YouVersion Logo
Search Icon

ಮಲಾಕಿಯ 2

2
1ಯಾಜಕರೇ, ಈ ಅಪ್ಪಣೆಯು ಈಗ ನಿಮಗಾಗಿದೆ - 2ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ - ನನ್ನ ನಾಮವನ್ನು ಘನಪಡಿಸಬೇಕೆಂಬ ಆಜ್ಞೆಯನ್ನು ನೀವು ಆಲಿಸಿ ಮಂದಟ್ಟುಮಾಡಿಕೊಳ್ಳದಿದ್ದರೆ ನಾನು ನಿಮಗೆ ಶಾಪವನ್ನು ಬರಮಾಡುವೆನು, ನಿಮಗೆ ಆಶೀರ್ವಾದವಾಗಿ ದಯಪಾಲಿಸಿದವುಗಳನ್ನೂ ಶಪಿಸುವೆನು; ಹೌದು, ಈ ನನ್ನ ಆಜ್ಞೆಯನ್ನು ನಿಮ್ಮಲ್ಲಿ ಯಾರೂ ಮಂದಟ್ಟುಮಾಡಿಕೊಳ್ಳದ ಕಾರಣ ಅವುಗಳನ್ನು ಶಪಿಸೇ ಇದ್ದೇನೆ. 3ಆಹಾ, ನಿಮ್ಮ ಬೀಜವನ್ನು#2.3 ಅಥವಾ: ನಿಮ್ಮ ಸಂತಾನವನ್ನು ಅಡಗಿಸುವೆನು. ಪಾಠಾಂತರ: ಬಾಹುಬಲವನ್ನು. [ಬೆಳೆಯದಂತೆ]ಖಂಡಿಸುವೆನು; ನಿಮ್ಮ ಮುಖದ ಮೇಲೆ ಮಲವನ್ನು, ನಿಮ್ಮ ಹಬ್ಬದ ಪಶುಗಳ ಮಲವನ್ನು ಚೆಲ್ಲಿಬಿಡುವೆನು; ನೀವು#2.3 ಮೂಲ: ನೀವು ಅಲ್ಲಿಗೆ ಬಿಸಾಡಲ್ಪಡುವಿರಿ. ಆ ಮಲದ ತಿಪ್ಪೆಯ ಪಾಲಾಗುವಿರಿ. 4ನಾನು ಲೇವಿಯರೊಂದಿಗೆ ಮಾಡಿಕೊಂಡ ಒಡಂಬಡಿಕೆಯು ನೆಲೆಗೊಳ್ಳಬೇಕೆಂದು ಈ ಅಪ್ಪಣೆಯನ್ನು ನಿಮಗೆ ಹೇಳಿ ಕಳುಹಿಸಿದ್ದೇನೆಂಬದು ನಿಮಗೆ ಗೊತ್ತಾಗುವದು; ಇದು ಸೇನಾಧೀಶ್ವರ ಯೆಹೋವನ ನುಡಿ. 5ನಾನು ಅವರೊಂದಿಗೆ ಮಾಡಿಕೊಂಡ ಒಡಂಬಡಿಕೆಯಲ್ಲಿ [ವಾಗ್ದಾನ ಮಾಡಿದ್ದು] ಜೀವ, ಸುಖ; ಅದರಂತೆ ಇವುಗಳನ್ನು ಅವರಿಗೆ ದಯಪಾಲಿಸಿದೆನು; [ಒಡಂಬಡಿಕೆಯಲ್ಲಿ ವಿಧಿಸಿದ್ದು] ಭಯಭಕ್ತಿ; ಅದರಂತೆ ಅವರು ನನ್ನಲ್ಲಿ ಭಯಭಕ್ತಿಯಿಟ್ಟು ನನ್ನ ನಾಮಕ್ಕೆ ಅಂಜಿದರು. 6ಅವರ ಬಾಯಲ್ಲಿ ಸತ್ಯಬೋಧನೆಯು ನೆಲೆಸಿತ್ತು, ಅವರ ತುಟಿಗಳಲ್ಲಿ ಅನ್ಯಾಯವೇನೂ ಕಾಣಲಿಲ್ಲ; ಅವರು ಶಾಂತಿಯಿಂದಲೂ ಸದ್ಧರ್ಮದಿಂದಲೂ ನನ್ನೊಂದಿಗೆ ಅನ್ಯೋನ್ಯವಾಗಿ ನಡೆದುಕೊಳ್ಳುತ್ತಾ ಬಹುಜನರನ್ನು ಪಾಪದ ಕಡೆಯಿಂದ ತಿರುಗಿಸಿದರು. 7ಜ್ಞಾನಾನುಸಾರವಾಗಿ ಮಾತಾಡುವದು ಯಾಜಕನ ತುಟಿಗಳ ಧರ್ಮವಷ್ಟೆ; ಅವನು ಸೇನಾಧೀಶ್ವರ ಯೆಹೋವನ ದೂತನಾಗಿರುವ ಕಾರಣ ಜನರು ಅವನ ಬಾಯಿಂದ ಧರ್ಮೋಪದೇಶವನ್ನು ಕೇಳಿಕೊಳ್ಳತಕ್ಕದ್ದು . 8ನೀವೋ ದಾರಿತಪ್ಪಿದ್ದೀರಿ; ನಿಮ್ಮ ಧರ್ಮೋಪದೇಶದಿಂದ ಬಹು ಜನರನ್ನು ಮುಗ್ಗರಿಸುವ ಹಾಗೆ ಮಾಡಿದ್ದೀರಿ; ಲೇವಿಯ ಒಡಂಬಡಿಕೆಯನ್ನು ಭಂಗಪಡಿಸಿದ್ದೀರಿ, ಇದು ಸೇನಾಧೀಶ್ವರ ಯೆಹೋವನ ನುಡಿ. 9ನೀವು ನನ್ನ ಮಾರ್ಗಗಳನ್ನು ಅನುಸರಿಸದೆ ನಿಮ್ಮ ಧರ್ಮಶಾಸ್ತ್ರೋಪದೇಶದಲ್ಲಿ ಮುಖದಾಕ್ಷಿಣ್ಯವನ್ನು ತೋರಿಸಿದ್ದರಿಂದ ನಾನಂತು ನಿಮ್ಮನ್ನು ಎಲ್ಲಾ ಜನರ ಮುಂದೆ ಮಾನಗೆಟ್ಟವರನ್ನಾಗಿಯೂ ಕೀಳಾದವರನ್ನಾಗಿಯೂ ಮಾಡುವೆನು.
ಪತ್ನೀಪರಿತ್ಯಾಗ ಖಂಡನೆ
10ನಮ್ಮೆಲ್ಲರಿಗೂ ಒಬ್ಬನೇ ತಂದೆಯಷ್ಟೆ; ಒಬ್ಬನೇ ದೇವರು ನಮ್ಮನ್ನು ಸೃಷ್ಟಿಸಿದನಲ್ಲಾ; ಹೀಗಿರಲು ನಾವು ಒಬ್ಬರಿಗೊಬ್ಬರು ದ್ರೋಹಮಾಡಿ ದೇವರು ನಮ್ಮ ಪಿತೃಗಳೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನು ಭಂಗಪಡಿಸುವದೇಕೆ? 11ಯೆಹೂದವು ದ್ರೋಹಮಾಡಿದೆ, ಇಸ್ರಾಯೇಲಿನಲ್ಲಿಯೂ ಯೆರೂಸಲೇವಿುನಲ್ಲಿಯೂ ಒಂದು ದುರಾಚಾರವು ನಡೆಯುತ್ತಿದೆ; ಯೆಹೂದವು ಅನ್ಯದೇವತೆಯ ಮಗಳನ್ನು ಮದುವೆಯಾಗಿ ಯೆಹೋವನ ಪ್ರಿಯ ದೇವಾಲಯವನ್ನು ಹೊಲೆಗೆಡಿಸಿದೆ. 12ಇಂಥ ಕೆಲಸವನ್ನು ನಡಿಸಿದ ಪ್ರತಿಯೊಬ್ಬನ ಕುಟುಂಬದಲ್ಲಿ ಎಬ್ಬಿಸುವವರಾಗಾಲಿ ಉತ್ತರ ಕೊಡುವವರಾಗಾಲಿ ಎಲ್ಲರನ್ನೂ ಯೆಹೋವನು ಯಾಕೋಬಿನ ಗುಡಾರಗಳೊಳಗಿಂದ ನಿರ್ಮೂಲಮಾಡುವನು; ಸೇನಾಧೀಶ್ವರ ಯೆಹೋವನಿಗೆ ನೈವೇದ್ಯ ತಂದರ್ಪಿಸುವವನನ್ನೂ ಕಡಿದುಬಿಡುವನು. 13ಇನ್ನೊಂದನ್ನು ನಡಿಸುತ್ತೀರಿ - ಯೆಹೋವನ ಯಜ್ಞವೇದಿಯನ್ನು ಕಣ್ಣೀರಿನಿಂದಲೂ ಅಳುವಿಕೆಯಿಂದಲೂ ನರಳಾಟದಿಂದಲೂ ತುಂಬಿಸಿ ಮುಚ್ಚುತ್ತೀರಿ; ಆದಕಾರಣ ಆತನು ನಿಮ್ಮ ನೈವೇದ್ಯವನ್ನು ಇನ್ನು ಲಕ್ಷಿಸನು, ನಿಮ್ಮ ಕೈಯಿಂದ ಅದನ್ನು ಪ್ರಸನ್ನನಾಗಿ ಸ್ವೀಕರಿಸನು. 14ಇದೇಕೆ ಅನ್ನುತ್ತೀರಾ? ನಿನಗೂ ನಿನ್ನ ಯೌವನದ ಹೆಂಡತಿಗೂ ಆದ ಒಡಂಬಡಿಕೆಗೆ ಯೆಹೋವನೇ ಸಾಕ್ಷಿಯಾಗಿದ್ದಾನಲ್ಲಾ. ನಿನ್ನ ಸಹಚಾರಿಣಿಯೂ ನಿನ್ನ ಒಡಂಬಡಿಕೆಯ ಪತ್ನಿಯೂ ಆದ ಆಕೆಗೆ ದ್ರೋಹಮಾಡಿದ್ದೀ. 15ಪರಮಾತ್ಮಾಂಶನಾದ#2.15 ಅಥವಾ: ಪ್ರಾಣವಾಯು ಬೇಕಾದಷ್ಟು ಉಳಿದಿದ್ದರೂ (ದೇವರು) ಒಂದೇ ಒಂದು ಜೋಡಿಯನ್ನು ಸೃಷ್ಟಿಸಿದನಲ್ಲಾ; ಏಕೆ ಒಂದೇ ಒಂದನ್ನು ಸೃಷ್ಟಿಸಿದನು? ಅತ್ಯುತ್ತಮ ವಂಶವನ್ನು ಹಾರೈಸಿಯೇ. ಮೂಲವು ಕೇವಲ ಅಸ್ಪಷ್ಟ. ಯಾವನೂ ಹೀಗೆ ಮಾಡಲಿಲ್ಲ; ಆ ಪ್ರಸಿದ್ಧನೊಬ್ಬನು ಏಕೆ ಇಂಥ ಕೃತ್ಯಮಾಡಿದನು? ದೇವರ ವರವಾದ ಸಂತಾನವನ್ನು ಹಾರೈಸಿಯೇ. ಹೀಗಿರಲು ನಿಮ್ಮ ಆತ್ಮವನ್ನು ಎಚ್ಚರಿಕೆಯಿಂದ ನೋಡಿಕೊಳ್ಳಿರಿ, ಯಾವನೂ ತನ್ನ ಯೌವನದ ಪತ್ನಿಗೆ ದ್ರೋಹಮಾಡದಿರಲಿ. 16ಇಸ್ರಾಯೇಲಿನ ದೇವರಾದ ಯೆಹೋವನು ಇಂತೆನ್ನುತ್ತಾನೆ - ನಾನು ಪತ್ನೀತ್ಯಾಗವನ್ನೂ ಹೆಂಡತಿಗೆ#2.16 ಮೂಲ: ತನ್ನ ವಸ್ತ್ರಕ್ಕೆ ಅನ್ಯಾಯಲೇಪನಮಾಡುವವನನ್ನೂ. ಅನ್ಯಾಯಮಾಡುವವನನ್ನೂ ಹಗೆಮಾಡುತ್ತೇನೆ; ಇದು ಸೇನಾಧೀಶ್ವರ ಯೆಹೋವನ ನುಡಿ; ಆದಕಾರಣ ನಿಮ್ಮ ಆತ್ಮವನ್ನು ಎಚ್ಚರಿಕೆಯಿಂದ ನೋಡಿಕೊಳ್ಳಿರಿ, ದ್ರೋಹಮಾಡಬೇಡಿರಿ.
ದೇವದೂಷಣಖಂಡನೆ; ಯೆಹೋವನ ಆಗಮನ
17ನೀವು ಯೆಹೋವನನ್ನು ನಿಮ್ಮ ಮಾತುಗಳಿಂದ ಬೇಸರಗೊಳಿಸಿದ್ದೀರಿ; ಯಾವ ವಿಷಯದಲ್ಲಿ ಆತನನ್ನು ಬೇಸರಗೊಳಿಸಿದ್ದೇವೆ ಅನ್ನುತ್ತೀರಾ? ಪ್ರತಿಯೊಬ್ಬ ದುರಾಚಾರಿಯು ಯೆಹೋವನ ದೃಷ್ಟಿಗೆ ಒಳ್ಳೆಯವನು, ಅವರೇ ಆತನಿಗೆ ಇಷ್ಟ, ನ್ಯಾಯತೀರಿಸುವ ದೇವರು ಎಲ್ಲಿಯೋ ಎಂದು ನೀವು ಅಂದುಕೊಳ್ಳುವದರಲ್ಲಿಯೇ.

Highlight

Share

Copy

None

Want to have your highlights saved across all your devices? Sign up or sign in

Video for ಮಲಾಕಿಯ 2