ಆದಿಕಾಂಡ 6

6
ಮಾನವರ ದುರ್ನಡತೆ
1ಮಾನವಕುಲವು ಜಗದ ಮೇಲೆ ಹಬ್ಬಿಹರಡಿದಂತೆ ಅವರಿಗೆ ಹೆಣ್ಣುಮಕ್ಕಳು ಹುಟ್ಟಿದರು. 2ಈ ಮನುಷ್ಯಪುತ್ರಿಯರ ಚೆಲುವನ್ನು ಕಂಡು ದೇವಪುತ್ರರು ತಮಗೆ ಇಷ್ಟಬಂದವರನ್ನೆಲ್ಲ ಮದುವೆಯಾದರು. 3ಆಗ ಸರ್ವೇಶ್ವರ ಸ್ಸ್ವಾಮಿ, “ನನ್ನ ಆತ್ಮವು ಮನುಷ್ಯನಿಗೆ ಶಾಶ್ವತವಾಗಿ ಹೊಣೆಯಾಗಿರಲಾರದು. ಭ್ರಷ್ಟರಾದ ಅವರು ಮರ್ತ್ಯರು. ಅವರ ಆಯುಷ್ಯ ಕೇವಲ ನೂರಿಪ್ಪತ್ತು ವರ್ಷ ಇರಲಿ” ಎಂದರು. 4ದೇವಪುತ್ರರೂ ಮನುಷ್ಯಪುತ್ರಿಯರೂ ಕೂಡಿ ಮಕ್ಕಳು ಹುಟ್ಟಿದರು. ಆ ಕಾಲದಿಂದಲೂ ಅದಾದನಂತರವೂ ಜಗದಲ್ಲಿ ‘ನೆಪೀಲಿಯರು’ ಇದ್ದರು. ಇವರೇ ಪ್ರಾಚೀನಕಾಲದ ಸುಪ್ರಸಿದ್ಧ ಪರಾಕ್ರಮಿಗಳು.
5ಜಗತ್ತಿನಲ್ಲಿ ಮನುಜರ ಕೆಟ್ಟತನವು ಹೆಚ್ಚುತ್ತಲೇ ಇತ್ತು. ಅವರ ಮನದಾಲೋಚನೆಗಳು ಸದಾ ಕೆಟ್ಟದಾಗಿದ್ದವು. 6ಇದನ್ನು ಕಂಡ ಸರ್ವೇಶ್ವರ ಮನುಜನನ್ನು ಇಲ್ಲಿ ಸೃಷ್ಟಿಮಾಡಿದ್ದಕ್ಕಾಗಿ ವ್ಯಥೆಪಟ್ಟು, 7“ನಾನು ಸೃಷ್ಟಿಸಿದ ಮಾನವರನ್ನು ಈ ಜಗದಿಂದ ಅಳಿಸಿಬಿಡುತ್ತೇನೆ, ಅವರೊಂದಿಗೆ ಪ್ರಾಣಿಪಕ್ಷಿಗಳನ್ನು, ಕ್ರಿಮಿಕೀಟಗಳನ್ನು ಅಳಿಸಿಹಾಕುತ್ತೇನೆ. ಅವುಗಳನ್ನು ಉಂಟುಮಾಡಿದ್ದಕ್ಕಾಗಿ ನನಗೆ ದುಃಖವಾಗುತ್ತಿದೆ,” ಎಂದುಕೊಂಡರು. 8ಆದರೆ ನೋಹನ ವಿಷಯದಲ್ಲಿ ಸರ್ವೇಶ್ವರ ಸ್ವಾಮಿಗೆ ಮೆಚ್ಚುಗೆಯಿತ್ತು.
ನೋಹನ ಚರಿತ್ರೆ
9ನೋಹನ ಚರಿತ್ರೆಯಿದು: ಆತ ಸತ್ಪುರುಷ, ಅವನಂಥ ನಿರ್ದೋಷಿ ಆ ಕಾಲದಲ್ಲಿ ಯಾರೂ ಇರಲಿಲ್ಲ. ದೇವರೊಡನೆ ಆತ ಅನ್ಯೋನ್ಯವಾಗಿ ನಡೆದುಕೊಳ್ಳುತ್ತಿದ್ದ. 10ಆತನಿಗೆ ಶೇಮ್, ಹಾಮ್ ಮತ್ತು ಯೆಫೆತ್ ಎಂಬ ಮೂರು ಮಂದಿ ಮಕ್ಕಳು. 11ಜಗತ್ತು ದೇವರ ದೃಷ್ಟಿಯಲ್ಲಿ ಕೆಟ್ಟುಹೋಗಿತ್ತು. ಹಿಂಸಾಚಾರದಿಂದ ತುಂಬಿತುಳುಕುತ್ತಿತ್ತು. 12ಭೂನಿವಾಸಿಗಳೆಲ್ಲರು ತಮ್ಮ ನಡತೆಯನ್ನು ಕೆಡಿಸಿಕೊಂಡಿದ್ದರು.
13ಜಗವಿಡೀ ಕೆಟ್ಟುಹೋಗಿರುವುದನ್ನು ಕಂಡ ದೇವರು, ನೋಹನಿಗೆ, “ನರಮಾನವರೆಲ್ಲರಿಗೆ ಸರ್ವನಾಶವನ್ನು ತೀರ್ಮಾನಿಸಿದ್ದೇನೆ. ಜಗವೆಲ್ಲವು ಹಿಂಸಾಚಾರದಿಂದ ತುಂಬಿಹೋಗಿದೆ. ನಾನು ಅವರನ್ನೂ ಜಗದಲ್ಲಿರುವುದೆಲ್ಲವನ್ನೂ ಅಳಿಸಿಬಿಡುತ್ತೇನೆ. 14ನೀನು ತುರಾಯಿಮರದಿಂದ ನಾವೆಯೊಂದನ್ನು#6:14 ಅಥವಾ: “ಮಂಜೂಷ". ಮಾಡಿಕೊ; ಅದರ ತುಂಬ ಕೊಠಡಿಗಳಿರಲಿ; ಅದರ ಒಳಕ್ಕೂ ಹೊರಕ್ಕೂ ರಾಳಪದಾರ್ಥವನ್ನು ಹಚ್ಚು. 15ಅದನ್ನು ಹೀಗೆ ಮಾಡು: ಅದರ ಉದ್ದ ಮುನ್ನೂರು ಮೊಳ, ಅಗಲ ಐವತ್ತು ಮೊಳ, ಎತ್ತರ ಮೂವತ್ತು ಮೊಳ ಇರಲಿ. 16ಅದರ ಚಾವಣಿಯ ಕೆಳಗೆ ಸುತ್ತಲೂ ಒಂದು ಮೊಳ ಎತ್ತರದ ಕಿಟಕಿ ಇಡು, ಪಕ್ಕದಲ್ಲಿ ಬಾಗಿಲಿರಲಿ; ಒಂದರ ಮೇಲೆ ಒಂದರಂತೆ ನಾವೆಯಲ್ಲಿ ಮೂರು ಅಂತಸ್ತುಗಳನ್ನು ಮಾಡು. 17ನಾನು ಭೂಮಿಯ ಮೇಲೆ ಜಲಪ್ರಳಯವನ್ನು ಬರಮಾಡಲಿದ್ದೇನೆ. ಅದು ಆಕಾಶದ ಕೆಳಗಿರುವ ಸಕಲ ಪ್ರಾಣಿಗಳನ್ನೂ ಅಳಿಸಿಬಿಡುವುದು. ಭೂಮಿಯಲ್ಲಿರುವ ಸಮಸ್ತವೂ ನಾಶವಾಗುವುದು. 18ಆದರೆ ನಿನ್ನೊಡನೆ ಒಂದು ಒಡಂಬಡಿಕೆ ಮಾಡಿಕೊಳ್ಳುತ್ತೇನೆ. ನೀನು ಹೆಂಡತಿ, ಮಕ್ಕಳು ಹಾಗೂ ಸೊಸೆಯರ ಸಮೇತ ನಾವೆಯನ್ನು ಹತ್ತಬೇಕು. 19ಅಲ್ಲದೆ, ನಿನ್ನೊಡನೆ ಬದುಕಿಸಲು ಜೀವಿಗಳ ಪ್ರತಿಯೊಂದು ಜಾತಿಯಲ್ಲೂ ಒಂದು ಗಂಡು, ಒಂದು ಹೆಣ್ಣು ಹೀಗೆ ಒಂದೊಂದು ಜೊತೆಯನ್ನು ನಾವೆಯಲ್ಲಿ ಸೇರಿಸಿಕೊ. 20ಪ್ರಾಣಿಪಕ್ಷಿ, ಕ್ರಿಮಿಕೀಟ ಇವುಗಳ ಸಕಲ ಜಾತಿಗಳಲ್ಲಿ ಎರಡೆರಡು ಬದುಕಿಬಾಳಲು ನಿನ್ನೊಡನೆ ಬರಲಿ. 21ಎಲ್ಲ ತರಹದ ಭೋಜನಪದಾರ್ಥಗಳನ್ನು ಶೇಖರಿಸಿಟ್ಟುಕೊ. ಅದು ನಿನಗೂ ಪ್ರಾಣಿಗಳಿಗೂ ಆಹಾರವಾಗುವುದು,” ಎಂದು ಹೇಳಿದರು. 22ನೋಹನು ಹಾಗೆಯೇ ಮಾಡಿದನು. ದೇವರ ಆಜ್ಞಾನುಸಾರ ನಡೆದುಕೊಂಡನು.

Podkreślenie

Udostępnij

Kopiuj

None

Chcesz, aby twoje zakreślenia były zapisywane na wszystkich twoich urządzeniach? Zarejestruj się lub zaloguj