ಆದಿಕಾಂಡ 11

11
ಬಾಬೆಲ್ ಗೋಪುರ - ಭಾಷಾಬೇಧ
1ಭೂಜನರೆಲ್ಲರಿಗೂ ಇದ್ದುದು ಒಂದೇ ಭಾಷೆ, ಒಂದೇ ನುಡಿ. 2ಅವರು ಪೂರ್ವದಿಕ್ಕಿಗೆ ಪ್ರಯಾಣಮಾಡುತ್ತಾ ಇದ್ದಾಗ ಬಾಬಿಲೋನಿಯ ಕಾಡಿನ ಬಯಲು ಸೀಮೆ ಸಿಕ್ಕಿತು. ಅವರು ಅಲ್ಲೇ ನೆಲೆಸಲು ತೊಡಗಿದರು. 3“ಬನ್ನಿ, ಒಳ್ಳೊಳ್ಳೆ ಸುಟ್ಟ ಇಟ್ಟಿಗೆಗಳನ್ನು ಮಾಡೋಣ; 4ಒಂದು ಪಟ್ಟಣವನ್ನು ಕಟ್ಟೋಣ; ಆಕಾಶವನ್ನು ಮುಟ್ಟುವಂಥ ಗೋಪುರವನ್ನು ನಿರ್ಮಿಸಿ ಪ್ರಖ್ಯಾತಿ ಪಡೆಯೋಣ. ಹೀಗೆ ಮಾಡಿದರೆ ನಾವು ಜಗದಲ್ಲೆಲ್ಲಾ ಚದರಿಹೋಗುವುದಕ್ಕೆ ಆಸ್ಪದವಿರುವುದಿಲ್ಲ” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು. ಕಟ್ಟುವಾಗ ಕಲ್ಲಿಗೆ ಬದಲಾಗಿ ಇಟ್ಟಿಗೆಯನ್ನೂ ಗಾರೆಗೆ (ಸುಣ್ಣಕ್ಕೆ) ಬದಲಾಗಿ ಕಲ್ಲರಗನ್ನೂ ಉಪಯೋಗಿಸಿದರು.
5ನರಮಾನವರು ಕಟ್ಟುತ್ತಿದ್ದ ಆ ಪಟ್ಟಣವನ್ನು ಹಾಗೂ ಗೋಪುರವನ್ನು ನೋಡಲು ಸರ್ವೇಶ್ವರ ಸ್ವಾಮಿ ಇಳಿದು ಬಂದರು. 6ನೋಡಿದ ಮೇಲೆ, “ಇವರು ಒಂದೇ ಜನಾಂಗ; ಇವರೆಲ್ಲರಿಗೂ ಒಂದೇ ಭಾಷೆ. ಇದು ಇವರು ಕೈಗೊಂಡಿರುವ ಕಾರ್ಯದ ಪ್ರಾರಂಭ ಮಾತ್ರ. ಮುಂದಕ್ಕೆ ಇವರು ಏನು ಬೇಕಾದರೂ ಮಾಡಿಯಾರು! 7ನಾವು ಹೋಗಿ ಇವರಲ್ಲಿ ಒಬ್ಬರ ಮಾತು ಒಬ್ಬರಿಗೆ ತಿಳಿಯದಂತೆ ಇವರ ಭಾಷೆಯನ್ನು ಗಲಿಬಿಲಿಗೊಳಿಸೋಣ,” ಎಂದರು. 8ಅಂತೆಯೇ ಮಾಡಿ ಅವರನ್ನು ಅಲ್ಲಿಂದ ಜಗದೆಲ್ಲೆಡೆಗೆ ಚದರಿಸಿಬಿಟ್ಟರು. ಜನರು ಆ ಪಟ್ಟಣ ಕಟ್ಟುವುದನ್ನು ನಿಲ್ಲಿಸಿಬಿಟ್ಟರು 9ಹೀಗೆ ಸರ್ವೇಶ್ವರ ಇಡೀ ಜಗತ್ತಿನ ಭಾಷೆಯನ್ನು ಗಲಿಬಿಲಿಗೊಳಿಸಿ ಅಲ್ಲಿಂದ ಜನರನ್ನು ಜಗದೆಲ್ಲೆಡೆಗೆ ಚದರಿಸಿದ ಕಾರಣ ಆ ಪಟ್ಟಣಕ್ಕೆ ‘ಬಾಬೆಲೋನ್‍’#11:9 ಅಥವಾ: ಬಾಬೆಲ್ ಅಂದರೆ “ಅಸ್ತವ್ಯಸ್ತ”, “ಗಲಿಬಿಲಿ". ಎಂದು ಹೆಸರಾಯಿತು.
ಅಬ್ರಹಾಮನು ಶೇಮನ ವಂಶಜ
(೧ ಪೂರ್ವ. 1:24-27)
10ಶೇಮನ ವಂಶವೃಕ್ಷ; ಜಲಪ್ರಳಯ ಕಳೆದು ಎರಡು ವರ್ಷಗಳಾದ ಮೇಲೆ ಶೇಮನಿಗೆ ಅರ್ಪಕ್ಷದನು ಹುಟ್ಟಿದನು. ಆಗ ಶೇಮನಿಗೆ 100 ವರ್ಷ ವಯಸ್ಸು. 11ಅನಂತರ ಶೇಮನು ಗಂಡುಹೆಣ್ಣು ಮಕ್ಕಳನ್ನು ಪಡೆದು 500 ವರ್ಷ ಬದುಕಿದ್ದನು.
12ಮೂವತ್ತೈದು ವರ್ಷದವನಾಗಿದ್ದ ಅರ್ಪಕ್ಷದನಿಗೆ ಶೆಲಹನು ಹುಟ್ಟಿದನು. 13ಅನಂತರ ಅರ್ಪಕ್ಷದನು ಗಂಡುಹೆಣ್ಣು ಮಕ್ಕಳನ್ನು ಪಡೆದು ನಾನೂರ ಮೂರು ವರ್ಷ ಬದುಕಿದ್ದನು.
14ಮೂವತ್ತು ವರ್ಷದವನಾಗಿದ್ದ ಶೆಲಹನಿಗೆ ಎಬರನು ಹುಟ್ಟಿದನು. 15ಅನಂತರ ಗಂಡುಹೆಣ್ಣು ಮಕ್ಕಳನ್ನು ಪಡೆದು 403 ವರ್ಷ ಬದುಕಿದ್ದನು.
16ಮೂವತ್ತನಾಲ್ಕು ವರ್ಷದವನಾಗಿದ್ದ ಎಬರನಿಗೆ ಪೆಲೆಗನು ಹುಟ್ಟಿದನು. 17ಅನಂತರ ಗಂಡುಹೆಣ್ಣು ಮಕ್ಕಳನ್ನು ಪಡೆದು 430 ವರ್ಷ ಬದುಕಿದ್ದನು.
18ಮೂವತ್ತು ವರ್ಷದವನಾಗಿದ್ದ ಪೆಲೆಗನಿಗೆ ರೆಗೂವನು ಹುಟ್ಟಿದನು. 19ಅನಂತರ ಪೆಲೆಗನು ಗಂಡುಹೆಣ್ಣು ಮಕ್ಕಳನ್ನು ಪಡೆದು 290 ವರ್ಷ ಬದುಕಿದ್ದನು.
20ಮೂವತ್ತೆರಡು ವರ್ಷದವನಾಗಿದ್ದ ರೆಗೂವನಿಗೆ ಸೆರೂಗನು ಹುಟ್ಟಿದನು. 21ಅನಂತರ ರೆಗೂವನು ಗಂಡುಹೆಣ್ಣು ಮಕ್ಕಳನ್ನು ಪಡೆದು 207 ವರ್ಷ ಬದುಕಿದ್ದನು.
22ಮೂವತ್ತು ವರ್ಷದವನಾಗಿದ್ದ ಸೆರೂಗನಿಗೆ ನಾಹೋರನು ಹುಟ್ಟಿದನು. 23ಅನಂತರ ಸೆರೂಗನು ಗಂಡುಹೆಣ್ಣು ಮಕ್ಕಳನ್ನು ಪಡೆದು 200 ವರ್ಷ ಬದುಕಿದ್ದನು.
24ಇಪ್ಪತ್ತೊಂಭತ್ತು ವರ್ಷದವನಾಗಿದ್ದ ನಾಹೋರನಿಗೆ ತೆರಹನು ಹುಟ್ಟಿದನು. 25ಅನಂತರ ನಾಹೋರನು ಗಂಡುಹೆಣ್ಣು ಮಕ್ಕಳನ್ನು ಪಡೆದು 190 ವರ್ಷ ಬದುಕಿದ್ದನು.
26ಎಪ್ಪತ್ತು ವರ್ಷದವನಾದ ತೆರಹನಿಗೆ ಅಬ್ರಾಮ, ನಾಹೋರ ಮತ್ತು ಹಾರಾನ ಎಂಬ ಮಕ್ಕಳು ಹುಟ್ಟಿದರು.
ಅಬ್ರಾಮನ ಚರಿತ್ರೆ
27ತೆರಹನ ವಂಶವೃಕ್ಷ: ತೆರಹನಿಗೆ ಅಬ್ರಾಮ, ನಾಹೋರ, ಹಾರಾನ ಇವರು ಹುಟ್ಟಿದರು. ಹಾರಾನನಿಗೆ ಲೋಟನು ಹುಟ್ಟಿದನು. 28ಹಾರಾನನು, ತನ್ನ ಜನ್ಮಭೂಮಿಯಲ್ಲಿ, ಬಾಬಿಲೋನಿನ#11:28 ಅಥವಾ: ಕಲ್ದೀಯ, ಕಸ್ದೀಯ. ಊರ್ ಎಂಬ ಪಟ್ಟಣದಲ್ಲಿ, ತನ್ನ ತಂದೆಯಾದ ತೆರಹನು ಜೀವದಿಂದಿರುವಾಗಲೇ ಸತ್ತನು. 29ಅಬ್ರಾಮನು ಮತ್ತು ನಾಹೋರನು ಮದುವೆಮಾಡಿಕೊಂಡರು. ಅಬ್ರಾಮನ ಹೆಂಡತಿಯ ಹೆಸರು ಸಾರಯಳು, ನಾಹೋರನ ಹೆಂಡತಿಯ ಹೆಸರು ಮಿಲ್ಕಾ; ಈಕೆ ಹಾರಾನನ ಮಗಳು; ಹಾರಾನನು ಮಿಲ್ಕಳಿಗು ಹಾಗೂ ಇಸ್ಕಳಿಗು ತಂದೆ. 30ಸಾರಯಳು ಬಂಜೆ, ಆಕೆಗೆ ಮಕ್ಕಳಿರಲಿಲ್ಲ.
31ತೆರಹನು ತನ್ನ ಮಗನಾದ ಅಬ್ರಾಮನನ್ನು ಮತ್ತು ತನಗೆ ಮೊಮ್ಮಗನೂ ಹಾರಾನನಿಗೆ ಮಗನೂ ಆದ ಲೋಟನನ್ನೂ ಹಾಗು ತನಗೆ ಸೊಸಯೂ ಅಬ್ರಾಮನಿಗೆ ಹೆಂಡತಿಯೂ ಆದ ಸಾರಯಳನ್ನೂ ಕರೆದುಕೊಂಡು ಬಾಬಿಲೋನಿನ ಊರ್ ಎಂಬ ಪಟ್ಟಣವನ್ನು ಬಿಟ್ಟು ಕಾನಾನ್ ನಾಡಿಗೆ ತೆರಳಿದನು. ಅವರು ಹಾರಾನ್ ಎಂಬ ಪಟ್ಟಣವನ್ನು ತಲುಪಿ ಅಲ್ಲಿ ವಾಸಮಾಡಿಕೊಂಡರು. 32ತೆರಹನು ಅಲ್ಲಿ ಮೃತನಾದನು. ಆಗ ಅವನಿಗೆ ಇನ್ನೂರ ಐದು ವರ್ಷವಾಗಿತ್ತು.

하이라이트

공유

복사

None

모든 기기에 하이라이트를 저장하고 싶으신가요? 회원가입 혹은 로그인하세요

ಆದಿಕಾಂಡ 11 동영상