YouVersion Logo
Search Icon

ಮಲಾಕಿಯ 1

1
1ಯೆಹೋವನು ಇಸ್ರಾಯೇಲನ್ನು ಕುರಿತು ಮಲಾಕಿಯ#1.1 ಅಥವಾ: ನನ್ನ ದೂತನ. ಮಲಾ. 2.7 ಹೋಲಿಸಿ ನೋಡಿರಿ. ಮೂಲಕ ನುಡಿದ ದೈವೋಕ್ತಿ.
ಸ್ವಜನರ ಮೇಲಣ ಯೆಹೋವನ ಪ್ರೀತಿ
2ಯೆಹೋವನು ಇಂತೆನ್ನುತ್ತಾನೆ - ನಾನು ನಿಮ್ಮನ್ನು ಪ್ರೀತಿಸಿದ್ದೇನೆ; ನೀವೋ - ಯಾವ ವಿಷಯದಲ್ಲಿ ನಮ್ಮನ್ನು ಪ್ರೀತಿಸಿದ್ದೀ ಅಂದುಕೊಳ್ಳುತ್ತೀರಲ್ಲಾ. ಏಸಾವನು ಯಾಕೋಬನ ಅಣ್ಣನಲ್ಲವೆ, 3ಆದರೆ ನಾನು ಯಾಕೋಬನನ್ನು ಪ್ರೀತಿಸಿ ಏಸಾವನನ್ನು ದ್ವೇಷಿಸಿ ಅವನ ಬೆಟ್ಟಗಳನ್ನು ಹಾಳುಮಾಡಿ ಅವನ ಸ್ವಾಸ್ತ್ಯವನ್ನು ಕಾಡುನರಿಗಳ ಪಾಲುಮಾಡಿದೆನಷ್ಟೆ; ಇದು ಯೆಹೋವನ ನುಡಿ. 4ಹೀಗಿರಲು ಎದೋಮ್ಯರು - ನಾವು ಹಾಳಾದೆವು, ಆದರೆ ಹಾಳುಪ್ರದೇಶಗಳನ್ನು ಮತ್ತೆ ಕಟ್ಟುವೆವು ಅಂದುಕೊಂಡರೆ ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ - ಅವರು ಕಟ್ಟಿದರೂ ನಾನು ಕೆಡವಿ ಹಾಕುವೆನು; ಅವರು ದುಷ್ಟ ಪ್ರಾಂತದವರೂ, ಯೆಹೋವನ ನಿತ್ಯಕೋಪಕ್ಕೆ ಈಡಾದ ಜನರೂ ಅನ್ನಿಸಿಕೊಳ್ಳುವರು. 5ನೀವೇ ಇದನ್ನು ಕಣ್ಣಾರೆ ಕಂಡು - ಯೆಹೋವನು ಇಸ್ರಾಯೇಲಿನ ಮೇರೆಯ ಆಚೆಯೂ ಮಹಾಮಹಿಮೆಯುಳ್ಳವನು ಅಂದುಕೊಳ್ಳುವಿರಿ.
ಅಯೋಗ್ಯಯಾಜಕ ಖಂಡನೆ
6ನನ್ನ ನಾಮವನ್ನು ಧಿಕ್ಕರಿಸುವ ಯಾಜಕರೇ, ಮಗನು ತಂದೆಗೆ ಮಾನಸಲ್ಲಿಸುತ್ತಾನಲ್ಲಾ, ಆಳು ಧಣಿಗೆ ಭಯಭಕ್ತಿತೋರಿಸುತ್ತಾನಷ್ಟೆ; ನಾನು ತಂದೆಯಾಗಿರಲು ನನಗೆ ಸಲ್ಲುವ ಮಾನವೆಲ್ಲಿ; ಧಣಿಯಾಗಿರಲು ನನಗೆ ತೋರಿಸುವ ಭಯಭಕ್ತಿಯೆಲ್ಲಿ ಎಂದು ಸೇನಾಧೀಶ್ವರ ಯೆಹೋವನು ನಿಮಗೇ ನುಡಿಯುತ್ತಾನೆ. ಆದರೆ ನೀವು - ಯಾವ ವಿಷಯದಲ್ಲಿ ನಿನ್ನ ನಾಮವನ್ನು ಧಿಕ್ಕರಿಸಿದ್ದೇವೆ ಅನ್ನುತ್ತೀರಿ. 7ನನ್ನ ಯಜ್ಞವೇದಿಯ ಮೇಲೆ ಅಶುದ್ಧ ಪದಾರ್ಥಗಳನ್ನು ಅರ್ಪಿಸುತ್ತೀರಲ್ಲಾ. ಯಾವ ವಿಷಯದಲ್ಲಿ ನಿನ್ನನ್ನು ಅಶುದ್ಧಗೊಳಿಸಿದ್ದೇವೆ ಅನ್ನುತ್ತೀರೋ?ಯೆಹೋವನ ಮೇಜಿಗೆ ಘನತೆಯೇನಿದೆ ಎಂದು ನೀವು ಅಂದುಕೊಳ್ಳುವದರಲ್ಲಿಯೇ. 8ಕುರುಡಾದ ಪಶುವನ್ನು ಯಜ್ಞಕ್ಕೆ ಒಪ್ಪಿಸುವದು ದೋಷವಲ್ಲವೆಂದು ನೆನಸುತ್ತೀರೋ? ಕುಂಟಾದದ್ದನ್ನೂ ರೋಗದ ಪಶುವನ್ನೂ ಅರ್ಪಿಸುವದು ದೋಷವಲ್ಲವೆಂದು ನಂಬುತ್ತೀರೋ? ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ - ಇಂಥದನ್ನು ನಿನ್ನ ದೇಶಾಧಿಪತಿಗೆ ಒಪ್ಪಿಸು; 9ನಿನಗೆ ಮೆಚ್ಚುವನೋ? ಪ್ರಸನ್ನನಾಗುವನೋ? ಹಾಗಾದರೆ ದೇವರ ದಯೆ ದೊರೆಯುವ ಹಾಗೆ ದೇವರನ್ನು ಒಲಿಸಿಕೊಳ್ಳಿರಿ; ಆಹಾ, ಇದೇ ನಿಮ್ಮ ಕೈಯ ಕಾಣಿಕೆ; ನಿಮ್ಮಲ್ಲಿ ಯಾರಿಗಾದರೂ ಆತನು ಪ್ರಸನ್ನನಾಗುವನೋ? ಇದು ಸೇನಾಧೀಶ್ವರ ಯೆಹೋವನ ನುಡಿ. 10ನನ್ನ ಯಜ್ಞವೇದಿಯ ಮೇಲೆ ಯಾರೂ ಬೆಂಕಿಯನ್ನು ವ್ಯರ್ಥವಾಗಿ ಉರಿಸದಂತೆ ನಿಮ್ಮಲ್ಲೊಬ್ಬನು [ದೇವಾಲಯದ] ಬಾಗಿಲುಗಳನ್ನು ಮುಚ್ಚಿಬಿಟ್ಟರೆ ಎಷ್ಟೋ ಒಳ್ಳೇದು! ನಾನು ನಿಮಗೆ ಮೆಚ್ಚೆನು, ನಿಮ್ಮ ಕೈಯಿಂದ ನೈವೇದ್ಯವನ್ನು ಸ್ವೀಕರಿಸೆನು; ಇದು ಸೇನಾಧೀಶ್ವರ ಯೆಹೋವನ ನುಡಿ. 11ಸೂರ್ಯನು ಮೂಡುವ ದಿಕ್ಕಿನಿಂದ ಮುಣುಗುವ ದಿಕ್ಕಿನವರೆಗೂ ನನ್ನ ನಾಮವು ಅನ್ಯಜನಾಂಗಗಳಲ್ಲಿ ಘನವಾಗಿದೆ; ಒಂದೊಂದು ಸ್ಥಳದಲ್ಲಿಯೂ ನನ್ನ ನಾಮಕ್ಕೆ ಧೂಪವನ್ನೂ ಶುದ್ಧನೈವೇದ್ಯವನ್ನೂ ಅರ್ಪಿಸುತ್ತಾರೆ; ಹೌದು, ಅನ್ಯಜನಾಂಗಗಳಲ್ಲಿಯೇ ನನ್ನ ನಾಮವು ಘನವಾಗಿದೆ; ಇದು ಸೇನಾಧೀಶ್ವರ ಯೆಹೋವನ ನುಡಿ. 12ನೀವೋ - ಯೆಹೋವನ ಮೇಜು ಅಶುದ್ಧ, ಅದರ ಮೇಲಣ ಎಡೆಯು ತುಚ್ಫ ಅಂದುಕೊಳ್ಳುವದರಿಂದ ನನ್ನ ನಾಮವನ್ನು ಅಪಕೀರ್ತಿಗೆ ಗುರಿಮಾಡಿದ್ದೀರಿ. 13ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ - ಅಯ್ಯೋ, [ಈ ಸೇವೆಯು] ಎಷ್ಟೋ ಬೇಸರವೆಂದು ನೀವು ಅಂದುಕೊಂಡು ಅದನ್ನು ಛೀಗುಟ್ಟುತ್ತೀರಿ; ಕಳವಿನ#1.13 ಅಥವಾ: ಕಾಡುಮೃಗದ ಬಾಯಿಂದ ಕಿತ್ತುಕೊಂಡು ಬಂದದ್ದನ್ನೂ. ಪಶುವನ್ನೂ ಕುಂಟಾದದ್ದನ್ನೂ ರೋಗಿಯಾದದ್ದನ್ನೂ ತಂದೊಪ್ಪಿಸುತ್ತೀರಿ; ಇಂಥ ನೈವೇದ್ಯವನ್ನು ತಂದೊಪ್ಪಿಸುತ್ತಿರುವಲ್ಲಿ ನಾನು ಅದನ್ನು ನಿಮ್ಮ ಕೈಯಿಂದ ಸ್ವೀಕರಿಸಲೋ; ಇದು ಯೆಹೋವನ ನುಡಿ. 14ಒಬ್ಬನು ಹರಕೆ ಹೊತ್ತು ತನ್ನ ಹಿಂಡಿನಲ್ಲಿ ಗಂಡುಪಶುವಿದ್ದರೂ ಕಳಂಕವಾದ ಪಶುವನ್ನು ಯೆಹೋವನಿಗೆ ಯಜ್ಞಮಾಡಿದರೆ ಆ ಮೋಸಗಾರನಿಗೆ ಶಾಪವು ತಗಲಲಿ; ನಾನು ರಾಜಾಧಿರಾಜ, ನನ್ನ ನಾಮವು ಅನ್ಯಜನಾಂಗಗಳ ಭಯಭಕ್ತಿಗೆ ಈಡಾಗಿದೆ; ಇದು ಸೇನಾಧೀಶ್ವರ ಯೆಹೋವನ ನುಡಿ.

Highlight

Share

Copy

None

Want to have your highlights saved across all your devices? Sign up or sign in

Video for ಮಲಾಕಿಯ 1