ಯೊವಾನ್ನ 10

10
ಉತ್ತಮ ಕುರಿಗಾಹಿ
1“ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ಕುರಿಹಟ್ಟಿಗೆ ಬಾಗಿಲ ಮೂಲಕ ಬರದೆ ಗೋಡೆ ಹತ್ತಿಬರುವವನು ಕಳ್ಳ ಹಾಗೂ ಕೊಳ್ಳೆಗಾರ. 2ಬಾಗಿಲ ಮೂಲಕ ಬರುವವನು ಕುರಿಗಾಹಿ. 3ಕಾವಲುಗಾರನು ಅವನಿಗೆ ಬಾಗಿಲು ತೆರೆಯುತ್ತಾನೆ. ಕುರಿಗಳು ಅವನ ಸ್ವರವನ್ನು ಕೇಳುತ್ತವೆ. ಅವನು ತನ್ನ ಕುರಿಗಳನ್ನು ಹೆಸರಿಟ್ಟು ಕರೆದು ಹೊರಗೆ ಬಿಡುತ್ತಾನೆ. 4ತನ್ನ ಕುರಿಗಳನ್ನೆಲ್ಲಾ ಹೊರಗೆ ಬಿಟ್ಟ ನಂತರ ಅವುಗಳ ಮುಂದೆ ಹೋಗುತ್ತಾನೆ. ಕುರಿಗಳು ಅವನ ಹಿಂದೆ ಹೋಗುತ್ತವೆ. ಏಕೆಂದರೆ ಅವುಗಳಿಗೆ ಅವನ ಸ್ವರ ಗೊತ್ತು. 5ಅಪರಿಚಿತನನ್ನು ಅವು ಹಿಂಬಾಲಿಸುವುದಿಲ್ಲ; ಅವನಿಂದ ದೂರ ಓಡಿಹೋಗುತ್ತವೆ. ಅಪರಿಚಿತರ ಸ್ವರವನ್ನು ಅವು ಗುರುತಿಸುವುದಿಲ್ಲ.
6ಯೇಸು ಸ್ವಾಮಿ ಹೇಳಿದ ಈ ಸಾಮತಿಯನ್ನು ಕೇಳಿದವರು ಅರ್ಥಮಾಡಿಕೊಳ್ಳಲಿಲ್ಲ.
ಉತ್ತಮ ಕುರಿಗಾಹಿ ಯೇಸು
7ಆದುದರಿಂದ ಯೇಸು ಸ್ವಾಮಿ, “ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ಕುರಿಗಳಿಗೆ ನಾನೇ ಬಾಗಿಲು. 8ನನಗಿಂತ ಮೊದಲು ಬಂದವರೆಲ್ಲರು ಕಳ್ಳರು ಹಾಗೂ ಕೊಳ್ಳೆಗಾರರು. ಕುರಿಗಳು ಅವರಿಗೆ ಕಿವಿಗೊಡಲಿಲ್ಲ. 9ಹೌದು, ನಾನೇ ಬಾಗಿಲು, ನನ್ನ ಮೂಲಕ ಒಳಹೋಗುವವನು ಸುರಕ್ಷಿತನಾಗಿರುತ್ತಾನೆ. ಅವನು ಒಳಗೆ ಹೋಗುತ್ತಾನೆ, ಹೊರಗೆ ಬರುತ್ತಾನೆ; ಮೇವನ್ನು ಕಂಡುಕೊಳ್ಳುತ್ತಾನೆ. 10ಕಳ್ಳನು ಬರುವುದು ಕಳ್ಳತನಕ್ಕಾಗಿ, ಕೊಲ್ಲುವುದಕ್ಕಾಗಿ ಮತ್ತು ನಾಶಮಾಡುವುದಕ್ಕಾಗಿ ಮಾತ್ರ. ನಾನು ಬಂದದ್ದಾದರೋ ಜೀವನೀಡಲು, ಯಥೇಚ್ಛವಾಗಿ ನೀಡಲು.
11“ನಾನೇ ಉತ್ತಮ ಕುರಿಗಾಹಿ. ಉತ್ತಮ ಕುರಿಗಾಹಿಯು ಕುರಿಗಳಿಗೋಸ್ಕರ ತನ್ನ ಪ್ರಾಣವನ್ನೇ ಕೊಡುತ್ತಾನೆ. 12ಕುರಿಗಾಹಿಯಾಗಲಿ, ಕುರಿಗಳ ಒಡೆಯನಾಗಲಿ ಅಲ್ಲದ ಕೂಲಿಯಾಳು, ತೋಳ ಬರುವುದನ್ನು ಕಂಡದ್ದೇ, ಕುರಿಗಳನ್ನು ಬಿಟ್ಟು ಓಡಿಹೋಗುತ್ತಾನೆ. ತೋಳವು ಬಂದು ಕುರಿಗಳ ಮೇಲೆ ಎರಗಿ, ಮಂದೆಯನ್ನು ಚದರಿಸುತ್ತದೆ. 13ಅವನು ಕೇವಲ ಕೂಲಿಯಾಳು; ಕುರಿಗಳ‍ ಚಿಂತೆ ಅವನಿಗಿಲ್ಲ. 14-15ನಾನಾದರೋ ಉತ್ತಮ ಕುರಿಗಾಹಿ. ಪಿತನು ನನ್ನನ್ನು ಬಲ್ಲರು; ನಾನೂ ಪಿತನನ್ನು ಬಲ್ಲೆ. ಅಂತೆಯೇ ನಾನು ನನ್ನ ಕುರಿಗಳನ್ನು ಬಲ್ಲೆನು; ಅವು ನನ್ನನ್ನು ಬಲ್ಲವು. ಅವುಗಳಿಗೋಸ್ಕರ ನಾನು ನನ್ನ ಪ್ರಾಣವನ್ನೇ ಕೊಡುತ್ತೇನೆ. 16ಈ ಮಂದೆಗೆ ಸೇರದ ಬೇರೆ ಕುರಿಗಳೂ ನನಗಿವೆ. ಅವನ್ನೂ ನಾನು ಕರೆತರಬೇಕು. ಅವು ಸಹ ನನ್ನ ಸ್ವರಕ್ಕೆ ಕಿವಿಗೊಡುತ್ತವೆ. ಆಗ ಒಂದೇ ಕುರಿಹಿಂಡು ಆಗುವುದು. ಒಬ್ಬನೇ ಕುರಿಗಾಹಿ ಇರುವನು.
17“ಏಕೆಂದರೆ, ನನ್ನ ಪಿತನಿಗೆ ನನ್ನಲ್ಲಿ ಪ್ರೀತಿ ಇದೆ. ನನ್ನ ಪ್ರಾಣವನ್ನು ಮರಳಿ ಪಡೆಯುವಂತೆ ನಾನದನ್ನು ಧಾರೆಯೆರೆಯುತ್ತೇನೆ. 18ನನ್ನ ಪ್ರಾಣವನ್ನು ಯಾರೂ ನನ್ನಿಂದ ಕಸಿದುಕೊಳ್ಳಲಾರರು; ನಾನಾಗಿಯೇ ಅದನ್ನು ಧಾರೆಯೆರೆಯುತ್ತೇನೆ. ಅದನ್ನು ಧಾರೆಯೆರೆಯುವ ಹಕ್ಕು ನನಗಿದೆ. ಅದನ್ನು ಪುನಃ ಪಡೆಯುವ ಹಕ್ಕು ಸಹ ನನಗಿದೆ. ಈ ಆಜ್ಞೆಯನ್ನು ನಾನು ನನ್ನ ಪಿತನಿಂದ ಪಡೆದಿದ್ದೇನೆ,” ಎಂದು ನುಡಿದರು.
19ಈ ಮಾತುಗಳನ್ನು ಕೇಳಿದ ಯೆಹೂದ್ಯರಲ್ಲಿ ಮತ್ತೆ ವಾದವೆದ್ದಿತು. 20ಅವರಲ್ಲಿ ಹಲವರು, “ಅವನಿಗೆ ದೆವ್ವಹಿಡಿದಿದೆ: ಅವನೊಬ್ಬ ಹುಚ್ಚ, ಅವನಿಗೇಕೆ ಕಿವಿಗೊಡುತ್ತೀರಿ?” ಎಂದರು. 21ಉಳಿದವರಾದರೋ, “ಇವು ದೆವ್ವಹಿಡಿದವನ ಮಾತುಗಳೆಂದಿಗೂ ಅಲ್ಲ. ದೆವ್ವವು ಕುರುಡನಿಗೆ ಕಣ್ಣು ಕೊಡುವುದುಂಟೆ?” ಎಂದರು.
ಪರಿತ್ಯಕ್ತರಾದ ಯೇಸು
22ಅದು ಚಳಿಗಾಲವಾಗಿತ್ತು. ಜೆರುಸಲೇಮಿನಲ್ಲಿ ಮಹಾದೇವಾಲಯದ ಪ್ರತಿಷ್ಠಾಪನೆಯ ಹಬ್ಬಾಚರಣೆ ನಡೆಯುತ್ತಿತ್ತು. 23ಯೇಸು ಸ್ವಾಮಿ ಆ ದೇವಾಲಯದ ಆವರಣದಲ್ಲಿದ್ದ ಸೊಲೊಮೋನನ ಮಂಟಪದಲ್ಲಿ ತಿರುಗಾಡುತ್ತಿದ್ದರು. 24ಯೆಹೂದ್ಯರು ಅವರನ್ನು ಸುತ್ತುವರಿದು, “ಇನ್ನೆಷ್ಟುಕಾಲ ನಮ್ಮನ್ನು ಸಂಶಯದಲ್ಲಿರಿಸುವೆ?ನೀನೇ ಅಭಿಷಿಕ್ತನಾದ ಲೋಕೋದ್ಧಾರಕ ಆಗಿದ್ದರೆ ನಮಗೆ ಸ್ಪಷ್ಟವಾಗಿ ಹೇಳು,” ಎಂದರು. 25ಯೇಸು ಪ್ರತ್ಯುತ್ತರವಾಗಿ, “ನಾನು ನಿಮಗೆ ಹೇಳಿಯಾಯಿತು. ಆದರೂ ನೀವು ನಂಬುತ್ತಿಲ್ಲ. ನನ್ನ ಪಿತನ ಹೆಸರಿನಲ್ಲಿ ನಾನು ಮಾಡುವ ಕಾರ್ಯಗಳೇ ನನ್ನ ಪರವಾಗಿ ಸಾಕ್ಷಿಕೊಡುತ್ತವೆ. 26ಆದರೂ ನಿಮಗೆ ನಂಬಿಕೆಯೆಂಬುದಿಲ್ಲ. ಕಾರಣ, ನೀವು ನನ್ನ ಕುರಿಗಳಲ್ಲ. 27ನನ್ನ ಕುರಿಗಳಾದರೋ ನನ್ನ ಸ್ವರವನ್ನು ಗುರುತಿಸುತ್ತವೆ. ನಾನು ಅವನ್ನು ಬಲ್ಲೆನು. ಅವು ನನ್ನನ್ನು ಹಿಂಬಾಲಿಸುತ್ತವೆ. 28ನಾನು ಅವುಗಳಿಗೆ ನಿತ್ಯಜೀವವನ್ನು ಕೊಡುತ್ತೇನೆ. ಅವು ಎಂದಿಗೂ ನಾಶ ಆಗುವುದಿಲ್ಲ. ನನ್ನ ಕೈಯಿಂದ ಅವನ್ನು ಯಾರೂ ಕಸಿದುಕೊಳ್ಳಲಾರರು, 29ಅವನ್ನು ನನಗೆ ಕೊಟ್ಟ ಪಿತ ಸರ್ವಶ್ರೇಷ್ಠರು. ಪಿತನ ಕೈಯಿಂದ ಅವನ್ನು ಯಾರೂ ಕಸಿದುಕೊಳ್ಳಲಾರರು. 30ನಾನೂ ಪಿತನೂ ಒಂದೇ ಆಗಿದ್ದೇವೆ,” ಎಂದರು. 31ಆಗ ಯೆಹೂದ್ಯರು, ಅವರತ್ತ ಬೀರಲು ಕಲ್ಲುಗಳನ್ನು ಆಯ್ದುಕೊಂಡರು. 32ಅದಕ್ಕೆ ಯೇಸು, “ಪಿತನ ಹೆಸರಿನಲ್ಲಿ ನಾನು ಎಷ್ಟೋ ಸತ್ಕಾರ್ಯಗಳನ್ನು ನಿಮ್ಮ ಮುಂದೆ ಮಾಡಿದ್ದೇನೆ. ಇವುಗಳಲ್ಲಿ ಯಾವುದಕ್ಕಾಗಿ ನನ್ನ ಮೇಲೆ ಕಲ್ಲೆಸೆಯಬೇಕೆಂದಿದ್ದೀರಿ?” ಎಂದರು. 33ಅದಕ್ಕೆ ಯೆಹೂದ್ಯರು, “ನಿನ್ನ ಮೇಲೆ ಕಲ್ಲೆಸೆಯುವುದು ಸತ್ಕಾರ್ಯಕ್ಕಾಗಿ ಅಲ್ಲ, ದೇವದೂಷಣೆಗಾಗಿ. ನೀನು ಮನುಷ್ಯ ಮಾತ್ರನು; ಆದರೂ ನಿನ್ನನ್ನೇ ದೇವರನ್ನಾಗಿ ಮಾಡಿಕೊಳ್ಳುತ್ತಿದ್ದೀಯೇ,” ಎಂದು ಉತ್ತರಕೊಟ್ಟರು.
34ಆಗ ಯೇಸು, “ ‘ನೀವು ದೇವರುಗಳು’ ಎಂದು ದೇವರೇ ಹೇಳಿರುವ ಮಾತು ನಿಮ್ಮ ಧರ್ಮಶಾಸ್ತ್ರದಲ್ಲಿ ಬರೆದಿದೆಯಲ್ಲವೆ? 35ದೇವರ ವಾಕ್ಯವನ್ನು ಪಡೆದವರು ದೇವರುಗಳೇ ಎಂದು ಕರೆಯಲಾಗಿದೆ. ಹೀಗೆ ಪವಿತ್ರಗ್ರಂಥದಲ್ಲೇ ಲಿಖಿತವಾಗಿರುವುದು ನಿರರ್ಥಕವೇನೂ ಅಲ್ಲ. 36ಇಂತಿರುವಲ್ಲಿ, ಪಿತನೇ ಪ್ರತಿಷ್ಠಿಸಿ ಕಳುಹಿಸಿಕೊಟ್ಟವನಾದ ನಾನು, ‘ದೇವರ ಪುತ್ರನಾಗಿದ್ದೇನೆ’ ಎಂದು ಹೇಳಿಕೊಂಡಿದ್ದಕ್ಕೆ, ‘ಇವನು ದೇವದೂಷಣೆ ಮಾಡಿದ್ದಾನೆ’ ಎನ್ನುತ್ತೀರಲ್ಲಾ? 37ನಾನು ನನ್ನ ಪಿತನ ಕಾರ್ಯಗಳನ್ನು ಮಾಡದಿದ್ದರೆ ನೀವು ನನ್ನನ್ನು ನಂಬಬೇಕಾಗಿಲ್ಲ. 38ನಾನು ಹಾಗೆ ಮಾಡಿದ್ದೇ ಆದರೆ, ನನ್ನನ್ನು ನಂಬದೆಹೋದರೂ ನನ್ನ ಕಾರ್ಯಗಳನ್ನಾದರೂ ನಂಬಿರಿ. ಆಗ ಪಿತನು ನನ್ನಲ್ಲಿಯೂ ನಾನು ಪಿತನಲ್ಲಿಯೂ ಇರುವುದು ನಿಮಗೆ ಅರಿವಾಗುವುದು ಹಾಗೂ ಮನದಟ್ಟಾಗುವುದು,” ಎಂದರು.
39ಮತ್ತೊಮ್ಮೆ ಯೇಸುವನ್ನು ಬಂಧಿಸಲು ಆ ಯೆಹೂದ್ಯರು ಪ್ರಯತ್ನಿಸಿದರು. ಆದರೆ ಯೇಸು ಅವರ ಕೈಯಿಂದ ತಪ್ಪಿಸಿಕೊಂಡರು.
40ಬಳಿಕ ಯೇಸು ಸ್ವಾಮಿ ಜೋರ್ಡನ್ ನದಿಯನ್ನು ದಾಟಿ ಯೊವಾನ್ನನು ಮೊತ್ತಮೊದಲು ಸ್ನಾನದೀಕ್ಷೆಯನ್ನು ಕೊಡುತ್ತಿದ್ದ ಸ್ಥಳಕ್ಕೆ ಬಂದು ಅಲ್ಲಿ ತಂಗಿದರು. 41ಹಲವರು ಅವರ ಬಳಿಗೆ ಬರತೊಡಗಿದರು. ‘ಯೊವಾನ್ನನು ಒಂದು ಸೂಚಕಕಾರ್ಯವನ್ನೂ ಮಾಡಲಿಲ್ಲ; ಆದರೆ ಇವರ ವಿಷಯವಾಗಿ ಆತ ಹೇಳಿದ್ದೆಲ್ಲವೂ ನಿಜವಾಗಿದೆ’ ಎಂದು ಆ ಜನರು ಮಾತನಾಡಿಕೊಳ್ಳುತ್ತಿದ್ದರು. 42ಅಲ್ಲಿ ಹಲವರಿಗೆ ಯೇಸುವಿನಲ್ಲಿ ವಿಶ್ವಾಸ ಹುಟ್ಟಿತು.

Podkreślenie

Udostępnij

Kopiuj

None

Chcesz, aby twoje zakreślenia były zapisywane na wszystkich twoich urządzeniach? Zarejestruj się lub zaloguj

Bezpłatne plany czytania i rozważania na temat: ಯೊವಾನ್ನ 10

YouVersion używa plików cookie, aby spersonalizować twoje doświadczenia. Korzystając z naszej strony, wyrażasz zgodę na używanie przez nas plików cookie zgodnie z naszą Polityką prywatności