ಪ್ರಲಾಪಗಳು 5
5
ಐದನೆಯ ಶೋಕಗೀತೆ
ದಯೆತೋರೆಂದು ಸರ್ವೇಶ್ವರನಲ್ಲಿ ಪ್ರಾರ್ಥನೆ
1ಹೇ, ಸರ್ವೇಶ್ವರಾ,
ನಮಗೊದಗಿರುವ ದುರ್ಗತಿಯನ್ನು ನೆನೆಸಿಕೊ
ನಾವು ಸಹಿಸುತ್ತಿರುವ ನಿಂದೆ ಅವಮಾನಗಳನ್ನು ಗಮನಕ್ಕೆ ತಂದುಕೋ.
2ನಮ್ಮ ಆಸ್ತಿಪಾಸ್ತಿ ಪರರಪಾಲಾಗಿದೆ
ನಮ್ಮ ಮನೆಮಾರುಗಳು ಹೆರವರ ವಶದಲ್ಲಿವೆ.
3ನಾವು ತಂದೆಯಿಲ್ಲದ ಅನಾಥರು
ನಮ್ಮ ತಾಯಿಗಳು ವಿಧವೆಯರು.
4ನೀರು ನಮ್ಮದಾದರೂ ಕೊಂಡುಕೊಂಡು ಕುಡಿಯುತ್ತಿದ್ದೇವೆ
ಸೌದೆ ಸ್ವಂತವಾದರೂ ಕ್ರಯಕ್ಕೆ ತೆಗೆದುಕೊಳ್ಳುತ್ತಿದ್ದೇವೆ.
5ಹಿಂದಟ್ಟಿ ಬಂದವರು ಹಿಡಿದರು ನಮ್ಮ ಕುತ್ತಿಗೆ
ಬಳಲಿ ಬೆಂಡಾಗಿದ್ದೇವೆ ವಿಶ್ರಾಂತಿಯಿಲ್ಲದೆ.
6ಹೊಟ್ಟೆಪಾಡಿಗಾಗಿ ಕೈ ಒಡ್ಡಿದ್ದೇವೆ
ಈಜಿಪ್ಟರಿಗೆ, ಅಶ್ಶೂರ್ಯರಿಗೆ.
7ನಮ್ಮ ಪಿತೃಗಳು ಪಾಪಮಾಡಿ ಗತಿಸಿಹೋದರು
ಅವರ ದೋಷಫಲವನ್ನು ನಾವು ಸವಿಯಬೇಕಾಗಿ ಬಂದಿತು.
8ದಾಸರುಗಳೇ ನಮಗೆ ದಣಿಗಳಾದರು
ಅವರಿಂದ ನಮ್ಮನ್ನು ಬಿಡಿಸುವವರಾರೂ ಇಲ್ಲವಾದರು!
9ಪ್ರಾಣಾಪಾಯದಿಂದ, ಕಾಡಿನ ಕಟುಕರ ಭಯದಿಂದ
ನಾವು ಪಡೆಯುತ್ತಿದ್ದೇವೆ ದವಸ ಧಾನ್ಯ.
10ಒಲೆಯಂತೆ ಸುಡುತ್ತಿದೆ ನಮ್ಮ ಚರ್ಮ
ಕ್ಷಾಮಕಾಲದ ಭೀಕರ ಜ್ವರದ ನಿಮಿತ್ತ.
11ಅತ್ಯಾಚಾರ ನಡೆದಿದೆ ಸಿಯೋನ್ ಸತಿಯರ ಮೇಲೆ
ಯೆಹೂದ ಊರುಗಳ ಯುವತಿಯರ ಮೇಲೆ!
12ನಮ್ಮ ನಾಯಕರ ಕೈಗಳನ್ನು ನೇತುಹಾಕಿದ್ದಾರೆ ಗಲ್ಲಿಗೆ
ನಮ್ಮ ಹಿರಿಯರನ್ನು ಗುರಿಪಡಿಸಿದ್ದಾರೆ ಮಾನಭಂಗಕ್ಕೆ.
13ನಮ್ಮ ಯುವಕರಿಗೆ ಬೀಸುವ ಕಲ್ಲು ಹಿಡಿವ ಗತಿ
ನಮ್ಮ ಮಕ್ಕಳಿಗೆ ಸೌದೆ ಹೊತ್ತು ಮುಗ್ಗರಿಸುವ ಪರಿಸ್ಥಿತಿ.
14ಮುದುಕರು ಇನ್ನು ಕೂರುತ್ತಿಲ್ಲ ಚಾವಡಿಗಳಲಿ
ಯುವಕರು ಇನ್ನು ಹಿಡಿಯುತ್ತಿಲ್ಲ ವಾದ್ಯಗಳನ್ನು ಕೈಯಲ್ಲಿ.
15ಸಂತೋಷವು ನಮ್ಮ ಹೃದಯದಿಂದ ಮಾಯವಾಗಿದೆ
ನಮ್ಮ ನಾಟ್ಯನಲಿವು ದುಃಖಕರವಾಗಿ ಮಾರ್ಪಟ್ಟಿದೆ.
16ನಮ್ಮ ಕಿರೀಟ ಬಿದ್ದುಹೋಗಿದೆ ತಲೆಮೇಲಿಂದ
ಈ ಕೇಡೆಲ್ಲಾ ಬಂದೊದಗಿದೆ ನಮ್ಮ ಪಾಪದ ನಿಮಿತ್ತ.
17ಈ ಕಾರಣ, ನಮ್ಮ ಹೃದಯ ಕುಂದಿದೆ
ಇದೇ ಕಾರಣ, ನಮ್ಮ ಕಣ್ಣು ಮೊಬ್ಬಾಗಿದೆ.
18ಸಿಯೋನ್ ಶ್ರೀ ಪರ್ವತ ಹಾಳಾಯಿತು
ಅದು ಅಲೆದಾಡುವ ನರಿಗಳ ಬೀಡಾಯಿತು.
19ಹೇ ಸರ್ವೇಶ್ವರಾ, ನಿನ್ನ ರಾಜ್ಯ ಚಿರಕಾಲ
ನಿನ್ನ ಸಿಂಹಾಸನ ತಲತಲಾಂತರಕ್ಕೂ ಸುಸ್ಥಿರ!
20ನಮ್ಮನ್ನೇಕೆ ಮರೆತುಬಿಟ್ಟೆ ಇಷ್ಟುಕಾಲ
ನಮ್ಮನ್ನೇಕೆ ಕೈಬಿಟ್ಟೆ ಇಲ್ಲಿಯ ತನಕ?
21ಹೇ ಸರ್ವೇಶ್ವರಾ, ನಮ್ಮ ಮೇಲೆ
ನೀ ಬಲು ಸಿಟ್ಟುಗೊಂಡಿರುವೆಯೋ?
ಬಹುಶಃ ನಮ್ಮನ್ನು ಸಂಪೂರ್ಣವಾಗಿ
ತ್ಯಜಿಸಿಬಿಟ್ಟಿರುವೆಯೋ?
22ತಿರುಗಿಸು ನಮ್ಮನ್ನು ನಿನ್ನ ಕಡೆಗೆ
ತಿರುಗುವೆವು ನೀನು ತಿರುಗಿಸಿದ ಹಾಗೆ.
ಪ್ರಾಚೀನ ವೈಭವವನ್ನು ಮರಳಿ ದಯಪಾಲಿಸು ನಮಗೆ.
ಪ್ರಸ್ತುತ ಆಯ್ಕೆ ಮಾಡಲಾಗಿದೆ:
ಪ್ರಲಾಪಗಳು 5: KANCLBSI
ಹೈಲೈಟ್ ಮಾಡಿ
ಹಂಚಿಕೊಳ್ಳಿ
ಕಾಪಿ

ನಿಮ್ಮ ಎಲ್ಲಾ ಸಾಧನಗಳಲ್ಲಿ ನಿಮ್ಮ ಮುಖ್ಯಾಂಶಗಳನ್ನು ಉಳಿಸಲು ಬಯಸುವಿರಾ? ಸೈನ್ ಅಪ್ ಮಾಡಿ ಅಥವಾ ಸೈನ್ ಇನ್ ಮಾಡಿ
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.