ಅಪೊಸ್ತಲರ ಕಾರ್ಯಗಳು 6
6
ವಿಶೇಷ ಕಾರ್ಯಕ್ಕೆ ಏಳು ಮಂದಿಯ ಆಯ್ಕೆ
1ಯೇಸುವಿನ ಶಿಷ್ಯರ ಸಂಖ್ಯೆಯು ಹೆಚ್ಚುಹೆಚ್ಚಾಗುತ್ತಿತ್ತು. ಆದರೆ ಈ ಸಮಯದಲ್ಲಿ ಗ್ರೀಕ್ ಮಾತಾಡುವ ಶಿಷ್ಯರು ಯೆಹೂದ್ಯ ಶಿಷ್ಯರಿಗೆ ದೂರು ಹೇಳಿದರು. ಪ್ರತಿದಿನ ಶಿಷ್ಯರಿಗೆ ಕೊಡುವಂಥವುಗಳಲ್ಲಿ ತಮ್ಮ ವಿಧವೆಯರಿಗೆ ಅವರ ಪಾಲು ದೊರೆಯುತ್ತಿಲ್ಲವೆಂದು ಅವರು ಆಪಾದಿಸಿದರು.
2ಆಗ ಹನ್ನೆರಡು ಮಂದಿ ಅಪೊಸ್ತಲರು ಇಡೀ ಶಿಷ್ಯಸಮುದಾಯದ ಸಭೆಯನ್ನು ಕರೆದು ಅವರಿಗೆ, “ದೇವರ ವಾಕ್ಯವನ್ನು ಬೋಧಿಸುವುದು ನಮ್ಮ ಕೆಲಸ. ಆದರೆ ಅದು ನಿಂತುಹೋಗುವುದು ಸರಿಯಲ್ಲ! ನಾವು ಜನರಿಗೆ ಊಟವನ್ನು ಒದಗಿಸಲು ಸಹಾಯ ಮಾಡುವುದಕ್ಕಿಂತಲೂ ದೇವರ ವಾಕ್ಯೋಪದೇಶವನ್ನು ಮುಂದುವರಿಸುವುದು ಒಳ್ಳೆಯದು. 3ಆದ್ದರಿಂದ, ಸಹೋದರರೇ, ನಿಮ್ಮ ಜನರಲ್ಲಿ ಏಳು ಮಂದಿಯನ್ನು ಆರಿಸಿಕೊಳ್ಳಿರಿ. ಅವರು ಜನರಿಂದ ಒಳ್ಳೆಯವರು ಎನಿಸಿಕೊಂಡವರಾಗಿರಬೇಕು; ಜ್ಞಾನಪೂರ್ಣರಾಗಿರಬೇಕು ಮತ್ತು ಪವಿತ್ರಾತ್ಮಭರಿತರಾಗಿರಬೇಕು. ನಾವು ಅವರಿಗೆ ಈ ಕೆಲಸವನ್ನು ಒಪ್ಪಿಸಿಕೊಡುತ್ತೇವೆ. 4ಆಗ ನಾವು ನಮ್ಮ ಸಮಯವನ್ನೆಲ್ಲಾ ಪ್ರಾರ್ಥನೆಗೂ ದೇವರ ವಾಕ್ಯೋಪದೇಶಕ್ಕೂ ಕೊಡಲು ಸಾಧ್ಯವಾಗುತ್ತದೆ” ಎಂದು ಹೇಳಿದರು.
5ಇಡೀ ಸಮುದಾಯವು ಈ ಆಲೋಚನೆಯನ್ನು ಇಷ್ಟಪಟ್ಟಿತು. ಆದ್ದರಿಂದ ಅವರು ಈ ಏಳು ಮಂದಿಯನ್ನು ಆರಿಸಿಕೊಂಡರು: ಸ್ತೆಫನ (ಮಹಾನಂಬಿಕೆಯುಳ್ಳ ಮತ್ತು ಪವಿತ್ರಾತ್ಮಭರಿತನಾಗಿದ್ದ ಮನುಷ್ಯ), ಫಿಲಿಪ್ಪ,#6:5 ಫಿಲಿಪ್ಪ ಇವನು ಯೇಸುವಿನ ಅಪೊಸ್ತಲನಲ್ಲ. ಪ್ರೊಖೋರ, ನಿಕನೋರ, ತಿಮೋನ, ಪರ್ಮೇನ ಮತ್ತು ನಿಕೊಲಾಯ (ಮತಾಂತರ ಹೊಂದಿ ಯೆಹೂದ್ಯನಾಗಿದ್ದ ಇವನು ಅಂತಿಯೋಕ್ಯಕ್ಕೆ ಸೇರಿದವನು.) 6ಬಳಿಕ ಅವರು ಈ ಏಳು ಮಂದಿಯನ್ನು ಅಪೊಸ್ತಲರ ಮುಂದೆ ನಿಲ್ಲಿಸಿದರು. ಅಪೊಸ್ತಲರು ಪ್ರಾರ್ಥಿಸಿ, ಅವರ ತಲೆಗಳ ಮೇಲೆ ತಮ್ಮ ಕೈಗಳನ್ನಿಟ್ಟರು.
7ದೇವರ ವಾಕ್ಯವು ಹೆಚ್ಚುಹೆಚ್ಚು ಜನರಿಗೆ ತಲುಪತೊಡಗಿತು. ಜೆರುಸಲೇಮಿನ ಶಿಷ್ಯಸಮುದಾಯವು ಹೆಚ್ಚುಹೆಚ್ಚು ದೊಡ್ಡದಾಗ ತೊಡಗಿತು. ಅನೇಕ ಯೆಹೂದ್ಯಯಾಜಕರು ನಂಬಿಕೊಂಡರು ಮತ್ತು ವಿಧೇಯರಾದರು.
ಯೆಹೂದ್ಯರು ಸ್ತೆಫನನಿಗೆ ವಿರುದ್ಧವಾದರು
8ಸ್ತೆಫನನು (ಏಳು ಮಂದಿಯಲ್ಲಿ ಒಬ್ಬನು) ದೇವರ ಕೃಪೆಯಿಂದಲೂ ಬಲದಿಂದಲೂ ತುಂಬಿದವನಾಗಿ ಅದ್ಭುತಕಾರ್ಯಗಳನ್ನು ಮತ್ತು ಸೂಚಕಕಾರ್ಯಗಳನ್ನು ಮಾಡುತ್ತಾ ಇದ್ದನು. 9ಆದರೆ ಕೆಲವು ಯೆಹೂದ್ಯರು ಬಂದು ಅವನೊಂದಿಗೆ ವಾದಿಸಿದರು. ಈ ಯೆಹೂದ್ಯರು ಸಭಾಮಂದಿರಕ್ಕೆ ಸೇರಿದವರು. ಅದಕ್ಕೆ “ಬಿಡುಗಡೆ ಹೊಂದಿದವರ#6:9 ಬಿಡುಗಡೆ ಹೊಂದಿದವರ ಒಮ್ಮೆ ಗುಲಾಮರಾಗಿದ್ದು ಬಿಡುಗಡೆ ಹೊಂದಿದ ಯೆಹೂದ್ಯರು. ಸಭಾಮಂದಿರ” ಎಂದು ಕರೆಯುತ್ತಿದ್ದರು. (ಸಿರೇನ್ ಮತ್ತು ಅಲೆಕ್ಸಾಂಡ್ರಿಯದಿಂದ ಬಂದ ಯೆಹೂದ್ಯರಿಗೋಸ್ಕರವಾಗಿಯೂ ಈ ಸಭಾಮಂದಿರವಿತ್ತು.) ಸಿಲಿಸಿಯ ಮತ್ತು ಏಷ್ಯಾದಿಂದ ಬಂದ ಯೆಹೂದ್ಯರೂ ಅವರೊಂದಿಗಿದ್ದರು. ಅವರೆಲ್ಲರೂ ಬಂದು ಅವನೊಂದಿಗೆ ವಾದಮಾಡಿದರು. 10ಆದರೆ ವಿವೇಕದಿಂದ ಮಾತಾಡಲು ಪವಿತ್ರಾತ್ಮನು ಅವನಿಗೆ ಸಹಾಯಮಾಡಿದನು. ಸ್ತೆಫನನ ಮಾತುಗಳು ಬಹು ಶಕ್ತಿಯುತವಾಗಿದ್ದ ಕಾರಣ ಅವನೊಂದಿಗೆ ವಾದಿಸಲು ಅವರಿಗೆ ಸಾಧ್ಯವಾಗದೆ,
11“ಸ್ತೆಫನನು ಮೋಶೆಗೂ ದೇವರಿಗೂ ವಿರುದ್ಧವಾಗಿ ಕೆಟ್ಟ ಸಂಗತಿಗಳನ್ನು ಹೇಳುತ್ತಾನೆ; ಅವನ್ನು ನಾವೇ ಕೇಳಿದ್ದೇವೆ!” ಎಂದು ತಿಳಿಸುವಂತೆ ಕೆಲವರಿಗೆ ಹಣಕೊಟ್ಟರು. 12ಹೀಗೆ ಈ ಯೆಹೂದ್ಯರು ಜನರನ್ನೂ ಯೆಹೂದ್ಯರ ಹಿರಿಯನಾಯಕರನ್ನೂ ಧರ್ಮೋಪದೇಶಕರನ್ನೂ ಗಲಿಬಿಲಿಗೊಳಿಸಿದರು. ಅವರು ಬಹು ಸಿಟ್ಟಿನಿಂದ ಬಂದು ಸ್ತೆಫನನನ್ನು ಬಂಧಿಸಿ ಯೆಹೂದ್ಯನಾಯಕರ ಸಭೆಗೆ ಕೊಂಡೊಯ್ದರು.
13ಈ ಯೆಹೂದ್ಯರು ಕೆಲವು ಮಂದಿ ಸುಳ್ಳುಸಾಕ್ಷಿಗಳನ್ನು ಕರೆದುಕೊಂಡು ಬಂದು, “ಈ ಮನುಷ್ಯನು ಈ ಪವಿತ್ರಸ್ಥಳದ (ದೇವಾಲಯದ) ವಿರುದ್ಧವಾಗಿಯೂ ಮೋಶೆಯ ಧರ್ಮಶಾಸ್ತ್ರದ ವಿರುದ್ಧವಾಗಿಯೂ ಕೆಟ್ಟಸಂಗತಿಗಳನ್ನು ಯಾವಾಗಲೂ ಹೇಳುತ್ತಾನೆ. 14ನಜರೇತಿನ ಯೇಸು ಈ ದೇವಾಲಯವನ್ನು ಕೆಡವಿ ಮೋಶೆಯ ವಿಧಿಗಳನ್ನು ಬದಲಾಯಿಸುತ್ತಾನೆಂದು ಇವನು ಹೇಳುವುದನ್ನು ನಾವು ಕೇಳಿದ್ದೇವೆ” ಎಂದು ಹೇಳಿಸಿದರು. 15ಸಭೆಯಲ್ಲಿ ಕುಳಿತಿದ್ದವರೆಲ್ಲರೂ ಸ್ತೆಫನನ ಮುಖವನ್ನು ದಿಟ್ಟಿಸಿ ನೋಡಲು ಅವನ ಮುಖವು ದೇವದೂತನ ಮುಖದಂತೆ ಕಂಗೊಳಿಸಿತು.
Выбрано:
ಅಪೊಸ್ತಲರ ಕಾರ್ಯಗಳು 6: KERV
Выделить
Поделиться
Копировать

Хотите, чтобы то, что вы выделили, сохранялось на всех ваших устройствах? Зарегистрируйтесь или авторизуйтесь
Kannada Holy Bible: Easy-to-Read Version
All rights reserved.
© 1997 Bible League International