ಯೆರೆಮೀಯ 50

50
ಬಾಬಿಲೋನನ್ನು ಕುರಿತ ತೀರ್ಪು
1ಬಾಬಿಲೋನಿಯರ ದೇಶವಾದ ಬಾಬಿಲೋನಿಯದ ಕುರಿತು ಪ್ರವಾದಿ ಯೆರೆಮೀಯನಿಂದ ಸರ್ವೇಶ್ವರ ಸ್ವಾಮಿ ನುಡಿಸಿದ ವಾಕ್ಯ ಇದು:
2“ರಾಷ್ಟ್ರಗಳಲ್ಲಿ ಪ್ರಚುರಪಡಿಸಿರಿ, ಧ್ವಜವೆತ್ತಿ ಪ್ರಕಟಿಸಿರಿ, ಮುಚ್ಚುಮರೆಯಿಲ್ಲದೆ ಹೀಗೆಂದು ಸಾರಿರಿ: ‘ಬಾಬಿಲೋನ್ ಶತ್ರುವಶವಾಯಿತು. ಬೇಲ್ ದೇವತೆ ನಾಚಿಕೆಗೊಂಡಿದೆ. ಮೆರೋದಾಕ್ ದೇವತೆ ಬೆಚ್ಚಿಬಿದ್ದಿದೆ. ಅದರ ಮೂರ್ತಿಗಳು ಅವಮಾನಕ್ಕೆ ಗುರಿಯಾಗಿವೆ. ಅದರ ಬೊಂಬೆಗಳು ಚೂರುಚೂರಾಗಿವೆ.
3“ಉತ್ತರದಿಂದ ಒಂದು ರಾಷ್ಟ್ರ ಬಾಬಿಲೋನಿನ ವಿರುದ್ಧ ಬರುತ್ತಿದೆ ಅದು ಬಾಬಿಲೋನ್ ದೇಶವನ್ನು ಹಾಳುಮಾಡುವುದು. ಅಲ್ಲಿ ಯಾರೂ ವಾಸಿಸರು. ಜಾನುವಾರುಗಳೂ ಜನರೂ ಓಡಿಹೋಗಿದ್ದಾರೆ, ತೊಲಗಿಬಿಟ್ಟಿದ್ದಾರೆ.”
ಇಸ್ರಯೇಲಿನ ದಾಸ್ಯದ ಮುಗಿವು
4ಸರ್ವೇಶ್ವರ ಹೀಗೆನ್ನುತ್ತಾರೆ: “ಆ ದಿನಗಳಲ್ಲಿ, ಆ ಕಾಲದಲ್ಲಿ ಇಸ್ರಯೇಲರೂ ಯೆಹೂದ್ಯರೂ ಒಟ್ಟಿಗೆ ಹಿಂದಿರುಗಿ ಬರುವರು. ದಾರಿಯುದ್ದಕ್ಕೂ ಅಳುತ್ತಾ ಬಂದು ತಮ್ಮ ದೇವರಾದ ಸರ್ವೇಶ್ವರನನ್ನು ಮರೆಹೋಗುವರು. 5ಸಿಯೋನಿಗೆ ಅಭಿಮುಖರಾಗಿ, ಮಾರ್ಗವನ್ನು ವಿಚಾರಿಸುತ್ತಾ, ‘ಬನ್ನಿ, ಸರ್ವೇಶ್ವರನನ್ನು ಆಶ್ರಯಿಸಿ, ಎಂದಿಗೂ ಮರೆಯಲಾಗದ ಶಾಶ್ವತ ಒಡಂಬಡಿಕೆಯನ್ನು ಅವರೊಂದಿಗೆ ಮಾಡಿಕೊಳ್ಳೋಣ’ ಎಂದು ಹೇಳುವರು.
6“ನನ್ನ ಜನರು ದಾರಿತಪ್ಪಿದ ಕುರಿಗಳು. ಕುರಿಗಾಹಿಗಳು ಅವರನ್ನು ದಾರಿ ತಪ್ಪಿಸಿ ಪರ್ವತಗಳಲ್ಲಿ ಅಲೆದಾಡಿಸಿದ್ದಾರೆ. ನನ್ನ ಜನರು ತಮ್ಮ ಬೀಡುಗಳನ್ನು ಮರೆತು ಬೆಟ್ಟಗುಡ್ಡಗಳಲ್ಲಿ ತಿರುಗಾಡುತ್ತಿದ್ದಾರೆ. 7ಕಂಡಕಂಡವರೆಲ್ಲರು ಅವರನ್ನು ಕಬಳಿಸಿದ್ದಾರೆ. ಅವರ ವಿರೋಧಿಗಳು, ‘ನಾವು ಅವರನ್ನು ಕಬಳಿಸಿದ್ದು ದೋಷವಲ್ಲ, ಏಕೆಂದರೆ, ಸತ್ಯಸ್ವರೂಪರಾದ ಸರ್ವೇಶ್ವರನಿಗೆ, ತಮ್ಮ ಪೂರ್ವಜರ ನಂಬಿಕೆ ನಿರೀಕ್ಷೆಯಾದ ಸರ್ವೇಶ್ವರನಿಗೆ ವಿರುದ್ಧ ಅವರು ಪಾಪಮಾಡಿದ್ದಾರೆ,’ ಎಂದುಕೊಂಡರು.
8“ಬಾಬಿಲೋನ್ ದೇಶದಿಂದ ಓಡಿಹೋಗಿ, ಬಾಬಿಲೋನಿಯರ ಆ ಸೀಮೆಯಿಂದ ಹೊರಡಿ. ಹಿಂಡುಗಳ ಮುಂದೆ ನಡೆಯುವ ಹೋತಗಳಂತೆ ಮುಂತೆರಳಿರಿ. 9ಇಗೋ, ದೊಡ್ಡ ರಾಷ್ಟ್ರಗಳ ಸಮೂಹವನ್ನು ಎಬ್ಬಿಸಿ ಉತ್ತರದಿಂದ ಬಾಬಿಲೋನಿಯದ ಮೇಲೆ ಬೀಳಮಾಡುವೆನು. ಅವು ಬಾಬಿಲೋನಿಗೆ ವಿರುದ್ಧ, ವ್ಯೂಹಕಟ್ಟಿ ಅದನ್ನು ಬುಡಮೇಲು ಮಾಡುವುವು. ಅವುಗಳು ಪ್ರಯೋಗಿಸುವ ಬಾಣಗಳು ಯುದ್ಧ ಪ್ರವೀಣ ಶೂರನಂತಿರುವುವು; ಅವು ಸುಮ್ಮನೆ ಹಿಂದಿರುಗವು. 10ಬಾಬಿಲೋನಿಯದ ರಾಜ್ಯ ಸೂರೆಯಾಗುವುದು. ಅದನ್ನು ಕೊಳ್ಳೆಹೊಡೆಯುವವರೆಲ್ಲರು ಸಂತೃಪ್ತಿಗೊಳ್ಳುವರು. ಇದು ಸರ್ವೇಶ್ವರನಾದ ನನ್ನ ನುಡಿ.”
ಬಾಬಿಲೋನಿಯದ ಪತನ
11“ನನ್ನ ಸೊತ್ತಾದವರನ್ನು ಕೊಳ್ಳೆಹೊಡೆಯುವವರೇ, ನೀವು ಹರ್ಷಿಸಿ ಉಲ್ಲಾಸಿಸುತ್ತಿದ್ದೀರಿ! ಕಣ ತುಳಿಯುವ ಕಡಸಿನ ಹಾಗೆ ಕುಣಿದಾಡುತ್ತಿದ್ದೀರಿ. ಕೊಬ್ಬಿದ ಕುದುರೆಗಳಂತೆ ಕೆನೆಯುತ್ತಿದ್ದೀರಿ. 12ಆದರೆ ನಿಮ್ಮ ಮಾತೃಭೂಮಿ ಮಾನಭಂಗಕ್ಕೆ ಈಡಾಗುವುದು. ನಿಮ್ಮನ್ನು ಹೆತ್ತ ರಾಜ್ಯ ನಾಚಿಕೊಳ್ಳುವುದು. ಹೌದು, ಅದು ಕಾಡಾಗುವುದು. ಕಗ್ಗಾಡು, ಬೆಂಗಾಡು ಆಗುವುದು. ರಾಷ್ಟ್ರಗಳಲ್ಲಿ ಅದು ಕನಿಷ್ಟವಾಗುವುದು. 13ಸರ್ವೇಶ್ವರನ ಕೋಪದ ನಿಮಿತ್ತ ಅದು ನಿರ್ಜನವಾಗುವುದು. ಪೂರ್ತಿಯಾಗಿ ಅದು ಪಾಳುಬೀಳುವುದು. ಬಾಬಿಲೋನನ್ನು ಹಾದುಹೋಗುವವರೆಲ್ಲರು ಅದಕ್ಕೆ ಬಂದೊದಗಿದ ವಿಪತ್ತುಗಳನ್ನು ಕಂಡು ನಿಬ್ಬೆರಗಾಗುವರು, ಸಿಳ್ಳುಹಾಕಿ ಮೂದಲಿಸುವರು.
14“ಬಿಲ್ಲುಗಾರರೇ, ನೀವೆಲ್ಲರು ವ್ಯೂಹಕಟ್ಟಿ ಬಾಬಿಲೋನಿಗೆ ಮುತ್ತಿಗೆಹಾಕಿರಿ. ಬಾಣಗಳನ್ನು ಮಿಗಿಸದೆ ಎಸೆಯಿರಿ. ಅದು ಸರ್ವೇಶ್ವರನಿಗೆ ವಿರುದ್ಧ ಪಾಪಮಾಡಿದೆ. 15ಆದರ ಸುತ್ತಲು ರಣಘೋಷಮಾಡಿರಿ. ಇಗೋ, ಅದು ಶರಣಾಗತವಾಯಿತು! ಅದರ ಕೋಟೆಕೊತ್ತಲಗಳು ಬಿದ್ದವು. ಅದರ ಪೌಳಿಗೋಡೆಯನ್ನು ಕೆಡವಲಾಯಿತು. ಸರ್ವೇಶ್ವರನಾದ ನಾನು ಅದಕ್ಕೆ ಮುಯ್ಯಿತೀರಿಸಿದ್ದೇನೆ. ನೀವೂ ಮುಯ್ಯಿತೀರಿಸಿರಿ. ಅದು ಮಾಡಿದಂತೆಯೇ ಅದಕ್ಕೆ ಮಾಡಿ. 16ಬೀಜಬಿತ್ತುವವನಾಗಲಿ, ಸುಗ್ಗಿಯಲ್ಲಿ ಕುಡುಗೋಲು ಹಿಡಿಯುವವನಾಗಲಿ ಆ ಬಾಬಿಲೋನಿನಲ್ಲಿ ಇಲ್ಲದಂತೆ ಮಾಡಿ. ಪ್ರತಿಯೊಬ್ಬ ವಿದೇಶಿಯನು ಹತ್ಯಮಾಡುವ ಆ ಖಡ್ಗದ ಮುಂದೆ ನಿಲ್ಲಲಾಗದೆ ಸ್ವಜನರ ಕಡೆಗೆ ತಿರುಗಿಕೊಂಡು ಸ್ವದೇಶಕ್ಕೆ ಓಡಿಹೋಗುವನು.
ಇಸ್ರಯೇಲ್ ಹಿಂತಿರುಗಲಿದೆ
17“ಇಸ್ರಯೇಲ್ ಚದರಿಹೋದ ಮಂದೆ. ಸಿಂಹಗಳು ಅದನ್ನು ಓಡಿಸಿಬಿಟ್ಟಿವೆ. ಮೊಟ್ಟಮೊದಲು ಅಸ್ಸೀರಿಯಾದ ಅರಸನು ಅದನ್ನು ಕಬಳಿಸಿದನು. ಕಟ್ಟಕಡೆಗೆ ಬಾಬಿಲೋನಿನ ಅರಸ ನೆಬೂಕದ್ನೆಚ್ಚರನು ಅದರ ಎಲುಬುಗಳನ್ನು ಕಡಿದುಬಿಟ್ಟನು. 18ಹೀಗಿರಲು, ಇಸ್ರಯೇಲಿನ ದೇವರೂ ಸೇನಾಧೀಶ್ವರನೂ ಸರ್ವೇಶ್ವರನೂ ಆದ ನಾನು ಹೇಳುವುದು ಇದು: ಅಸ್ಸೀರಿಯಾದ ಅರಸನನ್ನು ನಾನು ದಂಡಿಸಿದಂತೆ ಬಾಬಿಲೋನಿನ ಅರಸನನ್ನೂ ಅವನ ದೇಶವನ್ನೂ ದಂಡಿಸುವೆನು. 19ಇಸ್ರಯೇಲೆಂಬ ಮಂದೆಯನ್ನು ಮರಳಿ ಅದರ ಹುಲ್ಲುಗಾವಲಿಗೆ ಸೇರಿಸುವೆನು. ಅದು ಕರ್ಮೆಲಿನಲ್ಲೂ ಭಾಷಾನಿನಲ್ಲೂ ಮೇಯುವುದು. ಎಫ್ರಯಿಮಿನ ಮತ್ತು ಗಿಲ್ಯಾದಿನ ಗುಡ್ಡಗಳಲ್ಲಿ ಹೊಟ್ಟೆತುಂಬ ತಿನ್ನುವುದು. 20ಆ ದಿನಗಳಲ್ಲಿ, ಆ ಕಾಲದಲ್ಲಿ ಇಸ್ರಯೇಲಿನ ಅಧರ್ಮವನ್ನು ಎಲ್ಲಿ ಹುಡುಕಿದರೂ ಸಿಗದು. ಜುದೇಯದ ಪಾಪವನ್ನು ತಡಕಿದರೂ ಸಿಗದು. ಏಕೆಂದರೆ ನಾನು ಉಳಿಸಿದ ಜನಶೇಷವನ್ನು ಕ್ಷಮಿಸಿಬಿಡುವೆನು. ಇದು ಸರ್ವೇಶ್ವರನಾದ ನನ್ನ ನುಡಿ.”
ಬಾಬಿಲೋನಿನ ಪತನ ಕುರಿತು ಜೆರುಸಲೇಮಿನಲ್ಲಿ ಘೋಷಣೆ
21ಸರ್ವೇಶ್ವರ ಹೀಗೆನ್ನುತ್ತಾರೆ: “ಮೆರಾಥಯಿಮ್#50:21 ಅಂದರೆ: ಅತಿ ದ್ರೋಹದ ದೇಶ; ದಂಡನೆಗೆ ಗುರಿಯಾದ ಸ್ಥಳ. ನಾಡಿಗೂ ಪಕೋದಿನ ನಿವಾಸಿಗಳಿಗೂ ವಿರುದ್ಧ ದಂಡೆತ್ತಿಹೋಗಿ ಅವರನ್ನು ಸಂಹರಿಸು. ಆ ನಾಡನ್ನು ಪೂರ್ತಿಯಾಗಿ ಹಾಳುಮಾಡು. ನಾನು ನಿನಗೆ ಆಜ್ಞಾಪಿಸಿದ್ದನ್ನೆಲ್ಲಾ ನೆರವೇರಿಸು. 22ಇಗೋ ಯುದ್ಧದ ಆರ್ಭಟ! ಮಹಾವಿನಾಶದ ಕೂಗಾಟ ನಾಡಿನೊಳಗೆಲ್ಲ! 23ಲೋಕವನ್ನೆಲ್ಲ ಬಡಿದ ಕೊಡಲಿಯಂಥ ಬಾಬಿಲೋನ್ ಈಗ ಮುರಿದು ಚೂರುಚೂರಾಗಿದೆ! ಆ ರಾಜ್ಯವು ರಾಷ್ಟ್ರಗಳ ನಡುವೆ ಹಾಳಾಗಿ ಬಿದ್ದಿದೆ. 24ಬಾಬಿಲೋನೇ, ನಿನಗೆ ನಾನು ಉರುಲೊಡ್ಡಿದ್ದೆ. ನೀನು ತಿಳಿಯದೆ ಅದರಲ್ಲಿ ಸಿಕ್ಕಿಕೊಂಡೆ. ನೀನು ಸರ್ವೇಶ್ವರನೊಂದಿಗೆ ಹೋರಾಡಿದ್ದರಿಂದ ಬೋನಿನ ವಶವಾದೆ. 25ಸೇನಾಧೀಶ್ವರ ಸರ್ವೇಶ್ವರನೆಂಬ ದೇವರು ಬಾಬಿಲೋನಿನ ದೇಶದಲ್ಲಿ ನಿರ್ವಹಿಸಬೇಕಾದ ಕಾರ್ಯವೊಂದು ಉಂಟು. ಅದಕ್ಕಾಗಿ ಸರ್ವೇಶ್ವರನಾದ ನಾನು ನನ್ನ ಆಯುಧ ಶಾಲೆಯನ್ನು ತೆರೆದಿದ್ದೇನೆ. ನನ್ನ ಕೋಪದ ಅಸ್ತ್ರಶಸ್ತ್ರಗಳನ್ನು ಹೊರಗೆ ತೆಗೆದಿದ್ದೇನೆ. 26ಲೋಕದ ಕಟ್ಟಕಡೆಯಿಂದ ಬಾಬಿಲೋನಿಗೆ ಬನ್ನಿ. ಅದರ ಕಣಜಗಳನ್ನು ತೆರೆಯಿರಿ. ಆ ನಗರವನ್ನು ಹಾಳುದಿಬ್ಬವನ್ನಾಗಿ ಮಾಡಿ ಪೂರ್ತಿಯಾಗಿ ನಾಶಪಡಿಸಿರಿ. ಅದರಲ್ಲಿ ಏನೂ ಉಳಿಯದಿರಲಿ. 27ಅದರ ಗೂಳಿಗಳನ್ನೆಲ್ಲ ಕೊಲ್ಲಿರಿ. ಹೋಗಲಿ ಅವು ವಧ್ಯಸ್ಥಾನಕ್ಕೆ. ಅವುಗಳಿಗೆ ಧಿಕ್ಕಾರ. ಅವುಗಳಿಗೆ ಬಂದಿದೆ ವಿಪತ್ಕಾಲ! ಸಮೀಪಿಸಿದೆ ದಂಡನೆಯ ದಿನ!
28“ಇಗೋ, ಬಾಬಿಲೋನಿನಿಂದ ತಪ್ಪಿಸಿಕೊಂಡು ಓಡಿಹೋಗುವವರ ಶಬ್ದ! ನಮ್ಮ ದೇವರಾದ ಸರ್ವೇಶ್ವರನು ತನ್ನ ಆಲಯವನ್ನುನಾಶಮಾಡಿದವರಿಗೆ ಮುಯ್ಯಿತೀರಿಸಿದ್ದಾರೆ ಎಂಬ ಸಮಾಚಾರವನ್ನು ಸಿಯೋನಿನಲ್ಲಿ ಸಾರಲು ಧಾವಿಸುತ್ತಿದ್ದಾರೆ ಆ ಜನ.
29“ಬಿಲ್ಲುಬಾಣಗಾರರನ್ನೆಲ್ಲ ಬಾಬಿಲೋನಿಗೆ ಕರೆಯಿರಿ. ಅದರ ಸುತ್ತಲು ದಂಡಿಳಿಸಿರಿ. ಅದರ ನಿವಾಸಿಗಳಲ್ಲಿ ಯಾರೂ ತಪ್ಪಿಸಿಕೊಳ್ಳದ ಹಾಗಿರಲಿ. ಅದರ ಕೃತ್ಯಕ್ಕೆ ತಕ್ಕಂತೆ ಮುಯ್ಯಿತೀರಿಸಿರಿ. ಅದು ಮಾಡಿದಂತೆಯೇ ಅದಕ್ಕೆ ಮಾಡಿ. ಏಕೆಂದರೆ ಗರ್ವದಿಂದ ಅದು ಇಸ್ರಯೇಲರ ಪರಮ ಪಾವನನಾದ ಸರ್ವೇಶ್ವರನನ್ನು ಅಸಡ್ಡೆಮಾಡಿದೆ. 30ಆದಕಾರಣ ಆ ದಿನದಂದು ಅಲ್ಲಿ ಯುವಕರು ಬೀದಿ ಚೌಕಗಳಲ್ಲಿ ಬಿದ್ದು ಸಾಯುವರು. ಯುದ್ಧವೀರರೆಲ್ಲರು ಸತ್ತು ಸ್ತಬ್ದರಾಗುವರು. ಇದು ಸರ್ವೇಶ್ವರನಾದ ನನ್ನ ನುಡಿ.”
31ಸೇನಾಧೀಶ್ವರ ಸರ್ವೇಶ್ವರನಾದ ದೇವರು ಹೀಗೆನ್ನುತ್ತಾರೆ: “ಎಲೈ ಅಹಂಕಾರಿಯೇ, ನಾನು ನಿನಗೆ ವಿರುದ್ಧನು. ನಿನಗೆ ಹೊತ್ತು ಬಂದಿದೆ. ನಿನ್ನನ್ನು ದಂಡಿಸತಕ್ಕ ಕಾಲ ಸಮೀಪಿಸಿದೆ. 32ಅಹಂಕಾರದಿಂದ ಕೂಡಿದ ರಾಜ್ಯ ಎಡವಿ ಬೀಳುವುದು. ಅದನ್ನು ಯಾರೂ ಎತ್ತರು. ಅದರ ನಗರಗಳಿಗೆ ಬೆಂಕಿಹೊತ್ತಿಸುವೆನು. ಅದು ಸುತ್ತಮುತ್ತಣದನ್ನೆಲ್ಲ ನುಂಗಿಬಿಡುವುದು.”
ಇಸ್ರಯೇಲಿನ ಉದ್ಧಾರಕ
33ಸೇನಾಧೀಶ್ವರರಾದ ಸರ್ವೇಶ್ವರ ಹೀಗೆ ಎನ್ನುತ್ತಾರೆ: “ಇಸ್ರಯೇಲಿನ ಹಾಗು ಜುದೇಯದ ಜನರಿಬ್ಬರೂ ಹಿಂಸೆಗೆ ಗುರಿಯಾಗಿದ್ದಾರೆ. ಅವರನ್ನು ಸೆರೆಗೆ ಒಯ್ದವರೆಲ್ಲರು ಅವರನ್ನು ಬಿಡುವುದಿಲ್ಲವೆಂದು ಪಟ್ಟುಹಿಡಿದಿದ್ದಾರೆ. 34ಅವರನ್ನು ಬಿಡಿಸಬಲ್ಲವನು ಬಲಿಷ್ಠನು. ‘ಸೇನಾಧೀಶ್ವರ ಸರ್ವೇಶ್ವರ’ ಎಂಬುದೇ ಆತನ ನಾಮಧೇಯ. ಆತನೇ ಅವರ ವ್ಯಾಜ್ಯವನ್ನು ಜಯಿಸಿ, ನಾಡಿಗೆ ಶಾಂತಿಯನ್ನು ತಂದು, ಬಾಬಿಲೋನಿಯದವರಿಗೆ ಕಳವಳವನ್ನುಂಟುಮಾಡುವನು.”
35ಸರ್ವೇಶ್ವರ ಇಂತೆನ್ನುತ್ತಾರೆ:
ಬಾಬಿಲೋನಿಯರ ಮೇಲೆ ಬೀಳಲಿದೆ ಖಡ್ಗ
ಅದರ ಜನಸಾಮಾನ್ಯರನ್ನು, ಪದಾಧಿಕಾರಿಗಳನ್ನು, ಪಂಡಿತರನ್ನು
ಇವರೆಲ್ಲರನ್ನು ಹತಿಸಲಿದೆ ಆ ಖಡ್ಗ.
36ಅದು ಇರಿಯಲಿ ಕೊಚ್ಚಿಕೊಳ್ಳುವವರನ್ನು
ಬಯಲಿಗೆಳೆಯಲಿ ಅವರ ಬುದ್ಧಿಹೀನತೆಯನ್ನು
ಸಂಹರಿಸಲಿ ಆ ಬಾಬಿಲೋನಿನ ಶೂರರನ್ನು
ಬೆಬ್ಬರಬೀಳುವಂತಾಗಿಸಲಿ ಅವರೆಲ್ಲರನ್ನು.
37ಹೊಡೆಯಲಿ ಅಶ್ವಗಳನ್ನೂ ರಥಗಳನ್ನೂ
ಬಾಬಿಲೋನಿನಲ್ಲಿರುವ ನಾನಾ ವಿದೇಶಿಯರನ್ನೂ
ಬೆದರಿಸಲಿ ಅವರ ಹೆಂಗಸರನ್ನು, ಕಬಳಿಸಲಿ, ಸೂರೆಮಾಡಲಿ
ಆ ಖಡ್ಗ ಅವರ ಸಂಪತ್ತನ್ನು.
38ಅವರ ನೀರನ್ನೆಲ್ಲ ಹೀರಲಿ ಬೇಗನೆ
ಬತ್ತಿಹೋಗಲಿ ಅವರ ತೊರೆ.
ಅಕಟಾ! ತುಂಬಿದೆ ಆ ದೇಶ ಬೊಂಬೆಗಳಿಂದ
ಮದವೇರಿದೆ ಅದರ ಜನತೆಗೆ ವಿಗ್ರಹಾರಾಧನೆಯಿಂದ.
39ಈ ಕಾರಣ, ತೋಳಗಳೂ ಕಾಡುಮೃಗಗಳೂ ಬೀಡುಮಾಡುವುವಲ್ಲಿ.
ಉಷ್ಟ್ರಪಕ್ಷಿಗಳೂ ತಂಗುವುವು ಅಲ್ಲಿ.
ಅದೆಂದಿಗೂ ನಿವಾಸಸ್ಥಳ ಆಗದು
ತಲತಲಾಂತರಕ್ಕೂ ಜನರು ಅಲ್ಲಿ ಒಕ್ಕಲಿರರು.
40ಯಾರೂ ನೆಲಸಲಾಗಲಿಲ್ಲ
ನಾನು ಕೆಡವಿದಾ ಸೊದೋಮ್ ಗೊಮೋರ ನಗರಗಳಲ್ಲಿ
ಅದರ ಸುತ್ತಮುತ್ತಣ ಊರುಗಳಲ್ಲಿ
ಯಾರೂ ವಾಸಿಸರು ಯಾವ ನರಪ್ರಾಣಿಯೂ ನೆಲಸದು, ಬಾಬಿಲೋನಿನಲ್ಲಿ.
41ಇಗೋ ರಾಷ್ಟ್ರವೊಂದು ಬರುವುದು ಉತ್ತರದಿಂದ:
ಎಚ್ಚರಗೊಳ್ವರು ಮಹಾಜನ ಹಾಗೂ ಅರಸರು ಬಹುಮಂದಿ
ಬರುವರವರು ಲೋಕದ ಕಟ್ಟಕಡೆಯಿಂದ.
42ಆ ಕ್ರೂರಿಗಳು, ಆ ನಿಷ್ಕರುಣಿಗಳು
ಹಿಡಿದುಕೊಂಡಿರುವರು ಬಿಲ್ಲನ್ನೂ ಈಟಿಯನ್ನೂ.
ಅವರ ಧ್ವನಿ ಮೊರೆಯುತ್ತದೆ ಸಮುದ್ರದಂತೆ
ಕುದುರೆ ಸವಾರಿ ತೊಡಗಲಿದೆ.
ಬಾಬಿಲೋನ್ ನಗರಿಯೇ, ಕೇಳು,
ಆ ಸೈನ್ಯ ಶೂರವೀರರಿಂದ ಕೂಡಿದೆ.
ಅದು ನಿನ್ನ ಮೇಲೆ ಯುದ್ಧಸನ್ನದ್ಧವಾಗಿದೆ.
ಸರ್ವೇಶ್ವರನಾದ ನನ್ನ ನುಡಿ ಇದು.
43ಈ ಸುದ್ದಿ ಬಿತ್ತು ಬಾಬಿಲೋನಿನ ಅರಸನ ಕಿವಿಗೆ
ಅವನ ಕೈಗಳಿದೋ ಜೋಲುಬಿದ್ದಿವೆ
ಅವನನ್ನು ಹಿಡಿದಿದೆ ಪ್ರಸವವೇದನೆಯಂಥ ಯಾತನೆ.
44ಬಾಬಿಲೋನಿಯರಿಗೆ ನಿತ್ಯ ನೆಲೆಯಾದ ಗೋಮಾಳಕ್ಕೆ ಇಗೋ, ಜೋರ್ಡನ್ ದಟ್ಟಡವಿಯಿಂದ ಸಿಂಹದೋಪಾದಿ ನಾನು ಏರಿಬರುವೆನು. ಕ್ಷಣಮಾತ್ರದಲ್ಲಿ ಆ ಬಾಬಿಲೋನಿಯರನ್ನು ಅಲ್ಲಿಂದ ಓಡಿಸಿಬಿಡುವೆನು. ಅದನ್ನು ಪಾಲಿಸುವುದಕ್ಕೆ ನಾನು ಆರಿಸಿಕೊಂಡವನನ್ನೇ ನೇಮಿಸುವೆನು. ನನಗೆ ಸಮಾನನು ಯಾರು? ನ್ಯಾಯವಿಚಾರಣೆಗೆ ನನ್ನನ್ನು ಎಳೆಯಬಲ್ಲ ವ್ಯಕ್ತಿ ಯಾರು? ಮಂದೆಯನ್ನು ಕಾಯುವ ಯಾವನು ತಾನೆ ನನ್ನೆದುರಿಗೆ ನಿಲ್ಲಬಲ್ಲನು? 45ಹೀಗಿರಲು, ಸರ್ವೇಶ್ವರನು ಬಾಬಿಲೋನಿಯರ ವಿಷಯವಾಗಿ ಮಾಡಿಕೊಂಡಿರುವ ಆಲೋಚನೆಯನ್ನು, ಅದರ ಕಸ್ದೀಯರನ್ನು ಕುರಿತು ಸಂಕಲ್ಪಿಸಿರುವ ಉದ್ದೇಶವನ್ನು ಆಲಿಸಿರಿ: ಕಾಡುಮೃಗಗಳು ಹಿಂಡಿನ ಮರಿಗಳನ್ನು ಖಂಡಿತವಾಗಿ ಎಳೆದುಕೊಂಡು ಹೋಗುವುವು. ಅವುಗಳ ನಾಶಕ್ಕಾಗಿ ಹುಲ್ಲುಗಾವಲು ನಿಶ್ಚಯವಾಗಿ ಕಳವಳಪಡುವುದು. 46ಬಾಬಿಲೋನ್ ಶತ್ರುವಶ ಆಯಿತೆಂಬ ಕೋಲಾಹಲಕ್ಕೆ ಭೂಮಿ ಕಂಪಿಸುವುದು. ಅದರ ಮೊರೆ ರಾಷ್ಟ್ರಗಳಿಗೆ ಕೇಳಿಸುವುದು.

ಪ್ರಸ್ತುತ ಆಯ್ಕೆ ಮಾಡಲಾಗಿದೆ:

ಯೆರೆಮೀಯ 50: KANCLBSI

Highlight

ಶೇರ್

ಕಾಪಿ

None

Want to have your highlights saved across all your devices? Sign up or sign in