ಬಾರ್ನಬನು ಒಳ್ಳೆಯ ಮನುಷ್ಯನಾಗಿದ್ದನು. ಅವನು ಪವಿತ್ರಾತ್ಮಭರಿತನಾಗಿದ್ದನು ಮತ್ತು ಪೂರ್ಣನಂಬಿಕೆಯುಳ್ಳವನಾಗಿದ್ದನು. ಬಾರ್ನಬನು ಅಂತಿಯೋಕ್ಯಕ್ಕೆ ಹೋದಾಗ, ದೇವರು ಆ ಜನರನ್ನು ಅಧಿಕವಾಗಿ ಆಶೀರ್ವದಿಸಿರುವುದನ್ನು ಕಂಡನು. ಇದರಿಂದ ಬಾರ್ನಬನಿಗೆ ತುಂಬಾ ಸಂತೋಷವಾಯಿತು. ಅಂತಿಯೋಕ್ಯದಲ್ಲಿದ್ದ ವಿಶ್ವಾಸಿಗಳನ್ನೆಲ್ಲ ಅವನು ಪ್ರೋತ್ಸಾಹಿಸಿದನು. ಅವನು ಅವರಿಗೆ, “ನಿಮ್ಮ ನಂಬಿಕೆಯನ್ನು ಎಂದಿಗೂ ಕಳೆದುಕೊಳ್ಳಬೇಡಿ. ಪ್ರಭುವಿಗೆ ನಿಮ್ಮ ಪೂರ್ಣಹೃದಯಗಳಿಂದ ಯಾವಾಗಲೂ ವಿಧೇಯರಾಗಿರಿ” ಎಂದು ಹೇಳಿದನು. ಅನೇಕ ಜನರು ಪ್ರಭುವಾದ ಯೇಸುವಿನ ಹಿಂಬಾಲಕರಾದರು.