Logo YouVersion
Ikona Hľadať

ಆದಿಕಾಂಡ 21

21
ಇಸಾಕನ ಜನನ
1ಸರ್ವೇಶ್ವರ ಸ್ವಾಮಿ ತಾವು ಹೇಳಿದ್ದಂತೆಯೇ ಸಾರಳಿಗೆ ನೆರವಾದರು. ಆಕೆಗೆ ಕೊಟ್ಟ ಮಾತನ್ನು ನೆರವೇರಿಸಿದರು. 2ಆಕೆ ಗರ್ಭಿಣಿಯಾಗಿ ಅಬ್ರಹಾಮನಿಂದ ಒಬ್ಬ ಮಗನನ್ನು ಹೆತ್ತಳು, ಅದೂ ಅಬ್ರಹಾಮನು ಮುದುಕನಾಗಿದ್ದಾಗ, ದೇವರು ಮೊದಲೇ ನಿರ್ಧರಿಸಿದ್ದ ಕಾಲಕ್ಕೆ ಹೆತ್ತಳು. 3ತನ್ನಿಂದ ಸಾರಳಲ್ಲಿ ಹುಟ್ಟಿದ ಆ ಮಗನಿಗೆ ಅಬ್ರಹಾಮನು ‘ಇಸಾಕ್’ ಎಂದು ಹೆಸರಿಟ್ಟನು. 4ಎಂಟನೆಯ ದಿನದಲ್ಲಿ ದೇವರ ಅಪ್ಪಣೆಯ ಮೇರೆಗೆ ಅವನಿಗೆ ಸುನ್ನತಿ ಮಾಡಿದನು. 5ಇಸಾಕನು ಹುಟ್ಟಿದಾಗ ಅಬ್ರಹಾಮನಿಗೆ ನೂರು ವರ್ಷವಾಗಿತ್ತು. 6ಸಾರಳು ಇಂತೆಂದುಕೊಂಡಳು:
“ತಂದಿಹನಿದೋ ಎನಗೊಂದು ‘ನಗು’ವನು ಆ ದೇವನು,
ನಕ್ಕು ನಲಿವರೆನ್ನೊಡನೆ ಇದನು ಕೇಳುವವರೆಲ್ಲರು.”
7ಅದೂ ಅಲ್ಲದೆ:
“ಈಪರಿ ಪೇಳುತ್ತಿದ್ದರಾರು ಅಬ್ರಹಾಮನಿಗೆ?
'ಕುಡಿಸುವಳು ಸಾರಳೂ ಮೊಲೆ ಹಾಲನ್ನು ಮಕ್ಕಳಿಗೆ’?
ಹೆತ್ತಿರುವೆ ನೋಡಿ ಮಗನನು ಮುಪ್ಪಿನಲು ಆತನಿಗೆ!”
8ಕ್ರಮೇಣ ಆ ಮಗು ಬೆಳೆದು ಹಾಲು ಕುಡಿಯುವುದನ್ನು ಬಿಟ್ಟಿತು. ಇಸಾಕನು ಮೊಲೆಬಿಟ್ಟ ಆ ದಿನದಂದು ಅಬ್ರಹಾಮನು ದೊಡ್ಡ ಔತಣವನ್ನು ಏರ್ಪಡಿಸಿದ್ದನು.
ಹಾಗರ ಮತ್ತು ಇಷ್ಮಾಯೇಲರ ಉಚ್ಛಾಟನೆ
9ಈಜಿಪ್ಟಿನ ಹಾಗರಳಿಂದ ಅಬ್ರಹಾಮನಿಗೆ ಹುಟ್ಟಿದ ಹುಡುಗನು ತನ್ನ ಮಗ ಇಸಾಕನೊಡನೆ ನಕ್ಕುನಲಿದಾಡುವುದನ್ನು ಸಾರಳು ಕಂಡಳು. 10ಆಕೆ ಅಬ್ರಹಾಮನಿಗೆ, “ಈ ದಾಸಿಯನ್ನೂ ಅವಳ ಮಗನನ್ನೂ ಮನೆಯಿಂದ ಕಳುಹಿಸಿಬಿಡಿ. ದಾಸಿಯ ಮಗನು ನನ್ನ ಮಗನೊಂದಿಗೆ ಹಕ್ಕುಬಾಧ್ಯಸ್ಥನಾಗಬಾರದು,” ಎಂದು ಹೇಳಿದಳು. 11ಈ ಮಾತನ್ನು ಕೇಳಿ ಅಬ್ರಹಾಮನಿಗೆ ಬಹು ದುಃಖವಾಯಿತು. ಕಾರಣ - ಆ ದಾಸಿಯ ಮಗನೂ ಅವನ ಸ್ವಂತ ಮಗನಾಗಿದ್ದನು. 12ಆದರೆ ದೇವರು, ಅಬ್ರಹಾಮನಿಗೆ, “ನಿನ್ನ ಮಗನ ಹಾಗೂ ದಾಸಿಯ ಬಗ್ಗೆ ನಿನಗೆ ಚಿಂತೆಬೇಡ; ಸಾರಳು ಹೇಳಿದಂತೆಯೇ ಮಾಡು, ಏಕೆಂದರೆ ಇಸಾಕನಿಂದ ಹುಟ್ಟುವವರೇ ನಿನ್ನ ಸಂತತಿ ಎನಿಸಿಕೊಳ್ಳುವರು. 13ಈ ದಾಸಿಯ ಮಗನು ನಿನ್ನಿಂದ ಹುಟ್ಟಿದವನಾದ್ದರಿಂದ ಅವನಿಂದಲೂ ಒಂದು ರಾಷ್ಟ್ರ ಉತ್ಪತ್ತಿಯಾಗುವಂತೆ ಮಾಡುತ್ತೇನೆ,” ಎಂದು ಹೇಳಿದರು.
14ಮಾರನೆಯ ದಿನ ಬೆಳಿಗ್ಗೆ ಅಬ್ರಹಾಮನು ಹಾಗರಳಿಗೆ ಬುತ್ತಿಯನ್ನೂ ನೀರಿನ ತಿತ್ತಿಯನ್ನೂ ಕೊಟ್ಟು, ಹೆಗಲ ಮೇಲೆ ಮಗುವನ್ನು ಕೂರಿಸಿ ಕಳುಹಿಸಿಬಿಟ್ಟನು. ಅವಳು ಹೊರಟು ಬೇರ್ಷೆಬದ ಕಾಡಿನಲ್ಲಿ ಅಲೆಯುತ್ತಿದ್ದಳು. 15ತಿತ್ತಿಯಲ್ಲಿದ್ದ ನೀರು ಮುಗಿದುಹೋಯಿತು. ಮಗು ಸಾಯುವುದನ್ನು ನಾನು ನೋಡಲಾರೆ ಎಂದುಕೊಂಡು, 16ಅವಳು ಆ ಮಗುವನ್ನು ಒಂದು ಗಿಡದ ನೆರಳಿನಲ್ಲಿ ಬಿಟ್ಟು ಒಂದು ಬಾಣವನ್ನೆಸೆಯುವಷ್ಟು ದೂರಹೋಗಿ ಕುಳಿತುಕೊಂಡು ಗಟ್ಟಿಯಾಗಿ ಅತ್ತಳು.
17ಇತ್ತ ಆ ಹುಡುಗನ ಕೂಗು ದೇವರಿಗೆ ಕೇಳಿಸಿತು. ದೇವದೂತನು ಆಕಾಶದಿಂದ ಹಾಗರಳನ್ನು ಕರೆದು, “ಹಾಗರಳೇ, ನಿನಗೇನು ಆಯಿತು? ಅಂಜಬೇಡ; ಆ ಹುಡುಗನು ಬಿದ್ದು ಇರುವ ಸ್ಥಳದಿಂದಲೇ ಅವನ ಕೂಗು ದೇವರನ್ನು ಮುಟ್ಟಿತು; 18ನೀನೆದ್ದು ಹೋಗಿ ಅವನನ್ನು ಎತ್ತಿಕೊ; ಅವನನ್ನು ಕೈ ಬಿಡಬೇಡ; ಅವನಿಂದ ಒಂದು ದೊಡ್ಡ ರಾಷ್ಟ್ರ ಉತ್ಪತ್ತಿಯಾಗುವಂತೆ ಮಾಡುತ್ತೇನೆ,” ಎಂದು ಹೇಳಿದನು. 19ಇದಲ್ಲದೆ ದೇವರು ಅವಳ ಕಣ್ಣನ್ನು ತೆರೆದರು; ನೀರಿನ ಬಾವಿಯೊಂದು ಅವಳಿಗೆ ಕಾಣಿಸಿತು; ತಿತ್ತಿಯಲ್ಲಿ ನೀರನ್ನು ತುಂಬಿಸಿಕೊಂಡು ಹೋಗಿ ಆ ಹುಡುಗನಿಗೆ ಕುಡಿಸಿದಳು. 20ಹುಡುಗನ ಸಂಗಡ ದೇವರಿದ್ದರು. 21ಪಾರಾನಿನ ಅರಣ್ಯ ಅವನ ವಾಸಸ್ಥಳವಾಯಿತು. ಅವನ ತಾಯಿ ಈಜಿಪ್ಟಿನಿಂದ ಒಬ್ಬ ಹೆಣ್ಣನ್ನು ತರಿಸಿ ಮದುವೆಮಾಡಿಸಿದಳು.
ಅಬ್ರಹಾಮನಿಗೂ ಅಬೀಮೆಲೆಕನಿಗೂ ಆದ ಒಪ್ಪಂದ
22ಆ ದಿನಗಳಲ್ಲಿ ಅಬೀಮೆಲೆಕನು ತನ್ನ ಸೇನಾಪತಿಯಾದ ಫೀಕೋಲನ ಸಮೇತ ಅಬ್ರಹಾಮನ ಬಳಿಗೆ ಬಂದು, “ನೀನು ಮಾಡುವ ಕೆಲಸಕಾರ್ಯಗಳಲ್ಲೆಲ್ಲಾ ದೇವರು ನಿನ್ನ ಸಂಗಡ ಇದ್ದಾರೆ. 23ಆದುದರಿಂದ ನೀನು ಈ ಸ್ಥಳದಲ್ಲಿ ನನ್ನೊಂದಿಗೆ ಒಂದು ಒಪ್ಪಂದಕ್ಕೆ ಬರಬೇಕು: ಅದೇನೆಂದರೆ - ನನಗಾಗಲಿ ನನ್ನ ಪುತ್ರಪೌತ್ರರಿಗಾಗಲಿ ಏನೂ ಅನ್ಯಾಯ ಮಾಡಬಾರದು; ನಾನು ನಿನಗೆ ಒಳ್ಳೆಯದನ್ನೇ ಮಾಡಿದಂತೆ ನನಗೂ, ನೀನು ವಾಸಮಾಡುತ್ತಿರುವ ಈ ನಾಡಿಗೂ ಒಳ್ಳೆಯದನ್ನೇ ಮಾಡಬೇಕು. ಹೀಗೆ ಮಾಡುವುದಾಗಿ ದೇವರ ಮೇಲೆ ಪ್ರಮಾಣಮಾಡಬೇಕು,” ಎಂದು ಕೇಳಿಕೊಂಡನು.
24ಅದಕ್ಕೆ ಅಬ್ರಹಾಮನು, “ಹಾಗೆಯೇ ಪ್ರಮಾಣಮಾಡುತ್ತೇನೆ,” ಎಂದನು.
25ಅಬೀಮೆಲೆಕನ ಆಳುಗಳು ಒಂದು ಬಾವಿಯನ್ನು ಬಲಾತ್ಕಾರದಿಂದ ಸ್ವಾಧೀನಪಡಿಸಿಕೊಂಡಿದ್ದರು. 26ಅಬೀಮೆಲೆಕನು, “ಈ ಕೃತ್ಯವನ್ನು ಮಾಡಿದವರು ಯಾರೆಂದು ನಾನರಿಯೆ; ನೀನೂ ನನಗೆ ತಿಳಿಸಲಿಲ್ಲ; ಇಲ್ಲಿಯವರೆಗೆ ನಾನು ಈ ಸಂಗತಿಯನ್ನು ಕೇಳಿಯೂ ಇಲ್ಲ,” ಎಂದನು. 27ಆಗ ಅಬ್ರಹಾಮನು ಅಬೀಮೆಲೆಕನಿಗೆ ದನಕುರಿಗಳನ್ನು ದಾನಮಾಡಿದನು. ಹೀಗೆ ಅವರಿಬ್ಬರು ಒಂದು ಒಪ್ಪಂದ ಮಾಡಿಕೊಂಡರು. 28ಆದರೆ ಅಬ್ರಹಾಮನು ಹಿಂಡಿನ ಏಳು ಕುರಿಮರಿಗಳನ್ನು ಪ್ರತ್ಯೇಕವಾಗಿ ಇರಿಸಿದನು. 29ಅಬೀಮೆಲೆಕನು, “ನೀನು ಪ್ರತ್ಯೇಕವಾಗಿರಿಸಿರುವ ಈ ಏಳು ಕುರಿಮರಿಗಳು ಏತಕ್ಕೆ?” ಎಂದು ವಿಚಾರಿಸಿದನು. 30ಅದಕ್ಕೆ ಅಬ್ರಹಾಮನು, “ಬಾವಿಯನ್ನು ತೋಡಿಸಿದವನು ನಾನೇ ಎಂಬುದಕ್ಕೆ ಸಾಕ್ಷಿಯಾಗಿ ಈ ಏಳು ಕುರಿಮರಿಗಳನ್ನು ನನ್ನ ಕೈಯಿಂದ ನೀನು ಸ್ವೀಕರಿಸಬೇಕು,” ಎಂದನು. 31ಹೀಗೆ ಅವರಿಬ್ಬರು ಅಲ್ಲಿ ಪ್ರಮಾಣಮಾಡಿದ್ದ ಕಾರಣ, ಆ ಸ್ಥಳಕ್ಕೆ ‘ಬೇರ್ಷೆಬ’ ಎಂದು ಹೆಸರಾಯಿತು.
32ಬೇರ್ಷೆಬದಲ್ಲಿ ಅವರು ಒಪ್ಪಂದಮಾಡಿಕೊಂಡ ತರುವಾಯ ಅಬೀಮೆಲೆಕನೂ ಅವನ ಸೇನಾಪತಿ ಫೀಕೋಲನು ಫಿಲಿಷ್ಟಿಯಕ್ಕೆ ಹಿಂದಿರುಗಿದರು. 33ಅಬ್ರಹಾಮನು ಆ ಬೇರ್ಷೆಬದಲ್ಲೇ ಒಂದು ಪಿಚುಲ ವೃಕ್ಷವನ್ನು ನೆಟ್ಟು ನಿತ್ಯದೇವರಾದ ಸರ್ವೇಶ್ವರ ಸ್ವಾಮಿಯ ನಾಮಸ್ಮರಣೆ ಮಾಡಿ, ಅಲ್ಲಿ ಆರಾಧನೆ ಮಾಡಿದನು. 34ಅಬ್ರಹಾಮನು ಫಿಲಿಷ್ಟಿಯರ ಆ ಪ್ರಾಂತ್ಯದಲ್ಲಿ ಬಹುಕಾಲ ಪ್ರವಾಸಿಯಾಗಿದ್ದನು.

Zvýraznenie

Zdieľať

Kopírovať

None

Chceš mať svoje zvýraznenia uložené vo všetkých zariadeniach? Zaregistruj sa alebo sa prihlás