ಹಗ್ಗಾಯ 1
1
1ಅರಸನಾದ ದಾರ್ಯಾವೆಷನ ಆಳಿಕೆಯ ಎರಡನೆಯ ವರುಷದ ಆರನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಯೆಹೋವನು ಈ ವಾಕ್ಯವನ್ನು ಶೆಯಲ್ತೀಯೇಲನಿಗೆ ಹುಟ್ಟಿದ ಯೆಹೂದ ದೇಶಾಧಿಪತಿಯಾದ ಜೆರುಬ್ಬಾಬೆಲನಿಗೂ ಯೆಹೋಚಾದಾಕನಿಗೆ ಜನಿಸಿದ ಮಹಾಯಾಜಕನಾದ ಯೆಹೋಶುವನಿಗೂ ಪ್ರವಾದಿಯಾದ ಹಗ್ಗಾಯನ ಮೂಲಕ ಹೇಳಿಕಳುಹಿಸಿದನು -
ದೇವಾಲಯವನ್ನು ಪುನಃ ಕಟ್ಟಲು ಎಚ್ಚರಿಕೆ
2ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ -
ಯೆಹೋವನ ಆಲಯವನ್ನು ಕಟ್ಟುವದಕ್ಕೆ
ಸಮಯವು ಇನ್ನೂ ಬಂದಿಲ್ಲ ಎಂದು
ಈ ಜನರು ಅಂದುಕೊಳ್ಳುತ್ತಾರಲ್ಲಾ.
3ಯೆಹೋವನು ಪ್ರವಾದಿಯಾದ ಹಗ್ಗಾಯನ ಮೂಲಕ ಈ ವಾಕ್ಯವನ್ನು ಹೇಳಿಸಿದನು -
4ಈ ಆಲಯವು ಹಾಳುಬಿದ್ದಿದೆಯಲ್ಲಾ;
ನೀವು ಒಳಗೋಡೆಗೆಲ್ಲಾ ಹಲಿಗೆಹೊದಿಸಿಕೊಂಡ
ಸ್ವಂತ ಮನೆಗಳಲ್ಲಿ ವಾಸಿಸುವದಕ್ಕೆ ಈ ಸಮಯವು ತಕ್ಕದ್ದೋ?
5ಈ ಸಮಯದಲ್ಲಿ ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ -
ನಿಮ್ಮ ಗತಿ ಏನಾಗಿದೆಯೆಂದು ಮನಸ್ಸಿಗೆ ತಂದುಕೊಳ್ಳಿರಿ.
6ನೀವು ಬಿತ್ತಿದ ಬೀಜವು ಬಹಳ, ತಂದ ಫಲವು ಸ್ವಲ್ಪ;
ತಿನ್ನುತ್ತೀರಿ, ತೃಪ್ತಿಯಾಗದು,
ಕುಡಿಯುತ್ತೀರಿ, ಆನಂದವಾಗದು;
ಹೊದಿಯುತ್ತೀರಿ, ಬೆಚ್ಚಗಾಗದು;
ಸಂಬಳಗಾರನು ಸಂಬಳಹಾಕುವ ಚೀಲವು ತೂತಿನದು.
7ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ -
ನಿಮ್ಮ ಗತಿ ಏನಾಗಿದೆಯೆಂದು ಮನಸ್ಸಿಗೆ ತಂದುಕೊಳ್ಳಿರಿ.
8ಮಲೆನಾಡಿಗೆ ಹೋಗಿ ಮರವನ್ನು ತಂದು
ನನ್ನ ಆಲಯವನ್ನು ಕಟ್ಟಿರಿ;
ನಾನು ಅದಕ್ಕೆ ಮೆಚ್ಚಿ ನನ್ನ ಪ್ರಭಾವವನ್ನು ಅಲ್ಲಿ ಪ್ರಕಾಶಗೊಳಿಸುವೆನು;
ಇದು ಯೆಹೋವನ ನುಡಿ.
9ನೀವು ಬಹು ಬೆಳೆಯನ್ನು ನಿರೀಕ್ಷಿಸಿದಿರಿ,
ಆಹಾ, ಸ್ವಲ್ಪ ಮಾತ್ರ ಸಿಕ್ಕಿತು; ನೀವು ಮನೆಗೆ ತೆಗೆದುಕೊಂಡು ಬಂದಾಗ
ನಾನು ಅದರ ಮೇಲೆ ಉಸುರುಬಿಟ್ಟೆನು.
ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ -
ಇದಕ್ಕೆಲ್ಲಾ ಕಾರಣವೇನು?
ನನ್ನ ಆಲಯವು ಹಾಳುಬಿದ್ದಿದೆ,
ನಿಮ್ಮಲ್ಲಿ ಪ್ರತಿಯೊಬ್ಬನು ತನ್ನತನ್ನ ಮನೆಯ ಕೆಲಸಕ್ಕೆ
ತವಕಪಡುತ್ತಿದ್ದಾನೆ, ಇದೇ ಕಾರಣ.
10ನಿಮ್ಮ ನಿವಿುತ್ತವೇ ಆಕಾಶವು ಇಬ್ಬನಿಯನ್ನು ತಡೆದುಬಿಟ್ಟಿದೆ,
ಭೂವಿುಯು ತನ್ನ ಫಲವನ್ನು ನಿಲ್ಲಿಸಿಬಿಟ್ಟಿದೆ.
11ದೇಶ, ಬೆಟ್ಟ, ಧಾನ್ಯ, ದ್ರಾಕ್ಷಾರಸ, ಎಣ್ಣೆ,
ಭೂವಿುಯ ಉತ್ಪತ್ತಿ, ಮನುಷ್ಯ, ಪಶು, ನಾನಾ ಕೈದುಡಿತ,
ಇವುಗಳಿಗೆಲ್ಲಾ ಹಾಳುದೆಶೆ ತಂದಿದ್ದೇನೆ.
ಎಚ್ಚರಿಕೆಗೆ ಜನರು ಗಮನಿಸಿದ್ದು
12ಆಗ ಶೆಯಲ್ತೀಯೇಲನ ಮಗನಾದ ಜೆರುಬ್ಬಾಬೆಲ್, ಯೆಹೋಚಾದಾಕನಿಗೆ ಹುಟ್ಟಿದ ಮಹಾಯಾಜಕನಾದ ಯೆಹೋಶುವ, ಸಮಸ್ತಜನಶೇಷ, ಇವರೆಲ್ಲಾ ಯೆಹೋವನೆಂಬ ತಮ್ಮ ದೇವರ ನುಡಿಗೂ ಯೆಹೋವನೆಂಬ ತಮ್ಮ ದೇವರ ಅಪ್ಪಣೆಯ ಪ್ರಕಾರ ಪ್ರವಾದಿಯಾದ ಹಗ್ಗಾಯನು ಹೇಳಿದ ಮಾತುಗಳಿಗೂ ಕಿವಿಗೊಟ್ಟು ಯೆಹೋವನಲ್ಲಿ ಭಯಭಕ್ತಿಯುಳ್ಳವರಾದರು. 13ಯೆಹೋವನ ದೂತನಾದ ಹಗ್ಗಾಯನು ಇದನ್ನು ನೋಡಿ ಜನರಿಗೆ - ನಿಮ್ಮೊಂದಿಗೆ ಇದ್ದೇನೆ ಎಂದು ಯೆಹೋವನು ನುಡಿಯುತ್ತಾನೆ ಎಂಬದನ್ನು ಯೆಹೋವನ ದೂತನಾಗಿಯೇ ಹೇಳಿದನು. 14ಕೂಡಲೆ ಶೆಯಲ್ತೀಯೇಲನ ಮಗನೂ ಯೆಹೂದ ದೇಶಾಧಿಪತಿಯೂ ಆದ ಜೆರುಬ್ಬಾಬೆಲ್, ಯೆಹೋಚಾದಾಕನಿಗೆ ಹುಟ್ಟಿದ ಮಹಾಯಾಜಕನಾದ ಯೆಹೋಶುವ, ಸಮಸ್ತಜನಶೇಷ, ಇವೆಲ್ಲರ ಮನಸ್ಸುಗಳನ್ನು ಯೆಹೋವನು ಪ್ರೇರಿಸಲು 15ಅವರು ಅರಸನಾದ ದಾರ್ಯಾವೆಷನ ಆಳಿಕೆಯ ಎರಡನೆಯ ವರುಷದ ಆರನೆಯ ತಿಂಗಳಿನ ಇಪ್ಪತ್ತನಾಲ್ಕನೆಯ ದಿನದಲ್ಲಿ ಬಂದು ತಮ್ಮ ದೇವರಾದ ಸೇನಾಧೀಶ್ವರ ಯೆಹೋವನ ಆಲಯದ ಕೆಲಸಕ್ಕೆ ಕೈ ಹಾಕಿದರು.
Currently Selected:
ಹಗ್ಗಾಯ 1: KANJV-BSI
Highlight
Share
Copy
Want to have your highlights saved across all your devices? Sign up or sign in
Kannada J.V. Bible © The Bible Society of India, 2016.
Used by permission. All rights reserved worldwide.