Logo YouVersion
Ikona Hľadať

ಆದಿಕಾಂಡ 20

20
ಅಬ್ರಹಾಮನು ಮತ್ತು ಅಬೀಮೆಲೆಕನು
1ಅಬ್ರಹಾಮನು ಅಲ್ಲಿಂದ ಕಾನಾನ್ ನಾಡಿನ ದಕ್ಷಿಣ ಪ್ರಾಂತಕ್ಕೆ#20:1 ಅಥವಾ: ನೇಗೆಬ್ಗೆ. ಪ್ರಯಾಣ ಮಾಡುತ್ತಾ ಕಾದೇಶಿಗೂ ಶೂರಿಗೂ ನಡುವೆ ವಾಸಮಾಡಿದನು. ಕೆಲವು ಕಾಲ ಗೆರಾರಿನಲ್ಲೂ ಇದ್ದನು. 2ಅಲ್ಲಿದ್ದಾಗ ಅಬ್ರಹಾಮನು ತನ್ನ ಹೆಂಡತಿ ಸಾರಳು ತನಗೆ ತಂಗಿಯಾಗಬೇಕೆಂದು ಹೇಳಿಕೊಂಡನು. ಈ ಕಾರಣ ಗೆರಾರಿನ ಅರಸನಾದ ಅಬೀಮೆಲೆಕನು ಆಕೆಯನ್ನು ಕರೆಸಿ ತನ್ನ ಮನೆಯಲ್ಲಿ ಸೇರಿಸಿಕೊಂಡನು. 3ಆದರೆ ದೇವರು ಅಬೀಮೆಲೆಕನಿಗೆ ಕನಸಿನಲ್ಲಿ ಕಾಣಿಸಿಕೊಂಡು, “ನೀನು ಆ ಮಹಿಳೆಯನ್ನು ಸೇರಿಸಿಕೊಂಡ ಕಾರಣ ಸಾಯತಕ್ಕವನು, ಆಕೆಗೆ ಗಂಡನಿದ್ದಾನೆ,” ಎಂದರು.
4ಅಬೀಮೆಲೆಕನು ಆಕೆಯನ್ನು ಅಲ್ಲಿಯವರೆಗೂ ಕೂಡಿರಲಿಲ್ಲ. ಎಂದೇ ಅವನು, “ಸ್ವಾಮೀ ನಿರಪರಾಧಿಯಾದ ಪ್ರಜೆಯನ್ನು ನೀವು ನಾಶಮಾಡುವಿರೋ? 5ಆ ಮನುಷ್ಯನೇ ಈಕೆ ನನಗೆ ತಂಗಿಯಾಗಬೇಕೆಂದು ಹೇಳಿದ; ಈಕೆಯೂ ಆತನು ನನಗೆ ಅಣ್ಣನಾಗಬೇಕೆಂದು ಹೇಳಿದಳು. ಶುದ್ಧಮನಸ್ಸಿನಿಂದ ಹಾಗೂ ಶುದ್ಧಹಸ್ತದಿಂದ ಈ ಕಾರ್ಯಮಾಡಿದೆ,” ಎಂದನು.
6ಅದಕ್ಕೆ ದೇವರು ಪ್ರತ್ಯುತ್ತರವಾಗಿ, “ನೀನು ಶುದ್ಧಮನಸ್ಸಿನಿಂದ ಈ ಕಾರ್ಯಮಾಡಿದೆಯೆಂದು ನಾನು ಬಲ್ಲೆ; ಆದಕಾರಣವೇ ನನಗೆ ವಿರುದ್ಧವಾಗಿ ನೀನು ಪಾಪಮಾಡದಂತೆ ತಡೆದು ಆಕೆಯನ್ನು ಮುಟ್ಟಗೊಡಿಸಲಿಲ್ಲ. 7ಈಗ ಆ ಮನುಷ್ಯನ ಹೆಂಡತಿಯನ್ನು ಮರಳಿ ಅವನಿಗೆ ಒಪ್ಪಿಸಿಬಿಡು. ಅವನೊಬ್ಬ ಪ್ರವಾದಿ. ನಿನ್ನ ಪರವಾಗಿ ನನ್ನನ್ನು ಪ್ರಾರ್ಥಿಸುವನು, ನೀನು ಬದುಕುವೆ. ಆಕೆಯನ್ನು ಒಪ್ಪಿಸಲು ನಿರಾಕರಿಸಿದೆಯಾದರೆ ನೀನೂ ನಿನ್ನವರೆಲ್ಲರೂ ಸತ್ತೇ ಸಾಯುವಿರೆಂದು ತಿಳಿದುಕೊ,” ಎಂದು ಕನಸಿನಲ್ಲಿ ಹೇಳಿದರು.
8ಅಬೀಮೆಲೆಕನು ಬೆಳಿಗ್ಗೆ ಬೇಗನೆ ಎದ್ದು ತನ್ನ ಪರಿವಾರವನ್ನೆಲ್ಲಾ ಕೂಡಿಸಿದನು. ನಡೆದ ಸಂಗತಿಗಳನ್ನೆಲ್ಲ ತಿಳಿಸಿದಾಗ ಅವರಿಗೆ ಬಹಳ ಭಯವುಂಟಾಯಿತು. 9ಅನಂತರ ಅವನು ಅಬ್ರಹಾಮನನ್ನು ಕರೆಸಿ, “ನೀನು ನನಗೆ ಮಾಡಿದ್ದೇನು? ಯಾವ ತಪ್ಪಿಗಾಗಿ ನೀನು ನನ್ನನ್ನೂ ನನ್ನ ರಾಜ್ಯವನ್ನೂ ಈ ಮಹಾ ಪಾತಕಕ್ಕೆ ಒಳಪಡಿಸಿದೆ? ಮಾಡಬಾರದ ಕಾರ್ಯವನ್ನು ನೀನು ಮಾಡಿದೆ,” ಎಂದು ಹೇಳಿದನು. 10ಅಲ್ಲದೆ, “ನೀನು ಯಾವ ಉದ್ದೇಶದಿಂದ ಹೀಗೆ ಮಾಡಿದೆ?” ಎಂದು ವಿಚಾರಿಸಿದನು.
11ಅದಕ್ಕೆ ಅಬ್ರಹಾಮನು, “ಇಲ್ಲಿಯ ಜನರಿಗೆ ದೇವರಲ್ಲಿ ಭಯಭಕ್ತಿಯಿಲ್ಲವೆಂದೂ ನನ್ನ ಹೆಂಡತಿಯ ನಿಮಿತ್ತ ನನ್ನನ್ನು ಕೊಂದಾರು ಎಂದೂ ಭಾವಿಸಿದೆ. 12ಅದೂ ಅಲ್ಲದೆ ಈಕೆ ನಿಜವಾಗಿಯೂ ನನ್ನ ತಂಗಿ, ನನ್ನ ತಂದೆಯ ಮಗಳು, ಆದರೆ ನನ್ನ ತಾಯಿಯ ಮಗಳಲ್ಲ; ಎಂದೇ ನನಗೆ ಹೆಂಡತಿಯಾದಳು. 13ನಾನು ದೇವರ ಸಂಕಲ್ಪಕ್ಕೆ ತಲೆಬಾಗಿ, ತಂದೆಯ ಮನೆಯನ್ನು ಬಿಟ್ಟು, ದೇಶಾಂತರ ಹೋಗಲು ಹೊರಟಾಗ ಈಕೆಗೆ, ‘ನಿನ್ನಿಂದ ನನಗೊಂದು ಉಪಕಾರವಾಗಬೇಕು; ಅದೇನೆಂದರೆ, ನಾವು ಹೋದಕಡೆಯೆಲ್ಲಾ ನಾನು ನಿನಗೆ ಅಣ್ಣನಾಗಬೇಕೆಂದು ಹೇಳು,’ ಎಂದು ತಿಳಿಸಿದೆ,” ಎಂದನು.
14ಆಗ ಅಬೀಮೆಲೆಕನು ಅಬ್ರಹಾಮನಿಗೆ ದನಕುರಿಗಳನ್ನೂ ದಾಸದಾಸಿಯರನ್ನೂ ಕೊಟ್ಟು ಅವನ ಹೆಂಡತಿ ಸಾರಳನ್ನು ಅವನಿಗೆ ಒಪ್ಪಿಸಿದನು. 15ಅದೂ ಅಲ್ಲದೆ, “ಇಗೋ, ನನ್ನ ನಾಡು ನಿನಗೆ ತೆರೆದಿದೆ; ಇಷ್ಟಬಂದ ಕಡೆ ಹೋಗಿ ವಾಸಮಾಡು,” ಎಂದನು. 16ಸಾರಳಿಗೆ ಅವನು ಹೇಳಿದ್ದೇನೆಂದರೆ, “ನಿನ್ನ ಅಣ್ಣನಿಗೆ ಸಾವಿರ ಬೆಳ್ಳಿನಾಣ್ಯಗಳನ್ನು ಕೊಟ್ಟಿದ್ದೇನೆ. ಇದರಿಂದ ನೀನು ನಿರ್ದೋಷಿಯೆಂದು ರುಜುವಾತಾಗಲಿ; ನೀನು ತಪ್ಪು ಮಾಡಿಲ್ಲವೆಂದು ಎಲ್ಲರಿಗೂ ಸ್ಪಷ್ಟವಾಗಲಿ.”
17ತರುವಾಯ ಅಬ್ರಹಾಮನು ಅಬೀಮೆಲೆಕನಿಗೋಸ್ಕರ ದೇವರಲ್ಲಿ ಪ್ರಾರ್ಥನೆ ಮಾಡಿದನು. ದೇವರು ಅಬೀಮೆಲೆಕನನ್ನು, ಅವನ ಪತ್ನಿಯನ್ನು ಹಾಗೂ ದಾಸಿಯರನ್ನು ಗುಣಪಡಿಸಿದನು; ಅವರಿಗೆ ಮಕ್ಕಳಾದರು. 18ಇದಕ್ಕೆ ಮುಂಚೆ ಅಬ್ರಹಾಮನ ಹೆಂಡತಿ ಸಾರಳ ನಿಮಿತ್ತ ಅಬೀಮೆಲೆಕನ ಮನೆಯಲ್ಲಿದ್ದ ಮಹಿಳೆಯರೆಲ್ಲರನ್ನು ಸರ್ವೇಶ್ವರ ಸ್ವಾಮಿ ಬಂಜೆಯರನ್ನಾಗಿಸಿದ್ದರು.

Zvýraznenie

Zdieľať

Kopírovať

None

Chceš mať svoje zvýraznenia uložené vo všetkých zariadeniach? Zaregistruj sa alebo sa prihlás