YouVersion 標識
搜索圖示

ಆದಿಕಾಂಡ 3

3
ಪಾಪದ ಪ್ರಾರಂಭ
1ದೇವರಾದ ಯೆಹೋವನು ಸೃಷ್ಟಿಸಿದ ಎಲ್ಲ ಭೂಜಂತುಗಳಲ್ಲಿ ಸರ್ಪವು ಅತಿ ಯುಕ್ತಿಯುಳ್ಳದ್ದಾಗಿತ್ತು. ಸರ್ಪವು ಸ್ತ್ರೀಯನ್ನು ಮೋಸಗೊಳಿಸಲು ಅವಳ ಬಳಿಗೆ ಬಂದು, “ಏನಮ್ಮಾ, ಈ ತೋಟದಲ್ಲಿರುವ ಯಾವ ಮರದ ಹಣ್ಣನ್ನೂ ನೀವು ತಿನ್ನಕೂಡದೆಂದು ದೇವರು ನಿಮಗೆ ಹೇಳಿರುವುದು ನಿಜವೇ?” ಎಂದು ಕೇಳಿತು.
2ಸ್ತ್ರೀಯು ಸರ್ಪಕ್ಕೆ, “ಇಲ್ಲ! ದೇವರು ಹಾಗೆ ಹೇಳಲಿಲ್ಲ! ತೋಟದಲ್ಲಿರುವ ಮರಗಳ ಹಣ್ಣುಗಳನ್ನು ನಾವು ತಿನ್ನಬಹುದು. 3ಆದರೆ ಒಂದು ಮರದ ಹಣ್ಣನ್ನು ಮಾತ್ರ ನಾವು ತಿನ್ನಕೂಡದು. ದೇವರು ನಮಗೆ, ‘ತೋಟದ ಮಧ್ಯದಲ್ಲಿರುವ ಮರದ ಹಣ್ಣನ್ನು ನೀವು ತಿನ್ನಕೂಡದು; ಆ ಮರವನ್ನು ಮುಟ್ಟಕೂಡದು, ಇಲ್ಲವಾದರೆ ನೀವು ಸಾಯುವಿರಿ’ ಎಂದು ಹೇಳಿದ್ದಾನೆ” ಎಂಬುದಾಗಿ ಉತ್ತರಕೊಟ್ಟಳು.
4ಅದಕ್ಕೆ ಸರ್ಪವು ಸ್ತ್ರೀಗೆ, “ನೀವು ಸಾಯುವುದಿಲ್ಲ. 5ನೀವು ಆ ಮರದ ಹಣ್ಣನ್ನು ತಿಂದರೆ ನಿಮಗೆ ಒಳ್ಳೆಯದರ ಮತ್ತು ಕೆಟ್ಟದ್ದರ ಬಗ್ಗೆ ಜ್ಞಾನ ಬರುತ್ತದೆಯೆಂದು ದೇವರಿಗೆ ಗೊತ್ತಿದೆ. ಅಲ್ಲದೆ ನೀವು ದೇವರಿಗೆ ಸರಿಸಮಾನರಾಗುವಿರಿ” ಎಂದು ಹೇಳಿತು.
6ಸ್ತ್ರೀಗೆ ಆ ಮರ ಸುಂದರವಾಗಿ ಕಂಡಿತು. ಅದರ ಹಣ್ಣು ಆಕೆಗೆ ತಿನ್ನಲು ಯೋಗ್ಯವಾಗಿ ಕಂಡಿತು. ಆ ಮರ ತನ್ನನ್ನು ಜ್ಞಾನಿಯನ್ನಾಗಿ ಮಾಡುತ್ತದೆಯೆಂದು ಆಕೆ ಉತ್ಸಾಹಗೊಂಡಳು. ಆದ್ದರಿಂದ ಸ್ತ್ರೀಯು ಆ ಮರದ ಹಣ್ಣನ್ನು ಕಿತ್ತುಕೊಂಡು ತಿಂದಳು; ತನ್ನೊಂದಿಗಿದ್ದ ಗಂಡನಿಗೂ ಸ್ವಲ್ಪ ಹಣ್ಣನ್ನು ಕೊಟ್ಟಳು. ಅವನು ಸಹ ಅದನ್ನು ತಿಂದನು.
7ಕೂಡಲೇ ಪುರುಷನಲ್ಲಿಯೂ ಸ್ತ್ರೀಯಲ್ಲಿಯೂ ಬದಲಾವಣೆಗಳಾದವು. ಅವರ ಕಣ್ಣುಗಳು ತೆರೆದವು. ಅವರಿಗೆ ಎಲ್ಲವೂ ವಿಚಿತ್ರವಾಗಿ ಕಂಡವು. ತಾವು ಬೆತ್ತಲೆಯಿಂದಿರುವುದನ್ನು ಕಂಡು ಅಂಜೂರದ ಎಲೆಗಳನ್ನು ಕಿತ್ತು ಒಂದಕ್ಕೊಂದು ಜೋಡಿಸಿ ಸುತ್ತಿಕೊಂಡರು.
8ಅಂದು ಸಂಜೆ ತಂಗಾಳಿ ಬೀಸುತ್ತಿರಲು ದೇವರಾದ ಯೆಹೋವನು ತೋಟದಲ್ಲಿ ತಿರುಗಾಡುತ್ತಿದ್ದನು. ಆತನ ಸಪ್ಪಳವನ್ನು ಕೇಳಿದ ಪುರುಷನು ಮತ್ತು ಅವನ ಹೆಂಡತಿಯು ತೋಟದ ಮರಗಳ ಮರೆಯಲ್ಲಿ ಅಡಗಿಕೊಂಡರು. 9ದೇವರಾದ ಯೆಹೋವನು ಪುರುಷನಿಗೆ, “ನೀನು ಎಲ್ಲಿರುವೆ?” ಎಂದು ಕೂಗಿ ಕೇಳಿದನು.
10ಅದಕ್ಕೆ ಪುರುಷನು, “ನೀನು ತೋಟದಲ್ಲಿ ತಿರುಗಾಡುತ್ತಿರುವ ಸಪ್ಪಳವನ್ನು ನಾನು ಕೇಳಿದೆನು. ಆದರೆ ನಾನು ಬೆತ್ತಲೆಯಾಗಿದ್ದರಿಂದ ಭಯದಿಂದ ಅಡಗಿಕೊಂಡೆನು” ಎಂದು ಹೇಳಿದನು.
11ದೇವರು ಪುರುಷನಿಗೆ, “ನೀನು ಬೆತ್ತಲೆಯಾಗಿರುವೆ ಎಂದು ನಿನಗೆ ಹೇಳಿದವರು ಯಾರು? ವಿಶೇಷವಾದ ಆ ಮರದ ಹಣ್ಣನ್ನು ನೀನು ತಿಂದೆಯಾ? ಆ ಮರದ ಹಣ್ಣನ್ನು ತಿನ್ನಕೂಡದೆಂದು ನಾನು ನಿನಗೆ ಆಜ್ಞಾಪಿಸಿದ್ದೆನಲ್ಲಾ!” ಎಂದು ಹೇಳಿದನು.
12ಅದಕ್ಕೆ ಪುರುಷನು, “ನೀನು ನನಗಾಗಿ ಕೊಟ್ಟ ಸ್ತ್ರೀಯು ಆ ಮರದ ಹಣ್ಣನ್ನು ನನಗೆ ಕೊಟ್ಟಳು; ಆದ್ದರಿಂದ ನಾನು ತಿಂದೆ” ಅಂದನು.
13ಆಗ ದೇವರಾದ ಯೆಹೋವನು ಸ್ತ್ರೀಗೆ, “ನೀನು ಮಾಡಿದ್ದೇನು?” ಎಂದು ಕೇಳಿದನು.
ಅದಕ್ಕೆ ಸ್ತ್ರೀಯು, “ಆ ಹಾವಿನ ಮೋಸಕ್ಕೆ ಒಳಗಾಗಿ ನಾನು ಆ ಹಣ್ಣನ್ನು ತಿಂದೆ” ಅಂದಳು.
14ಆಗ ದೇವರಾದ ಯೆಹೋವನು ಹಾವಿಗೆ,
“ನೀನು ಮಾಡಿದ ಈ ಕೆಟ್ಟಕಾರ್ಯದಿಂದ
ನಿನಗೂ ಕೇಡುಗಳಾಗುತ್ತವೆ.#3:14 ಕೇಡುಗಳಾಗುತ್ತವೆ ಅಕ್ಷರಶಃ, “ನೀನು ಶಾಪಗ್ರಸ್ತನಾಗಿರುವೆ.”
ಬೇರೆಲ್ಲಾ ಪ್ರಾಣಿಗಳಿಗಿಂತಲೂ
ನಿನಗೆ ಹೀನಸ್ಥಿತಿ ಉಂಟಾಗುವುದು.
ನೀನು ಹೊಟ್ಟೆಯಿಂದಲೇ ತೆವಳಿಕೊಂಡು
ನಿನ್ನ ಜೀವಮಾನವೆಲ್ಲಾ ಮಣ್ಣನ್ನೇ ತಿನ್ನುವೆ.
15ನೀನು ಮತ್ತು ಸ್ತ್ರೀಯು ಒಬ್ಬರಿಗೊಬ್ಬರು ವೈರಿಗಳಾಗಿರುವಂತೆ ಮಾಡುವೆನು.
ನಿನ್ನ ಮಕ್ಕಳು ಮತ್ತು ಅವಳ ಮಕ್ಕಳು#3:15 ಅವಳ ಮಕ್ಕಳು ಅಕ್ಷರಶಃ, ಹೀಬ್ರೂ ಭಾಷೆಯಲ್ಲಿ “ನಿನ್ನ ಬೀಜ ಮತ್ತು ಅವಳ ಬೀಜ.” ಒಬ್ಬರಿಗೊಬ್ಬರು ವೈರಿಗಳಾಗಿರುವರು.
ನೀನು ಆಕೆಯ ಮಗನ ಪಾದವನ್ನು ಕಚ್ಚುವೆ.
ಆದರೆ ಅವನು ನಿನ್ನ ತಲೆಯನ್ನು ಜಜ್ಜಿ ಹಾಕುವನು” ಎಂದನು.
16ಬಳಿಕ ದೇವರಾದ ಯೆಹೋವನು ಸ್ತ್ರೀಗೆ,
“ನೀನು ಗರ್ಭಿಣಿಯಾಗಿರುವಾಗ
ಬಹು ಸಂಕಟಪಡುವೆ.
ನೀನು ಮಕ್ಕಳನ್ನು ಹೆರುವಾಗ
ಬಹಳ ವೇದನೆಪಡುವೆ.
ನೀನು ಗಂಡನನ್ನು ಬಹಳವಾಗಿ ಇಷ್ಟಪಡುವೆ;
ಆದರೆ ಅವನು ನಿನ್ನನ್ನು ಆಳುವನು” ಎಂದನು.
17ಆಮೇಲೆ ದೇವರಾದ ಯೆಹೋವನು ಪುರುಷನಿಗೆ,
“ವಿಶೇಷವಾದ ಆ ಮರದ ಹಣ್ಣನ್ನು ತಿನ್ನಕೂಡದೆಂದು ನಾನು ನಿನಗೆ ಆಜ್ಞಾಪಿಸಿದ್ದೆ.
ಆದರೆ ನೀನು ನಿನ್ನ ಹೆಂಡತಿಯ ಮಾತನ್ನು ಕೇಳಿ ಆ ಮರದ ಹಣ್ಣನ್ನು ತಿಂದೆ.
ನಿನ್ನ ದೆಸೆಯಿಂದ ನಾನು ಭೂಮಿಯನ್ನು ಶಪಿಸುವೆನು.
ಭೂಮಿಯು ಫಲಿಸುವ ಆಹಾರಕ್ಕಾಗಿ ನೀನು ನಿನ್ನ ಜೀವಮಾನದ ದಿನಗಳಲ್ಲೆಲ್ಲಾ ಕಷ್ಟಪಟ್ಟು ದುಡಿಯಲೇಬೇಕು.
18ಭೂಮಿಯು ನಿನಗೋಸ್ಕರ ಮುಳ್ಳುಗಿಡಗಳನ್ನೂ ಕಳೆಗಳನ್ನೂ ಬೆಳೆಸುವುದು.
ಹೊಲದಲ್ಲಿ ಬೆಳೆಯುವ ಬೆಳೆಯನ್ನು ನೀನು ತಿನ್ನುವೆ.#3:18 ನೋಡಿರಿ: ಆದಿ. 1:29-30.
19ನಿನ್ನ ಮುಖದಲ್ಲಿ ಬೆವರು ಹರಿಯುವ ತನಕ
ನೀನು ಆಹಾರಕ್ಕಾಗಿ ಕಷ್ಟಪಟ್ಟು ದುಡಿಯುವೆ.
ನೀನು ಸಾಯುವ ದಿನದವರೆಗೆ ಕಷ್ಟಪಟ್ಟು ಕೆಲಸ ಮಾಡುವೆ.
ಆಮೇಲೆ ನೀನು ಮಣ್ಣಾಗುವೆ.
ನಾನು ನಿನ್ನನ್ನು ನಿರ್ಮಿಸಲು ಮಣ್ಣನ್ನು ಉಪಯೋಗಿಸಿದೆ.
ನೀನು ಸತ್ತಾಗ ಮತ್ತೆ ಮಣ್ಣೇ ಆಗುವೆ” ಎಂದನು.
20ಆದಾಮನು ತನ್ನ ಹೆಂಡತಿಗೆ ಹವ್ವ ಎಂದು ಹೆಸರಿಟ್ಟನು. ಆದಾಮನು ಹವ್ವ ಎಂದು ಹೆಸರಿಡಲು ಕಾರಣವೇನೆಂದರೆ ಈ ಲೋಕದಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ಆಕೆಯೇ ಮೂಲ ತಾಯಿ.
21ದೇವರಾದ ಯೆಹೋವನು ಪ್ರಾಣಿಯ ಚರ್ಮದಿಂದ ಉಡುಪುಗಳನ್ನು ಮಾಡಿ ಆದಾಮನಿಗೆ ಮತ್ತು ಅವನ ಹೆಂಡತಿಗೆ ತೊಡಿಸಿದನು.
22ದೇವರಾದ ಯೆಹೋವನು, “ಮನುಷ್ಯನು ಒಳ್ಳೆಯದರ ಮತ್ತು ಕೆಟ್ಟದ್ದರ ಬಗ್ಗೆ ತಿಳಿದುಕೊಂಡು ನಮ್ಮಂತಾದನು. ಈಗ ಮನುಷ್ಯನು ಜೀವದಾಯಕ ಮರದ ಹಣ್ಣನ್ನೇನಾದರೂ ತೆಗೆದುಕೊಂಡು ತಿಂದರೆ ಅವನು ಸದಾಕಾಲ ಬದುಕುವನು” ಅಂದುಕೊಂಡನು.
23ಆದ್ದರಿಂದ ಆತನು ಆದಾಮನನ್ನು ಅವನು ಉತ್ಪತ್ತಿಗೊಂಡಿದ್ದ ನೆಲದಲ್ಲಿ ವ್ಯವಸಾಯ ಮಾಡಲು ಬಲವಂತವಾಗಿ ಏದೆನ್ ತೋಟದಿಂದ ಹೊರಡಿಸಿಬಿಟ್ಟನು. 24ಅಲ್ಲದೆ ಏದೆನ್ ತೋಟವನ್ನು ಸಂರಕ್ಷಿಸುವುದಕ್ಕಾಗಿ ಆತನು ಕೆರೂಬಿದೂತರನ್ನು ತೋಟದ ಪೂರ್ವಭಾಗದಲ್ಲಿ ಇರಿಸಿದನು. ಇದಲ್ಲದೆ ಆತನು ಬೆಂಕಿಯ ಖಡ್ಗವನ್ನು ಅಲ್ಲಿಟ್ಟನು. ಈ ಖಡ್ಗವು ಎಲ್ಲಾ ದಿಕ್ಕುಗಳತ್ತ ತಿರುಗುತ್ತಾ ಧಗಧಗನೆ ಪ್ರಜ್ವಲಿಸುತ್ತಾ ಜೀವದಾಯಕ ಮರದ ಮಾರ್ಗವನ್ನು ಕಾಯುತ್ತಿತ್ತು.

醒目顯示

分享

複製

None

想要在所有設備上保存你的醒目顯示嗎? 註冊或登入

YouVersion 使用 cookie 來個性化你的體驗。透過使用我們的網站,你即接受我們按照我們的 隱私政策所述來使用 cookie。