ಆದಿಕಾಂಡ 24
24
ಅಬ್ರಹಾಮನು ತನ್ನ ಮಗನಾದ ಇಸಾಕನಿಗೆ ಸ್ವದೇಶದಿಂದ ಹೆಣ್ಣು ತರಿಸಿದ್ದು
1ಅಬ್ರಹಾಮನು ಬಹುದಿನದ ವೃದ್ಧನಾದನು. ಯೆಹೋವನು ಅವನನ್ನು ಸಕಲ ವಿಷಯಗಳಲ್ಲಿ ಅಭಿವೃದ್ಧಿಪಡಿಸಿದ್ದನು. 2ಹೀಗಿರಲು ಅವನು ತನಗಿದ್ದ ಆಸ್ತಿಯ ಮೇಲೆ ಆಡಳಿತ ಮಾಡುತ್ತಿದ್ದ ಹಿರೀ ಸೇವಕನಿಗೆ - 3ನಾನು ವಾಸವಾಗಿರುವ ಕಾನಾನ್ಯರಲ್ಲಿ ನೀನು ನನ್ನ ಮಗನಿಗೋಸ್ಕರ ಹೆಣ್ಣನ್ನು ತೆಗೆದುಕೊಳ್ಳದೆ ನನ್ನ ಸ್ವದೇಶಕ್ಕೂ 4ನನ್ನ ಬಂಧುಗಳ ಬಳಿಗೂ ಹೋಗಿ ಅವರಲ್ಲೇ ನನ್ನ ಮಗನಾದ ಇಸಾಕನಿಗೆ ಹೆಣ್ಣನ್ನು ತೆಗೆದುಕೊಳ್ಳಬೇಕು. ಹಾಗೆ ತೆಗೆದುಕೊಳ್ಳುತ್ತೇನೆಂಬದಕ್ಕೆ ನೀನು ನನ್ನ ತೊಡೆಯ ಕೆಳಗೆ ಕೈಯಿಟ್ಟು ಭೂಲೋಕಪರಲೋಕಗಳ ದೇವರಾಗಿರುವ ಯೆಹೋವನ ಮೇಲೆ ಪ್ರಮಾಣಮಾಡಬೇಕು ಎಂದು ಹೇಳಿದನು. 5ಅದಕ್ಕೆ ಆ ಸೇವಕನು - ಒಂದು ವೇಳೆ ನನ್ನ ಹಿಂದೆ ಈ ದೇಶಕ್ಕೆ ಬರುವದಕ್ಕೆ ಆ ಕನ್ಯೆಗೆ ಇಷ್ಟವಿಲ್ಲದೆ ಹೋದೀತು; ನೀನು ಬಿಟ್ಟುಬಂದ ಆ ದೇಶಕ್ಕೆ ನಾನು ನಿನ್ನ ಮಗನನ್ನು ತಿರಿಗಿ ಕರಕೊಂಡು ಹೋಗಬೇಕನ್ನುತ್ತೀಯೋ ಎಂದು ಕೇಳಲು 6ಅಬ್ರಹಾಮನು ಅವನಿಗೆ - ಎಂದಿಗೂ ಬೇಡ; ಅಲ್ಲಿಗೆ ನನ್ನ ಮಗನನ್ನು ಕರಕೊಂಡು ಹೋಗಲೇ ಕೂಡದು. 7ನನ್ನ ತಂದೆಯ ಮನೆಯಿಂದಲೂ ನಾನು ಹುಟ್ಟಿದ ದೇಶದಿಂದಲೂ ನನ್ನನ್ನು ಕರತಂದು - ನಿನ್ನ ಸಂತತಿಗೆ ಈ ದೇಶವನ್ನು ಕೊಡುವೆನೆಂದು ಪ್ರಮಾಣಮಾಡಿ ಹೇಳಿದ ಪರಲೋಕದೇವರಾದ ಯೆಹೋವನು ನಿನ್ನ ಮುಂದೆ ತನ್ನ ದೂತನನ್ನು ಕಳುಹಿಸಿ ನೀನು ಅಲ್ಲಿಂದ ನನ್ನ ಮಗನಿಗೋಸ್ಕರ ಹೆಣ್ಣನ್ನು ತೆಗೆದುಕೊಳ್ಳುವಂತೆ ಅನುಕೂಲಮಾಡುವನು. 8ನಿನ್ನ ಹಿಂದೆ ಬರುವದಕ್ಕೆ ಆ ಕನ್ಯೆಗೆ ಇಷ್ಟವಿಲ್ಲದೆ ಹೋದರೆ ನಾನು ಮಾಡಿಸಿದ ಪ್ರಮಾಣದಿಂದ ನೀನು ಬಿಡುಗಡೆಯಾಗಿರುವಿ. ಹೇಗೂ ನನ್ನ ಮಗನನ್ನು ತಿರಿಗಿ ಅಲ್ಲಿಗೆ ಕರಕೊಂಡು ಹೋಗಕೂಡದು ಎಂದು ಹೇಳಿದನು. 9ಆಗ ಆ ಸೇವಕನು ತನ್ನ ದಣಿಯಾದ ಅಬ್ರಹಾಮನ ತೊಡೆಯ ಕೆಳಗೆ ಕೈಯಿಟ್ಟು ಅವನು ಹೇಳಿದ್ದಂತೆಯೇ ಪ್ರಮಾಣ ಮಾಡಿದನು.
10ತರುವಾಯ ಆ ಸೇವಕನು ತನ್ನ ದಣಿಯ ಒಂಟೆಗಳಲ್ಲಿ ಹತ್ತು ಒಂಟೆಗಳನ್ನು ಸಿದ್ಧಮಾಡಿ ದಣಿಯ ಆಸ್ತಿಯಿಂದ ಶ್ರೇಷ್ಠವಾದ ಒಡವೆಗಳನ್ನು ತನ್ನ ವಶಕ್ಕೆ ತೆಗೆದುಕೊಂಡು ಹೊರಟು ಎರಡು#24.10 ಅಂದರೆ, ಮೆಸೊಪೊತಾಮ್ಯ; ಧರ್ಮೋ. 23.4; ನ್ಯಾಯ. 3.8. ನದಿಗಳ ಮಧ್ಯದಲ್ಲಿರುವ ಅರಾಮ್ ಸೀಮೆಗೆ ಬಂದು ನಾಹೋರನು ವಾಸಿಸಿದ ಊರನ್ನು ಮುಟ್ಟಿದನು. 11ಸಾಯಂಕಾಲದಲ್ಲಿ ಸ್ತ್ರೀಯರು ನೀರುತರುವದಕ್ಕೆ ಹೋಗುವಾಗ ಅವನು ಊರಿನ ಹೊರಗಡೆ ಬಾವಿಯ ಹತ್ತಿರ ಒಂಟೆಗಳನ್ನು ಮಲಗಿಸಿ - 12ನನ್ನ ದಣಿಯಾದ ಅಬ್ರಹಾಮನ ದೇವರಾಗಿರುವ ಯೆಹೋವನೇ, ಈ ಹೊತ್ತು ನಾನು ಬಂದ ಕಾರ್ಯವನ್ನು ನೀನು ಅನುಕೂಲಪಡಿಸಿ ನನ್ನ ದಣಿಯಾದ ಅಬ್ರಹಾಮನಿಗೆ ಉಪಕಾರಮಾಡಬೇಕೆಂದು ಬೇಡುತ್ತೇನೆ. 13ಇಗೋ, ನೀರಿನ ಬುಗ್ಗೆಯ ಬಳಿಯಲ್ಲಿ ನಿಂತಿದ್ದೇನೆ; ಈ ಊರಿನ ಹೆಣ್ಣುಮಕ್ಕಳು ನೀರಿಗೆ ಬರುತ್ತಾರೆ. 14ನಾನು ಯಾವ ಹುಡುಗಿಗೆ - ನೀನು ದಯವಿಟ್ಟು ನಿನ್ನ ಕೊಡವನ್ನು ಇಳಿಸಿ ನನಗೆ ಕುಡಿಯುವದಕ್ಕೆ ಕೊಡು ಎಂದು ಹೇಳುವಾಗ - ನೀನು ಕುಡಿಯಬಹುದು, ಮತ್ತು ನಿನ್ನ ಒಂಟೆಗಳಿಗೂ ನೀರು ಕೊಡುತ್ತೇನೆ ಅನ್ನುವಳೋ, ಅವಳೇ ನಿನ್ನ ದಾಸನಾದ ಇಸಾಕನಿಗೆ ನೀನು ನೇವಿುಸಿರುವ ಕನ್ಯೆಯಾಗಲಿ. ನನ್ನ ದಣಿಯ ಮೇಲೆ ನಿನ್ನ ದಯವದೆ ಎಂದು ಇದರಿಂದ ನನಗೆ ಗೊತ್ತಾಗುವದು ಅಂದನು. 15ಅವನು ಹೀಗೆ ಅಂದುಕೊಳ್ಳುತ್ತಿರುವಾಗಲೇ ಅಬ್ರಹಾಮನ ತಮ್ಮನಾದ ನಾಹೋರನ ಹೆಂಡತಿಯಾಗಿರುವ ವಿುಲ್ಕಳ ಮಗನಾದ ಬೆತೂವೇಲನಿಗೆ ಹುಟ್ಟಿದ ರೆಬೆಕ್ಕಳು ಹೆಗಲಿನ ಮೇಲೆ ಕೊಡವನ್ನಿಟ್ಟುಕೊಂಡು ಊರ ಹೊರಗೆ ಬರುವದನ್ನು ಕಂಡನು. 16ಆ ಹುಡುಗಿ ಬಹು ಸುಂದರಿಯಾಗಿಯೂ ಇನ್ನೂ ಮದುವೆಯಿಲ್ಲದ ಕನ್ನಿಕೆಯಾಗಿಯೂ ಇದ್ದಳು. ಆಕೆ ಬುಗ್ಗೆಯ ಬಳಿಗೆ ಇಳಿದು ಕೊಡದಲ್ಲಿ ನೀರು ತುಂಬಿಕೊಂಡು ಮೇಲಕ್ಕೆ ಬಂದಾಗ 17ಆ ಸೇವಕನು ಓಡಿಬಂದು ಎದುರುಗೊಂಡು - ಅಮ್ಮಾ, ದಯಮಾಡಿ ನಿನ್ನ ಕೊಡದಿಂದ ನನಗೆ ಸ್ವಲ್ಪ ನೀರನ್ನು ಕುಡಿಯುವದಕ್ಕೆ ಕೊಡು ಎಂದು ಕೇಳಿಕೊಳ್ಳಲು 18ಆಕೆ - ಕುಡಿಯಪ್ಪಾ ಎಂದು ಹೇಳಿ ತತ್ಕ್ಷಣವೇ ಕೊಡವನ್ನು ತನ್ನ ಕೈಯ ಮೇಲೆ ಇಳಿಸಿ ಕುಡಿಯಕೊಟ್ಟಳು. 19ನೀರು ಕುಡಿಸಿದ ಮೇಲೆ - ನಾನು ನಿನ್ನ ಒಂಟೆಗಳಿಗೂ ಬೇಕಾದಷ್ಟು ನೀರು ತಂದುಕೊಡುತ್ತೇನೆ ಎಂದು ಹೇಳಿ 20ಕೊಡದಲ್ಲಿದ್ದ ನೀರನ್ನು ದೋಣಿಯೊಳಗೆ ಹೊಯಿದು ತಿರಿಗಿ ತರುವದಕ್ಕೆ ಬಾವಿಗೆ ತ್ವರೆಯಾಗಿ ಹೋದಳು. ಹೀಗೆ ಅವನ ಎಲ್ಲಾ ಒಂಟೆಗಳಿಗೂ ತಂದು ಕೊಟ್ಟಳು. 21ಅಷ್ಟರಲ್ಲಿ ಆ ಮನುಷ್ಯನು ಏನೂ ಮಾತಾಡದೆ ಆಕೆಯನ್ನು ದೃಷ್ಟಿಸಿ ನೋಡುತ್ತಾ - ಯೆಹೋವನು ನನ್ನ ಪ್ರಯಾಣವನ್ನು ಸಫಲ ಮಾಡಿದನೋ ಇಲ್ಲವೋ ಎಂದು ತಿಳಿಯುವದಕ್ಕಾಗಿ ಕಾದುಕೊಂಡಿದ್ದನು. 22ಒಂಟೆಗಳು ಕುಡಿದ ನಂತರ ಅವನು ಆಕೆಯ ಮೂಗಿಗೆ ಅರ್ಧ ತೊಲೆಯ ತೂಕವುಳ್ಳ ಒಂದು ಚಿನ್ನದ ಮೂಗುತಿಯನ್ನೂ ಆಕೆಯ ಕೈಗಳಿಗೆ ಹತ್ತು ತೊಲೆಯ ತೂಕವುಳ್ಳ ಎರಡು ಚಿನ್ನದ ಬಳೆಗಳನ್ನೂ ಇಟ್ಟು - ನೀನು ಯಾರ ಮಗಳು? ದಯವಿಟ್ಟು ನನಗೆ ಹೇಳು. 23ನಿನ್ನ ತಂದೆಯ ಮನೆಯಲ್ಲಿ ನಾವು ಇಳುಕೊಳ್ಳುವದಕ್ಕೆ ಸ್ಥಳವಿದೆಯೋ ಎಂದು ಕೇಳಲು ಆಕೆ ಅವನಿಗೆ - 24ನಾನು ನಾಹೋರನಿಗೆ ವಿುಲ್ಕಳಲ್ಲಿ ಹುಟ್ಟಿದ ಬೆತೂವೇಲನ ಮಗಳು ಎಂದು ಉತ್ತರಕೊಟ್ಟು - 25ಹುಲ್ಲೂ ಮೇವೂ ನಮ್ಮಲ್ಲಿ ಬಹಳ ಉಂಟು, ಮತ್ತು ಇಳುಕೊಳ್ಳುವದಕ್ಕೆ ಸ್ಥಳವದೆ ಅಂದಳು. 26ಆ ಮನುಷ್ಯನು ಇದನ್ನು ಕೇಳಿ ಬೊಗ್ಗಿಕೊಂಡು ಯೆಹೋವನಿಗೆ ನಮಸ್ಕರಿಸಿ - 27ನನ್ನ ದಣಿಯಾದ ಅಬ್ರಹಾಮನ ದೇವರಾಗಿರುವ ಯೆಹೋವನಿಗೆ ಸ್ತೋತ್ರವಾಗಲಿ. ಆತನು ತನ್ನ ಪ್ರೀತಿಯನ್ನೂ ಸತ್ಯತೆಯನ್ನೂ ನನ್ನ ದಣಿಯಿಂದ ತೆಗೆಯಲಿಲ್ಲ; ನನ್ನನ್ನು ನನ್ನ ದಣಿಯ ಬಂಧುಗಳ ಮನೆಗೆ ನೀಟಾದ ದಾರಿಯಿಂದಲೇ ಕರಕೊಂಡು ಬಂದಿದ್ದಾನೆ ಅಂದನು. 28ಆ ಹುಡುಗಿ ಓಡಿಹೋಗಿ ನಡೆದ ಸಂಗತಿಯನ್ನು ತಾಯಿಯ ಮನೆಯಲ್ಲಿದ್ದವರೆಲ್ಲರಿಗೆ ತಿಳಿಸಿದಳು.
29ರೆಬೆಕ್ಕಳಿಗೆ ಲಾಬಾನನೆಂಬ ಅಣ್ಣನಿದ್ದನು. 30ಅವನು ತನ್ನ ತಂಗಿಯ ಮೇಲೆ ಇದ್ದ ಮೂಗುತಿಯನ್ನೂ ಬಳೆಗಳನ್ನೂ ನೋಡಿ ಆ ಮನುಷ್ಯನು ನನ್ನ ಸಂಗಡ ಹೀಗೆ ಹೀಗೆ ಮಾತಾಡಿದನೆಂದು ತಂಗಿ ಹೇಳಿದ ಮಾತನ್ನು ಕೇಳಿ ಬುಗ್ಗೆಯ ಹತ್ತಿರ ಒಂಟೆಗಳ ಬಳಿಯಲ್ಲಿ ನಿಂತಿದ್ದ ಆ ಮನುಷ್ಯನ ಬಳಿಗೆ ಓಡಿಬಂದನು. 31ಬಂದಾಗ ಅವನಿಗೆ - ಯೆಹೋವನ ದಯೆಯನ್ನು ಹೊಂದಿದವನೇ, ಒಳಕ್ಕೆ ಬಾ; ಯಾಕೆ ಹೊರಗೆ ನಿಂತಿರುತ್ತೀ? ನಿನಗೋಸ್ಕರ ನನ್ನ ಮನೆಯನ್ನೂ ಒಂಟೆಗಳಿಗೆ ಸ್ಥಳವನ್ನೂ ಸಿದ್ಧಮಾಡಿದ್ದೇನೆ ಎಂದು ಹೇಳಿದನು. 32ಆ ಮನುಷ್ಯನು ಮನೆಯೊಳಕ್ಕೆ ಬಂದಾಗ ಲಾಬಾನನು ಒಂಟೆಗಳ ಹೊರೆಗಳನ್ನು ಇಳಿಸಿ ಅವುಗಳಿಗೆ ಹುಲ್ಲನ್ನೂ ಮೇವನ್ನೂ ಕೊಡಿಸಿ ಆ ಮನುಷ್ಯನ ಮತ್ತು ಅವನ ಸಂಗಡಿದ್ದವರ ಕಾಲುಗಳನ್ನು ತೊಳೆಯುವದಕ್ಕೆ ನೀರನ್ನು ತರಿಸಿದನು. 33ಆದರೆ ಅವನಿಗೆ ಊಟಕ್ಕೆ ಬಡಿಸಿದಾಗ ಅವನು - ನಾನು ಬಂದ ಕೆಲಸವನ್ನು ಹೇಳದೆ ಊಟ ಮಾಡುವದಿಲ್ಲ ಅನ್ನಲು ಲಾಬಾನನು - ಹೇಳು ಅಂದನು.
34ಅವನು ಹೇಳಿದ್ದೇನಂದರೆ ನಾನು ಅಬ್ರಹಾಮನ ಸೇವಕನು, 35ಯೆಹೋವನು ನನ್ನ ದಣಿಯನ್ನು ಬಹಳವಾಗಿ ಅಭಿವೃದ್ಧಿಪಡಿಸಿ ಅವನಿಗೆ ಕುರಿದನಗಳನ್ನೂ ಬೆಳ್ಳಿಬಂಗಾರವನ್ನೂ ದಾಸದಾಸಿಯರನ್ನೂ ಒಂಟೆಗಳನ್ನೂ ಕತ್ತೆಗಳನ್ನೂ ಕೊಟ್ಟದ್ದರಿಂದ ಅವನು ಧನವಂತನಾದನು. 36ನನ್ನ ದಣಿಯ ಪತ್ನಿಯಾದ ಸಾರಳು ವೃದ್ಧಾಪ್ಯದಲ್ಲಿ ಅವನಿಗೆ ಮಗನನ್ನು ಹೆತ್ತಳು; ಆ ಮಗನಿಗೆ ನನ್ನ ದಣಿಯು ತನಗಿರುವದನ್ನೆಲ್ಲಾ ಕೊಟ್ಟಿದ್ದಾನೆ. 37ಇದಲ್ಲದೆ ನನ್ನ ದಣಿಯು ನನಗೆ - ನಾನು ವಾಸವಾಗಿರುವ ಕಾನಾನ್ ದೇಶದವರಿಂದ 38ನನ್ನ ಮಗನಿಗೆ ಹೆಣ್ಣನ್ನು ತೆಗೆದುಕೊಳ್ಳದೆ ನನ್ನ ತಂದೆಯ ಮನೆಗೂ ನನ್ನ ಬಂಧುಗಳ ಬಳಿಗೂ ಹೋಗಿ ಅವರಲ್ಲೇ ಹೆಣ್ಣನ್ನು ತೆಗೆದುಕೊಳ್ಳಬೇಕೆಂದು ಹೇಳಿ ನನ್ನಿಂದ ಪ್ರಮಾಣ ಮಾಡಿಸಿದನು. 39ನಾನು ಅವನಿಗೆ - ಒಂದು ವೇಳೆ ನನ್ನ ಹಿಂದೆ ಬರುವದಕ್ಕೆ ಆ ಕನ್ಯೆಗೆ ಮನಸ್ಸಿಲ್ಲದೆ ಹೋದೀತು ಎಂದು ಹೇಳಲು 40ಅವನು ನನಗೆ - ನಾನು ಯೆಹೋವನಿಗೆ ನಡೆದುಕೊಳ್ಳುತ್ತೇನಲ್ಲಾ; ಆತನು ತನ್ನ ದೂತನನ್ನು ನಿನ್ನೊಂದಿಗೆ ಕಳುಹಿಸಿ ನೀನು ನನ್ನ ತಂದೆಯ ಮನೆತನಕ್ಕೆ ಸೇರಿರುವ ಬಂಧುಗಳಲ್ಲಿ ನನ್ನ ಮಗನಿಗೆ ಹೆಣ್ಣು ತೆಗೆದುಕೊಳ್ಳುವಂತೆ ಅನುಕೂಲಮಾಡುವನು. 41ಆಮೇಲೆ ನಾನು ಮಾಡಿಸಿದ ಪ್ರಮಾಣದಿಂದ ನೀನು ಬಿಡುಗಡೆಯಾಗಿರುವಿ. ನೀನು ನನ್ನ ಜನರ ಬಳಿಗೆ ಹೋದಾಗ ಅವರು ಹೆಣ್ಣನ್ನು ಕೊಡದಿದ್ದರೆ ನಾನು ಮಾಡಿಸಿದ ಪ್ರಮಾಣದಿಂದ ನೀನು ಬಿಡುಗಡೆಯಾಗಿರುವಿ ಎಂದು ಹೇಳಿದನು. 42ನಾನು ಈ ಹೊತ್ತು ಈ ಊರಿನ ಬುಗ್ಗೆಯ ಬಳಿಗೆ ಬಂದಾಗ - ನನ್ನ ದಣಿಯಾದ ಅಬ್ರಹಾಮನ ದೇವರಾಗಿರುವ ಯೆಹೋವನೇ, ನೀರಿನ ಬುಗ್ಗೆಯ ಬಳಿಯಲ್ಲಿ ನಿಂತಿದ್ದೇನಷ್ಟೆ; ನೀನು ನನ್ನ ಪ್ರಯಾಣವನ್ನು ಸಫಲಮಾಡಿದ್ದಾದರೆ ನೀರಿಗೆ ಬರುವ ಯಾವ ಹುಡುಗಿಗೆ - 43ನೀನು ದಯವಿಟ್ಟು ನಿನ್ನ ಕೊಡದಿಂದ ನನಗೆ ಸ್ವಲ್ಪ ನೀರನ್ನು ಕುಡಿಯುವದಕ್ಕೆ ಕೊಡಮ್ಮಾ ಎಂದು ನಾನು ಹೇಳುವಾಗ 44ಅವಳು - ಕುಡಿಯಪ್ಪಾ ಮತ್ತು ನಿನ್ನ ಒಂಟೆಗಳಿಗೂ ನೀರು ತಂದುಕೊಡುತ್ತೇನೆ ಅನ್ನುವಳೋ, ಅವಳೇ ಯೆಹೋವನಿಂದ ನನ್ನ ದಣಿಯ ಮಗನಿಗೆ ನೇಮಕವಾದ ಕನ್ನಿಕೆಯಾಗಿರಲಿ ಅಂದೆನು. 45ನಾನು ಹೀಗೆ ಮನಸ್ಸಿನೊಳಗೆ ಮಾತಾಡಿಕೊಳ್ಳುತ್ತಿರುವಾಗಲೇ ರೆಬೆಕ್ಕಳು ಹೆಗಲಿನ ಮೇಲೆ ಕೊಡವನ್ನು ಹೊತ್ತುಕೊಂಡು ಬರುವದನ್ನು ಕಂಡೆನು. ಆಕೆ ಬುಗ್ಗೆಗೆ ಇಳಿದು ನೀರನ್ನು ತೆಗೆದುಕೊಂಡು ಬಂದಾಗ ನಾನು ಆಕೆಗೆ - ನನಗೆ ನೀರನ್ನು ಕುಡಿಯುವದಕ್ಕೆ ಕೊಡಬೇಕಮ್ಮಾ ಎಂದು ಹೇಳಿದೆನು. 46ತತ್ಕ್ಷಣವೇ ಆಕೆ ಕೊಡವನ್ನು ಹೆಗಲಿನಿಂದ ಇಳಿಸಿ - ಕುಡಿಯಪ್ಪಾ, ನಿನ್ನ ಒಂಟೆಗಳಿಗೂ ತಂದು ಕೊಡುತ್ತೇನೆ ಅಂದಳು. ನಾನು ಕುಡಿದ ಮೇಲೆ ಆಕೆ ಒಂಟೆಗಳಿಗೂ ನೀರು ತಂದುಕೊಟ್ಟಳು. 47ನೀನು ಯಾರ ಮಗಳೆಂದು ನಾನು ಕೇಳಿದ್ದಕ್ಕೆ ಆಕೆ - ನಾಹೋರನಿಗೆ ವಿುಲ್ಕಳಲ್ಲಿ ಹುಟ್ಟಿದ ಬೆತೂವೇಲನ ಮಗಳು ಅಂದಳು. ಅದನ್ನು ಕೇಳಿ ನಾನು ಆಕೆಯ ಮೂಗಿಗೆ ಮೂಗುತಿಯನ್ನೂ ಕೈಗಳಿಗೆ ಬಳೆಗಳನ್ನೂ ಇಟ್ಟು 48ನನ್ನ ದಣಿಯಾದ ಅಬ್ರಹಾಮನ ದೇವರಾದ ಯೆಹೋವನಿಗೆ ಬೊಗ್ಗಿ ನಮಸ್ಕರಿಸಿ ಆತನು ನನ್ನ ದಣಿಯ ಮಗನಿಗೋಸ್ಕರ ಅವನ ತಮ್ಮನ ಮಗಳನ್ನೇ ತೆಗೆದುಕೊಳ್ಳುವಂತೆ ನನ್ನನ್ನು ನೀಟಾದ ದಾರಿಯಲ್ಲಿ ಕರೆದುಕೊಂಡು ಬಂದದ್ದಕ್ಕಾಗಿ ಆತನನ್ನು ಕೊಂಡಾಡಿದೆನು. 49ಹೀಗಿರುವಲ್ಲಿ ನೀವು ನನ್ನ ದಣಿಗೆ ಪ್ರೀತಿಯಿಂದಲೂ ನಂಬಿಕೆಯಿಂದಲೂ ನಡೆಯುವದಕ್ಕೆ ಒಪ್ಪಿದರೆ ನನಗೆ ಹೇಳಿರಿ; ಇಲ್ಲವಾದರೆ ಇಲ್ಲವೆನ್ನಿರಿ; ಆಗ ನಾನು ಬಲಗಡೆಗಾಗಲಿ ಎಡಗಡೆಗಾಗಲಿ ತಿರುಗಿಕೊಂಡು ಹೋಗುವೆನು ಅಂದನು.
50ಅದಕ್ಕೆ ಲಾಬಾನನು ಬೆತೂವೇಲನೂ - ಈ ಕಾರ್ಯವು ಯೆಹೋವನಿಂದಲೇ ಉಂಟಾಯಿತು. ನಾವಂತೂ ಹೌದೆಂದೂ ಅಲ್ಲವೆಂದೂ ಹೇಳಲಾರೆವು. 51ರೆಬೆಕ್ಕಳನ್ನು ನಿನ್ನ ವಶಕ್ಕೆ ಕೊಡುತ್ತೇವೆ; ಕರೆದುಕೊಂಡು ಹೋಗಬಹುದು; ಯೆಹೋವನು ಹೇಳಿದಂತೆಯೇ ಆಕೆ ನಿನ್ನ ದಣಿಯ ಮಗನಿಗೆ ಹೆಂಡತಿಯಾಗಲಿ ಅಂದರು. 52ಅಬ್ರಹಾಮನ ಸೇವಕನು ಅವರ ಮಾತನ್ನು ಕೇಳಿದಾಗ ಯೆಹೋವನಿಗೆ ಬೊಗ್ಗಿ ನಮಸ್ಕರಿಸಿದನು. 53ಆಮೇಲೆ ತಾನು ತಂದಿದ್ದ ಬೆಳ್ಳಿ ಬಂಗಾರದ ಒಡವೆಗಳನ್ನೂ ವಸ್ತ್ರಗಳನ್ನೂ ತೆಗೆದು ರೆಬೆಕ್ಕಳಿಗೆ ಕೊಟ್ಟನು. ಆಕೆಯ ಅಣ್ಣನಿಗೂ ತಾಯಿಗೂ ಸಹ ಬೆಲೆಯುಳ್ಳ ಉಡುಗೊರೆಗಳನ್ನು ಕೊಟ್ಟನು. 54ಬಳಿಕ ಅವನೂ ಅವನ ಸಂಗಡ ಬಂದ ಮನುಷ್ಯರೂ ಊಟ ಉಪಚಾರಗಳನ್ನು ತೀರಿಸಿಕೊಂಡು ರಾತ್ರಿಯೆಲ್ಲಾ ಅಲ್ಲೇ ಇದ್ದರು. ಬೆಳಿಗ್ಗೆ ಎದ್ದಾಗ ಅವನು - ನನ್ನ ದಣಿಯ ಬಳಿಗೆ ಹೊರಡುವದಕ್ಕೆ ನನಗೆ ಅಪ್ಪಣೆಯಾಗಲಿ ಎಂದು ಕೇಳಲು 55ರೆಬೆಕ್ಕಳ ಅಣ್ಣನೂ ತಾಯಿಯೂ ಅವನಿಗೆ -ಹುಡುಗಿಯು ಇನ್ನು ಎಂಟು ಹತ್ತು ದಿನವಾದರೂ ನಮ್ಮಲ್ಲಿರಲಿ; ಆಮೇಲೆ ಆಕೆ ಹೋಗಬಹುದು ಎಂದು ಹೇಳಿದರು. 56ಅವನು ಅವರಿಗೆ - ಯೆಹೋವನು ನನ್ನ ಪ್ರಯಾಣವನ್ನು ಸಫಲ ಮಾಡಿದ್ದಾನೆ; ಆದದರಿಂದ ನನ್ನನ್ನು ತಡೆಯಬೇಡಿರಿ; ನನ್ನ ದಣಿಯ ಬಳಿಗೆ ಹೋಗುವದಕ್ಕೆ ನನಗೆ ಅಪ್ಪಣೆಯಾಗಬೇಕೆಂದು ಹೇಳಲು 57ಅವರು - ನಾವು ಹುಡುಗಿಯನ್ನು ಕರೆದು ಆಕೆಯ ಅಭಿಪ್ರಾಯ ತಿಳಿದುಕೊಳ್ಳುತ್ತೇವೆ ಎಂದು ಹೇಳಿ ರೆಬೆಕ್ಕಳನ್ನು ಕರೆದು - 58ಈ ಮನುಷ್ಯನ ಜೊತೆಯಲ್ಲಿ ಹೋಗುವಿಯಾ ಎಂದು ಕೇಳಿದರು. 59ಆಕೆ - ಹೋಗುತ್ತೇನೆ ಅನ್ನಲು ಅವರು ತಮ್ಮ ತಂಗಿಯಾದ ರೆಬೆಕ್ಕಳನ್ನೂ ಆಕೆಯ ದಾದಿಯನ್ನೂ ಅಬ್ರಹಾಮನ ಸೇವಕನನ್ನೂ ಅವನ ಸಂಗಡ ಬಂದ ಮನುಷ್ಯರನ್ನೂ ಸಾಗಕಳುಹಿಸಿದರು. 60ಮತ್ತು ರೆಬೆಕ್ಕಳಿಗೆ - ತಂಗಿಯೇ, ನಿನ್ನಿಂದ ಲಕ್ಷಾಂತರ ಸಂತಾನವಾಗಲಿ; ನಿನ್ನ ಸಂತಾನದವರು ತಮ್ಮ ವೈರಿಗಳ ಪಟ್ಟಣಗಳನ್ನು ಸ್ವಾಧೀನಮಾಡಿಕೊಳ್ಳಲಿ ಎಂದು ಹೇಳಿ ಹರಸಿದರು. 61ರೆಬೆಕ್ಕಳೂ ಆಕೆಯ ದಾಸಿಯರೂ ಒಂಟೆಗಳ ಮೇಲೆ ಹತ್ತಿದವರಾಗಿ ಅಬ್ರಹಾಮನ ಸೇವಕನ ಹಿಂದೆ ಹೋದರು. ಹೀಗೆ ಆ ಸೇವಕನು ರೆಬೆಕ್ಕಳನ್ನು ಕರಕೊಂಡು ಹೊರಟನು.
62ಅಷ್ಟರಲ್ಲಿ ಇಸಾಕನು ಲಹೈರೋಯಿ ಬಾವಿಗೆ ಹೋಗಿ ಬಂದಿದ್ದನು; ಕಾನಾನ್ ದೇಶದ ದಕ್ಷಿಣ ಸೀಮೆಯಲ್ಲಿ ವಾಸವಾಗಿದ್ದನು. 63ಅವನು ಸಂಜೇವೇಳೆಯಲ್ಲಿ ಧ್ಯಾನಮಾಡುವದಕ್ಕೋಸ್ಕರ ಅಡವಿಗೆ ಹೋಗಿದ್ದಾಗ ಕಣ್ಣೆತ್ತಿ ನೋಡಲಾಗಿ ಒಂಟೆಗಳು ಬರುವದನ್ನು ಕಂಡನು. 64ರೆಬೆಕ್ಕಳು ಕಣ್ಣೆತ್ತಿ ಇಸಾಕನನ್ನು ನೋಡಿ ಒಂಟೆಯಿಂದ ಬೇಗ ಇಳಿದು - 65ನಮ್ಮನ್ನು ಎದುರುಗೊಳ್ಳುವದಕ್ಕೆ ಅಡವಿಯಲ್ಲಿ ನಡೆದು ಬರುವ ಆ ಮನುಷ್ಯನು ಯಾರೆಂದು ಆ ಸೇವಕನನ್ನು ಕೇಳಿದಳು. ಅವನೇ ನನ್ನ ದಣಿಯೆಂದು ಅವನು ಹೇಳಿದಾಗ ಆಕೆ ಮುಸುಕುಹಾಕಿಕೊಂಡಳು. 66ಆ ಸೇವಕನು ತಾನು ಮಾಡಿದ ಕಾರ್ಯಗಳನ್ನೆಲ್ಲಾ ಇಸಾಕನಿಗೆ ತಿಳಿಸಿದನಂತರ 67ಇಸಾಕನು ಆಕೆಯನ್ನು ತಾಯಿಯಾದ ಸಾರಳ ಗುಡಾರಕ್ಕೆ ಕರೆದುಕೊಂಡು ಹೋದನು. ಈ ರೀತಿಯಾಗಿ ಅವನು ರೆಬೆಕ್ಕಳನ್ನು ವರಿಸಿದನು. ಆಕೆ ಅವನ ಹೆಂಡತಿಯಾದಳು. ಅವನು ಆಕೆಯನ್ನು ಪ್ರೀತಿಸಿ ತನ್ನ ತಾಯಿ ಸತ್ತ ದುಃಖವನ್ನು ಶಮನ ಮಾಡಿಕೊಂಡನು.
Currently Selected:
ಆದಿಕಾಂಡ 24: KANJV-BSI
Highlight
Share
Copy
Want to have your highlights saved across all your devices? Sign up or sign in
Kannada J.V. Bible © The Bible Society of India, 2016.
Used by permission. All rights reserved worldwide.