ನೌಕರಿಗೆ ಸೇರಿಸಿಕೊಳ್ಳುವನು; ನೀನು ಮುಂದಿನಂತೆಯೇ ಫರೋಹನಿಗೆ ಪಾನಸೇವಕನಾಗಿದ್ದು ಅವನ ಕೈಗೆ ಪಾನಪಾತ್ರೆಯನ್ನು ಒಪ್ಪಿಸುವೆ. 14ಆದರೆ ನೀನು ಸುಖದಿಂದಿರುವಾಗ ನನ್ನನ್ನು ಮರೆಯದೆ ನನಗೊಂದು ಉಪಕಾರ ಮಾಡು. ಫರೋಹನಿಗೆ ನನ್ನ ವಿಷಯ ತಿಳಿಸಿ ನನ್ನನ್ನು ಈ ಸೆರೆಯಿಂದ ಬಿಡುಗಡೆಮಾಡು. 15ನಾನು ಹಿಬ್ರಿಯ ದೇಶದವನು. ಕೆಲವರು ನನ್ನನ್ನು ಗುಲಾಮನನ್ನಾಗಿ ಈ ದೇಶಕ್ಕೆ ಹಿಡಿದುತಂದರು. ಇಲ್ಲಿಯೂ ಸೆರೆಗೆ ಗುರಿಯಾಗಿಸುವಂಥ ದ್ರೋಹವನ್ನು ನಾನೇನು ಮಾಡಿಲ್ಲ,” ಎಂದನು.
16ಜೋಸೆಫನು ಹೇಳಿದ ಅರ್ಥ ಶುಭಕರ ಆದುದೆಂದು ತಿಳಿದ ಆ ಮುಖ್ಯ ಅಡಿಗೆಭಟ್ಟ ಅವನಿಗೆ, “ನಾನು ಕಂಡ ಕನಸನ್ನು ಹೇಳುತ್ತೇನೆ, ಕೇಳು: ಸೊಗಸಾದ ರೊಟ್ಟಿ ಪದಾರ್ಥಗಳು ತುಂಬಿದ್ದ ಮೂರು ಪುಟ್ಟಿಗಳು ನನ್ನ ತಲೆಯ ಮೇಲೆ ಇದ್ದವು. 17ಮೇಲಣ ಪುಟ್ಟಿಯಲ್ಲಿ ಫರೋಹನಿಗಾಗಿಯೆ ವಿಧವಿಧವಾದ ರೊಟ್ಟಿ ಪದಾರ್ಥಗಳು ಇದ್ದವು. ಪಕ್ಷಿಗಳು ಬಂದು ಅವುಗಳನ್ನು ನನ್ನ ತಲೆಯ ಮೇಲಿದ್ದ ಪುಟ್ಟಿಯಿಂದಲೆ ತಿನ್ನುತ್ತಿದ್ದವು,” ಎಂದು ಹೇಳಿದ. 18ಅದಕ್ಕೆ ಜೋಸೆಫನು, “ನಿನ್ನ ಕನಸಿನ ಅರ್ಥ ಇದು: ಆ ಮೂರು ಪುಟ್ಟಿಗಳೇ ಮೂರು ದಿನಗಳು. 19ಇನ್ನು ಮೂರು ದಿನದೊಳಗೆ ಫರೋಹನು ನಿನ್ನ ಕುತ್ತಿಗೆಗೆ ನೇಣುಹಾಕಿಸುವನು; ಮರಕ್ಕೆ ತೂಗುಹಾಕಿಸುವನು; ಹಕ್ಕಿಗಳು ಬಂದು ನಿನ್ನ ಮಾಂಸವನ್ನು ತಿಂದುಬಿಡುವುವು,” ಎಂದನು.
20ಮೂರನೆಯ ದಿನ ಫರೋಹನು ಹುಟ್ಟಿದ ಹಬ್ಬದಿನವಾಗಿತ್ತು. ಅವನು ತನ್ನ ಪರಿವಾರದವರಿಗೆಲ್ಲ ಔತಣವನ್ನು ಏರ್ಪಡಿಸಿದ್ದ. ಮುಖ್ಯ ಪಾನಸೇವಕನನ್ನೂ ಮುಖ್ಯ ಅಡಿಗೆಭಟ್ಟನನ್ನೂ ಬಿಡಿಸಿ ಬರಮಾಡಿದ, ತನ್ನ ಪರಿವಾರದವರ ಮಧ್ಯದಲ್ಲೆ ಅವರ ತಲೆಯನ್ನು ಎತ್ತಿಸಿದ. 21ಪಾನಸೇವಕರ ಮುಖ್ಯಸ್ಥನನ್ನು ಪುನಃ ಅವನ ನೌಕರಿಗೆ ಏರಿಸಿದ; ಅವನು ಪಾನಪಾತ್ರೆಯನ್ನು ಫರೋಹನ ಕೈಗೆ ಒಪ್ಪಿಸುವಂಥವನಾದ. 22ಆದರೆ ಮುಖ್ಯ ಅಡಿಗೆಭಟ್ಟನನ್ನು ನೇಣು ಹಾಕಿಸಿದ. ಹೀಗೆ ಜೋಸೆಫನು ಹೇಳಿದ ಅರ್ಥ ಕಾರ್ಯಗತವಾಯಿತು. 23ಆದರೆ ಮುಖ್ಯ ಪಾನಸೇವಕನು ಜೋಸೆಫನನ್ನು ನೆನಪಿಗೆ ತಂದುಕೊಳ್ಳಲಿಲ್ಲ, ಅವನನ್ನು ಮರೆತೇಬಿಟ್ಟ.
المحددات الحالية:
ಆದಿಕಾಂಡ 40: KANCLBSI
تمييز النص
شارك
نسخ

هل تريد حفظ أبرز أعمالك على جميع أجهزتك؟ قم بالتسجيل أو تسجيل الدخول
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.