YouVersion 標識
搜索圖示

ಆದಿಕಾಂಡ 4

4
ಮೊದಲನೆಯ ಕುಟುಂಬ
1ಆದಾಮ ಮತ್ತು ಹವ್ವಳು ಕೂಡಿದರು. ಆದ್ದರಿಂದ ಹವ್ವಳಿಗೆ ಒಂದು ಮಗು ಜನಿಸಿತು. ಹವ್ವಳು, “ಯೆಹೋವನ ಸಹಾಯದಿಂದ ಗಂಡುಮಗುವನ್ನು ಪಡೆದಿದ್ದೇನೆ” ಎಂದು ಹೇಳಿ ಆ ಮಗುವಿಗೆ ಕಾಯಿನ ಎಂದು ಹೆಸರಿಟ್ಟಳು.
2ಆಮೇಲೆ, ಹವ್ವಳಿಗೆ ಮತ್ತೊಂದು ಮಗು ಜನಿಸಿತು. ಈ ಮಗುವೇ ಕಾಯಿನನ ತಮ್ಮನಾದ ಹೇಬೆಲ. ಹೇಬೆಲನು ಕುರುಬನಾದನು ಕಾಯಿನನು ರೈತನಾದನು.
ಮೊದಲನೆಯ ಕೊಲೆ
3ಸ್ವಲ್ಪ ಕಾಲದ ನಂತರ ಕಾಯಿನನು ದೇವರಿಗೆ ಕೃತಜ್ಞತಾ ಕಾಣಿಕೆಯನ್ನು ತಂದನು. ಕಾಯಿನನು ತಾನು ಹೊಲದಲ್ಲಿ ಬೆಳೆದ ಕೆಲವು ಆಹಾರಪದಾರ್ಥಗಳನ್ನು ತಂದನು. 4ಹೇಬೆಲನು ತನ್ನ ಕುರಿಮಂದೆಯಿಂದ ಒಳ್ಳೆಯ ಚೊಚ್ಚಲ ಕುರಿಗಳನ್ನು ಮತ್ತು ಅವುಗಳ ಒಳ್ಳೆಯ ಕೊಬ್ಬಿದ ಭಾಗಗಳನ್ನು ತಂದನು.
ಯೆಹೋವನು ಹೇಬೆಲನ ಕಾಣಿಕೆಯನ್ನು ಸ್ವೀಕರಿಸಿದನು; 5ಆದರೆ ಕಾಯಿನನ ಕಾಣಿಕೆಯನ್ನು ಸ್ವೀಕರಿಸಲಿಲ್ಲ. ಇದರಿಂದ ಕಾಯಿನನು ದುಃಖಿತನಾದನು ಮತ್ತು ಬಹಳ ಕೋಪಗೊಂಡನು. 6ಯೆಹೋವನು ಕಾಯಿನನಿಗೆ, “ಏಕೆ ಕೋಪಗೊಂಡಿರುವೆ? ನಿನ್ನ ಮುಖ ವ್ಯಸನದಿಂದಿರುವುದೇಕೆ? 7ನೀನು ಒಳ್ಳೆಯ ಕಾರ್ಯಗಳನ್ನು ಮಾಡಿದರೆ ನಾನು ನಿನ್ನನ್ನು ಸ್ವೀಕರಿಸಿಕೊಳ್ಳುವೆನು. ಆದರೆ ನೀನು ಕೆಟ್ಟಕಾರ್ಯಗಳನ್ನು ಮಾಡಿದರೆ, ಆ ಪಾಪವು ನಿನ್ನೊಂದಿಗಿರುತ್ತದೆ. ನಿನ್ನ ಪಾಪವು ನಿನ್ನನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಇಷ್ಟಪಡುತ್ತದೆ. ಆದರೆ ನೀನು ಆ ಪಾಪವನ್ನು ನಿನ್ನ ಹಿಡಿತದಲ್ಲಿಟ್ಟುಕೊಳ್ಳಬೇಕು”#4:7 ನೀನು … ಕೊಳ್ಳಬೇಕು ಅಥವಾ “ನೀನು ಒಳ್ಳೆಯದನ್ನು ಮಾಡದಿದ್ದರೆ ಪಾಪವು ಬಾಗಿಲ ಬಳಿಯಲ್ಲಿಯೇ ಹೊಂಚು ಹಾಕಿಕೊಂಡಿರುತ್ತದೆ. ಅದಕ್ಕೆ ನೀನು ಬೇಕಾಗಿರುವೆ. ಆದರೆ ನೀನು ಅದರ ಮೇಲೆ ದೊರೆತನ ಮಾಡಬೇಕು.” ಎಂದು ಹೇಳಿದನು.
8ಕಾಯಿನನು ತನ್ನ ತಮ್ಮನಾದ ಹೇಬೆಲನಿಗೆ, “ನಾವು ಹೊಲಕ್ಕೆ ಹೋಗೋಣ ಬಾ” ಎಂದು ಹೇಳಿದನು. ಅಂತೆಯೇ ಕಾಯಿನನು ಮತ್ತು ಹೇಬೆಲನು ಹೊಲಕ್ಕೆ ಹೋದರು. ಅಲ್ಲಿ ಕಾಯಿನನು ತನ್ನ ತಮ್ಮನ ಮೇಲೆರಗಿ ಅವನನ್ನು ಕೊಂದುಹಾಕಿದನು.
9ತರುವಾಯ ಯೆಹೋವನು ಕಾಯಿನನಿಗೆ, “ನಿನ್ನ ತಮ್ಮನಾದ ಹೇಬೆಲನೆಲ್ಲಿ?” ಎಂದು ಕೇಳಿದನು.
ಅದಕ್ಕೆ ಕಾಯಿನನು, “ನನಗೆ ಗೊತ್ತಿಲ್ಲ. ನನ್ನ ತಮ್ಮನನ್ನು ಕಾಯುವುದಾಗಲಿ ನೋಡಿಕೊಳ್ಳುವುದಾಗಲಿ ನನ್ನ ಕೆಲಸವೇ?” ಎಂದು ಉತ್ತರಕೊಟ್ಟನು.
10ಅದಕ್ಕೆ ಯೆಹೋವನು, “ನೀನು ಮಾಡಿದ್ದೇನು? ನೀನು ನಿನ್ನ ತಮ್ಮನನ್ನೇ ಕೊಲೆಮಾಡಿದೆ! ಅವನ ರಕ್ತವು ಭೂಮಿಯ ಕಡೆಯಿಂದ ನನ್ನನ್ನು ಕೂಗುತಿದೆ. 11ನೀನು ನಿನ್ನ ತಮ್ಮನನ್ನು ಕೊಂದುಹಾಕಿದೆ. ನಿನ್ನ ಕೈಗಳಿಂದ ಸುರಿಸಿದ ಅವನ ರಕ್ತವನ್ನು ಕುಡಿಯಲು ಭೂಮಿಯು ಬಾಯಿ ತೆರೆಯಿತು. ಆದ್ದರಿಂದ ಈಗ ಅದು ಶಾಪಗ್ರಸ್ತವಾಗಿದೆ. 12ಕಳೆದ ದಿನಗಳಲ್ಲಿ ನೀನು ಸಸಿಗಳನ್ನು ನೆಟ್ಟಾಗ ಸಸಿಗಳು ಚೆನ್ನಾಗಿ ಬೆಳೆದವು. ಆದರೆ ಈಗ ನೀನು ಸಸಿ ನೆಟ್ಟರೂ ಭೂಮಿ ಫಲಿಸುವುದಿಲ್ಲ. ನಿನಗೆ ಭೂಮಿಯ ಮೇಲೆ ಮನೆ ಇರುವುದಿಲ್ಲ. ನೀನು ಸ್ಥಳದಿಂದ ಸ್ಥಳಕ್ಕೆ ಅಲೆದಾಡುವೆ” ಎಂದು ಹೇಳಿದನು.
13ಅದಕ್ಕೆ ಕಾಯಿನನು ಯೆಹೋವನಿಗೆ, “ಈ ಶಿಕ್ಷೆಯನ್ನು ನಾನು ಸಹಿಸಲಾರೆ! 14ನೀನು ನನ್ನನ್ನು ನನ್ನ ದೇಶದಿಂದ ಬಲವಂತವಾಗಿ ಹೊರಡಿಸುತ್ತಿರುವೆ. ನಿನ್ನನ್ನು ನೋಡುವುದಕ್ಕಾಗಲಿ ನಿನ್ನ ಸಮೀಪದಲ್ಲಿ ಇರುವುದಕ್ಕಾಗಲಿ ನನಗೆ ಸಾಧ್ಯವಿರುವುದಿಲ್ಲ! ನನಗೆ ಮನೆಯೂ ಇಲ್ಲ! ನಾನು ಭೂಮಿಯ ಮೇಲೆ ಸ್ಥಳದಿಂದ ಸ್ಥಳಕ್ಕೆ ಬಲವಂತವಾಗಿ ಅಲೆದಾಡಬೇಕಾಗುವುದು. ನನ್ನನ್ನು ಕಂಡವರು ನನ್ನನ್ನು ಕೊಲ್ಲುವರು” ಎಂದು ಹೇಳಿದನು.
15ಅದಕ್ಕೆ ಯೆಹೋವನು ಕಾಯಿನನಿಗೆ, “ಆ ರೀತಿ ಆಗದಂತೆ ನಾನು ನೋಡಿಕೊಳ್ಳುವೆ! ಕಾಯಿನನೇ, ನಿನ್ನನ್ನು ಯಾವನಾದರೂ ಕೊಂದರೆ, ನಾನು ಅವನನ್ನು ಏಳರಷ್ಟು ಶಿಕ್ಷಿಸುವೆನು” ಎಂದು ಹೇಳಿದನು. ಆಮೇಲೆ ಯೆಹೋವನು ಕಾಯಿನನ ಮೇಲೆ ಒಂದು ಗುರುತಿಟ್ಟನು. ಅವನನ್ನು ಯಾರೂ ಕೊಲ್ಲಕೂಡದೆಂದು ಆ ಗುರುತು ಸೂಚಿಸುತ್ತಿತ್ತು.
ಕಾಯಿನನ ಕುಟುಂಬ
16ಕಾಯಿನನು ಯೆಹೋವನ ಪ್ರಸನ್ನತೆಯಿಂದ ದೂರ ಹೊರಟುಹೋದನು. ಕಾಯಿನನು ನೋದು ಎಂಬ ನಾಡಿನಲ್ಲಿ ವಾಸಿಸಿದನು. ಅದು ಏದೆನ್ ತೋಟಕ್ಕೆ ಪೂರ್ವದಲ್ಲಿರುವುದು.
17ಕಾಯಿನ ಮತ್ತು ಅವನ ಹೆಂಡತಿಗೆ ಒಂದು ಗಂಡುಮಗು ಹುಟ್ಟಿತು. ಅವರು ಆ ಮಗುವಿಗೆ ಹನೋಕ ಎಂದು ಹೆಸರಿಟ್ಟರು. ಕಾಯಿನನು ಒಂದು ಊರನ್ನು ಕಟ್ಟಿದನು. ಆ ಊರಿಗೆ ಅವನು ತನ್ನ ಮಗನ ಹೆಸರನ್ನೇ ಇಟ್ಟನು.
18ಹನೋಕನು ಈರಾದ್ ಎಂಬ ಮಗನನ್ನು ಪಡೆದನು. ಈರಾದನು ಮೆಹೂಯಾಯೇಲ ಎಂಬ ಮಗನನ್ನು ಪಡೆದನು. ಮೆಹೂಯಾಯೇಲನು ಮೆತೂಷಾಯೇಲ ಎಂಬ ಮಗನನ್ನು ಪಡೆದನು. ಮೆತೂಷಾಯೇಲನು ಲೆಮೆಕ ಎಂಬ ಮಗನನ್ನು ಪಡೆದನು.
19ಲೆಮೆಕನು ಇಬ್ಬರು ಹೆಂಗಸರನ್ನು ಮದುವೆ ಮಾಡಿಕೊಂಡನು. ಮೊದಲನೆ ಹೆಂಡತಿಯ ಹೆಸರು ಆದಾ; ಎರಡನೆ ಹೆಂಡತಿಯ ಹೆಸರು ಚಿಲ್ಲಾ. 20ಆದಳಿಗೆ ಯಾಬಾಲ ಎಂಬ ಮಗನು ಹುಟ್ಟಿದನು. ಗುಡಾರಗಳಲ್ಲಿದ್ದುಕೊಂಡು ಪಶುಗಳನ್ನು ಸಾಕಿಕೊಂಡು ಜೀವನ ಮಾಡುತ್ತಿದ್ದ ಜನರಿಗೆ ಯಾಬಾಲನೇ ಮೂಲಪಿತೃ. 21ಆದಳಿಗೆ ಮತ್ತೊಬ್ಬ ಮಗ ಹುಟ್ಟಿದನು. ಅವನೇ ಯೂಬಾಲ. ಕಿನ್ನರಿಕೊಳಲುಗಳನ್ನು ನುಡಿಸುವ ಜನರಿಗೆ ಯೂಬಾಲನೇ ಮೂಲಪಿತೃ.
22ಚಿಲ್ಲಾಳಿಗೆ ತೂಬಲ್‌ಕಾಯಿನ ಎಂಬ ಮಗನು ಹುಟ್ಟಿದನು. ಕಬ್ಬಿಣ ಮತ್ತು ತಾಮ್ರಗಳಿಂದ ಉಪಕರಣ ಮಾಡುತ್ತಿದ್ದವರಿಗೆ ತೂಬಲ್‌ಕಾಯಿನನೇ ಮೂಲಪಿತೃ. ತೂಬಲ್‌ಕಾಯಿನನ ತಂಗಿ ನಯಮಾ.
23ಲೆಮೆಕನು ತನ್ನ ಹೆಂಡತಿಯರಿಗೆ ಹೀಗೆಂದನು:
“ಆದಾ, ಚಿಲ್ಲಾ, ನನ್ನ ಮಾತನ್ನು ಕೇಳಿ!
ಲೆಮೆಕನ ಹೆಂಡತಿಯರೇ, ನಾನು ಹೇಳುವುದನ್ನು ಕೇಳಿ.
ಒಬ್ಬನು ನನಗೆ ಗಾಯ ಮಾಡಿದ,
ಆದ್ದರಿಂದ ನಾನು ಅವನನ್ನು ಕೊಂದೆ,
ಒಬ್ಬ ಯುವಕನು ನನ್ನನ್ನು ಹೊಡೆದ,
ಆದ್ದರಿಂದ ನಾನು ಅವನನ್ನು ಕೊಂದೆ.
24ಕಾಯಿನನನ್ನು ಕೊಂದವರಿಗೆ ಏಳರಷ್ಟು ಶಿಕ್ಷೆಯಾಗುವುದು!
ಆದರೆ ನನ್ನನ್ನು ಕೊಂದವರಿಗೆ ಎಪ್ಪತ್ತೇಳರಷ್ಟು ಶಿಕ್ಷೆಯಾಗುವುದು!”
ಸೇತ ಮತ್ತು ಎನೋಷ್
25ಆದಾಮನು ತಿರಿಗಿ ತನ್ನ ಹೆಂಡತಿಯನ್ನು ಕೂಡಲು, ಆಕೆಗೆ ಮತ್ತೊಬ್ಬ ಮಗ ಹುಟ್ಟಿದನು. ಹವ್ವಳು, “ದೇವರು ನನಗೆ ಮತ್ತೊಬ್ಬ ಮಗನನ್ನು ಕೊಟ್ಟನು. ಕಾಯಿನನು ಕೊಂದ ಹೇಬೆಲನಿಗೆ ಬದಲಾಗಿ ದೇವರು ನನಗೆ ಗಂಡುಮಗುವನ್ನು ಕೊಟ್ಟನು” ಎಂದು ಹೇಳಿ ಆ ಮಗುವಿಗೆ ಸೇತ ಎಂದು ಹೆಸರಿಟ್ಟಳು. 26ಸೇತನು ಒಬ್ಬ ಮಗನನ್ನು ಪಡೆದನು. ಆ ಮಗುವಿಗೆ ಅವನು ಎನೋಷ್ ಎಂದು ಹೆಸರಿಟ್ಟನು. ಆ ಕಾಲದಲ್ಲಿ ಜನರು ಯೆಹೋವನ ಮೇಲೆ ಭರವಸೆ ಇಡಲಾರಂಭಿಸಿದರು.#4:26 ಜನರು … ಇಡಲಾರಂಭಿಸಿದರು ಅಕ್ಷರಶಃ, “ಜನರು ದೇವರನ್ನು ಯೆಹೋವ ಎಂದು ಕರೆಯಲಾರಂಭಿಸಿದರು.”

醒目顯示

分享

複製

None

想要在所有設備上保存你的醒目顯示嗎? 註冊或登入

YouVersion 使用 cookie 來個性化你的體驗。透過使用我們的網站,你即接受我們按照我們的 隱私政策所述來使用 cookie。