ಆದಿಕಾಂಡ 25
25
ಅಬ್ರಹಾಮನ ಎರಡನೆಯ ಹೆಂಡತಿಯಿಂದಾದ ಸಂತಾನವನ್ನು ಕುರಿತದ್ದು
1ಅಬ್ರಹಾಮನು ಕೆಟೂರಳೆಂಬ ಇನ್ನೊಬ್ಬ ಹೆಂಡತಿಯನ್ನು ಮದುವೆ ಮಾಡಿಕೊಂಡನು. 2ಆಕೆ ಅವನಿಗೆ ಜಿಮ್ರಾನ್, ಯೊಕ್ಷಾನ್, ಮೆದಾನ್, ವಿುದ್ಯಾನ್, ಇಷ್ಬಾಕ್, ಶೂಹ ಇವರನ್ನು ಹೆತ್ತಳು. 3ಯೊಕ್ಷಾನನು ಶೆಬಾ, ದೆದಾನ್ ಎಂಬಿವರನ್ನು ಪಡೆದನು. ಅಶ್ಯೂರ್ಯರೂ ಲೆಟೂಶ್ಯರೂ ಲೆಯುಮ್ಯರೂ ದೆದಾನನಿಂದ ಹುಟ್ಟಿದವರು. 4ಗೇಫಾ, ಗೇಫೆರ್, ಹನೋಕ್, ಅಬೀದಾ, ಎಲ್ದಾಗ ಎಂಬಿವರು ವಿುದ್ಯಾನನಿಂದ ಹುಟ್ಟಿದರು. ಇವರೆಲ್ಲರು ಕೆಟೂರಳ ಸಂತತಿಯವರು.
5ಅಬ್ರಹಾಮನು ತನಗಿದ್ದ ಆಸ್ತಿಯನ್ನೆಲ್ಲಾ ಇಸಾಕನಿಗೆ ಕೊಟ್ಟನು. 6ತನ್ನ ಉಪಪತ್ನಿಯರ ಮಕ್ಕಳಿಗೆ ಕೆಲವು ಸೊತ್ತುಗಳನ್ನು ದಾನಮಾಡಿ ತಾನು ಇನ್ನೂ ಜೀವದಿಂದಿರುವಾಗ ಅವರನ್ನು ತನ್ನ ಮಗನಾದ ಇಸಾಕನ ಬಳಿಯಿಂದ ಪೂರ್ವದಿಕ್ಕಿನಲ್ಲಿರುವ ಕೆದೆಮ್#25.6 ಕೆದೆಮ್ ಅಂದರೆ, ಪೂರ್ವ. ದೇಶಕ್ಕೆ ಕಳುಹಿಸಿದನು.
ಅಬ್ರಹಾಮನು ಮೃತಪಟ್ಟದ್ದು
7ಅಬ್ರಹಾಮನು ನೂರೆಪ್ಪತ್ತೈದು ವರುಷ ಬದುಕಿದನು. 8ಅವನು ಪೂರ್ಣಾಯುಷ್ಯದಿಂದ ದಿನತುಂಬಿದ ಮುದುಕನಾಗಿ ಪ್ರಾಣಬಿಟ್ಟು ತನ್ನ ಪಿತೃಗಳ ಬಳಿಗೆ ಸೇರಿದನು. 9ಅವನ ಮಕ್ಕಳಾದ ಇಸಾಕ್ ಇಷ್ಮಾಯೇಲರು ಹಿತ್ತಿಯನಾದ ಚೋಹರನ ಮಗ ಎಫ್ರೋನನ ಭೂವಿುಯಲ್ಲಿರುವ ಮಕ್ಪೇಲದ ಗವಿಯಲ್ಲಿ ಅವನಿಗೆ ಸಮಾಧಿಮಾಡಿದರು. ಅದು ಮಮ್ರೆಗೆ ಪೂರ್ವದಿಕ್ಕಿನಲ್ಲಿರುವದು; 10ಅಬ್ರಹಾಮನು ಅದನ್ನು ಹಿತ್ತಿಯರಿಂದ ಕೊಂಡುಕೊಂಡಿದ್ದನು; ಅದರಲ್ಲಿ ಅಬ್ರಹಾಮನಿಗೂ ಅವನ ಹೆಂಡತಿಯಾದ ಸಾರಳಿಗೂ ಸಮಾಧಿ ಆಯಿತು.
11ಅಬ್ರಹಾಮನು ತೀರಿಹೋದನಂತರ ದೇವರ ಅನುಗ್ರಹವು ಅವನ ಮಗನಾದ ಇಸಾಕನಿಗೂ ಉಂಟಾಯಿತು. ಇಸಾಕನು ಲಹೈರೋಯಿ ಎಂಬ ಬಾವಿಯ ಹತ್ತಿರ ವಾಸವಾಗಿದ್ದನು.
ಇಷ್ಮಾಯೇಲನ ವಂಶಸ್ಥರನ್ನು ಕುರಿತದ್ದು
12ಅಬ್ರಹಾಮನಿಗೆ ಸಾರಳ ದಾಸಿಯಾದ ಐಗುಪ್ತ್ಯಳಾದ ಹಾಗರಳಲ್ಲಿ ಹುಟ್ಟಿದ ಇಷ್ಮಾಯೇಲನ ವಂಶದ ಚರಿತ್ರೆ. 13ಇಷ್ಮಾಯೇಲನ ಮಕ್ಕಳಿಗೂ ಇವರಿಂದ ಹುಟ್ಟಿದ ಕುಲಗಳಿಗೂ ಇರುವ ಹೆಸರುಗಳು ಯಾವವಂದರೆ - ಮೊದಲು ಹುಟ್ಟಿದವನು ನೆಬಾಯೋತ್; ಆಮೇಲೆ ಹುಟ್ಟಿದವರು ಕೇದಾರ್, ಅದ್ಬಯೇಲ್, 14,15ವಿುಬ್ಸಾಮ್, ವಿುಷ್ಮಾ, ದೂಮಾ, ಮಸ್ಸಾ, ಹದದ್, ತೇಮಾ, ಯಟೂರ್, ನಾಫೀಷ್, ಕೇದ್ಮಾ ಎಂಬವರೇ. 16ಈ ಹೆಸರುಗಳು ಊರುಗಳಲ್ಲಿಯೂ ಪಾಳೆಯಗಳಲ್ಲಿಯೂ ವಾಸಿಸುವ ಇಷ್ಮಾಯೇಲನ ಸಂತಾನದವರಿಗೆ ಇರುವವು. ಇವರ ಕುಲಗಳ ಸಂಖ್ಯೆಗೆ ಸರಿಯಾಗಿ ಹನ್ನೆರಡು ಮಂದಿ ಅರಸರಿರುತ್ತಾರೆ.
17ಇಷ್ಮಾಯೇಲನು ನೂರಮೂವತ್ತೇಳು ವರುಷ ಬದುಕಿದನು; ಆ ವಯಸ್ಸಿನಲ್ಲಿ ಅವನು ಪ್ರಾಣ ಬಿಟ್ಟು ತನ್ನ ಪಿತೃಗಳ ಬಳಿಗೆ ಸೇರಿದನು.
18ಇಷ್ಮಾಯೇಲ್ಯರು ಹವೀಲದಿಂದ ಐಗುಪ್ತದೇಶದ ಮೂಡಲಲ್ಲಿರುವ ಅಶ್ಶೂರಿನ ದಾರಿಯಲ್ಲಿರುವ ಶೂರಿನ ತನಕ ವಾಸಮಾಡಿದರು. ಹೀಗೆ ಅವರಿಗೆ ತಮ್ಮ ಸಂಬಂಧಿಕರ ಎದುರಿನಲ್ಲಿಯೇ ವಾಸಸ್ಥಳ ಸಿಕ್ಕಿತು.
ಇಸಾಕ, ಯಾಕೋಬ, ಏಸಾವ ಇವರ ಚರಿತ್ರೆ
(25.19—37.1)
ಇಸಾಕನಿಗೆ ಅವಳಿಮಕ್ಕಳು ಹುಟ್ಟಿದ್ದು
19ಅಬ್ರಹಾಮನ ಮಗನಾದ ಇಸಾಕನ ಚರಿತ್ರೆ. ಅಬ್ರಹಾಮನು ಇಸಾಕನನ್ನು ಪಡೆದನು. 20ಇಸಾಕನು ನಾಲ್ವತ್ತು ವರುಷದವನಾದಾಗ ಅರಾಮ್ಯನಾದ ಬೆತೂವೇಲನ ಮಗಳಾಗಿಯೂ ಅರಾಮ್ಯನಾದ ಲಾಬಾನನ ತಂಗಿಯಾಗಿಯೂ ಇದ್ದ ರೆಬೆಕ್ಕಳನ್ನು ಪದ್ದನ್ ಅರಾವಿುನಿಂದ ತರಿಸಿ ಹೆಂಡತಿಯಾಗಿ ಮಾಡಿಕೊಂಡನು. 21ಆಕೆ ಬಂಜೆಯಾಗಿರಲಾಗಿ ಅವನು ಆಕೆಗೋಸ್ಕರ ಯೆಹೋವನನ್ನು ಬೇಡಿಕೊಂಡನು. ಯೆಹೋವನು ಅವನ ವಿಜ್ಞಾಪನೆಯನ್ನು ಲಾಲಿಸಿದ್ದರಿಂದ ರೆಬೆಕ್ಕಳು ಬಸುರಾದಳು. 22ಆಕೆಯ ಗರ್ಭದಲ್ಲಿ ಶಿಶುಗಳು ಒಂದನ್ನೊಂದು ನೂಕಿಕೊಂಡಾಗ ಆಕೆಯು - ಹೀಗಾದರೆ ನಾನು ಯಾಕೆ ಬದುಕಬೇಕು ಎಂದು ಹೇಳಿ ಇದರ ವಿಷಯದಲ್ಲಿ ಯೆಹೋವನ ಸನ್ನಿಧಿಯಲ್ಲಿ ವಿಚಾರಿಸುವದಕ್ಕೆ ಹೋದಳು.
23ಯೆಹೋವನು ಆಕೆಗೆ -
ನಿನ್ನ ಗರ್ಭದಲ್ಲಿ ಎರಡು ಜನಾಂಗಗಳು ಅವೆ; ಆ ಎರಡು ಜನಾಂಗಗಳು ಜನ್ಮಾರಭ್ಯ ವಿರೋಧದಿಂದ ಭೇದವಾಗುವವು; ಅವುಗಳಲ್ಲಿ ಒಂದು ಮತ್ತೊಂದಕ್ಕಿಂತ ಬಲಿಷ್ಠವಾಗುವದು; ಹಿರಿಯದು ಕಿರಿಯದಕ್ಕೆ ಸೇವೆ ಮಾಡುವದು
ಎಂದು ಹೇಳಿದನು.
24ಆಕೆ ದಿನತುಂಬಿದಾಗ ಅವಳಿಮಕ್ಕಳನ್ನು ಹೆತ್ತಳು. 25ಮೊದಲು ಹುಟ್ಟಿದ್ದು ಕೆಂಪಾಗಿಯೂ ಮೈಮೇಲೆಲ್ಲಾ ಕೂದಲಿನ ವಸ್ತ್ರದಂತೆ ರೋಮವುಳ್ಳದ್ದಾಗಿಯೂ ಇತ್ತು; ಅದಕ್ಕೆ ಏಸಾವ#25.25 ಏಸಾವ ಅಂದರೆ, ರೋಮವುಳ್ಳದ್ದು; ಆದಿ. 27.11,16,23. ಎಂದು ಹೆಸರಿಟ್ಟರು. 26ಎರಡನೆಯ ಶಿಶುವು ಏಸಾವನ ಹಿಮ್ಮಡಿಯನ್ನು ಕೈಯಿಂದ ಹಿಡುಕೊಂಡು ಹುಟ್ಟಿದ್ದರಿಂದ ಅದಕ್ಕೆ ಯಾಕೋಬ#25.26 ಯಾಕೋಬ ಅಂದರೆ, ಹಿಮ್ಮಡಿಹಿಡಿದವ; ಹೋಶೇ. 12.3. ಎಂದು ಹೆಸರಿಟ್ಟರು. ಇವರು ಹುಟ್ಟಿದಾಗ ಇಸಾಕನು ಅರುವತ್ತು ವರುಷದವನಾಗಿದ್ದನು.
ಏಸಾವನು ತನ್ನ ಚೊಚ್ಚಲತನದ ಹಕ್ಕನ್ನು ಯಾಕೋಬನಿಗೆ ಮಾರಿಬಿಟ್ಟದ್ದು
27ಆ ಹುಡುಗರಿಬ್ಬರೂ ಬೆಳೆದಾಗ ಅವರಲ್ಲಿ ಏಸಾವನೆಂಬವನು ಬೇಟೆಯಾಡುವದರಲ್ಲಿ ಜಾಣನಾದನು; ಅವನು ಅರಣ್ಯವಾಸಿ. ಯಾಕೋಬನು ಸಾಧುಮನುಷ್ಯನಾಗಿ ಗುಡಾರಗಳಲ್ಲೇ ವಾಸಿಸಿದನು. 28ಬೇಟೆಯ ಮಾಂಸವು ಇಸಾಕನಿಗೆ ಇಷ್ಟವಾದದರಿಂದ ಅವನು ಏಸಾವನನ್ನು ಪ್ರೀತಿಸಿದನು. ರೆಬೆಕ್ಕಳು ಯಾಕೋಬನನ್ನು ಪ್ರೀತಿಸಿದಳು.
29ಒಂದು ದಿನ ಯಾಕೋಬನು ಅಡಿಗೆ ಮಾಡುತ್ತಿರುವಾಗ ಏಸಾವನು ಕಾಡಿನಿಂದ ದಣಿದು ಬಂದು 30ಅವನಿಗೆ - ನಾನು ಬಹು ದಣಿದು ಬಂದಿದ್ದೇನೆ; ಆ ಕೆಂಪಾದ ರುಚಿ ಪದಾರ್ಥವನ್ನು ಈಗಲೇ ತಿನ್ನುವದಕ್ಕೆ ಕೊಡಪ್ಪಾ ಎಂದು ಹೇಳಿದನು. (ಈ ಸಂಗತಿಯಿಂದ ಏಸಾವನಿಗೆ ಎದೋಮ್#25.30 ಎದೋಮ್ ಅಂದರೆ, ಕೆಂಪು. ಎಂದು ಹೆಸರಾಯಿತು.) 31ಯಾಕೋಬನು ಅವನಿಗೆ - ನೀನು ಮೊದಲು ನಿನ್ನ ಚೊಚ್ಚಲತನದ ಹಕ್ಕನ್ನು ನನಗೆ ಮಾರಿಬಿಡು ಅನ್ನಲು ಏಸಾವನು - 32ಆಗಲಿ, ನನ್ನಂಥ ಸಾಯುವವನಿಗೆ ಚೊಚ್ಚಲತನದಿಂದ ಪ್ರಯೋಜನವೇನು ಅಂದನು. 33ಯಾಕೋಬನು - ಮೊದಲು ಪ್ರಮಾಣಮಾಡು ಅಂದಾಗ ಏಸಾವನು ಪ್ರಮಾಣಮಾಡಿ ಅವನಿಗೆ ತನ್ನ ಚೊಚ್ಚಲತನದ ಹಕ್ಕನ್ನು ಕೊಟ್ಟುಬಿಟ್ಟನು. 34ಆಗ ಯಾಕೋಬನು ಏಸಾವನಿಗೆ ರೊಟ್ಟಿಯನ್ನೂ ಅಲಸಂದಿ ಗುಗ್ಗರಿಯನ್ನೂ ಕೊಟ್ಟನು. ಏಸಾವನು ತಿಂದು ಕುಡಿದು ಎದ್ದುಹೋದನು. ಹೀಗೆ ಅವನು ತನ್ನ ಚೊಚ್ಚಲತನದ ಹಕ್ಕನ್ನು ತಾತ್ಸಾರ ಮಾಡಿದನು.
Currently Selected:
ಆದಿಕಾಂಡ 25: KANJV-BSI
Highlight
Share
Copy
Want to have your highlights saved across all your devices? Sign up or sign in
Kannada J.V. Bible © The Bible Society of India, 2016.
Used by permission. All rights reserved worldwide.