YouVersion Logo
Search Icon

ಹಗ್ಗಾಯ 2

2
ದೇವಾಲಯದ ಮುಂದಿನ ವೈಭವದ ವಾಗ್ದಾನ
1ಏಳನೆಯ ತಿಂಗಳಿನ ಇಪ್ಪತ್ತೊಂದನೆಯ ದಿನದಲ್ಲಿ ಯೆಹೋವನು ಪ್ರವಾದಿಯಾದ ಹಗ್ಗಾಯನ ಮೂಲಕ ಈ ವಾಕ್ಯವನ್ನು ದಯಪಾಲಿಸಿದನು - 2ಶೆಯಲ್ತೀಯೇಲನಿಗೆ ಹುಟ್ಟಿದ ಯೆಹೂದ ದೇಶಾಧಿಪತಿಯಾದ ಜೆರುಬ್ಬಾಬೆಲ್ ಯೆಹೋಚಾದಾಕನಿಗೆ ಹುಟ್ಟಿದ ಮಹಾಯಾಜಕನಾದ ಯೆಹೋಶುವ, ಜನಶೇಷ, ಇವರೆಲ್ಲರಿಗೆ ಹೀಗೆ ನುಡಿ - 3ಈ ಆಲಯದ ಪೂರ್ವವೈಭವವನ್ನು ನೋಡಿದವರು ನಿಮ್ಮಲ್ಲಿ ಎಷ್ಟು ಮಂದಿ ಉಳಿದಿದ್ದೀರಿ? ಇದರ ಈಗಿನ ಸ್ಥಿತಿಯು ನಿಮಗೆ ಹೇಗೆ ತೋರುತ್ತದೆ? ನಿಮ್ಮ ದೃಷ್ಟಿಗೆ ಏನೂ ಇಲ್ಲದಾಗಿ ಕಾಣಿಸುತ್ತದಲ್ಲವೆ. 4ಯೆಹೋವನು ಇಂತೆನ್ನುತ್ತಾನೆ -
ಜೆರುಬ್ಬಾಬೆಲನೇ, ಈಗ ಧೈರ್ಯವಾಗಿರು;
ಯೆಹೋಚಾದಾಕನಿಗೆ ಹುಟ್ಟಿದ ಮಹಾಯಾಜಕನಾದ ಯೆಹೋಶುವನೇ, ಧೈರ್ಯವಾಗಿರು;
ದೇಶೀಯರೇ, ನೀವೆಲ್ಲರೂ ಧೈರ್ಯಗೊಂಡು ಕೆಲಸ ನಡಿಸಿರಿ;
ಇದು ಯೆಹೋವನ ನುಡಿ;
ನಾನು ನಿಮ್ಮೊಂದಿಗೆ ಇದ್ದೇನೆಂದು
ಸೇನಾಧೀಶ್ವರ ಯೆಹೋವನು ನುಡಿಯುತ್ತಾನೆ.
5ನೀವು ಐಗುಪ್ತದಿಂದ ಪಾರಾಗಿ ಬಂದಾಗ
ನಾನು ನಿಮಗೆ ಪ್ರಮಾಣವಾಗಿ ಕೊಟ್ಟ ಮಾತನ್ನು [ನೆರವೇರಿಸುವೆನು];
ನನ್ನ ಆತ್ಮನು ನಿಮ್ಮ ಮಧ್ಯದಲ್ಲಿ ನೆಲೆಗೊಂಡಿರುವನು;
ಹೆದರಬೇಡಿರಿ,
6ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ -
ಸ್ವಲ್ಪ ಕಾಲದ ಮೇಲೆ ನಾನು ಇನ್ನೊಂದೇ ಸಾರಿ
ಆಕಾಶವನ್ನೂ ಭೂವಿುಯನ್ನೂ ಸಮುದ್ರವನ್ನೂ ಒಣನೆಲವನ್ನೂ ಅದುರಿಸಿ
7ಸಕಲಜನಾಂಗಗಳನ್ನು ನಡುಗಿಸುವೆನು;
ಆಗ ಸಮಸ್ತಜನಾಂಗಗಳ ಇಷ್ಟವಸ್ತುಗಳು ಬಂದು ಒದಗಲು
ಆ ಆಲಯವನ್ನು ವೈಭವದಿಂದ ತುಂಬಿಸುವೆನು;
ಇದು ಸೇನಾಧೀಶ್ವರ ಯೆಹೋವನ ನುಡಿ.
8ಬೆಳ್ಳಿಯೆಲ್ಲಾ ನನ್ನದು ಬಂಗಾರವೆಲ್ಲಾ ನನ್ನದು;
ಇದು ಸೇನಾಧೀಶ್ವರ ಯೆಹೋವನ ನುಡಿ.
9ಈ ಆಲಯದ ಮುಂದಿನ ವೈಭವವು
ಹಿಂದಿನ ವೈಭವಕ್ಕಿಂತ ವಿಶೇಷವಾಗಿರುವದು;
ಇದು ಸೇನಾಧೀಶ್ವರ ಯೆಹೋವನ ನುಡಿ;
ಈ ಸ್ಥಳದಲ್ಲಿ ಸಮಾಧಾನವನ್ನು ಅನುಗ್ರಹಿಸುವೆನು,
ಇದು ಸೇನಾಧೀಶ್ವರ ಯೆಹೋವನ ನುಡಿ.
ಜನರ ದೋಷವೇ ದುರ್ಭಿಕ್ಷಕ್ಕೆ ಕಾರಣ
10ದಾರ್ಯಾವೆಷನ ಆಳಿಕೆಯ ಎರಡನೆಯ ವರುಷದ ಒಂಭತ್ತನೆಯ ತಿಂಗಳಿನ ಇಪ್ಪತ್ತನಾಲ್ಕನೆಯ ದಿನದಲ್ಲಿ ಯೆಹೋವನು ಪ್ರವಾದಿಯಾದ ಹಗ್ಗಾಯನ ಮೂಲಕ ಈ ವಾಕ್ಯವನ್ನು ದಯಪಾಲಿಸಿದನು - 11ಸೇನಾಧೀಶ್ವರ ಯೆಹೋವನು ಇಂತೆನ್ನುತಾನೆ - ನೀನು ಯಾಜಕರ ಹತ್ತಿರ ಹೋಗಿ - 12ಒಬ್ಬನು ತನ್ನ ವಸ್ತ್ರದ ಸೆರಗಿನಲ್ಲಿ ಮೀಸಲಿನ ಮಾಂಸವನ್ನು ಇಟ್ಟುಕೊಂಡು ಬರುತ್ತಿರುವಾಗ ಆ ಸೆರಗು ರೊಟ್ಟಿಯನ್ನು ಇಲ್ಲವೆ ಗುಗ್ಗರಿಯನ್ನು ಅಥವಾ ದ್ರಾಕ್ಷಾರಸವನ್ನು ಇಲ್ಲವೆ ಎಣ್ಣೆಯನ್ನು ಅಥವಾ ಯಾವ ಆಹಾರಪದಾರ್ಥವನ್ನಾಗಲಿ ಸೋಕಿದರೆ ಅವು ಪರಿಶುದ್ಧವಾಗುವವೋ ಎಂದು ಧರ್ಮವಿಧಿಯನ್ನು ವಿಚಾರಿಸು. [ಪ್ರವಾದಿಯು ಹಾಗೆ ವಿಚಾರಿಸಲು] ಯಾಜಕರು ಇಲ್ಲವೆಂದು ಉತ್ತರ ಕೊಟ್ಟರು. 13ಆಮೇಲೆ ಹಗ್ಗಾಯನು - ಹೆಣವನ್ನು ಮುಟ್ಟಿ ಅಶುದ್ಧನಾದವನು ಇವುಗಳಲ್ಲಿ ಯಾವದನ್ನಾದರೂ ಸೋಕಿದರೆ ಅದು ಅಶುದ್ಧವಾಗುವದೋ ಎಂದು ಕೇಳಿದ್ದಕ್ಕೆ ಯಾಜಕರು - ಅಶುದ್ಧವೇ ಆಗುವದು ಎಂದು ಉತ್ತರಕೊಟ್ಟರು. 14ಆಗ ಹಗ್ಗಾಯನು ಆ ಪ್ರಸ್ತಾಪವೆತ್ತಿ ಹೀಗಂದನು - ಯೆಹೋವನು ಇಂತೆನ್ನುತ್ತಾನೆ - ಅದರಂತೆ ಈ ಪ್ರಜೆಯು, ಅದರಂತೆ ಈ ಜನಾಂಗವು, ಅದರಂತೆ ಇವರು ಕೈ ಹಾಕುವ ಎಲ್ಲಾ ಕೆಲಸವು, ಅಲ್ಲಿ ತಂದಿಡುವ ನ್ಯೆವೇದ್ಯವು ನನಗೆ ಅಶುದ್ಧವೇ ಸರಿ. 15ಯೆಹೋವನ ಆಲಯನಿವೇಶನದಲ್ಲಿ ಕಲ್ಲಿನ ಮೇಲೆ ಕಲ್ಲಿಡುವ ಈ ಮೊದಲ ದಿನದ ಹಿಂದಿನ ಕಾಲವನ್ನು ನೆನಪಿಗೆ ತಂದುಕೊಳ್ಳಿರಿ; 16ಆ ಕಾಲದಲ್ಲೆಲ್ಲಾ ಒಬ್ಬನು ಇಪ್ಪತ್ತು ಸೇರಿನ ಮೆದೆಗೆ ಬಂದಾಗ ಹತ್ತು ಸೇರು ಧಾನ್ಯ ಮಾತ್ರ ಸಿಕ್ಕುತ್ತಿತ್ತಲ್ಲವೇ; ಐವತ್ತು ಸೇರು ದ್ರಾಕ್ಷಾರಸವನ್ನು ಮೊಗೆಯಬೇಕೆಂದು ತೊಟ್ಟಿಗೆ ಬಂದಾಗ ಇಪ್ಪತ್ತು ಮಾತ್ರ ದೊರೆಯುತ್ತಿತ್ತಷ್ಟೆ. 17ನಾನು ನಿಮ್ಮ ಕೈದುಡಿತದ ಫಲವನ್ನೆಲ್ಲಾ ಆನೆಕಲ್ಲು, ಕಾಡಿಗೆ, ಬಿಸಿಗಾಳಿ, ಇವುಗಳಿಂದ ಹಾಳು ಮಾಡಿ ನಿಮ್ಮನ್ನು ಬಾಧಿಸಿದರೂ ನೀವು ನನ್ನ ಕಡೆಗೆ ತಿರುಗಿಕೊಳ್ಳಲಿಲ್ಲ; ಇದು ಯೆಹೋವನ ನುಡಿ. 18ಜ್ಞಾಪಕಮಾಡಿಕೊಳ್ಳಿರಿ; ಯೆಹೋವನ ಆಲಯಕ್ಕೆ ಅಸ್ತಿವಾರಹಾಕಿದ ಈ ದಿವಸದ ಹಿಂದಿನ ಕಾಲವನ್ನು, ಅಂದರೆ ಒಂಭತ್ತನೆಯ ತಿಂಗಳಿನ ಇಪ್ಪತ್ತನಾಲ್ಕನೆಯ ಈ ದಿನದ ಹಿಂದಿನ ಕಾಲವನ್ನು ನೆನಪಿಗೆ ತಂದುಕೊಳ್ಳಿರಿ. ಕಣಜದಲ್ಲಿ ಕಾಳು ಇನ್ನು ಇದೆಯೋ? 19ದ್ರಾಕ್ಷೆ, ಅಂಜೂರ, ದಾಳಿಂಬರ, ಒಲೀವ, ಈ ಗಿಡಗಳು ಫಲಿಸಲಿಲ್ಲವಲ್ಲಾ. ಇದೇ ದಿವಸ ಮೊದಲುಗೊಂಡು ನಿಮ್ಮನ್ನು ಆಶೀರ್ವದಿಸುವೆನು.
ದೇಶಾಧಿಪತಿಗೆ ವಾಗ್ದಾನ
20[ಒಂಭತ್ತನೆಯ] ತಿಂಗಳಿನ ಇಪ್ಪತ್ತನಾಲ್ಕನೆಯ ದಿನದಲ್ಲಿ ಯೆಹೋವನು
ಹಗ್ಗಾಯನಿಗೆ ಈ ಎರಡನೆಯ ವಾಕ್ಯವನ್ನು ದಯಪಾಲಿಸಿದನು -
21ಯೆಹೂದ ದೇಶಾಧಿಪತಿಯಾದ ಜೆರುಬ್ಬಾಬೆಲನಿಗೆ ಹೀಗೆ ನುಡಿ -
ನಾನು ಭೂಮ್ಯಾಕಾಶಗಳನ್ನು ಅದುರಿಸಿ
22ರಾಜ್ಯಗಳ ಸಿಂಹಾಸನವನ್ನು ಕೆಡವಿ
ಜನಾಂಗಗಳ ಸಂಸ್ಥಾನಬಲವನ್ನು ಧ್ವಂಸ ಮಾಡಿ
ರಥಗಳನ್ನೂ ರಥಾರೂಢರನ್ನೂ ದೊಬ್ಬಿಬಿಡುವೆನು;
ಕುದುರೆಗಳೂ ರಾಹುತರೂ ಬಿದ್ದು ಹೋಗುವರು,
ಪ್ರತಿಯೊಬ್ಬನು ತನ್ನ ಕಡೆಯವನ ಕತ್ತಿಯಿಂದ ಹತನಾಗುವನು.
23ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ -
ಶೆಯಲ್ತೀಯೇಲನ ಮಗನೂ ನನ್ನ ಸೇವಕನೂ ಆದ ಜೆರುಬ್ಬಾಬೆಲನೇ, ಆ ದಿನದಲ್ಲಿ ನಾನು ನಿನ್ನನ್ನು ತೆಗೆದುಕೊಂಡು
ಮುದ್ರೆಯುಂಗುರವಾಗಿ ಮಾಡಿಕೊಳ್ಳುವೆನು,
ಇದಕ್ಕೆ ನಿನ್ನನ್ನು ಆರಿಸಿಕೊಂಡಿದ್ದೇನೆ;
ಇದು ಸೇನಾಧೀಶ್ವರ ಯೆಹೋವನ ನುಡಿ.

Highlight

Share

Copy

None

Want to have your highlights saved across all your devices? Sign up or sign in