ಆದಿಕಾಂಡ 6

6
ಜಲಪ್ರಳಯ
1ಭೂಮಿಯ ಮೇಲೆ ಜನರ ಸಂಖ್ಯೆ ಹೆಚ್ಚಾಗತೊಡಗಿದಾಗ ಅವರಿಗೆ ಪುತ್ರಿಯರು ಹುಟ್ಟಿದರು. 2ಆಗ ದೇವಪುತ್ರರು, ಮನುಷ್ಯ ಪುತ್ರಿಯರ ಸೌಂದರ್ಯವನ್ನು ಕಂಡು ಅವರನ್ನು ಆರಿಸಿಕೊಂಡು, ತಮಗೆ ಹೆಂಡತಿಯರನ್ನಾಗಿ ಮಾಡಿಕೊಂಡರು. 3ಆಗ ಯೆಹೋವ ದೇವರು, “ನನ್ನ ಆತ್ಮವು ಮನುಷ್ಯರಲ್ಲಿ ನಿತ್ಯವಾಗಿ ಇರುವುದಿಲ್ಲ. ಏಕೆಂದರೆ ಅವರು ಮರ್ತ್ಯರೇ. ಆದರೂ ಅವರ ಆಯುಷ್ಯವು ನೂರ ಇಪ್ಪತ್ತು ವರ್ಷಗಳಾಗಿರುವುದು,” ಎಂದರು.
4ಆ ದಿನಗಳಲ್ಲಿ ಭೂಮಿಯ ಮೇಲೆ ನೆಫೀಲಿಯೆಂಬ ರಾಕ್ಷಸ ವಂಶದವರು ಇದ್ದರು. ನಂತರದಲ್ಲಿಯೂ ಇದ್ದರು. ದೇವಪುತ್ರರು ಮನುಷ್ಯ ಪುತ್ರಿಯರೊಂದಿಗೆ ಕೂಡಿದಾಗ, ಮಕ್ಕಳು ಹುಟ್ಟಿದರು. ಇವರೇ ಪೂರ್ವಕಾಲದಲ್ಲಿ ಪ್ರಸಿದ್ಧರಾಗಿದ್ದ ಪರಾಕ್ರಮಿಗಳು.
5ಮನುಷ್ಯನ ದುಷ್ಟತನವು ಭೂಮಿಯಲ್ಲಿ ಹೆಚ್ಚಿದ್ದನ್ನೂ ಅವನ ಹೃದಯದ ಆಲೋಚನೆಗಳೆಲ್ಲವೂ ಯಾವಾಗಲೂ ಬರೀ ಕೆಟ್ಟದ್ದೆಂದೂ ಯೆಹೋವ ದೇವರು ಕಂಡರು. 6ಯೆಹೋವ ದೇವರು ಭೂಮಿಯ ಮೇಲೆ ಮನುಷ್ಯರನ್ನು ಉಂಟುಮಾಡಿದ್ದಕ್ಕೆ ನಿಟ್ಟುಸಿರುಬಿಟ್ಟು, ತಮ್ಮ ಹೃದಯದಲ್ಲಿ ನೊಂದುಕೊಂಡರು. 7ಇದಲ್ಲದೆ ಯೆಹೋವ ದೇವರು, “ನಾನು ಸೃಷ್ಟಿಸಿದ ಮನುಷ್ಯನಿಂದ ಹಿಡಿದು, ಸಕಲ ಪ್ರಾಣಿ, ಆಕಾಶದ ಪಕ್ಷಿಗಳನ್ನೂ ನೆಲದ ಮೇಲೆ ಹರಿದಾಡುವ ಜೀವಿಗಳನ್ನು, ಭೂಮಿಯ ಮೇಲಿನಿಂದ ಎಲ್ಲವನ್ನು ನಾಶಮಾಡುವೆನು. ನಾನು ಅವರನ್ನು ಉಂಟುಮಾಡಿದ್ದಕ್ಕೆ ದುಃಖಪಡುತ್ತೇನೆ,” ಎಂದರು. 8ಆದರೆ ನೋಹನಿಗೆ ಯೆಹೋವ ದೇವರ ದಯೆ ದೊರಕಿತು.
ನೋಹ ಮತ್ತು ಜಲಪ್ರಳಯ
9ಇದು ನೋಹನ ಮತ್ತು ಅವನ ವಂಶದವರ ಚರಿತ್ರೆ:
ನೋಹನು ನೀತಿವಂತನೂ ತನ್ನ ಕಾಲದವರಲ್ಲಿ ನಿರ್ದೋಷಿಯೂ ಆಗಿದ್ದನು. ಅವನು ದೇವರೊಂದಿಗೆ ವಿಶ್ವಾಸದಿಂದ ನಡೆಯುತ್ತಿದ್ದನು. 10ನೋಹನಿಗೆ ಶೇಮ್, ಹಾಮ್, ಯೆಫೆತ್ ಎಂಬ ಮೂರು ಮಂದಿ ಮಕ್ಕಳಿದ್ದರು.
11ಭೂಲೋಕದವರು ದೇವರ ದೃಷ್ಟಿಯಲ್ಲಿ ಕೆಟ್ಟು ಹೋಗಿದ್ದರು. ಹಿಂಸಾಚಾರವು ಲೋಕವನ್ನು ತುಂಬಿಕೊಂಡಿತ್ತು. 12ದೇವರು ಭೂಮಿಯನ್ನು ನೋಡಲಾಗಿ ಅದು ಕೆಟ್ಟುಹೋಗಿತ್ತು, ಮನುಷ್ಯರೆಲ್ಲರೂ ಭೂಮಿಯ ಮೇಲೆ ತಮ್ಮ ನಡವಳಿಕೆಯನ್ನು ಕೆಡಿಸಿಕೊಂಡಿದ್ದರು. 13ಆಗ ದೇವರು ನೋಹನಿಗೆ, “ನಾನು ಮನುಷ್ಯರೆಲ್ಲರಿಗೂ ಅಂತ್ಯವನ್ನು ತೀರ್ಮಾನಿಸಿದ್ದೇನೆ. ಅವರಿಂದ ಭೂಮಿಯು ಹಿಂಸಾಚಾರದಿಂದ ತುಂಬಿದೆ. ನಾನು ಭೂಮಿಯೊಂದಿಗೆ ಅವರನ್ನೂ ನಾಶಮಾಡುವೆನು. 14ಆದ್ದರಿಂದ ನಿನಗೋಸ್ಕರವಾಗಿ ತುರಾಯಿ ಮರದಿಂದ ನಾವೆಯನ್ನು ಮಾಡಿಕೋ; ಅದರಲ್ಲಿ ಕೋಣೆಗಳನ್ನು ಮಾಡು, ಅದರ ಒಳಭಾಗಕ್ಕೂ ಹೊರಭಾಗಕ್ಕೂ ರಾಳವನ್ನು ಹಚ್ಚು. 15ನೀನು ಅದನ್ನು ಈ ರೀತಿಯಾಗಿ ಮಾಡತಕ್ಕದ್ದು: ನಾವೆಯ ಉದ್ದವು ಸುಮಾರು ಒಂದುನೂರ ಮೂವತ್ತೈದು ಮೀಟರ್, ಅದರ ಅಗಲ ಇಪ್ಪತ್ತಮೂರು ಮೀಟರ್, ಅದರ ಎತ್ತರ ಹದಿನಾಲ್ಕು ಮೀಟರ್ ಇರಬೇಕು.#6:15 ಅಂದರೆ, ಸುಮಾರು ಉದ್ದ ಮುನ್ನೂರು ಮೊಳ, ಅಗಲ ಐವತ್ತು ಮೊಳ, ಎತ್ತರ ಮೂವತ್ತು ಮೊಳ 16ಅದಕ್ಕೆ ಚಾವಣಿಯನ್ನು ಮಾಡು, ಅದರ ಕೆಳಗೆ ಹದಿನೆಂಟು ಇಂಚಿನ#6:16 ಅಂದರೆ, ಸುಮಾರು ಎತ್ತರ ಒಂದು ಮೊಳ ಕಿಟಕಿಯನ್ನು ನಾವೆಯ ಸುತ್ತಲೂ ಮಾಡಬೇಕು; ಅದರ ಪಕ್ಕದಲ್ಲಿ ನಾವೆಯ ಬಾಗಿಲನ್ನು ಇಡಬೇಕು. ಕೆಳಗಿನದು, ಎರಡನೆಯದು, ಮೂರನೆಯದು ಎಂಬ ಮೂರು ಅಂತಸ್ತುಗಳನ್ನು ಮಾಡಬೇಕು. 17ನಾನು ಆಕಾಶದ ಕೆಳಗಿರುವ ಜೀವಶ್ವಾಸವುಳ್ಳ ಸಕಲ ಪ್ರಾಣಿಗಳನ್ನು ನಾಶಮಾಡುವುದಕ್ಕೆ ಜಲಪ್ರಳಯವನ್ನು ಭೂಮಿಯ ಮೇಲೆ ಬರಮಾಡುತ್ತೇನೆ. ಆಗ ಭೂಮಿಯಲ್ಲಿರುವುದೆಲ್ಲವೂ ನಾಶವಾಗುವುದು. 18ಆದರೆ ನಾನು ನಿನ್ನ ಸಂಗಡ ನನ್ನ ಒಡಂಬಡಿಕೆಯನ್ನು ಸ್ಥಾಪಿಸುವೆನು. ನೀನು, ನಿನ್ನ ಸಂಗಡ ನಿನ್ನ ಮಕ್ಕಳು, ನಿನ್ನ ಹೆಂಡತಿ ಹಾಗೂ ಸೊಸೆಯರು ನಾವೆಯೊಳಗೆ ಸೇರಬೇಕು. 19ಜೀವಿಗಳ ಪ್ರತಿಜಾತಿಯಲ್ಲೂ ಒಂದು ಗಂಡು, ಒಂದು ಹೆಣ್ಣು; ಹೀಗೆ ಎರಡೆರಡನ್ನು ನಾವೆಯಲ್ಲಿ ಸೇರಿಸಿ ನಿನ್ನೊಂದಿಗೆ ಜೀವಂತವಾಗಿ ಉಳಿಸಿಕೊಳ್ಳಬೇಕು. 20ಪಕ್ಷಿಗಳಲ್ಲಿ ಅವುಗಳ ಜಾತಿಗನುಸಾರವಾಗಿ, ಪ್ರಾಣಿಗಳಲ್ಲಿ ಅವುಗಳ ಜಾತಿಗನುಸಾರವಾಗಿ ಮತ್ತು ನೆಲದ ಮೇಲೆ ಹರಿದಾಡುವ ಸಕಲ ಜೀವಿಗಳಲ್ಲಿ ಅವುಗಳ ಜಾತಿಗನುಸಾರವಾಗಿ ಎರಡೆರಡು ಬದುಕಿಬಾಳಲು ಅವುಗಳನ್ನು ನೀನು ಕಾಪಾಡುವಂತೆ ನಿನ್ನ ಬಳಿಗೆ ಬರುವುವು. 21ನೀನು, ಎಲ್ಲ ವಿಧವಾದ ಆಹಾರ ಪದಾರ್ಥಗಳನ್ನು ಕೂಡಿಸಿಡಬೇಕು. ಅದು ನಿಮಗೂ ಮತ್ತು ಪ್ರಾಣಿಗಳಿಗೂ ಆಹಾರವಾಗಿರಬೇಕು,” ಎಂದು ಹೇಳಿದರು.
22ದೇವರು ಆಜ್ಞಾಪಿಸಿದ ಪ್ರಕಾರವೇ ನೋಹನು ಎಲ್ಲವನ್ನು ಮಾಡಿದನು.

Выделить

Поделиться

Копировать

None

Хотите, чтобы то, что вы выделили, сохранялось на всех ваших устройствах? Зарегистрируйтесь или авторизуйтесь