ಅಪೊಸ್ತಲರ ಕಾರ್ಯಗಳು 12
12
ಹೆರೋದ ಅಗ್ರಿಪ್ಪನಿಂದ ಸಭೆಗೆ ಹಿಂಸೆ
1ಆ ಕಾಲದಲ್ಲಿ ರಾಜ ಹೆರೋದನು ಸಭೆಯವರಲ್ಲಿ ಕೆಲವರನ್ನು ಹಿಂಸಿಸತೊಡಗಿ, 2ಯಾಕೋಬನನ್ನು ಕತ್ತಿಯಿಂದ ಕೊಲ್ಲಿಸಿದನು. ಯಾಕೋಬನು ಯೋಹಾನನ ಅಣ್ಣ. 3ಯೆಹೂದ್ಯರು ಇದನ್ನು ಮೆಚ್ಚಿಕೊಂಡರೆಂಬುದು ಹೆರೋದನಿಗೆ ತಿಳಿಯಿತು. ಆದ್ದರಿಂದ ಅವನು ಪೇತ್ರನನ್ನು ಬಂಧಿಸಿ (ಇದು ನಡೆದದ್ದು ಯೆಹೂದ್ಯರ ಪಸ್ಕಹಬ್ಬದ ಕಾಲದಲ್ಲಿ) ಸೆರೆಮನೆಗೆ ಹಾಕಿಸಿದನು. 4ಹದಿನಾರು ಮಂದಿ ಸಿಪಾಯಿಗಳು ಪೇತ್ರನನ್ನು ಕಾಯುತ್ತಿದ್ದರು. ಪಸ್ಕಹಬ್ಬದ ಕಾಲ ಮುಗಿದೊಡನೆ ಪೇತ್ರನನ್ನು ಜನರ ಮುಂದೆ ನಿಲ್ಲಿಸಬೇಕೆಂದಿದ್ದನು. 5ಹೀಗೆ ಪೇತ್ರನು ಸೆರೆಮನೆಯಲ್ಲಿದ್ದಾಗ ಸಭೆಯವರು ಅವನಿಗಾಗಿ ಎಡಬಿಡದೆ ದೇವರಲ್ಲಿ ಪ್ರಾರ್ಥಿಸುತ್ತಿದ್ದರು.
ಪೇತ್ರನಿಗೆ ಸೆರೆಮನೆಯಿಂದ ಬಿಡುಗಡೆ
6ಪೇತ್ರನು ಇಬ್ಬರು ಸೈನಿಕರ ಮಧ್ಯೆ ನಿದ್ರೆಮಾಡುತ್ತಿದ್ದನು. ಅವನನ್ನು ಎರಡು ಸರಪಣಿಗಳಿಂದ ಕಟ್ಟಲಾಗಿತ್ತು. ಅನೇಕ ಸೈನಿಕರು ಸೆರೆಮನೆಯ ಬಾಗಿಲನ್ನು ಕಾಯುತ್ತಿದ್ದರು. ಆಗ ರಾತ್ರಿಯಾಗಿತ್ತು. ಮರುದಿನ ಪೇತ್ರನನ್ನು ಜನರ ಮುಂದೆ ತರಬೇಕೆಂದು ಹೆರೋದನು ಯೋಚಿಸಿಕೊಂಡಿದ್ದನು. 7ಇದ್ದಕ್ಕಿದ್ದಂತೆ, ಪ್ರಭುವಿನ ದೂತನೊಬ್ಬನು ಅಲ್ಲಿ ನಿಂತುಕೊಂಡನು. ಬೆಳಕು ಕೋಣೆಯಲ್ಲಿ ಪ್ರಕಾಶಿಸಿತು. ದೇವದೂತನು ಪೇತ್ರನ ಪಕ್ಕೆಯನ್ನು ಮುಟ್ಟಿ ಅವನನ್ನು ಎಬ್ಬಿಸಿ, “ಬೇಗನೆ ಎದ್ದೇಳು!” ಎಂದನು. ಆ ಕೂಡಲೆ ಸರಪಣಿಗಳು ಪೇತ್ರನ ಕೈಗಳಿಂದ ಕಳಚಿಬಿದ್ದವು. 8ದೇವದೂತನು ಪೇತ್ರನಿಗೆ, “ಬಟ್ಟೆ ಧರಿಸಿಕೊ, ಪಾದರಕ್ಷೆಗಳನ್ನು ಮೆಟ್ಟಿಕೊ” ಎಂದು ಹೇಳಿದನು. ಅಂತೆಯೇ ಪೇತ್ರನು ಮಾಡಿದನು. ಬಳಿಕ ದೇವದೂತನು, “ನಿನ್ನ ಮೇಲಂಗಿಯನ್ನು ಧರಿಸಿಕೊಂಡು ನನ್ನನ್ನು ಹಿಂಬಾಲಿಸು” ಎಂದನು.
9ದೇವದೂತನು ಹೊರಗೆ ಹೋದನು. ಪೇತ್ರನು ಅವನನ್ನು ಹಿಂಬಾಲಿಸಿದನು. ದೇವದೂತನು ನಿಜವಾಗಿಯೂ ಹೀಗೆ ಮಾಡುತ್ತಿದ್ದಾನೆಂಬುದು ಪೇತ್ರನಿಗೆ ತಿಳಿದಿರಲಿಲ್ಲ. ತಾನು ಕನಸು ಕಾಣುತ್ತಿರಬಹುದೆಂದು ಅವನು ಯೋಚಿಸಿಕೊಂಡನು. 10ಪೇತ್ರನು ಮತ್ತು ದೇವದೂತನು ಮೊದಲನೆಯ ಮತ್ತು ಎರಡನೆಯ ಕಾವಲನ್ನು ದಾಟಿಹೋದರು. ಬಳಿಕ ಅವರು ತಮ್ಮನ್ನು ಪಟ್ಟಣದತ್ತ ನಡೆಸುವ ಕಬ್ಬಿಣದ ಬಾಗಿಲಿಗೆ ಬಂದರು. ಆ ಬಾಗಿಲು ಅವರಿಗಾಗಿ ತನ್ನಷ್ಟಕ್ಕೆ ತಾನೇ ತೆರೆದುಕೊಂಡಿತು. ಪೇತ್ರ ಮತ್ತು ಆ ದೇವದೂತನು ಬಾಗಿಲ ಮೂಲಕ ಹೊರಗೆ ಬಂದು ಒಂದು ಬೀದಿಯನ್ನು ದಾಟಿದರು. ಆಗ ಇದ್ದಕ್ಕಿದ್ದಂತೆ ಆ ದೇವದೂತನು ಅವನನ್ನು ಬಿಟ್ಟುಹೋದನು.
11ನಡೆದ ಸಂಗತಿಯನ್ನು ಆಗ ಅರಿತುಕೊಂಡ ಪೇತ್ರನು, “ಪ್ರಭುವು ನನ್ನ ಬಳಿಗೆ ತನ್ನ ದೇವದೂತನನ್ನು ನಿಜವಾಗಿಯೂ ಕಳುಹಿಸಿದನೆಂದು ಈಗ ನನಗೆ ತಿಳಿಯಿತು. ಆತನು ನನ್ನನ್ನು ಹೆರೋದನ ಕೈಯಿಂದ ಪಾರುಮಾಡಿದನು. ನನಗೆ ಕೇಡು ಸಂಭವಿಸುತ್ತದೆಯೆಂದು ಯೆಹೂದ್ಯರು ಯೋಚಿಸಿಕೊಂಡಿದ್ದರು. ಆದರೆ ಪ್ರಭುವು ನನ್ನನ್ನು ಆ ಕೇಡಿನಿಂದ ರಕ್ಷಿಸಿದನು” ಎಂದುಕೊಂಡನು.
12ಬಳಿಕ ಪೇತ್ರನು ಮರಿಯಳ ಮನೆಗೆ ಹೋದನು. ಆಕೆಯು ಯೋಹಾನನ ತಾಯಿ. (ಯೋಹಾನನನ್ನು ಮಾರ್ಕನೆಂದು ಕರೆಯುತ್ತಿದ್ದರು.) ಅನೇಕ ಜನರು ಅಲ್ಲಿ ಸೇರಿದ್ದರು. ಅವರೆಲ್ಲರೂ ಪ್ರಾರ್ಥಿಸುತ್ತಿದ್ದರು. 13ಪೇತ್ರನು ಹೊರ ಬಾಗಲನ್ನು ತಟ್ಟಿದನು. ಯಾರೆಂದು ವಿಚಾರಿಸುವುದಕ್ಕಾಗಿ ರೋದೆ ಎಂಬ ಸೇವಕಿ ಬಂದಳು. 14ರೋದೆಯು ಪೇತ್ರನ ಧ್ವನಿಯನ್ನು ಗುರುತಿಸಿದಳು. ಆಕೆಗೆ ತುಂಬಾ ಸಂತೋಷವಾಯಿತು. ಬಾಗಿಲು ತೆರೆಯುವುದನ್ನು ಆಕೆ ಮರೆತು, ನೆರೆದು ಬಂದಿದ್ದ ಜನರ ಬಳಿಗೆ ಓಡಿಹೋಗಿ, “ಪೇತ್ರನು ಬಾಗಿಲ ಬಳಿ ನಿಂತಿದ್ದಾನೆ!” ಎಂದು ಹೇಳಿದಳು. 15ಆ ವಿಶ್ವಾಸಿಗಳು ಆಕೆಗೆ, “ನಿನಗೆ ಹುಚ್ಚು ಹಿಡಿದಿದೆ!” ಎಂದರು. ಆದರೆ ಅವಳು ತಾನು ಹೇಳುತ್ತಿರುವುದು ನಿಜವೆಂದು ಒತ್ತಿಹೇಳಿದಳು. ಆದ್ದರಿಂದ ಅವರು, “ಅವನು ಪೇತ್ರನ ದೂತನಿರಬೇಕು” ಎಂದು ಹೇಳಿದರು.
16ಆದರೆ ಪೇತ್ರನು ಬಾಗಿಲನ್ನು ತಟ್ಟುತ್ತಲೇ ಇದ್ದನು. ಆ ವಿಶ್ವಾಸಿಗಳು ಬಾಗಿಲನ್ನು ತೆರೆದಾಗ ಅವರು ಪೇತ್ರನನ್ನು ಕಂಡು ವಿಸ್ಮಿತರಾದರು. 17ಪೇತ್ರನು ಅವರಿಗೆ ಸುಮ್ಮನಿರಬೇಕೆಂದು ಸನ್ನೆ ಮಾಡಿದನು. ಪ್ರಭುವು ತನ್ನನ್ನು ಸೆರೆಮನೆಯಿಂದ ಬಿಡಿಸಿದ ರೀತಿಯನ್ನು ಅವನು ಅವರಿಗೆ ವಿವರಿಸಿ, “ಯಾಕೋಬನಿಗೂ ಮತ್ತು ಸಹೋದರರಿಗೂ ಈ ಸಂಗತಿಯನ್ನು ತಿಳಿಸಿರಿ” ಎಂದು ಹೇಳಿದನು. ಬಳಿಕ ಪೇತ್ರನು ಬೇರೊಂದು ಸ್ಥಳಕ್ಕೆ ಅಲ್ಲಿಂದ ಹೊರಟುಹೋದನು.
18ಮರುದಿನ, ಪೇತ್ರನು ಏನಾದನೆಂದು ಸೈನಿಕರ ನಡುವೆ ದೊಡ್ಡ ಗೊಂದಲವೇ ಎದ್ದಿತು. 19ಹೆರೋದನು ಎಲ್ಲೆಲ್ಲಿ ಹುಡುಕಿದರೂ ಪೇತ್ರನನ್ನು ಕಂಡುಹಿಡಿಯಲಾಗಲಿಲ್ಲ. ಆದ್ದರಿಂದ ಹೆರೋದನು ಕಾವಲುಗಾರರನ್ನು ವಿಚಾರಿಸಿ ಅವರಿಗೇ ಮರಣದಂಡನೆ ವಿಧಿಸಿದನು.
ಹೆರೋದ ಅಗ್ರಿಪ್ಪನ ಮರಣ
ತರುವಾಯ ಹೆರೋದನು ಜುದೇಯದಿಂದ ಹೊರಟು ಸೆಜರೇಯ ಪಟ್ಟಣಕ್ಕೆ ಬಂದು ಅಲ್ಲೇ ಸ್ವಲ್ಪಕಾಲ ನೆಲೆಸಿದ್ದನು. 20ಟೈರ್ ಮತ್ತು ಸಿದೋನ್ ಪಟ್ಟಣಗಳ ಜನರ ಮೇಲೆ ಹೆರೋದನು ಬಹು ಕೋಪಗೊಂಡಿದ್ದನು. ಆ ಜನರೆಲ್ಲರೂ ಹೆರೋದನನ್ನು ಭೇಟಿಯಾಗಲು ಒಟ್ಟಾಗಿ ಹೋದರು. ಅವರು ಬ್ಲಾಸ್ತನನ್ನು ತಮ್ಮ ಕಡೆಗೆ ಒಲಿಸಿಕೊಂಡರು. ಬ್ಲಾಸ್ತನು ರಾಜನ ವೈಯಕ್ತಿಕ ಸೇವಕನಾಗಿದ್ದನು. ಆ ಜನರು ತಮ್ಮೊಂದಿಗೆ ಶಾಂತಿಸಂಧಾನ ಮಾಡಿಕೊಳ್ಳಬೇಕೆಂದು ಹೆರೋದನನ್ನು ಕೇಳಿಕೊಂಡರು. ಯಾಕೆಂದರೆ ಅವರ ನಾಡಿಗೆ ಹೆರೋದನ ನಾಡಿನಿಂದ ಆಹಾರವನ್ನು ತರಿಸಿಕೊಳ್ಳಬೇಕಾಗಿತ್ತು.
21ಅವರನ್ನು ಸಂಧಿಸುವುದಕ್ಕಾಗಿ ಹೆರೋದನು ದಿನವೊಂದನ್ನು ಗೊತ್ತುಮಾಡಿದನು. ಅಂದು ಹೆರೋದನು ಸುಂದರವಾದ ರಾಜವಸ್ತ್ರವನ್ನು ಧರಿಸಿಕೊಂಡಿದ್ದನು. ಅವನು ತನ್ನ ಸಿಂಹಾಸನದ ಮೇಲೆ ಕುಳಿತುಕೊಂಡು ಜನರಿಗೆ ಭಾಷಣ ಮಾಡಿದನು. 22ಆ ಜನರು, “ಈ ಧ್ವನಿಯು ಮನುಷ್ಯನದಲ್ಲ, ದೇವರದೇ!” ಎಂದು ಕೂಗಿದರು. 23ಹೆರೋದನು ಈ ಹೊಗಳಿಕೆಯನ್ನು ತಾನೇ ಸ್ವೀಕರಿಸಿಕೊಂಡನು. ದೇವರನ್ನು ಮಹಿಮೆಪಡಿಸಲಿಲ್ಲ. ಆದ್ದರಿಂದ ಆ ಕ್ಷಣವೇ, ಪ್ರಭುವಿನ ದೂತನೊಬ್ಬನು ಅವನಿಗೆ ಕಾಯಿಲೆಯನ್ನು ಬರಮಾಡಿದನು. ಅವನ ದೇಹದ ಒಳಭಾಗವನ್ನು ಹುಳಗಳು ತಿಂದುಹಾಕಿದ್ದರಿಂದ ಅವನು ಸತ್ತುಹೋದನು.
24ದೇವರ ಸಂದೇಶವು ಹಬ್ಬುತ್ತಿತ್ತು ಮತ್ತು ಹೆಚ್ಚುಹೆಚ್ಚು ಜನರ ಮೇಲೆ ಪ್ರಭಾವ ಬೀರುತ್ತಿತ್ತು. ಇದರಿಂದ ವಿಶ್ವಾಸಿಗಳ ಸಮುದಾಯವು ದೊಡ್ಡದಾಗತೊಡಗಿತು.
25ಬಾರ್ನಬ ಮತ್ತು ಸೌಲರು ಜೆರುಸಲೇಮಿನಲ್ಲಿ ತಮ್ಮ ಕಾರ್ಯವನ್ನು ಮುಗಿಸಿದ ಮೇಲೆ ಅಂತಿಯೋಕ್ಯಕ್ಕೆ ಹಿಂತಿರುಗಿದರು. ಮಾರ್ಕನೆಂಬ ಯೋಹಾನನು ಅವರೊಂದಿಗಿದ್ದನು.
Выбрано:
ಅಪೊಸ್ತಲರ ಕಾರ್ಯಗಳು 12: KERV
Выделить
Поделиться
Копировать

Хотите, чтобы то, что вы выделили, сохранялось на всех ваших устройствах? Зарегистрируйтесь или авторизуйтесь
Kannada Holy Bible: Easy-to-Read Version
All rights reserved.
© 1997 Bible League International