YouVersion Logo
Search Icon

ಅಪೊಸ್ತಲರ ಕೃತ್ಯಗಳು 5

5
1ಆದರೆ ಅನನೀಯನೆಂಬ ಒಬ್ಬ ಮನುಷ್ಯನು ಸಪ್ಫೈರಳೆಂಬ ತನ್ನ ಹೆಂಡತಿಯ ಸಮೇತ, ಒಂದು ಭೂವಿುಯನ್ನು ಮಾರಿ 2ಹೆಂಡತಿಯ ಸಮ್ಮತಿಯಿಂದ ಅದರ ಕ್ರಯದಲ್ಲಿ ಒಂದು ಭಾಗವನ್ನು ಬಚ್ಚಿಟ್ಟುಕೊಂಡು ಒಂದು ಭಾಗವನ್ನು ತಂದು ಅಪೊಸ್ತಲರ ಪಾದಗಳ ಬಳಿಯಲ್ಲಿ ಇಟ್ಟನು. 3ಆಗ ಪೇತ್ರನು - ಅನನೀಯಾ, ಸೈತಾನನು ನಿನ್ನ ಹೃದಯದಲ್ಲಿ ತುಂಬಿಕೊಂಡದ್ದೇನು? ನೀನು ಯಾಕೆ ಆ ಹೊಲದ ಕ್ರಯದಲ್ಲಿ ಕೆಲವನ್ನು ಬಚ್ಚಿಟ್ಟುಕೊಂಡು ಪವಿತ್ರಾತ್ಮನನ್ನು ವಂಚಿಸಬೇಕೆಂದಿದ್ದೀ? 4ಆ ಆಸ್ತಿ ಇದ್ದಾಗ ನಿನ್ನದಾಗಿಯೇ ಇತ್ತಲ್ಲವೇ. ಮಾರಿದ ಮೇಲೆಯೂ ಬಂದ ಹಣವು ನಿನ್ನ ಅಧೀನದಲ್ಲೇ ಇತ್ತಲ್ಲವೇ. ನೀನು ಈ ಕಾರ್ಯವನ್ನು ನಿನ್ನ ಹೃದಯದಲ್ಲಿ ಯೋಚಿಸಿಕೊಂಡದ್ದು ಯಾಕೆ? ನೀನು ಸುಳ್ಳಾಡಿದ್ದು ಮನುಷ್ಯರಿಗಲ್ಲ, ದೇವರಿಗೆ ಆಡಿದಿ ಅಂದನು. 5ಈ ಮಾತುಗಳನ್ನು ಅನನೀಯನು ಕೇಳಿದ ಕೂಡಲೆ ಬಿದ್ದು ಪ್ರಾಣಬಿಟ್ಟನು; ಕೇಳಿದವರೆಲ್ಲರಿಗೂ ಮಹಾ ಭಯ ಹಿಡಿಯಿತು. 6ಆಗ ಯೌವನಸ್ಥರು ಎದ್ದು ಅವನನ್ನು ವಸ್ತ್ರದಲ್ಲಿ ಸುತ್ತಿ ಹೊತ್ತುಕೊಂಡು ಹೋಗಿ ಹೂಣಿಟ್ಟರು.
7ಸುಮಾರು ಮೂರು ಘಂಟೆ ಹೊತ್ತಿನ ಮೇಲೆ ಅವನ ಹೆಂಡತಿಯು ನಡೆದ ಸಂಗತಿಯನ್ನು ತಿಳಿಯದೆ ಒಳಗೆ ಬಂದಳು. 8ಪೇತ್ರನು ಆಕೆಯನ್ನು ನೋಡಿ - ನೀವು ಆ ಹೊಲವನ್ನು ಮಾರಿದ್ದು ಇಷ್ಟೇ ಹಣಕ್ಕೋ? ನನಗೆ ಹೇಳು ಎಂದು ಕೇಳಲು ಆಕೆಯು - ಹೌದು, ಇಷ್ಟಕ್ಕೇ ಅಂದಳು. 9ಆಗ ಪೇತ್ರನು ಆಕೆಗೆ - ನೀವಿಬ್ಬರೂ ಕರ್ತನ ಆತ್ಮನನ್ನು ಪರೀಕ್ಷಿಸುವದಕ್ಕೆ ಯಾಕೆ ಒಡಂಬಟ್ಟಿರಿ? ಅಗೋ, ನಿನ್ನ ಗಂಡನನ್ನು ಹೂಣಿಟ್ಟವರು ಬಂದು ಬಾಗಿಲಿನಲ್ಲಿ ಕಾಲಿಟ್ಟಿದ್ದಾರೆ, ನಿನ್ನನ್ನೂ ಹೊತ್ತುಕೊಂಡು ಹೋಗುವರು ಎಂದು ಹೇಳಿದನು. 10ಕೂಡಲೆ ಆಕೆಯು ಅವನ ಪಾದಗಳ ಮುಂದೆ ಬಿದ್ದು ಪ್ರಾಣಬಿಟ್ಟಳು. ಆ ಯೌವನಸ್ಥರು ಒಳಗೆ ಬಂದು ಆಕೆಯು ಸತ್ತಿರುವದನ್ನು ಕಂಡು ಆಕೆಯನ್ನು ಹೊತ್ತುಕೊಂಡು ಹೋಗಿ ಗಂಡನ ಮಗ್ಗುಲಲ್ಲಿ ಹೂಣಿಟ್ಟರು. 11ಮತ್ತು ಸರ್ವಸಭೆಗೂ ಈ ಸಂಗತಿಗಳನ್ನು ಕೇಳಿದವರೆಲ್ಲರಿಗೂ ಮಹಾ ಭಯಹಿಡಿಯಿತು.
ಅಧಿಕಾರಿಗಳು ಅಪೊಸ್ತಲರನ್ನು ಸೆರೆಯಲ್ಲಿ ಹಾಕಿಸಲು ದೇವದೂತನು ಅವರನ್ನು ಬಿಡಿಸಿದ್ದು; ಅವರ ವಿಷಯದಲ್ಲಿ ಗಮಲಿಯೇಲನು ಹೇಳಿದ ಆಲೋಚನೆ
12ಇದಲ್ಲದೆ ಅಪೊಸ್ತಲರ ಕೈಯಿಂದ ಅನೇಕ ಸೂಚಕಕಾರ್ಯಗಳೂ ಅದ್ಭುತಕಾರ್ಯಗಳೂ ಜನರಲ್ಲಿ ನಡೆಯುತ್ತಾ ಇದ್ದವು. ಮತ್ತು ಎಲ್ಲರು ಒಗ್ಗಟ್ಟಾಗಿ ಸೊಲೊಮೋನನ ಮಂಟಪದಲ್ಲಿ ಇರುತ್ತಿದ್ದರು. 13ಅವರ ಜೊತೆಯಲ್ಲಿರುವದಕ್ಕೆ ವಿುಕ್ಕಾದವರೊಳಗೆ ಒಬ್ಬರಿಗೂ ಧೈರ್ಯವಿರಲಿಲ್ಲ. ಆದರೂ ಜನರು ಅವರನ್ನು ಬಹಳವಾಗಿ ಕೊಂಡಾಡುತ್ತಿದ್ದರು; 14ಮತ್ತು ಇನ್ನು ಎಷ್ಟೋ ಮಂದಿ ಗಂಡಸರೂ ಹೆಂಗಸರೂ ಕರ್ತನಲ್ಲಿ ನಂಬಿಕೆಯಿಡುವವರಾಗಿ ಅವರ ಮಂಡಲಿಯಲ್ಲಿ ಸೇರಿಕೊಳ್ಳುತ್ತಿದ್ದರು. 15ಹೀಗಿರುವದರಿಂದ ಜನರು ರೋಗಿಗಳನ್ನು ದೋಲಿಗಳ ಮೇಲೆಯೂ ಹಾಸಿಗೆಗಳ ಮೇಲೆಯೂ ಇಟ್ಟು ಪೇತ್ರನು ಬರುವಾಗ್ಗೆ ಅವನ ನೆರಳು ಇವರಲ್ಲಿ ಯಾವನ ಮೇಲಾದರೂ ಬೀಳಲಿ ಎಂದು ಅವರನ್ನು ಬೀದಿಗೆ ತೆಗೆದುಕೊಂಡು ಬರುತ್ತಿದ್ದರು. 16ಯೆರೂಸಲೇವಿುನ ಸುತ್ತಲಿರುವ ಊರುಗಳ ಜನರು ಸಹ ರೋಗಿಗಳನ್ನೂ ದೆವ್ವಗಳ ಕಾಟವಿದ್ದವರನ್ನೂ ಹೊತ್ತುಕೊಂಡು ಗುಂಪು ಗುಂಪಾಗಿ ಬರುತ್ತಿದ್ದರು; ಅವರೆಲ್ಲರಿಗೂ ವಾಸಿಯಾಗುವದು.
17ಹೀಗಿರುವಲ್ಲಿ ಮಹಾಯಾಜಕನೂ ಸದ್ದುಕಾಯರ ಮತಕ್ಕೆ ಸೇರಿದವರಾದ ಅವನ ಜೊತೆಯಲ್ಲಿದ್ದವರೆಲ್ಲರೂ ಎದ್ದು 18ಮತಾಭಿಮಾನದಿಂದ ತುಂಬಿದವರಾಗಿ ಅಪೊಸ್ತಲರನ್ನು ಹಿಡಿದು ಪಟ್ಟಣದ ಕಾವಲಿನಲ್ಲಿಟ್ಟರು. 19ಆದರೆ ಕರ್ತನ ದೂತನು ರಾತ್ರಿಯಲ್ಲಿ ಸೆರೆಮನೆಯ ಬಾಗಿಲುಗಳನ್ನು ತೆರೆದು ಅವರನ್ನು ಹೊರಕ್ಕೆ ಕರೆದುಕೊಂಡು ಬಂದು - 20ನೀವು ಹೋಗಿ ದೇವಾಲಯದಲ್ಲಿ ನಿಂತುಕೊಂಡು ಈ ಸಜ್ಜೀವವಿಷಯವಾದ ಮಾತುಗಳನ್ನೆಲ್ಲಾ ಜನರಿಗೆ ಹೇಳಿರಿ ಅಂದನು. 21ಅವರು ಈ ಆಜ್ಞೆಯನ್ನು ಹೊಂದಿ ಬೆಳಕುಹರಿಯುವಾಗಲೇ ದೇವಾಲಯದೊಳಗೆ ಹೋಗಿ ಉಪದೇಶ ಮಾಡಿದರು. ಇತ್ತಲಾಗಿ ಮಹಾಯಾಜಕನೂ ಅವನ ಜೊತೆಯಲ್ಲಿದ್ದವರೂ ಬಂದು ಹಿರೀಸಭೆಯನ್ನೂ ಇಸ್ರಾಯೇಲ್ಯರ ಯಜಮಾನರ ಸಭೆಯೆಲ್ಲವನ್ನೂ ಕೂಡಿಸಿ ಅವರನ್ನು ಕರತರುವದಕ್ಕೆ ಸೆರೆಮನೆಗೆ ಕಳುಹಿಸಿದರು. 22ಓಲೇಕಾರರು ಹೋಗಿ ಅವರನ್ನು ಸೆರೆಮನೆಯಲ್ಲಿ ಕಾಣದೆ ಹಿಂತಿರಿಗಿ ಬಂದು - 23ಕಾವಲಿನ ಮನೆ ಪೂರ್ಣ ಭದ್ರವಾಗಿ ಮುಚ್ಚಿರುವದನ್ನೂ ಕಾವಲುಗಾರರು ಬಾಗಿಲುಗಳಲ್ಲಿ ನಿಂತಿರುವದನ್ನೂ ಕಂಡೆವು; ಆದರೆ ತೆರೆದಾಗ ಒಳಗೆ ಒಬ್ಬರನ್ನೂ ಕಾಣಲಿಲ್ಲ ಎಂದು ತಿಳಿಸಿದರು.
24ದೇವಾಲಯದ ಅಧಿಪತಿಯೂ ಮಹಾಯಾಜಕರೂ ಈ ಮಾತುಗಳನ್ನು ಕೇಳಿ ಇದರಿಂದ ಏನಾದೀತೋ ಎಂದು ಕಳವಳಪಟ್ಟರು. 25ಹೀಗಿರಲಾಗಿ ಯಾರೋ ಒಬ್ಬನು ಬಂದು - ಅಗೋ, ನೀವು ಸೆರೆಮನೆಯಲ್ಲಿಟ್ಟಿದ್ದ ಆ ಮನುಷ್ಯರು ದೇವಾಲಯದಲ್ಲಿ ನಿಂತುಕೊಂಡು ಜನರಿಗೆ ಉಪದೇಶಮಾಡುತ್ತಿದ್ದಾರೆಂದು ಅವರಿಗೆ ತಿಳಿಸಿದನು. 26ಆಗ ಅಧಿಪತಿಯು ಓಲೇಕಾರರ ಸಂಗಡ ಹೋಗಿ ಅವರನ್ನು ಕರೆದುಕೊಂಡು ಬಂದನು; ಆದರೆ ತಮಗೆ ಜನರು ಕಲ್ಲೆಸೆದಾರೆಂದು ಹೆದರಿ ಬಲಾತ್ಕಾರ ಮಾಡಲಿಲ್ಲ. 27ಅವರನ್ನು ಕರತಂದು ಹಿರೀಸಭೆಯ ಮುಂದೆ ನಿಲ್ಲಿಸಲು ಮಹಾಯಾಜಕನು ಅವರನ್ನು ವಿಚಾರಣೆ ಮಾಡುತ್ತಾ - 28ನೀವು ಈ ಹೆಸರನ್ನು ಎತ್ತಿ ಉಪದೇಶ ಮಾಡಲೇಬಾರದೆಂದು ನಾವು ನಿಮಗೆ ಖಂಡಿತವಾಗಿ ಅಪ್ಪಣೆಕೊಟ್ಟೆವಲ್ಲಾ; ಆದರೂ ನೀವು ಯೆರೂಸಲೇಮನ್ನು ನಿಮ್ಮ ಉಪದೇಶದಿಂದ ತುಂಬಿಸಿದಿರಿ, ಮತ್ತು ಆ ಮನುಷ್ಯನನ್ನು ಕೊಲ್ಲಿಸಿದ್ದಕ್ಕೆ ನಮ್ಮನ್ನು ಹೊಣೆಮಾಡಬೇಕೆಂದಿದ್ದೀರಿ ಎಂದು ಹೇಳಿದ್ದಕ್ಕೆ 29ಪೇತ್ರನೂ ಉಳಿದ ಅಪೊಸ್ತಲರೂ - ಮನುಷ್ಯರಿಗಿಂತಲೂ ದೇವರಿಗೆ ಹೆಚ್ಚಾಗಿ ವಿಧೇಯರಾಗಿರಬೇಕಲ್ಲಾ. 30ನೀವು ಮರದ ಕಂಬಕ್ಕೆ ತೂಗಹಾಕಿ ಕೊಂದ ಯೇಸುವನ್ನು ನಮ್ಮ ಪಿತೃಗಳ ದೇವರು ಎಬ್ಬಿಸಿದನು. 31ದೇವರು ಆತನನ್ನೇ ಇಸ್ರಾಯೇಲ್ ಜನರಿಗೆ ಮಾನಸಾಂತರವನ್ನೂ ಪಾಪಪರಿಹಾರವನ್ನೂ ದಯಪಾಲಿಸುವದಕ್ಕಾಗಿ ನಾಯಕನೆಂತಲೂ ರಕ್ಷಕನೆಂತಲೂ ತನ್ನ ಬಲಗೈಯಿಂದ ಉನ್ನತಸ್ಥಾನಕ್ಕೆ ಏರಿಸಿದನು. 32ಈ ಕಾರ್ಯಗಳಿಗೆ ನಾವು ಸಾಕ್ಷಿ; ದೇವರು ತನಗೆ ವಿಧೇಯರಾಗಿರುವವರಿಗೆ ದಯಪಾಲಿಸಿರುವ ಪವಿತ್ರಾತ್ಮನೂ ಸಾಕ್ಷಿ ಎಂದು ಹೇಳಿದರು.
33ಸಭಿಕರು ಈ ಮಾತನ್ನು ಕೇಳಿ ರೌದ್ರವಾಗಿ ಅವರನ್ನು ಕೊಲ್ಲಿಸಬೇಕೆಂದು ಯೋಚಿಸಿದರು; 34ಆದರೆ ಎಲ್ಲಾ ಜನರಿಂದ ಮಾನಹೊಂದಿದ ನ್ಯಾಯಶಾಸ್ತ್ರಿಯಾದ ಗಮಲಿಯೇಲನೆಂಬ ಒಬ್ಬ ಫರಿಸಾಯನು ಹಿರೀಸಭೆಯಲ್ಲಿ ಎದ್ದುನಿಂತು ಈ ಮನುಷ್ಯರನ್ನು ಸ್ವಲ್ಪ ಹೊತ್ತು ಹೊರಗೆ ಕಳುಹಿಸಬೇಕೆಂದು ಅಪ್ಪಣೆಕೊಟ್ಟು ಸಭೆಯವರಿಗೆ - 35ಇಸ್ರಾಯೇಲ್ ಜನರೇ, ನೀವು ಈ ಮನುಷ್ಯರ ವಿಷಯದಲ್ಲಿ ಮಾಡಬೇಕೆಂದಿರುವದನ್ನು ಕುರಿತು ಎಚ್ಚರಿಕೆಯುಳ್ಳವರಾಗಿರ್ರಿ. 36ಇದಕ್ಕಿಂತ ಮುಂಚೆ ಥೈದನು ಎದ್ದು ತಾನು ದೊಡ್ಡ ಮನುಷ್ಯನೆಂದು ಹೇಳಿಕೊಂಡನು. ಅವನ ಪಕ್ಷಕ್ಕೆ ಸುಮಾರು ನಾನೂರು ಜನರು ಸೇರಿಕೊಂಡರು. ಅವನು ಕೊಲ್ಲಲ್ಪಟ್ಟನು, ಮತ್ತು ಅವನನ್ನು ನಂಬಿದವರೆಲ್ಲರು ಚದರಿಸಲ್ಪಟ್ಟು ಇಲ್ಲವಾದರು. 37ಅವನ ತರುವಾಯ ಖಾನೇಷುಮಾರಿಯ ಕಾಲದಲ್ಲಿ ಗಲಿಲಾಯದ ಯೂದನು ಎದ್ದು ಜನರನ್ನು ತನ್ನ ಸಹಿತ ತಿರುಗಿಬೀಳುವದಕ್ಕೆ ಪ್ರೇರೇಪಿಸಿದನು. ಅವನೂ ಹಾಳಾದನು; ಮತ್ತು ಅವನನ್ನು ನಂಬಿದವರೆಲ್ಲರು ಚದರಿಹೋದರು. 38ಹೀಗಿರುವದರಿಂದ ನಾನು ನಿಮಗೆ ಹೇಳುವದೇನಂದರೆ ನೀವು ಆ ಮನುಷ್ಯರ ಗೊಡವೆಗೆ ಹೋಗಬೇಡಿರಿ, ಅವರನ್ನು ಬಿಡಿರಿ; ಯಾಕಂದರೆ ಈ ಯೋಚನೆಯು ಅಥವಾ ಈ ಕೆಲಸವು ಮನುಷ್ಯರಿಂದಾಗಿದ್ದರೆ ತಾನೇ ಕೆಡುವದು; 39ಅದು ದೇವರಿಂದಾಗಿದ್ದರೆ ಅದನ್ನು ಕೆಡಿಸುವದಕ್ಕೆ ನಿಮ್ಮಿಂದ ಆಗುವದಿಲ್ಲ. ನೀವು ಒಂದು ವೇಳೆ ದೇವರ ಮೇಲೆ ಯುದ್ಧಮಾಡುವವರಾಗಿ ಕಾಣಿಸಿಕೊಂಡೀರಿ ಎಂದು ಹೇಳಿದನು.
40ಅವರು ಅವನ ಮಾತಿಗೆ ಒಪ್ಪಿ ಅಪೊಸ್ತಲರನ್ನು ಕರೆಸಿ ಹೊಡಿಸಿ ಯೇಸುವಿನ ಹೆಸರನ್ನು ಹೇಳಿ ಮಾತಾಡಬಾರದೆಂದು ಅಪ್ಪಣೆಕೊಟ್ಟು ಅವರನ್ನು ಬಿಟ್ಟು ಬಿಟ್ಟರು. 41ಅಪೊಸ್ತಲರು ತಾವು ಆ ಹೆಸರಿನ ನಿವಿುತ್ತವಾಗಿ ಅವಮಾನ ಪಡುವದಕ್ಕೆ ಯೋಗ್ಯರೆನಿಸಿಕೊಂಡೆವೆಂದು ಸಂತೋಷಿಸುತ್ತಾ 42ಹಿರೀಸಭೆಯ ಎದುರಿನಿಂದ ಹೊರಟುಹೋಗಿ ಪ್ರತಿದಿನ ಎಡೆಬಿಡದೆ ದೇವಾಲಯದಲ್ಲಿಯೂ ಮನೆಮನೆಯಲ್ಲಿಯೂ ಉಪದೇಶಮಾಡುತ್ತಾ ಕ್ರಿಸ್ತನಾದ ಯೇಸುವಿನ ವಿಷಯವಾದ ಶುಭವರ್ತಮಾನವನ್ನು ಸಾರುತ್ತಾ ಇದ್ದರು.

Highlight

Share

Copy

None

Want to have your highlights saved across all your devices? Sign up or sign in