ಆದ್ದರಿಂದ ಅನನೀಯನು ಅಲ್ಲಿಂದ ಹೊರಟು ಯೂದನ ಮನೆಗೆ ಹೋದನು. ಅವನು ಸೌಲನ ಮೇಲೆ ತನ್ನ ಕೈಗಳನ್ನಿಟ್ಟು, “ಸೌಲನೇ, ನನ್ನ ಸಹೋದರನೇ, ಪ್ರಭುವಾದ ಯೇಸು ನನ್ನನ್ನು ಕಳುಹಿಸಿದ್ದಾನೆ. ನೀನು ಇಲ್ಲಿಗೆ ಬರುವಾಗ ದಾರಿಯಲ್ಲಿ ಕಂಡದ್ದು ಆತನನ್ನೇ. ನೀನು ಮತ್ತೆ ದೃಷ್ಟಿಪಡೆಯಬೇಕೆಂತಲೂ ಪವಿತ್ರಾತ್ಮಭರಿತನಾಗಬೇಕೆಂತಲೂ ಯೇಸು ನನ್ನನ್ನು ಕಳುಹಿಸಿದನು” ಎಂದು ಹೇಳಿದನು. ಇದ್ದಕ್ಕಿದ್ದಂತೆ, ಮೀನಿನ ಪರೆಯಂತಿದ್ದ ಏನೋ ಒಂದು ಸೌಲನ ಕಣ್ಣುಗಳಿಂದ ಕಳಚಿಬಿದ್ದಿತು. ಸೌಲನಿಗೆ ಮತ್ತೆ ಕಣ್ಣುಕಾಣತೊಡಗಿತು! ಸೌಲನು ಮೇಲೆದ್ದು, ದೀಕ್ಷಾಸ್ನಾನ ಮಾಡಿಸಿಕೊಂಡನು.