ಜೆಕರ್ಯ 14
14
ಯೆರೂಸಲೇವಿುನ ಅದ್ಭುತರಕ್ಷಣೆ, ಶತ್ರುಧ್ವಂಸ
1ಆಹಾ, [ಚೀಯೋನೇ!] ಯೆಹೋವನು ನೇವಿುಸಿದ ದಿನವು ಬರುತ್ತಿದೆ; ಸೂರೆಯಾದ ನಿನ್ನ ಆಸ್ತಿಯು ಆಗ ನಿನ್ನ ಮಧ್ಯದಲ್ಲಿ ಹಂಚಿಕೆಯಾಗುವದು. 2ನಾನು ಸಕಲ ಜನಾಂಗಗಳನ್ನು ಯೆರೂಸಲೇವಿುಗೆ ವಿರುದ್ಧವಾಗಿ ಕೂಡಿಸುವೆನು; ಅವು ಪಟ್ಟಣವನ್ನು ಆಕ್ರವಿುಸಿಕೊಂಡು ಮನೆಗಳನ್ನು ಸೂರೆಮಾಡಿ ಹೆಂಗಸರನ್ನು ಕೆಡಿಸುವವು; ಪಟ್ಟಣದ ಅರವಾಸಿ ಜನರು ಸೆರೆಗೆ ಹೋಗುವರು, ವಿುಕ್ಕವರೋ ಪಟ್ಟಣದಲ್ಲೇ ಉಳಿಯುವರು. 3ಆಗ ಯೆಹೋವನು ಹೊರಟು ಯುದ್ಧದಿನದಲ್ಲಿ ಹೇಗೋ ಹಾಗೆಯೇ ಆ ಜನಾಂಗಗಳಿಗೆ ಪ್ರತಿಭಟಿಸುವನು. 4ಯೆರೂಸಲೇವಿುಗೆ ಮೂಡಲಲ್ಲಿ ಎದುರಾಗಿರುವ ಎಣ್ಣೆಯ ಮರಗಳ ಗುಡ್ಡದ ಮೇಲೆ ಆತನ ಪಾದಗಳು ನಿಂತಿರಲು ಆ ಗುಡ್ಡವು ಮೂಡಲಿಂದ ಪಡುವಲಿಗೆ ಉದ್ದಕ್ಕೂ ಸೀಳಿಹೋಗಿ ಮಧ್ಯದಲ್ಲಿ ದೊಡ್ಡ ಡೊಂಗರವಾಗುವದು; ಗುಡ್ಡದ ಅರ್ಧಭಾಗವು ಬಡಗಲಿಗೆ, ಅರ್ಧಭಾಗವು ತೆಂಕಲಿಗೆ ಸರಿದುಕೊಳ್ಳುವದು. 5ನೀವು ನನ್ನ ಗುಡ್ಡಗಳ ನಡುವಣ ಆ ಡೊಂಗರದೊಳಕ್ಕೆ#14.5 ಅಥವಾ: ಡೊಂಗರದ ಮಾರ್ಗವಾಗಿ. ಓಡಿಹೋಗುವಿರಿ; ಏಕಂದರೆ ಆ ಡೊಂಗರವು ಆಚೆಲಿಗೆ#14.5 ಅಥವಾ: ಬಹು ಹತ್ತಿರಕ್ಕೆ ಬಂದಿರುವದು. ಮುಟ್ಟಿರುವದು; ಯೆಹೂದದ ಅರಸನಾದ ಉಜ್ಜೀಯನ ಕಾಲದಲ್ಲಿ ಭೂಕಂಪದ ಕಡೆಯಿಂದ ನೀವು ಓಡಿಹೋದಂತೆಯೇ ಓಡಿಹೋಗುವಿರಿ; ಆಗ ನನ್ನ ದೇವರಾದ ಯೆಹೋವನು ಸಮಸ್ತ ದೇವದೂತಸಮೇತ ಬರುವನು. 6ಆ#14.6 ಅಥವಾ: ಆ ಕಾಲದ ಬೆಳಕು ಕಳೆಗುಂದುವ ಬೆಳಕಲ್ಲ; ಆ ಕಾಲವು ಒಂದೇ ದೀರ್ಘದಿವಸ; ಅದು ಯೆಹೋವನ ವಿಶೇಷ ಪರಾಂಬರಿಕೆಗೆ ಈಡಾಗಿದೆ; ಹಗಲಿರುಳು ಇರವು; ಸಂಜೆಯ ವೇಳೆಯಲ್ಲಿಯೂ ಬೆಳಕೇ. ಈ ವಚನಗಳ ಮೂಲವು ಕೇವಲ ಅಸ್ಪಷ್ಟ. ಯೆಶಾ. 60.19; ಪ್ರಕ. 21.23 ಹೋಲಿಸಿ ನೋಡಿರಿ. ದಿನದಲ್ಲಿ ಬೆಳಕಿರದು, ಜ್ಯೋತಿಗಳು ಉಡುಗಿಹೋಗುವವು, ಇಂಥಾ#14.6 ಅಥವಾ: ಆ ದಿನವು ಅಪೂರ್ವವಾದದ್ದು. ದಿನವು ಒಂದೇ, 7ಅದು ಯೆಹೋವನಿಗೆ ಗೊತ್ತು, ಅದು ಹಗಲೂ ಅಲ್ಲ, ಇರುಳೂ ಅಲ್ಲ, ಆದರೆ ಸಂಜೆಯ ವೇಳೆಯಲ್ಲಿ ಬೆಳಕಾಗುವದು. 8ಆ ದಿನದಲ್ಲಿ ಜೀವಕರವಾದ ಜಲಪ್ರವಾಹವು ಯೆರೂಸಲೇವಿುನೊಳಗಿಂದ ಹೊರಡುವದು; ಅರ್ಧಭಾಗವು ಪೂರ್ವಸಮುದ್ರಕ್ಕೂ ಅರ್ಧಭಾಗವು ಪಶ್ಚಿಮಸಮುದ್ರಕ್ಕೂ ಹರಿಯುವದು; ಬೇಸಿಗೆಕಾಲದಲ್ಲಿಯೂ ಮಳೆಗಾಲದಲ್ಲಿಯೂ ಹರಿಯುತ್ತಲೇ ಇರುವದು. 9ಯೆಹೋವನು ಭೂಲೋಕಕ್ಕೆಲ್ಲಾ ರಾಜನಾಗಿರುವನು; ಆ ದಿನದಲ್ಲಿ ಯೆಹೋವನೊಬ್ಬನೇ ದೇವರೆಂದೂ ಆತನ ಹೆಸರೊಂದೇ ಸ್ತುತ್ಯವೆಂದೂ ಎಲ್ಲರಿಗೂ ತಿಳಿದಿರುವದು. 10ಆಗ ದೇಶವು ಗೆಬದಿಂದ ಯೆರೂಸಲೇವಿುಗೆ ತೆಂಕಲಲ್ಲಿರುವ ರಿಮ್ಮೋನಿನವರೆಗೆ ತಗ್ಗಾಗಿ ಮಾರ್ಪಡುವದು; ಯೆರೂಸಲೇಮೋ ಬೆನ್ಯಾಮೀನಿನ ಬಾಗಿಲಿಂದ ಪೂರ್ವಕಾಲದ ಬಾಗಿಲಿನ ಸ್ಥಳದವರೆಗೆ, ಮೂಲೆಯ ಬಾಗಿಲಿನ ತನಕ, ಹನನೇಲನ ಬುರುಜಿನಿಂದ ಅರಸನ ದ್ರಾಕ್ಷೆಯ ಆಲೆಗಳ ಪರಿಯಂತ ಇದ್ದ ಕಡೆಯೇ ಎತ್ತರದಲ್ಲಿ ನಿಂತಿರುವದು. 11ಅದರಲ್ಲಿ ಜನರು [ತುಂಬಾ] ವಾಸಿಸುವರು. ಇನ್ನು ಶಾಪವಿರದು; ಯೆರೂಸಲೇಮು ನೆಮ್ಮದಿಯಾಗಿ ನೆಲೆಗೊಂಡಿರುವದು. 12ಯೆರೂಸಲೇವಿುನ ಮೇಲೆ ಯುದ್ಧಮಾಡಿದ ಸಕಲ ಜನಾಂಗಗಳಿಗೂ ಯೆಹೋವನು ಈ ವ್ಯಾಧಿಯನ್ನು ತಗಲಿಸುವನು - ಹೆಜ್ಜೆಯ ಮೇಲೆ ನಿಂತ ನಿಂತ ಹಾಗೆಯೇ ಅವರ ಮಾಂಸವು ಕೊಳೆತುಹೋಗುವದು, ಕಣ್ಣು ಗುಣಿಯಲ್ಲೇ ಇಂಗುವದು, ನಾಲಿಗೆಯು ಬಾಯಲ್ಲೇ ಕ್ಷಯಿಸುವದು. 13ಆ ದಿನದಲ್ಲಿ ಯೆಹೋವನು ಉಂಟುಮಾಡುವ ದೊಡ್ಡ ಗಲಿಬಿಲಿಯು ಅವರಲ್ಲಿ ಹರಡುವದು; ಒಬ್ಬರ ಕೈಯನ್ನೊಬ್ಬರು ತಡೆಹಿಡಿಯುವರು, ಒಬ್ಬರ ಮೇಲೊಬ್ಬರು ಕೈಯೆತ್ತುವರು. 14ಯೆಹೂದವೂ ಯೆರೂಸಲೇವಿುನ#14.14 ಅಥವಾ: ಯೆರೂಸಲೇವಿುನ ಮೇಲೆ. ಪರವಾಗಿ ಯುದ್ಧಮಾಡುವದು; ಸುತ್ತಣ ಸಕಲ ಜನಾಂಗಗಳ ಆಸ್ತಿಯು ಅಂದರೆ ಬೆಳ್ಳಿಬಂಗಾರಬಟ್ಟೆಗಳು ರಾಶಿರಾಶಿಯಾಗಿ ಬಾಚಲ್ಪಡುವವು. 15ಜನಾಂಗಗಳಿಗೆ ತಗಲುವಂಥ ವ್ಯಾಧಿಯೇ ಕುದುರೆ, ಹೇಸರಗತ್ತೆ, ಒಂಟೆ, ಕತ್ತೆ, ಅಂತು ಆ ಪಾಳೆಯಗಳಲ್ಲಿನ ಸಮಸ್ತ ಪಶುಗಳಿಗೂ ತಗಲುವದು. 16ಅನಂತರ ಯೆರೂಸಲೇವಿುನ ಮೇಲೆ ಬಿದ್ದ ಸಕಲ ಜನಾಂಗಗಳಲ್ಲಿ ಉಳಿದವರೆಲ್ಲರೂ ಸೇನಾಧೀಶ್ವರ ಯೆಹೋವನೆಂಬ ರಾಜಾಧಿರಾಜನನ್ನು ಆರಾಧಿಸುವದಕ್ಕೂ ಪರ್ಣಶಾಲೆಗಳ ಹಬ್ಬವನ್ನು ಆಚರಿಸುವದಕ್ಕೂ ಪ್ರತಿವರುಷವು ಹೊರಟುಬರುವರು. 17ಲೋಕದ ಸಮಸ್ತ ಕುಲಗಳಲ್ಲಿ ಯಾವ ಕುಲದವರು ಸೇನಾಧೀಶ್ವರ ಯೆಹೋವನೆಂಬ ರಾಜಾಧಿರಾಜನನ್ನು ಆರಾಧಿಸುವದಕ್ಕೆ ಬರುವದಿಲ್ಲವೋ ಅವರಿಗೆ ಮಳೆ ಬರುವದಿಲ್ಲ. 18ಐಗುಪ್ತ ಕುಲದವರು ಹೊರಟು ಬಾರದಿದ್ದರೆ ಪರ್ಣಶಾಲೆಗಳ#14.18 ಪಾಠಾಂತರ : ಅವರಿಗೂ ಮಳೆ ಬರುವದಿಲ್ಲ; ಪರ್ಣಶಾಲೆಗಳ … ಹಬ್ಬವನ್ನು ಆಚರಿಸುವದಕ್ಕೆ ಬಾರದಿರುವ ಜನಾಂಗಗಳಿಗೆ ಯೆಹೋವನು ತಗಲಿಸುವ ಬಾಧೆಯು ಅವರಿಗೂ ತಗಲುವದು. 19ಐಗುಪ್ತಕ್ಕೂ ಪರ್ಣಶಾಲೆಗಳ ಹಬ್ಬವನ್ನು ಆಚರಿಸುವದಕ್ಕೆ ಬಾರದಿರುವ ಸಕಲ ಜನಾಂಗಗಳಿಗೂ ಸಂಭವಿಸುವ ದಂಡನೆಯು ಇದೇ.
ಯೆರೂಸಲೇಮಿನ ಪೂರ್ಣಪರಿಶುದ್ಧತೆ
20ಆ ದಿನದಲ್ಲಿ - ಯೆಹೋವನಿಗೆ ಮೀಸಲು ಎಂಬ ಲಿಪಿಯು ಕುದುರೆಗಳ ಘಂಟೆಗಳ ಮೇಲೂ ಕೆತ್ತಿರುವದು; ಯೆಹೋವನ ಆಲಯದ ಪಾತ್ರೆಗಳೆಲ್ಲವೂ ಯಜ್ಞವೇದಿಯ ಪಕ್ಕದ ಬೋಗುಣಿಗಳಂತೆ ಪರಿಶುದ್ಧವಾಗಿರುವವು. 21ಅಲ್ಲದೆ ಯೆರೂಸಲೇಮಿನಲ್ಲಿಯೂ ಯೆಹೂದದಲ್ಲಿಯೂ ಇರುವ ಸಕಲ ಪಾತ್ರೆಗಳು ಸೇನಾಧೀಶ್ವರ ಯೆಹೋವನಿಗೆ ಮೀಸಲಾಗಿರುವವು; ಯಜ್ಞಮಾಡುವವರೆಲ್ಲರು ಬಂದು ಅವುಗಳನ್ನು ತೆಗೆದುಕೊಂಡು ಅವುಗಳಲ್ಲಿ ಬೇಯಿಸುವರು; ಆ ದಿನದಲ್ಲಿ ಸೇನಾಧೀಶ್ವರ ಯೆಹೋವನ ಆಲಯದೊಳಗೆ ಯಾವ ವ್ಯಾಪಾರಿಯೂ#14.21 ಅಥವಾ : ಕಾನಾನ್ಯನೂ; ಧರ್ಮೋ. 7.1,2; ಯೆಹೆ. 44.9; ಯೋವೇ. 3.17 ನೋಡಿರಿ. ಇರನು.
Currently Selected:
ಜೆಕರ್ಯ 14: KANJV-BSI
Highlight
Share
Copy
Want to have your highlights saved across all your devices? Sign up or sign in
Kannada J.V. Bible © The Bible Society of India, 2016.
Used by permission. All rights reserved worldwide.