YouVersion Logo
Search Icon

ಅಪೊಸ್ತಲರ ಕೃತ್ಯಗಳು 7

7
1ಆಗ ಮಹಾಯಾಜಕನು - ಈ ಮಾತುಗಳು ಹೌದೋ ಎಂದು ಕೇಳಿದ್ದಕ್ಕೆ ಅವನು - ಸಹೋದರರೇ, ತಂದೆಗಳೇ, ಕೇಳಿರಿ - 2ನಮ್ಮ ಮೂಲಪುರುಷನಾದ ಅಬ್ರಹಾಮನು ಖಾರಾನಿನಲ್ಲಿ ವಾಸಮಾಡಿದ್ದಕ್ಕಿಂತ ಮುಂಚೆ ಮೆಸೊಪೊತಾಮ್ಯದಲ್ಲಿದ್ದಾಗ ಪ್ರಭಾವ ಸ್ವರೂಪನಾದ ದೇವರು 3ಅವನಿಗೆ ಕಾಣಿಸಿಕೊಂಡು - ನಿನ್ನ ಸ್ವದೇಶವನ್ನೂ ನಿನ್ನ ಬಂಧುಬಳಗವನ್ನೂ ಬಿಟ್ಟು ನಾನು ತೋರಿಸುವ ದೇಶಕ್ಕೆ ಹೊರಟುಹೋಗು ಎಂದು ಹೇಳಿದನು. 4ಆಗ ಅವನು ಕಸ್ದೀಯರ ದೇಶದಿಂದ ಹೊರಟುಹೋಗಿ ಖಾರಾನಿನಲ್ಲಿ ವಾಸವಾಗಿದ್ದನು. ಅವನ ತಂದೆ ಸತ್ತಮೇಲೆ ದೇವರು ಅವನನ್ನು ಅಲ್ಲಿಂದ ನೀವು ಈಗ ವಾಸವಾಗಿರುವ ಈ ದೇಶಕ್ಕೆ ಬರಮಾಡಿದನು. 5ಇದರಲ್ಲಿ ಅವನಿಗೆ ಕಾಲಿಡುವಷ್ಟು ಭೂವಿುಯನ್ನು ಸ್ವಾಸ್ತ್ಯವಾಗಿ ಕೊಡದೆ ಅವನಿಗೆ ಮಕ್ಕಳು ಇನ್ನೂ ಇಲ್ಲದಿರುವಾಗ - ಈ ದೇಶವನ್ನು ನಿನಗೂ ನಿನ್ನ ಹಿಂದೆ ಬರುವ ನಿನ್ನ ಸಂತತಿಗೂ ಸ್ವಾಸ್ತ್ಯವಾಗಿ ಕೊಡುವೆನು ಎಂದು ಅವನಿಗೆ ವಾಗ್ದಾನ ಮಾಡಿದನು. 6ಇದಲ್ಲದೆ ದೇವರು ಹೇಳಿದ್ದೇನಂದರೆ - ನಿನ್ನ ಸಂತಾನದವರು ಅನ್ಯದೇಶದಲ್ಲಿ ಪ್ರವಾಸಿಗಳಾಗಿರುವರು. ಆ ಅನ್ಯದೇಶದವರು ಅವರನ್ನು ದಾಸರನ್ನಾಗಿ ಮಾಡಿಕೊಂಡು ನಾನೂರು ವರುಷಗಳ ತನಕ ಕ್ರೂರವಾಗಿ ನಡಿಸುವರು. 7ಮತ್ತು ನಿನ್ನ ಸಂತಾನದವರು ದಾಸರಾಗಿ ಸೇವಿಸುವ ಅನ್ಯಜನರಿಗೆ ನಾನೇ ನ್ಯಾಯತೀರಿಸುವೆನು. ಆಮೇಲೆ ಅವರು ಹೊರಟುಬಂದು ಈ ಸ್ಥಳದಲ್ಲಿ ನನ್ನನ್ನು ಆರಾಧಿಸುವರು ಎಂಬದೇ. 8ಇದಲ್ಲದೆ ದೇವರು ಅವನ ಸಂಗಡ ಒಡಂಬಡಿಕೆಯನ್ನು ಮಾಡಿಕೊಂಡು ಅದಕ್ಕೆ ಗುರುತಾಗಿ ಸುನ್ನತಿಯನ್ನು ನೇವಿುಸಿದನು. ಅದಕ್ಕನುಸಾರವಾಗಿ ಅಬ್ರಹಾಮನು ಇಸಾಕನನ್ನು ಪಡೆದು ಎಂಟನೆಯ ದಿವಸದಲ್ಲಿ ಅವನಿಗೆ ಸುನ್ನತಿಮಾಡಿದನು. ಮುಂದೆ ಇಸಾಕನು ಯಾಕೋಬನನ್ನು ಪಡೆದನು, ಯಾಕೋಬನು ಹನ್ನೆರಡು ಮಂದಿ ಮೂಲಪಿತೃಗಳನ್ನು ಪಡೆದನು.
9ಮೂಲಪಿತೃಗಳು ಹೊಟ್ಟೇಕಿಚ್ಚಿನಿಂದ ಯೋಸೇಫನನ್ನು ಐಗುಪ್ತದೇಶಕ್ಕೆ ಮಾರಿಬಿಟ್ಟರು. 10ಅಲ್ಲಿ ದೇವರು ಅವನ ಸಂಗಡ ಇದ್ದು ಅವನಿಗೆ ಬಂದ ಎಲ್ಲಾ ಸಂಕಟಗಳಿಂದ ಅವನನ್ನು ಬಿಡಿಸಿ ಐಗುಪ್ತದೇಶದ ಅರಸನಾದ ಫರೋಹನ ಸಮ್ಮುಖದಲ್ಲಿ ದಯಾಪಾತ್ರನೂ ಜ್ಞಾನವುಳ್ಳವನೂ ಆಗಿರುವಂತೆ ಅನುಗ್ರಹಿಸಿದನು. ಫರೋಹನು ಅವನನ್ನು ಐಗುಪ್ತದೇಶದ ಮೇಲೆಯೂ ತನ್ನ ಎಲ್ಲಾ ಮನೆಯ ಮೇಲೆಯೂ ಅಧಿಕಾರಿಯಾಗಿ ಇಟ್ಟನು. 11ಆಗ ಐಗುಪ್ತ ಕಾನಾನ್‍ದೇಶಗಳಲ್ಲಿ ಎಲ್ಲೆಲ್ಲಿಯೂ ಬರ ಬಂದು ದೊಡ್ಡ ಸಂಕಟವಾಯಿತು; ನಮ್ಮ ಪಿತೃಗಳಿಗೆ ಕಾಳುಕಡ್ಡಿ ಸಿಕ್ಕಲಿಲ್ಲ. 12ಆದರೆ ಐಗುಪ್ತದೇಶದಲ್ಲಿ ದವಸಧಾನ್ಯ ಉಂಟೆಂಬದನ್ನು ಯಾಕೋಬನು ಕೇಳಿ ನಮ್ಮ ಪಿತೃಗಳನ್ನು ಮೊದಲು ಒಂದು ಸಾರಿ ಅಲ್ಲಿಗೆ ಕಳುಹಿಸಿದನು. 13ಅವರು ಎರಡನೆಯ ಸಾರಿ ಬಂದಾಗ ಯೋಸೇಫನು ಅಣ್ಣತಮ್ಮಂದಿರಿಗೆ ತನ್ನ ಗುರುತು ಸಿಕ್ಕುವಂತೆ ಮಾಡಿದನು. ಮತ್ತು ಯೋಸೇಫನ ವಂಶವು ಫರೋಹನಿಗೆ ತಿಳಿಯ ಬಂತು. 14ಆಮೇಲೆ ಯೋಸೇಫನು ತನ್ನ ತಂದೆಯಾದ ಯಾಕೋಬನನ್ನೂ ತನ್ನ ಎಲ್ಲಾ ಬಂಧುಬಳಗವನ್ನೂ ಒಟ್ಟಿಗೆ ಎಪ್ಪತ್ತೈದು ಮಂದಿಯನ್ನು ಕರೆಯಿಸಿಕೊಳ್ಳಲಾಗಿ ಯಾಕೋಬನು ಐಗುಪ್ತದೇಶಕ್ಕೆ ಇಳಿದುಹೋದನು. 15ಅಲ್ಲಿ ಅವನೂ ನಮ್ಮ ಪಿತೃಗಳೂ ತೀರಿಹೋದರು. 16ಅವರನ್ನು ಶೇಕೆವಿುಗೆ ತೆಗೆದುಕೊಂಡು ಹೋಗಿ ಅಲ್ಲಿ ಹಮೋರನ ಮಕ್ಕಳಿಂದ ಅಬ್ರಹಾಮನು ಬೆಳ್ಳಿಕೊಟ್ಟು ಕೊಂಡುಕೊಂಡಿದ್ದ ಸಮಾಧಿಯೊಳಗೆ ಇಟ್ಟರು.
17ಆದರೆ ದೇವರು ಅಬ್ರಹಾಮನಿಗೆ ವಾಗ್ದಾನ ಮಾಡಿದ್ದ ಕಾಲವು ಹತ್ತರಕ್ಕೆ ಬರುತ್ತಿರುವಾಗ ನಮ್ಮ ಜನರು ಐಗುಪ್ತದೇಶದಲ್ಲಿ ಹೆಚ್ಚಿ ಬಹಳವಾದರು. 18ಕಡೆಗೆ ಯೋಸೇಫನನ್ನು ಅರಿಯದ ಬೇರೊಬ್ಬ ಅರಸನು ಆಳಿಕೆಗೆ ಬಂದನು. 19ಈ ಅರಸನು ನಮ್ಮ ಜನರಲ್ಲಿ ಕುಯುಕ್ತಿ ಮಾಡಿ ಅವರ ಕೂಸುಗಳನ್ನು ಜೀವದಿಂದುಳಿಸಬಾರದೆಂದು ಹೊರಗೆ ಹಾಕಿಸಿ ನಮ್ಮ ಪಿತೃಗಳನ್ನು ಕ್ರೂರವಾಗಿ ನಡಿಸಿದನು. 20ಆ ಸಮಯದಲ್ಲೇ ಮೋಶೆಯು ಹುಟ್ಟಿದನು. ಅವನು ದಿವ್ಯಸುಂದರನಾಗಿದ್ದನು; ಮತ್ತು ತಂದೆಯ ಮನೆಯಲ್ಲಿ ಮೂರು ತಿಂಗಳು ಸಾಕಲ್ಪಟ್ಟನು. 21ಆಮೇಲೆ ಅವನನ್ನು ಹೊರಗೆ ಹಾಕಿದಾಗ ಫರೋಹನ ಮಗಳು ಅವನನ್ನು ಎತ್ತಿಕೊಂಡು ಹೋಗಿ ತನ್ನ ಮಗನಾಗಿ ಸಾಕಿದಳು. 22ಮೋಶೆಯು ಐಗುಪ್ತದೇಶದವರ ಸರ್ವವಿದ್ಯೆಗಳಲ್ಲಿಯೂ ಉಪದೇಶಹೊಂದಿ ಮಾತುಗಳಲ್ಲಿಯೂ ಕಾರ್ಯಗಳಲ್ಲಿಯೂ ಸಮರ್ಥನಾದನು. 23ಅವನಿಗೆ ನಾಲ್ವತ್ತು ವರುಷ ವಯಸ್ಸು ತುಂಬುತ್ತಾ ಇರಲು ಇಸ್ರಾಯೇಲ್ ವಂಶಸ್ಥರಾದ ತನ್ನ ಸಹೋದರರನ್ನು ಹೋಗಿನೋಡಬೇಕೆಂಬ ಆಶೆಯು ಅವನ ಹೃದಯದಲ್ಲಿ ಹುಟ್ಟಿತು. 24ಅವರಲ್ಲಿ ಒಬ್ಬನಿಗೆ ಅನ್ಯಾಯವಾಗುವದನ್ನು ಅವನು ನೋಡಿ ಅವನಿಗೆ ಆಶ್ರಯಕೊಟ್ಟು ಪೀಡಿಸುವ ಐಗುಪ್ತ್ಯನನ್ನು ಹೊಡೆದುಹಾಕಿ ಮುಯ್ಯಿಗೆ ಮುಯ್ಯಿ ತೀರಿಸಿದನು. 25ದೇವರು ತನ್ನ ಕೈಯಿಂದ ಬಿಡುಗಡೆಯನ್ನು ಉಂಟುಮಾಡುತ್ತಾನೆಂಬದು ತನ್ನ ಸಹೋದರರಿಗೆ ತಿಳಿದುಬರುವದೆಂದು ಭಾವಿಸಿದನು; ಆದರೆ ಅವರು ಹಾಗೆ ತಿಳುಕೊಳ್ಳಲಿಲ್ಲ. 26ಮರುದಿನ ತಾವು ತಾವೇ ಹೊಡೆದಾಡಿಕೊಳ್ಳುತ್ತಿರುವಾಗ ಅವನು ಎದುರಾಗಿ ಬಂದು - ಜನರೇ, ನೀವು ಸಹೋದರರಲ್ಲವೇ? ನೀವೇಕೆ ಒಬ್ಬರಿಗೊಬ್ಬರು ಅನ್ಯಾಯಮಾಡುತ್ತೀರಿ ಎಂದು ಹೇಳಿ ಅವರನ್ನು ಸಮಾಧಾನಪಡಿಸಬೇಕೆಂದಿದ್ದನು. 27ಆದರೆ ತನ್ನ ಸ್ವಕುಲದವನಿಗೆ ಅನ್ಯಾಯಮಾಡುತ್ತಿದ್ದವನು - ನಿನ್ನನ್ನು ನಮ್ಮ ಮೇಲೆ ಅಧಿಕಾರಿಯನ್ನಾಗಿಯೂ ನ್ಯಾಯಾಧಿಪತಿಯನ್ನಾಗಿಯೂ ಇಟ್ಟವರು ಯಾರು? 28ನಿನ್ನೆ ಆ ಐಗುಪ್ತ್ಯನನ್ನು ಕೊಂದಂತೆ ನನ್ನನ್ನೂ ಕೊಲ್ಲಬೇಕೆಂದಿದ್ದೀಯೋ ಎಂದು ಅವನನ್ನು ನೂಕಿಬಿಟ್ಟನು. 29ಈ ಮಾತನ್ನು ಕೇಳಿ ಮೋಶೆಯು ಓಡಿಹೋಗಿ ವಿುದ್ಯಾನ್ ದೇಶದಲ್ಲಿ ಪ್ರವಾಸಿಯಾದನು. ಅಲ್ಲಿ ಇಬ್ಬರು ಗಂಡುಮಕ್ಕಳನ್ನು ಪಡೆದನು.
30ನಾಲ್ವತ್ತು ವರುಷ ತುಂಬಿದ ಮೇಲೆ ದೇವದೂತನು ಸೀನಾಯಿಬೆಟ್ಟದ ಅಡವಿಯಲ್ಲಿ ಮುಳ್ಳಿನ ಪೊದೆಯೊಳಗೆ ಉರಿಯುವ ಬೆಂಕಿಯಲ್ಲಿ ಅವನಿಗೆ ಕಾಣಿಸಿಕೊಂಡನು. 31ಮೋಶೆಯು ಅದನ್ನು ಕಂಡು ಆ ನೋಟಕ್ಕೆ ಆಶ್ಚರ್ಯಪಟ್ಟು ಚೆನ್ನಾಗಿ ನೋಡಬೇಕೆಂದು ಹತ್ತಿರ ಬರಲು - 32ನಾನು ನಿನ್ನ ಪಿತೃಗಳ ದೇವರು, ಅಬ್ರಹಾಮ ಇಸಾಕ ಯಾಕೋಬರ ದೇವರು ಎಂದು ಕರ್ತನ ಶಬ್ದವುಂಟಾಯಿತು. ಆಗ ಮೋಶೆಯು ನಡುಗುತ್ತಾ ಸ್ಥಿರವಾಗಿ ನೋಡುವದಕ್ಕೆ ಧೈರ್ಯವಿಲ್ಲದವನಾದನು. 33ಮತ್ತು ಕರ್ತನು ಅವನಿಗೆ - ನಿನ್ನ ಕಾಲಿನ ಕೆರಗಳನ್ನು ತೆಗೆ; ನೀನು ನಿಂತಿರುವ ಸ್ಥಳವು ಪರಿಶುದ್ಧ ಭೂವಿು. 34ಐಗುಪ್ತದೇಶದಲ್ಲಿರುವ ನನ್ನ ಜನರ ದುರವಸ್ಥೆಯನ್ನು ನೋಡೇ ನೋಡಿದ್ದೇನೆ; ಅವರ ಮೊರೆಯನ್ನು ಕೇಳಿ ಅವರನ್ನು ಬಿಡಿಸುವದಕ್ಕೆ ಇಳಿದುಬಂದಿದ್ದೇನೆ; ಈಗ ನಿನ್ನನ್ನು ಐಗುಪ್ತದೇಶಕ್ಕೆ ಕಳುಹಿಸುತ್ತೇನೆ, ಬಾ, ಎಂದು ಹೇಳಿದನು.
35ಅವರು ಯಾವ ಮೋಶೆಯನ್ನು - ನಿನ್ನನ್ನು ಅಧಿಕಾರಿಯನ್ನಾಗಿಯೂ ನ್ಯಾಯಾಧಿಪತಿಯನ್ನಾಗಿಯೂ ಇಟ್ಟವರು ಯಾರೆಂದು ಹೇಳಿ ಬೇಡವೆಂದರೋ ಅವನನ್ನೇ ದೇವರು ಪೊದೆಯಲ್ಲಿ ಕಾಣಿಸಿಕೊಂಡ ದೂತನ ಕೈಯಿಂದ ಅಧಿಕಾರಿಯನ್ನಾಗಿಯೂ ಬಿಡುಗಡೆಮಾಡುವವನನ್ನಾಗಿಯೂ ನೇವಿುಸಿದನು. 36ಅವನೇ ಐಗುಪ್ತದೇಶದಲ್ಲಿಯೂ ಕೆಂಪು ಸಮುದ್ರದಲ್ಲಿಯೂ ನಾಲ್ವತ್ತು ವರುಷ ಅಡವಿಯಲ್ಲಿಯೂ ಅದ್ಭುತಕಾರ್ಯಗಳನ್ನೂ ಸೂಚಕಕಾರ್ಯಗಳನ್ನೂ ಮಾಡುತ್ತಾ ಅವರನ್ನು ನಡಿಸಿಕೊಂಡು ಬಂದವನು. 37ಆ ಮೋಶೆಯೇ - ದೇವರು ನನ್ನನ್ನು ಏರ್ಪಡಿಸಿದಂತೆ ನಿಮ್ಮ ಸಹೋದರರಲ್ಲಿ ಮತ್ತೊಬ್ಬ ಪ್ರವಾದಿಯನ್ನು ನಿಮಗೆ ಏರ್ಪಡಿಸಿಕೊಡುವನು ಎಂದು ಇಸ್ರಾಯೇಲ್ ಜನರಿಗೆ ಹೇಳಿದವನು. 38ಅವನೇ ಸೀನಾಯಿಬೆಟ್ಟದಲ್ಲಿ ತನ್ನೊಡನೆ ಮಾತಾಡಿದ ದೂತನಿಗೂ ನಮ್ಮ ಪಿತೃಗಳಿಗೂ ಅಡವಿಯಲ್ಲಿದ್ದ ಸಭೆಯೊಳಗೆ ಮಧ್ಯಸ್ಥನಾಗಿದ್ದು ಜೀವಕರವಾದ ದೇವೋಕ್ತಿಗಳನ್ನು ಹೊಂದಿ ನಮಗೆ ಕೊಟ್ಟವನು. 39ಆದರೆ ನಮ್ಮ ಪಿತೃಗಳು ಅವನ ಮಾತುಗಳನ್ನು ಕೇಳುವದಕ್ಕೆ ಮನಸ್ಸಿಲ್ಲದವರಾಗಿ ಅವನನ್ನು ತಳ್ಳಿ ಬಿಟ್ಟು ತಿರಿಗಿ ಐಗುಪ್ತದೇಶದ ಕಡೆಗೆ ಮನಸ್ಸಿಟ್ಟರು. 40ಅವರು ಆರೋನನಿಗೆ - ಐಗುಪ್ತದೇಶದಿಂದ ನಮ್ಮನ್ನು ಕರಕೊಂಡು ಬಂದ ಆ ಮೋಶೆಯು ಏನಾದನೋ ಗೊತ್ತಿಲ್ಲ, ನಮ್ಮ ಮುಂದುಗಡೆಯಲ್ಲಿ ಹೋಗುವದಕ್ಕೆ ದೇವರುಗಳನ್ನು ನಮಗೆ ಮಾಡಿಕೊಡು ಎಂದು ಹೇಳಿದರು. 41ಆ ದಿನಗಳಲ್ಲಿ ಅವರು ಒಂದು ಬಸವನನ್ನು ಮಾಡಿ ಆ ವಿಗ್ರಹಕ್ಕೆ ಬಲಿಯನ್ನರ್ಪಿಸಿ ತಮ್ಮ ಕೈಗಳಿಂದ ಮಾಡಿದ ವಸ್ತುಗಳಲ್ಲಿ ಉಲ್ಲಾಸಪಟ್ಟರು. 42ಆದರೆ ದೇವರು ಅವರಿಗೆ ವಿಮುಖನಾಗಿ ಆಕಾಶದ ನಕ್ಷತ್ರ ಗಣವನ್ನು ಪೂಜಿಸುವದಕ್ಕೆ ಅವರನ್ನು ಒಪ್ಪಿಸಿಬಿಟ್ಟನು. ಪ್ರವಾದಿಗಳ ಗ್ರಂಥದಲ್ಲಿ ಬರೆದಿರುವದೇನಂದರೆ -
ಇಸ್ರಾಯೇಲ್ ವಂಶದವರೇ, ನೀವು ಅರಣ್ಯದಲ್ಲಿದ್ದ ನಾಲ್ವತ್ತು ವರುಷ
ನನಗೆ ಯಜ್ಞಗಳನ್ನೂ ಬಲಿಗಳನ್ನೂ ಅರ್ಪಿಸುತ್ತಿದ್ದಿರೋ? ಇಲ್ಲವಲ್ಲಾ;
43ಅದಕ್ಕೆ ಬದಲಾಗಿ ನೀವು ಪೂಜಿಸಬೇಕೆಂದು ಮಾಡಿಕೊಂಡ ಮೂರ್ತಿಗಳನ್ನು
ಅಂದರೆ ಮೊಲೋಖನ ಗುಡಾರವನ್ನೂ
ರೊಂಫಾ#7.43 ಅಂದರೆ ಶನಿ. ದೇವತೆಯ ನಕ್ಷತ್ರರೂಪವನ್ನೂ ಹೊತ್ತುಕೊಂಡು ಹೋದಿರಿ.
ಆದದರಿಂದ ನಾನು ನಿಮ್ಮನ್ನು ಬಾಬೆಲಿನ ಆಚೆಗೆ ಗಡೀಪಾರು ಮಾಡುವೆನು ಎಂಬದು.
44ದೇವದರ್ಶನಗುಡಾರವು ಅಡವಿಯೊಳಗೆ ನಮ್ಮ ಪಿತೃಗಳ ಬಳಿಯಲ್ಲಿ ಇತ್ತು. ಮೋಶೆಯ ಸಂಗಡ ಮಾತಾಡಿದವನು - ನೀನು ನೋಡಿದ ಮಾದರಿಯ ಪ್ರಕಾರವೇ ಅದನ್ನು ಮಾಡಿಸಬೇಕೆಂದು ನೇವಿುಸಿದ್ದನು. 45ನಮ್ಮ ಹಿರಿಯರು ಅದನ್ನು ತಮ್ಮ ತಂದೆಗಳಿಂದ ಹೊಂದಿದರು; ಅವರು ಯೆಹೋಶುವನ ಹಿಂದೆ ಬಂದು ದೇವರು ತಮ್ಮ ಮುಂದೆ ಹೊರಡಿಸಿದ ಅನ್ಯಜನಗಳ ದೇಶವನ್ನು ಸ್ವಾಧೀನಮಾಡಿಕೊಂಡಾಗ ಆ ಗುಡಾರವನ್ನು ಕೂಡ ತಂದರು. ಅದು ದಾವೀದನ ಕಾಲದವರೆಗೂ ಇಲ್ಲೇ ಇತ್ತು. 46ದಾವೀದನು ದೇವರ ಸನ್ನಿಧಾನದಲ್ಲಿ ಕೃಪೆಹೊಂದಿ ಯಾಕೋಬನ#7.46 ಕೆಲವು ಪ್ರತಿಗಳಲ್ಲಿ - ಯಾಕೋಬನ ದೇವರಿಗೋಸ್ಕರವೆಂದು ಬರೆದದೆ. ವಂಶದವರಿಗೋಸ್ಕರ ದೇವಾಲಯವನ್ನು ಕಟ್ಟಿಸುವದಕ್ಕೆ ಅಪ್ಪಣೆಯಾಗಬೇಕೆಂದು ಕೇಳಿಕೊಂಡನು. 47ಆದರೆ ಆತನಿಗೋಸ್ಕರ ಮನೆಯನ್ನು ಕಟ್ಟಿಸಿದವನು ಸೊಲೊಮೋನನು. 48ಆದರೂ ಪರಾತ್ಪರನು ಕೈಯಿಂದ ಕಟ್ಟಿದ ಮನೆಗಳಲ್ಲಿ ವಾಸಮಾಡುವವನಲ್ಲ.
49ಆಕಾಶವು ನನಗೆ ಸಿಂಹಾಸನ,
ಭೂವಿುಯು ನನ್ನ ಪಾದಗಳಿಗೆ ಪೀಠ.
ನೀವು ನನಗೆ ಎಂಥ ಮನೆಯನ್ನು ಕಟ್ಟಿಕೊಡುವಿರಿ?
ನನ್ನ ವಿಶ್ರಾಂತಿಗೆ ತಕ್ಕ ಸ್ಥಳವು ಯಾವದು?
50ಇವುಗಳನ್ನೆಲ್ಲಾ ನನ್ನ ಕೈಯೇ ನಿರ್ಮಿಸಿತಲ್ಲಾ ಎಂಬದಾಗಿ ಕರ್ತನು ಹೇಳುತ್ತಾನೆ
ಎಂದು ಪ್ರವಾದಿಯು ನುಡಿದಿದ್ದಾನೆ.
51ಚಂಡಿಗಳೇ, ಮನಶ್ಶುದ್ಧಿಯೂ#7.51 ಮೂಲ: ಹೃದಯದಲ್ಲಿಯೂ ಕಿವಿಯಲ್ಲಿಯೂ ಸುನ್ನತಿಯಿಲ್ಲದವರೇ. ವಿಮೋ. 32.9; ಧರ್ಮೋ. 10.16; ಯೆರೆ. 4.4; ರೋಮಾ. 2.28,29 ನೋಡಿರಿ. ಕರ್ಣಶುದ್ಧಿಯೂ ಇಲ್ಲದವರೇ, ನಿಮ್ಮ ಪಿತೃಗಳು ಹೇಗೋ ಹಾಗೆಯೇ ನೀವೂ ಯಾವಾಗಲೂ ಪವಿತ್ರಾತ್ಮನನ್ನು ಎದುರಿಸುವವರಾಗಿದ್ದೀರಿ. 52ಪ್ರವಾದಿಗಳಲ್ಲಿ ನಿಮ್ಮ ಪಿತೃಗಳು ಹಿಂಸೆಪಡಿಸದವರು ಯಾರಿದ್ದಾರೆ? ಅವರು ಆ ನೀತಿ ಸ್ವರೂಪನ ಆಗಮನದ ವಿಷಯದಲ್ಲಿ ಮುಂತಿಳಿಸಿದವರನ್ನು ಕೊಂದರು, ನೀವು ಈಗ ಆತನನ್ನು ಹಿಡುಕೊಟ್ಟು ಕೊಂದವರಾದಿರಿ. 53ದೇವದೂತರ ಮೂಲಕ ನೇಮಕವಾದ ಧರ್ಮಶಾಸ್ತ್ರವನ್ನು ನೀವು ಹೊಂದಿದವರಾದರೂ ಅದನ್ನು ಅನುಸರಿಸುವದಿಲ್ಲ ಎಂದು ಹೇಳಿದನು.
54ಈ ಮಾತುಗಳನ್ನು ಕೇಳಿ ಅವರು ರೌದ್ರಮನಸ್ಸುಳ್ಳವರಾಗಿ ಅವನ ಮೇಲೆ ಹಲ್ಲು ಕಡಿದರು. 55ಆದರೆ ಅವನು ಪವಿತ್ರಾತ್ಮಭರಿತನಾಗಿ ಆಕಾಶದ ಕಡೆಗೆ ದೃಷ್ಟಿಸಿನೋಡಿ ದೇವರ ಪ್ರಭಾವವನ್ನೂ ದೇವರ ಬಲಗಡೆಯಲ್ಲಿ ನಿಂತಿದ್ದ ಯೇಸುವನ್ನೂ ಕಂಡು - 56ಅಗೋ, ಆಕಾಶವು ತೆರೆದಿರುವದನ್ನೂ ಮನುಷ್ಯಕುಮಾರನು ದೇವರ ಬಲಗಡೆಯಲ್ಲಿ ನಿಂತಿರುವದನ್ನೂ ನೋಡುತ್ತೇನೆ ಎಂದು ಹೇಳಿದನು. 57ಆದರೆ ಅವರು ಮಹಾ ಶಬ್ದದಿಂದ ಕೂಗಿ ಕಿವಿಗಳನ್ನು ಮುಚ್ಚಿಕೊಂಡು ಒಟ್ಟಾಗಿ ಅವನ ಮೇಲೆ ಬಿದ್ದು 58ಅವನನ್ನು ಊರ ಹೊರಕ್ಕೆ ನೂಕಿಕೊಂಡು ಹೋಗಿ ಕೊಲ್ಲುವದಕ್ಕೆ ಕಲ್ಲೆಸೆದರು. ಸಾಕ್ಷಿಯವರು ತಮ್ಮ ಬಟ್ಟೆಗಳನ್ನು ತೆಗೆದು ಸೌಲನೆಂಬ ಒಬ್ಬ ಯೌವನಸ್ಥನ ಕಾಲುಗಳ ಬಳಿಯಲ್ಲಿ ಇಟ್ಟರು. 59ಅವರು ಸ್ತೆಫನನ ಮೇಲೆ ಕಲ್ಲೆಸೆಯುತ್ತಾ ಇರಲು ಅವನು ಕರ್ತನ ಹೆಸರನ್ನು ಹೇಳಿ - 60ಯೇಸುಸ್ವಾವಿುಯೇ, ನನ್ನಾತ್ಮವನ್ನು ಸೇರಿಸಿಕೋ ಎಂದು ಪ್ರಾರ್ಥಿಸಿ ಮೊಣಕಾಲೂರಿ - ಕರ್ತನೇ, ಈ ಪಾಪವನ್ನು ಅವರ ಮೇಲೆ ಹೊರಿಸಬೇಡವೆಂದು ಮಹಾಶಬ್ದದಿಂದ ಕೂಗಿದನು.

Highlight

Share

Copy

None

Want to have your highlights saved across all your devices? Sign up or sign in