Kisary famantarana ny YouVersion
Kisary fikarohana

ಲೂಕ 18

18
ಯೇಸು ಪ್ರಾರ್ಥನೆಯ ವಿಷಯದಲ್ಲಿ ಅನ್ಯಾಯಗಾರನಾದ ನ್ಯಾಯಾಧಿಪತಿಯ ಸಾಮ್ಯದ ಮೂಲಕ ಉಪದೇಶಮಾಡಿದ್ದು
1ಬೇಸರಗೊಳ್ಳದೆ ಯಾವಾಗಲೂ ಪ್ರಾರ್ಥನೆ ಮಾಡುತ್ತಿರಬೇಕೆಂಬದಕ್ಕೆ ಆತನು ಅವರಿಗೆ ಒಂದು ಸಾಮ್ಯವನ್ನು ಹೇಳಿದನು. 2ಅದೇನಂದರೆ - ಒಂದಾನೊಂದು ಊರಿನಲ್ಲಿ ಒಬ್ಬ ನ್ಯಾಯಾಧಿಪತಿ ಇದ್ದನು; ಅವನು ದೇವರಿಗೆ ಹೆದರದೆ ಮನುಷ್ಯರನ್ನು ಲಕ್ಷ್ಯಮಾಡದೆ ಇದ್ದವನು. 3ಅದೇ ಊರಿನಲ್ಲಿ ಒಬ್ಬ ವಿಧವೆ ಇದ್ದಳು. ಆಕೆಯು ಅವನ ಬಳಿಗೆ ಬಂದು - ನ್ಯಾಯ ವಿಚಾರಣೆಮಾಡಿ ನನ್ನ ವಿರೋಧಿಯಿಂದ ನನ್ನನ್ನು ಬಿಡಿಸು ಎಂದು ಹೇಳಿಕೊಳ್ಳುತ್ತಿದ್ದಳು. 4ಅವನು ಸ್ವಲ್ಪ ಕಾಲ ಮನಸ್ಸುಕೊಡಲಿಲ್ಲ. ಆ ಮೇಲೆ ಅವನು - ನಾನು ದೇವರಿಗೆ ಹೆದರುವವನಲ್ಲ, ಮನುಷ್ಯರನ್ನು ಲಕ್ಷ್ಯಮಾಡುವವನಲ್ಲ; 5ಆದರೂ ಈ ವಿಧವೆ ನನ್ನನ್ನು ಕಾಡುತ್ತಾ ಬರುವದರಿಂದ ಈಕೆಯ ನ್ಯಾಯವನ್ನು ವಿಚಾರಿಸಿ ತೀರ್ಪುಮಾಡುವೆನು; ಇಲ್ಲವಾದರೆ ಈಕೆಯು ಬಂದು ಬಂದು ಕಡೆಗೆ ನನ್ನನ್ನು ದಣಿಸಾಳು ಎಂದು ತನ್ನೊಳಗೆ ಅಂದುಕೊಂಡನು. 6ಸ್ವಾವಿುಯು ಈ ಸಾಮ್ಯವನ್ನು ಹೇಳಿದ ಮೇಲೆ - ಅನ್ಯಾಯಗಾರನಾದ ಈ ನ್ಯಾಯಾಧಿಪತಿ ಅಂದುಕೊಂಡದ್ದನ್ನು ಆಲೋಚಿಸಿಕೊಳ್ಳಿರಿ. 7ದೇವರಾದುಕೊಂಡವರು ಆತನಿಗೆ ಹಗಲು ರಾತ್ರಿ ಮೊರೆಯಿಡುವಲ್ಲಿ ಆತನು ಅವರ ವಿಷಯದಲ್ಲಿ ತಡಮಾಡಿದರೂ ಅವರ ನ್ಯಾಯವನ್ನು ತೀರಿಸದೆ ಇರುವನೇ? ಅವರಿಗೆ ಬೇಗ ನ್ಯಾಯ ತೀರಿಸುವನೆಂದು ನಿಮಗೆ ಹೇಳುತ್ತೇನೆ. 8ಹೀಗಿದ್ದರೂ ಮನುಷ್ಯಕುಮಾರನು ಬಂದಾಗ ಭೂವಿುಯ ಮೇಲೆ ನಂಬಿಕೆಯನ್ನು ಕಾಣುವನೋ? ಅಂದನು.
ಪ್ರಾರ್ಥನೆಮಾಡುವದಕ್ಕಾಗಿ ದೇವಾಲಯಕ್ಕೆ ಹೋದ ಫರಿಸಾಯನನ್ನೂ ಸುಂಕದವನನ್ನೂ ಕುರಿತದ್ದು
9ಇದಲ್ಲದೆ ತಾವೇ ನೀತಿವಂತರೆಂದು ತಮ್ಮಲ್ಲಿ ಭರವಸವಿಟ್ಟುಕೊಂಡು ಉಳಿದವರನ್ನು ಉದಾಸೀನಮಾಡುವಂಥ ಕೆಲವರಿಗೆ ಒಂದು ಸಾಮ್ಯವನ್ನು ಹೇಳಿದನು. 10ಅದೇನಂದರೆ - ಪ್ರಾರ್ಥನೆಮಾಡಬೇಕೆಂದು ಇಬ್ಬರು ಮನುಷ್ಯರು ದೇವಾಲಯಕ್ಕೆ ಹೋದರು; ಒಬ್ಬನು ಫರಿಸಾಯನು, ಒಬ್ಬನು ಸುಂಕದವನು. 11ಫರಿಸಾಯನು ನಿಂತುಕೊಂಡು ಪ್ರಾರ್ಥಿಸುವಾಗ ತನ್ನೊಳಗೆ - ದೇವರೇ, ಸುಲುಕೊಳ್ಳುವವರೂ ಅನ್ಯಾಯಗಾರರೂ ಹಾದರಮಾಡುವವರೂ ಆಗಿರುವ ಉಳಿದ ಜನರಂತೆ ನಾನಲ್ಲ, ಈ ಸುಂಕದವನಂತೆಯೂ ಅಲ್ಲ; ಆದದರಿಂದ ನಿನಗೆ ಸ್ತೋತ್ರಮಾಡುತ್ತೇನೆ. 12ವಾರಕ್ಕೆ ಎರಡಾವರ್ತಿ ಉಪವಾಸ ಮಾಡುತ್ತೇನೆ; ನಾನು ಸಂಪಾದಿಸುವ ಎಲ್ಲಾದರಲ್ಲಿಯೂ ಹತ್ತರಲ್ಲೊಂದು ಪಾಲು ಕೊಡುತ್ತೇನೆ ಅಂದುಕೊಂಡನು. 13ಆದರೆ ಆ ಸುಂಕದವನು ದೂರದಲ್ಲಿ ನಿಂತು ಆಕಾಶದ ಕಡೆಗೆ ಕಣ್ಣೆತ್ತಿ ನೋಡುವದಕ್ಕೂ ಮನಸ್ಸಿಲ್ಲದೆ ಎದೆಯನ್ನು ಬಡುಕೊಳ್ಳುತ್ತಾ - ದೇವರೇ, ಪಾಪಿಯಾದ ನನ್ನನ್ನು ಕರುಣಿಸು ಅಂದನು. 14ಇವನು ನೀತಿವಂತನೆಂದು ನಿರ್ಣಯಿಸಲ್ಪಟ್ಟವನಾಗಿ ತನ್ನ ಮನೆಗೆ ಹೋದನು, ಆ ಫರಿಸಾಯನು ಅಂಥವನಾಗಿ ಹೋಗಲಿಲ್ಲ ಎಂದು ನಿಮಗೆ ಹೇಳುತ್ತೇನೆ. ತನ್ನನ್ನು ಹೆಚ್ಚಿಸಿಕೊಳ್ಳುವ ಪ್ರತಿಯೊಬ್ಬನು ತಗ್ಗಿಸಲ್ಪಡುವನು; ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು ಅಂದನು.
ಯೇಸು ಚಿಕ್ಕ ಮಕ್ಕಳನ್ನು ಆಶೀರ್ವದಿಸಿದ್ದು
(ಮತ್ತಾ. 19.13-15; ಮಾರ್ಕ. 10.13-16)
15ಕೆಲವರು ತಮ್ಮ ಕೂಸುಗಳನ್ನು ಸಹ ಯೇಸುವಿನಿಂದ ಮುಟ್ಟಿಸಬೇಕೆಂದು ಆತನ ಬಳಿಗೆ ತರಲು ಶಿಷ್ಯರು ಕಂಡು ಅವರನ್ನು ಗದರಿಸಿದರು. 16ಆದರೆ ಯೇಸು ಆ ಕೂಸುಗಳನ್ನು ತನ್ನ ಬಳಿಗೆ ಕರತರಿಸಿ - ಮಕ್ಕಳನ್ನು ನನ್ನ ಹತ್ತಿರಕ್ಕೆ ಬರಗೊಡಿಸಿರಿ; ಅವುಗಳಿಗೆ ಅಡ್ಡಿಮಾಡಬೇಡಿರಿ; ದೇವರ ರಾಜ್ಯವು ಇಂಥವರದೇ. 17ನಿಮಗೆ ಸತ್ಯವಾಗಿ ಹೇಳುತ್ತೇನೆ, ಯಾವನು ಶಿಶುಭಾವದಿಂದ ದೇವರ ರಾಜ್ಯವನ್ನು ಅಂಗೀಕರಿಸುವದಿಲ್ಲವೋ ಅವನು ಅದರಲ್ಲಿ ಸೇರುವದೇ ಇಲ್ಲ ಅಂದನು.
ನಿತ್ಯಜೀವವನ್ನು ಹೇಗೆ ಪಡೆಯಬೇಕೆಂದು ಒಬ್ಬ ಐಶ್ವರ್ಯವಂತನು ಕೇಳಿದ್ದಕ್ಕೆ ಯೇಸು ಹಣದ ಭ್ರಾಂತಿಯಿಂದಾಗುವ ಕೇಡನ್ನು ತೋರಿಸಿದ್ದು
(ಮತ್ತಾ. 19.16-29; ಮಾರ್ಕ. 10.17-30)
18ಒಬ್ಬ ಅಧಿಕಾರಿಯು ಬಂದು - ಒಳ್ಳೇ ಬೋಧಕನೇ, ನಾನು ನಿತ್ಯಜೀವಕ್ಕೆ ಬಾಧ್ಯನಾಗುವಂತೆ ಏನು ಮಾಡಬೇಕು ಎಂದು ಆತನನ್ನು ಕೇಳಲಾಗಿ 19ಯೇಸು ಅವನಿಗೆ - ನನ್ನನ್ನು ಒಳ್ಳೆಯವನೆಂದು ಯಾಕೆ ಹೇಳುತ್ತೀ? ದೇವರೊಬ್ಬನೇ ಹೊರತು ಮತ್ತಾವನೂ ಒಳ್ಳೆಯವನಲ್ಲ. 20ವ್ಯಭಿಚಾರ ಮಾಡಬಾರದು; ನರಹತ್ಯ ಮಾಡಬಾರದು; ಕದಿಯಬಾರದು; ಸುಳ್ಳುಸಾಕ್ಷಿ ಹೇಳಬಾರದು; ನಿನ್ನ ತಂದೆ ತಾಯಿಗಳನ್ನು ಸನ್ಮಾನಿಸಬೇಕು ಎಂಬ ದೇವರಾಜ್ಞೆಗಳು ನಿನಗೆ ಗೊತ್ತಿವೆಯಷ್ಟೆ ಎಂದು ಹೇಳಿದನು. 21ಅದಕ್ಕವನು - ನಾನು ಚಿಕ್ಕಂದಿನಿಂದಲೂ ಇವೆಲ್ಲಕ್ಕೂ ಸರಿಯಾಗಿ ನಡಕೊಂಡು ಬಂದಿದ್ದೇನೆ ಎಂದು ಹೇಳಲು 22ಯೇಸು ಅದನ್ನು ಕೇಳಿ ಅವನಿಗೆ - ಇನ್ನೂ ನಿನಗೆ ಒಂದು ಕಡಿಮೆಯಾಗಿದೆ; ನಿನ್ನ ಬದುಕನ್ನೆಲ್ಲಾ ಮಾರಿ ಬಡವರಿಗೆ ಹಂಚಿಕೊಡು; ಪರಲೋಕದಲ್ಲಿ ನಿನಗೆ ಸಂಪತ್ತಿರುವದು; ನೀನು ಬಂದು ನನ್ನನ್ನು ಹಿಂಬಾಲಿಸು ಎಂದು ಹೇಳಿದನು. 23ಅವನು ಬಹಳ ಐಶ್ವರ್ಯವಂತನಾಗಿದ್ದದರಿಂದ ಇದನ್ನು ಕೇಳಿ ಬಹಳ ವ್ಯಸನಗೊಂಡನು. 24ಆಗ ಯೇಸು ಅವನನ್ನು ನೋಡಿ - ಧನವಂತರು ದೇವರ ರಾಜ್ಯದಲ್ಲಿ ಸೇರುವದು ಎಷ್ಟೋ ಕಷ್ಟ. 25ಐಶ್ವರ್ಯವಂತನು ದೇವರ ರಾಜ್ಯದಲ್ಲಿ ಸೇರುವದಕ್ಕಿಂತ ಒಂಟೆಯು ಸೂಜೀಕಣ್ಣಿನಲ್ಲಿ ನುಗ್ಗುವದು ಸುಲಭ ಅಂದನು. 26ಈ ಮಾತನ್ನು ಕೇಳಿದವರು - [ಹೀಗಿದ್ದರೆ] ಯಾರಿಗೆ ರಕ್ಷಣೆಯಾದೀತು ಎಂದು ಕೇಳಲು 27ಆತನು - ಮನುಷ್ಯರಿಗೆ ಅಸಾಧ್ಯವಾದ ಕಾರ್ಯಗಳು ದೇವರಿಗೆ ಸಾಧ್ಯವಾಗಿವೆ ಅಂದನು. 28ಆಗ ಪೇತ್ರನು - ಇಗೋ, ನಾವು ನಮ್ಮ ನಮ್ಮ ಮನೆಮಾರುಗಳನ್ನು ಬಿಟ್ಟು ನಿನ್ನ ಹಿಂದೆ ಬಂದೆವು ಎಂದು ಹೇಳಲು 29ಆತನು ಅವರಿಗೆ - ನಿಮಗೆ ಸತ್ಯವಾಗಿ ಹೇಳುತ್ತೇನೆ, ಯಾವನು ದೇವರ ರಾಜ್ಯದ ನಿವಿುತ್ತ ಮನೆಯನ್ನಾಗಲಿ ಹೆಂಡತಿಯನ್ನಾಗಲಿ ಅಣ್ಣತಮ್ಮಂದಿರನ್ನಾಗಲಿ ತಂದೆತಾಯಿಗಳನ್ನಾಗಲಿ ಮಕ್ಕಳನ್ನಾಗಲಿ ಬಿಟ್ಟುಬಿಟ್ಟಿರುವನೋ 30ಅವನಿಗೆ ಈಗಿನ ಕಾಲದಲ್ಲಿ ಅನೇಕ ಪಾಲು ಹೆಚ್ಚಾದವುಗಳು ಸಿಕ್ಕೇ ಸಿಕ್ಕುತ್ತವೆ; ಮತ್ತು ಮುಂದಣ ಲೋಕದಲ್ಲಿ ನಿತ್ಯಜೀವವು ದೊರೆಯುವದು ಎಂದು ಹೇಳಿದನು.
ಯೇಸು ತನ್ನ ಮರಣ ಪುನರುತ್ಥಾನಗಳನ್ನು ಮೂರನೆಯ ಸಾರಿ ಮುಂತಿಳಿಸಿದ್ದು
(ಮತ್ತಾ. 20.17-19; ಮಾರ್ಕ. 10.32-34)
31ಆತನು ತನ್ನ ಹನ್ನೆರಡು ಮಂದಿ ಶಿಷ್ಯರನ್ನು ಕರೆದುಕೊಂಡು ಅವರಿಗೆ - ನೋಡಿರಿ, ನಾವು ಯೆರೂಸಲೇವಿುಗೆ ಹೋಗುತ್ತಾ ಇದ್ದೇವೆ; ಮತ್ತು ಮನುಷ್ಯಕುಮಾರನ ವಿಷಯದಲ್ಲಿ ಪ್ರವಾದಿಗಳು ಬರೆದದ್ದೆಲ್ಲಾ ಅವನಲ್ಲಿ ನೆರವೇರುವದು. 32ಹೇಗಂದರೆ - ಅವನನ್ನು ಅನ್ಯರ ಕೈಗೆ ಒಪ್ಪಿಸುವರು, ಇವರು ಅವನನ್ನು ಅಪಹಾಸ್ಯ ಮಾಡುವರು, ಬೈಯುವರು, ಉಗುಳುವರು, ಕೊರಡೆಗಳಿಂದ ಹೊಡೆಯುವರು, ಕೊಂದುಹಾಕುವರು; 33ಮತ್ತು ಮೂರನೆಯ ದಿನದಲ್ಲಿ ಅವನು ಜೀವಿತನಾಗಿ ಎದ್ದು ಬರುವನು ಎಂದು ಹೇಳಿದನು. 34ಅವರು ಈ ಸಂಗತಿಗಳಲ್ಲಿ ಒಂದನ್ನಾದರೂ ಗ್ರಹಿಸಲಿಲ್ಲ, ಈ ಮಾತುಗಳು ಅವರಿಗೆ ಮರೆಯಾಗಿದ್ದವು, ಅವುಗಳ ಅರ್ಥ ಅವರಿಗೆ ಗೊತ್ತಾಗಲಿಲ್ಲ.
ಒಬ್ಬ ಕುರುಡನನ್ನು ಸ್ವಸ್ಥಮಾಡಿದ್ದು
(ಮತ್ತಾ. 20.29-34; ಮಾರ್ಕ. 10.46-52)
35ಆತನು ಯೆರಿಕೋವಿನ ಸಮೀಪಕ್ಕೆ ಬಂದಾಗ ದಾರಿಯ ಮಗ್ಗುಲಲ್ಲಿ ಕೂತು ಭಿಕ್ಷೆಬೇಡುತ್ತಿದ್ದ ಒಬ್ಬ ಕುರುಡನು 36ಗುಂಪಾಗಿ ಹೋಗುತ್ತಿದ್ದ ಜನರ ಶಬ್ದವನ್ನು ಕೇಳಿ ಇದೇನು ಎಂದು ವಿಚಾರಿಸಿದನು. 37ಅವರು ಅವನಿಗೆ - ನಜರೇತಿನ ಯೇಸು ಈ ಮಾರ್ಗವಾಗಿ ಹೋಗುತ್ತಿದ್ದಾನೆಂದು ತಿಳಿಸಿದಾಗ 38ಅವನು - ಯೇಸುವೇ, ದಾವೀದನ ಕುಮಾರನೇ, ನನ್ನನ್ನು ಕರುಣಿಸು ಎಂದು ಕೂಗಿ ಕೇಳಿಕೊಂಡನು. 39ಮುಂದೆ ಹೋಗುತ್ತಿದ್ದವರು ಸುಮ್ಮನಿರು ಎಂದು ಅವನನ್ನು ಗದರಿಸಲು ಅವನು - ದಾವೀದನ ಕುಮಾರನೇ, ನನ್ನನ್ನು ಕರುಣಿಸು ಎಂದು ಮತ್ತಷ್ಟು ಕೂಗಿಕೊಂಡನು. 40ಆಗ ಯೇಸು ನಿಂತು ಅವನನ್ನು ತನ್ನ ಬಳಿಗೆ ಕರತರುವದಕ್ಕೆ ಅಪ್ಪಣೆಕೊಟ್ಟನು. ಅವನು ಹತ್ತಿರಕ್ಕೆ ಬಂದನು. 41ಆತನು ಅವನನ್ನು - ನಾನು ನಿನಗೆ ಏನು ಮಾಡಬೇಕೆಂದು ಕೋರುತ್ತೀ ಎಂದು ಕೇಳಲು ಅವನು - ನನಗೆ ಕಣ್ಣು ಬರುವಂತೆ ಮಾಡಬೇಕು, ಸ್ವಾಮೀ ಅಂದನು. 42ಯೇಸು ಅವನಿಗೆ - ನಿನಗೆ ಕಣ್ಣು ಬರಲಿ; ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಮಾಡಿ ಅದೆ ಎಂದು ಹೇಳಿದನು. 43ತಕ್ಷಣವೇ ಅವನಿಗೆ ಕಣ್ಣುಬಂದವು; ಅವನು ದೇವರನ್ನು ಕೊಂಡಾಡುತ್ತಾ ಆತನ ಹಿಂದೆ ಹೋದನು. ಜನರೆಲ್ಲರು ನಡೆದ ಸಂಗತಿಯನ್ನು ನೋಡಿ ದೇವರನ್ನು ಸ್ತುತಿಸಿದರು.

Voafantina amin'izao fotoana izao:

ಲೂಕ 18: KANJV-BSI

Asongadina

Hizara

Dika mitovy

None

Tianao hovoatahiry amin'ireo fitaovana ampiasainao rehetra ve ireo nasongadina? Hisoratra na Hiditra