YouVersion Logo
Search Icon

ಅಪೊಸ್ತಲರ ಕೃತ್ಯಗಳು 6

6
ಸಭೆಯಲ್ಲಿ ಲೌಕಿಕ ಕಾರ್ಯಗಳನ್ನು ನಡಿಸುವದಕ್ಕೆ ಅಪೊಸ್ತಲರು ಏಳು ಮಂದಿ ಸಹಾಯಕರನ್ನು ನೇವಿುಸಿದ್ದು
1ಆ ದಿವಸಗಳಲ್ಲಿ ಶಿಷ್ಯರು ಹೆಚ್ಚುತ್ತಾ ಬರಲಾಗಿ ಅವರೊಳಗೆ ಗ್ರೀಕ್‍ಭಾಷೆಯವರು ಇಬ್ರಿಯ ಭಾಷೆಯವರ ಮೇಲೆ - ದಿನದಿನದ ಉಪಚಾರದಲ್ಲಿ ನಮ್ಮ ವಿಧವೆಯರನ್ನು ಸರಿಯಾಗಿ ಪರಾಂಬರಿಸುವದಿಲ್ಲವೆಂದು ಗುಣುಗುಟ್ಟಿದರು. 2ಆಗ ಹನ್ನೆರಡು ಮಂದಿ ಅಪೊಸ್ತಲರು ಶಿಷ್ಯಮಂಡಲಿಯನ್ನು ಕೂಡಿಸಿ - ನಾವು ದೇವರ ವಾಕ್ಯೋಪದೇಶವನ್ನು ಬಿಟ್ಟು ಉಪಚಾರಮಾಡುತ್ತಿರುವದು ತಕ್ಕದ್ದಲ್ಲವಲ್ಲಾ; 3ಆದದರಿಂದ ಸಹೋದರರೇ, ಸಂಭಾವಿತರೂ ಪವಿತ್ರಾತ್ಮಭರಿತರೂ ಜ್ಞಾನಸಂಪನ್ನರೂ ಆಗಿರುವ ಏಳುಮಂದಿಯನ್ನು ನಿಮ್ಮೊಳಗಿಂದ ನೋಡಿ ಆರಿಸಿಕೊಳ್ಳಿರಿ; ಅವರನ್ನು ಈ ಕೆಲಸದ ಮೇಲೆ ನೇವಿುಸುವೆವು. 4ನಾವಾದರೋ ಪ್ರಾರ್ಥನೆಯನ್ನೂ ವಾಕ್ಯೋಪದೇಶವನ್ನೂ ಮಾಡುವದರಲ್ಲಿ ನಿರತರಾಗಿರುವೆವು ಎಂದು ಹೇಳಿದರು. 5ಈ ಮಾತು ಸರ್ವಮಂಡಲಿಗೆ ಒಳ್ಳೇದೆಂದು ತೋಚಿತು. ಅವರು ಪವಿತ್ರಾತ್ಮಭರಿತನೂ ನಂಬಿಕೆಯಿಂದ ತುಂಬಿದವನೂ ಆದ ಸ್ತೆಫನನನ್ನೂ, ಫಿಲಿಪ್ಪ, ಪ್ರೊಖೋರ, ನಿಕನೋರ, ತಿಮೋನ, ಪರ್ಮೇನ, ಯೆಹೂದ್ಯ ಮತಾವಲಂಬಿಯಾದ ಅಂತಿಯೋಕ್ಯದ ನಿಕೊಲಾಯ ಎಂಬವರನ್ನೂ ಆರಿಸಿಕೊಂಡು ಅಪೊಸ್ತಲರ ಮುಂದೆ ನಿಲ್ಲಿಸಿದರು. 6ಅಪೊಸ್ತಲರು ಪ್ರಾರ್ಥನೆ ಮಾಡಿ ಅವರ ಮೇಲೆ ಕೈಗಳನ್ನಿಟ್ಟು ನೇವಿುಸಿದರು.
7ಮತ್ತು ದೇವರ ವಾಕ್ಯವು ಪ್ರಬಲವಾಯಿತು. ಶಿಷ್ಯರ ಸಂಖ್ಯೆಯು ಯೆರೂಸಲೇವಿುನಲ್ಲಿ ಬಹಳವಾಗಿ ಹೆಚ್ಚುತ್ತಾ ಬಂತು. ಯಾಜಕರಲ್ಲಿಯೂ ಬಹುಜನರು ಕ್ರಿಸ್ತನಂಬಿಕೆಗೆ ಒಳಗಾಗುತ್ತಾ ಇದ್ದರು.
ದೇವದೂಷಣೆ ಮಾಡಿದನೆಂದು ಕೆಲವರು ಸ್ತೆಫನನ ಮೇಲೆ ತಪ್ಪುಹೊರಿಸಿದ್ದು; ಅವರು ಪ್ರತಿವಾದ ಮಾಡಿದ ಮೇಲೆ ಮರಣದಂಡನೆಯನ್ನು ಹೊಂದಿದ್ದು
8ಸ್ತೆಫನನು ದೇವರ ಕೃಪೆಯಿಂದಲೂ ಬಲದಿಂದಲೂ ತುಂಬಿದವನಾಗಿ ಜನರಲ್ಲಿ ಮಹಾ ಅದ್ಭುತಕಾರ್ಯಗಳನ್ನೂ ಸೂಚಕಕಾರ್ಯಗಳನ್ನೂ ಮಾಡುತ್ತಾ ಇದ್ದನು. 9ಆದರೆ ಲಿಬೆರ್ತೀನರೆಂಬವರ ಸಮಾಜದವರಲ್ಲಿಯೂ ಕುರೇನ್ಯದವರ ಮತ್ತು ಅಲೆಕ್ಸಾಂದ್ರಿಯದವರ ಸಮಾಜದವರಲ್ಲಿಯೂ ಕಿಲಿಕ್ಯ ಆಸ್ಯ ಸೀಮೆಗಳಿಂದ ಬಂದವರ ಸಮಾಜದವರಲ್ಲಿಯೂ ಕೆಲವರು ಎದ್ದು ಸ್ತೆಫನನ ಸಂಗಡ ತರ್ಕಮಾಡುತ್ತಾ ಇರಲು 10ಅವನ ಮಾತಿನಲ್ಲಿ ಕಂಡುಬಂದ ಜ್ಞಾನವನ್ನೂ ಪವಿತ್ರಾತ್ಮ ಶಕ್ತಿಯನ್ನೂ ಎದುರಿಸಲಾರದೆ ಹೋದರು. 11ಆಗ ಅವರು ಕೆಲವು ಮನುಷ್ಯರಿಗೆ - ಇವನು ಮೋಶೆಗೆ ವಿರೋಧವಾಗಿಯೂ ದೇವರಿಗೆ ವಿರೋಧವಾಗಿಯೂ ದೂಷಣೆಯ ಮಾತುಗಳನ್ನಾಡುವದನ್ನು ಕೇಳಿದೆವೆಂದು ಹೇಳಿರಿ ಎಂಬದಾಗಿ ಬೋಧಿಸಿ 12ಜನರನ್ನೂ ಹಿರಿಯರನ್ನೂ ಶಾಸ್ತ್ರಿಗಳನ್ನೂ ರೇಗಿಸಿದರು; ಮತ್ತು ಬಂದು ಅವನನ್ನು ಹಿಡಿದು ಹಿರೀಸಭೆಗೆ ತೆಗೆದುಕೊಂಡು ಹೋಗಿ 13ಸುಳ್ಳುಸಾಕ್ಷಿಗಳನ್ನು ಕರತಂದು ನಿಲ್ಲಿಸಿದರು. ಆ ಸಾಕ್ಷಿಗಳು - ಈ ಮನುಷ್ಯನು ಈ ಪರಿಶುದ್ಧವಾದ ಸ್ಥಳಕ್ಕೆ ವಿರೋಧವಾಗಿಯೂ ಧರ್ಮಶಾಸ್ತ್ರಕ್ಕೆ ವಿರೋಧವಾಗಿಯೂ ಮಾತಾಡುವದನ್ನು ಬಿಡುವದೇ ಇಲ್ಲ. 14ಆ ನಜರೇತಿನ ಯೇಸು ಈ ದೇವಾಲಯವನ್ನು ಕೆಡವಿ ಮೋಶೆ ನಮಗೆ ನೇವಿುಸಿರುವ ಆಚಾರಗಳನ್ನು ಬೇರೆ ಮಾಡುವನೆಂಬದಾಗಿ ಇವನು ಹೇಳುವದನ್ನು ನಾವು ಕೇಳಿದ್ದೇವೆ ಅಂದರು. 15ಆಗ ಹಿರೀಸಭೆಯಲ್ಲಿ ಕೂತಿದ್ದವರೆಲ್ಲರು ಅವನನ್ನು ದೃಷ್ಟಿಸಿ ನೋಡಿ ಅವನ ಮುಖವು ದೇವದೂತನ ಮುಖದಂತೆ ಇರುವದನ್ನು ಕಂಡರು.

Highlight

Share

Copy

None

Want to have your highlights saved across all your devices? Sign up or sign in