ಯೆರೆಮೀಯ 49
49
ಅಮ್ಮೋನ್ಯರನ್ನು ಕುರಿತ ತೀರ್ಪು
1ಅಮ್ಮೋನ್ಯರನ್ನು ಕುರಿತು ಸರ್ವೇಶ್ವರ ಹೀಗೆನ್ನುತ್ತಾರೆ: “ಇಸ್ರಯೇಲಿಗೆ ಮಕ್ಕಳಿಲ್ಲವೆ? ಅದಕ್ಕೆ ನೆರವಾಗಲು ನೆಂಟನಿಲ್ಲವೆ? ಮಲ್ಕಾಮ್ ದೇವತೆಯು ಗಾದಿನ ನಾಡನ್ನು ಸ್ವಾಧೀನ ಮಾಡಿಕೊಂಡಿರುವುದೇಕೆ? ಮಲ್ಕಾಮನ ಪ್ರಜೆಗಳು ಗಾದಿನ ನಗರಗಳಲ್ಲಿ ವಾಸಿಸುತ್ತಿರುವುದೇಕೆ? 2ಆದುದರಿಂದ ಇಗೋ ಕೇಳಿ: ನನ್ನ ಅಪ್ಪಣೆಯ ಮೇರೆಗೆ ಶತ್ರುಗಳು ರಬ್ಬಾ ಎಂಬ ಅಮ್ಮೋನ್ಯರ ನಗರದ ಮೇಲೆ ಬಿದ್ದು ಯುದ್ಧ ಘೋಷಣೆ ಮಾಡುವ ದಿನಗಳು ಬರುವುವು. ಆ ನಗರ ಹಾಳುದಿಬ್ಬವಾಗುವುದು. ಅದಕ್ಕೆ ಸೇರಿದ ಗ್ರಾಮಗಳು ಬೆಂಕಿಯಿಂದ ಸುಟ್ಟುಹೋಗುವುವು. ಆಗ ಇಸ್ರಯೇಲ್ ತನ್ನನ್ನು ವಶಮಾಡಿಕೊಂಡವರನ್ನು ತಾನು ವಶಮಾಡಿಕೊಳ್ಳುವುದು. ಇದು ಸರ್ವೇಶ್ವರನಾದ ನನ್ನ ನುಡಿ. 3ಹೆಷ್ಬೋನಿನವರೇ, ಅತ್ತುಗೋಳಾಡಿರಿ. ಆಯಿ ಎಂಬ ಊರು ಹಾಳಾಯಿತು! ರಬ್ಬಾ ನಗರಕ್ಕೆ ಸೇರಿದ ಗ್ರಾಮಗಳವರೇ ಕಿರಿಚಿರಿ, ಗೋಣಿತಟ್ಟನ್ನು ಸುತ್ತಿಕೊಳ್ಳಿರಿ. ಅತ್ತು ಪ್ರಲಾಪಿಸಿರಿ, ಕುರಿಹಟ್ಟಿಗಳಲ್ಲಿ, ಅತ್ತಿತ್ತ ಓಡಾಡಿರಿ. ಏಕೆಂದರೆ ಮಲ್ಕಾಮ್ ದೇವತೆಯೂ ಅದರ ಯಾಜಕರೂ ರಾಜ್ಯಾಧಿಕಾರಿಗಳೂ ಒಟ್ಟಾಗಿ ಸೆರೆಗೆ ಹೋಗುವರು. 4“ನನ್ನ ಮೇಲೆ ಯಾರು ತಾನೆ ಬಿದ್ದಾರು?’ ಎಂದು ಸ್ವಂತ ಆಸ್ತಿಪಾಸ್ತಿಯಲ್ಲೆ ಭರವಸೆಯಿಟ್ಟ ಭ್ರಷ್ಟನಾಡೇ, “ನನ್ನ ಕಣಿವೆಗಳಲ್ಲಿ ನೀರು ತುಂಬಿಹರಿಯುತ್ತಿದೆ’ ಎಂದು ಏಕೆ ಕೊಚ್ಚಿಕೊಳ್ಳುತ್ತಿರುವೆ? 5ಸೇನಾಧೀಶ್ವರ ಸರ್ವೇಶ್ವರನೆಂಬ ದೇವರು ಹೇಳುವುದನ್ನು ಕೇಳು - ನಿನ್ನ ನೆರೆಹೊರೆಯವರೆಲ್ಲರು ನಿನಗೆ ಭಯಾಸ್ಪದವಾಗುವಂತೆ ಮಾಡುವೆನು. ನಿನ್ನವರಲ್ಲಿ ಪ್ರತಿಯೊಬ್ಬನನ್ನು ನಿಂತಲ್ಲಿಂದಲೆ ಅಟ್ಟಲಾಗುವುದು. ಚದರಿಹೋದವರನ್ನು ಕೂಡಿಸಲು ಯಾರೂ ಇಲ್ಲದಂತಾಗುವುದು. 6ಆದರೂ ಕಾಲಾಂತರದಲ್ಲಿ ಅಮ್ಮೋನ್ಯರ ದುರವಸ್ಥೆಯನ್ನು ನೀಗಿಸುವೆನು. ಇದು ಸರ್ವೇಶ್ವರನಾದ ನನ್ನ ನುಡಿ.”
ಎದೋಮನ್ನು ಕುರಿತ ತೀರ್ಪು
7ಎದೋಮನ್ನು ಕುರಿತು ಸೇನಾಧೀಶ್ವರ ಸರ್ವೇಶ್ವರ ಹೀಗೆನ್ನುತ್ತಾರೆ: “ತೇಮಾನ್ ನಾಡಿಗಿದ್ದ ಬುದ್ಧಿ ಏನಾಯಿತು? ವಿವೇಕಿಗಳಿಗಿದ್ದ ಆಲೋಚನಾಶಕ್ತಿ ಅಳಿದುಹೋಯಿತೋ? ಅವರ ಜ್ಞಾನ ಮಾಯವಾಯಿತೋ? 8ದೇದಾನಿನವರೇ, ಹಿಂದಿರುಗಿ ಓಡಿಹೋಗಿರಿ. ಒಳ ಪ್ರಾಂತ್ಯವನ್ನು ಸೇರಿ ವಾಸಿಸಿರಿ. ಏಕೆಂದರೆ ನಾನು ಎದೋಮನ್ನು ದಂಡಿಸುವೆನು. ಏಸಾವನಿಗೆ ವಿಧಿಸಿದ್ದ ಆಪತ್ತನ್ನು ಅದರ ಮೇಲೆ ಬರಮಾಡುವೆನು. 9ದ್ರಾಕ್ಷೆಯ ಹಣ್ಣನ್ನು ಕೀಳುವವರು ನಿನ್ನಲ್ಲಿಗೆ ಬಂದಿದ್ದರೆ ಹಕ್ಕಲನ್ನಾದರೂ ಉಳಿಸುತ್ತಿದ್ದರಲ್ಲವೆ? ಕಳ್ಳರು ರಾತ್ರಿವೇಳೆಯಲ್ಲಿ ಮನೆಗೆ ನುಗ್ಗಿದರೆ ತಮಗೆ ಸಾಕಾಗುವಷ್ಟನ್ನು ಮಾತ್ರ ಕೊಳ್ಳೆಹೊಡೆಯುತ್ತಿದ್ದರಲ್ಲವೆ? 10ಆದರೆ ನಾನು ಏಸಾವನನ್ನು ಬರೀ ಮೈಯಾಗಿಸಿಬಿಟ್ಟಿದ್ದೇನೆ. ಅವನ ಗುಪ್ತಸ್ಥಳಗಳನ್ನು ಬಟ್ಟಬೈಲಾಗಿಸಿಬಿಟ್ಟಿದ್ದೇನೆ. ಅವಿತುಕೊಳ್ಳಲಾಗದು. ಅವನ ಸಂತಾನದವರು, ಸಹೋದರರು ಹಾಗು ನೆರೆಹೊರೆಯವರು ಹಾಳಾದರು. ಅವನೂ ಇಲ್ಲವಾದನು. 11ನೀನು ನಿನ್ನ ಅನಾಥರನ್ನು ನನಗೆ ಬಿಡು. ನಾನೇ ಅವರನ್ನು ನೋಡಿಕೊಳ್ಳುತ್ತೇನೆ. ನಿನ್ನ ವಿಧವೆಯರು ನನ್ನಲ್ಲಿ ಭರವಸೆ ಇಡಲಿ.”
12ಸರ್ವೇಶ್ವರ ಇಂತೆನ್ನುತ್ತಾರೆ: “ಕಷ್ಟವೆಂಬ ಕೊಡದಿಂದ ಕುಡಿಸಲು ಯಾರ ಪಾಲಿಗೆ ಬರಲಿಲ್ಲವೋ ಅಂಥವರೇ ಕುಡಿಯಬೇಕಾಗಿರುವಲ್ಲಿ ನೀನು ಅದರಿಂದ ತಪ್ಪಿಸಿಕೊಳ್ಳುವೆಯಾ? ಇಲ್ಲ, ಅದು ಸಾಧ್ಯವಿಲ್ಲ, ನೀನು ಕುಡಿದೇ ತೀರಬೇಕು. 13ಬೊಚ್ರ ನಗರವು ಪಾಳುಬೀಳುವುದು. ಜನರು ಅದನ್ನು ನೋಡಿ ಬೆಚ್ಚಿಬೀಳುವರು. ಅದು ಶಾಪಕ್ಕೂ ನಿಂದೆ ಪರಿಹಾಸ್ಯಕ್ಕೂ ಗುರಿಯಾಗುವುದು. ಅದಕ್ಕೆ ಸೇರಿದ ಊರುಗಳೆಲ್ಲ ನಿತ್ಯನಾಶ ಹೊಂದುವುವು. ಇದನ್ನು ಆಣೆಯಿಟ್ಟು ಹೇಳಿದ್ದೇನೆ. ಇದು ಸರ್ವೇಶ್ವರನಾದ ನನ್ನ ನುಡಿ.
14“ಎದೋಮೇ, ಸರ್ವೇಶ್ವರನಿಂದ ಬಂದ ಸಮಾಚಾರವನ್ನು ಕೇಳಿದ್ದೇನೆ. ‘ನೀವು ಒಟ್ಟಿಗೆ ಸೇರಿ ಯುದ್ಧಕ್ಕೆ ಹೊರಟು, ಎದೋಮಿನ ಮೇಲೆ ದಾಳಿಮಾಡಿರಿ’ ಎಂದು ಸೇವಕನ ಮೂಲಕ ರಾಷ್ಟ್ರಗಳಿಗೆ ಹೀಗೆ ಹೇಳಿಕಳುಹಿಸಿದ್ದಾರೆ. 15‘ಇದೋ, ರಾಷ್ಟ್ರಗಳಲ್ಲಿ ನಿನ್ನನ್ನು ಕನಿಷ್ಠವಾಗಿಸುವೆನು, ಜನರ ತಾತ್ಸಾರಕ್ಕೆ ಈಡಾಗಿಸುವೆನು. 16ಪರ್ವತಾಗ್ರಗಳಲ್ಲಿ ನೆಲೆಗೊಂಡ ಜನತೆಯೇ, ಬಂಡೆಯ ಬಿರುಕುಗಳಲ್ಲಿ ವಾಸಿಸುವ ಜನತೆಯೇ, ನಿನ್ನ ಭೀಕರತ್ವವೆಲ್ಲಿ? ನಿನ್ನೆದೆಯ ಗರ್ವ ನಿನ್ನನ್ನು ಮೋಸಗೊಳಿಸಿದೆ. ಹದ್ದಿನಂತೆ ನೀನು ಉನ್ನತಸ್ಥಾನದಲ್ಲಿ ಗೂಡನ್ನು ಕಟ್ಟಿಕೊಂಡರೂ ನಿನ್ನನ್ನು ಅಲ್ಲಿಂದ ಇಳಿಸಿಬಿಡುವೆನು. ಇದು ನನ್ನ ನುಡಿ,” ಎನ್ನುತ್ತಾರೆ ಸರ್ವೇಶ್ವರ.
17“ಎದೋಮಿಗೆ ವಿಪತ್ತುಗಳು ಬಂದೊದಗುವುವು. ಅದನ್ನು ನೋಡುವವರು ಬೆರಗುಗೊಳ್ಳುವರು. ಹಾದುಹೋಗುವವರೆಲ್ಲರು ಸಿಳ್ಳುಹಾಕಿ ಪರಿಹಾಸ್ಯ ಮಾಡುವರು. 18ಕೆಡುವಲಾದ ಸೊದೋಮ್, ಗೋಮೊರ ನಗರಗಳಲ್ಲೂ ಸುತ್ತಣ ಊರುಗಳಲ್ಲೂ ಆದಂತೆಯೇ ಎದೋಮಿನಲ್ಲೂ ಆಗುವುದು. ಅಲ್ಲಿ ಯಾರೂ ವಾಸಿಸರು, ಯಾವ ನರಪ್ರಾಣಿಯೂ ನೆಲಸದು.
19“ಎದೋಮ್ಯರಿಗೆ ನಿತ್ಯ ನೆಲೆಯಾದ ಗೋಮಾಳಕ್ಕೆ ಇದೋ ಜೋರ್ಡನ್ ದಟ್ಟಡವಿಯಿಂದ ಸಿಂಹದೋಪಾದಿ ಏರಿಬರುವೆನು. ಕ್ಷಣಮಾತ್ರದಲ್ಲಿ ಅವರನ್ನು ಅಲ್ಲಿಂದ ಓಡಿಸಿಬಿಡುವೆನು. ಅದನ್ನು ಪಾಲಿಸುವುದಕ್ಕೆ ನಾನು ಆರಿಸಿಕೊಂಡವನನ್ನೇ ನೇಮಿಸುವೆನು. ನನಗೆ ಸಮಾನನು ಯಾರು? ನ್ಯಾಯವಿಚಾರಣೆಗೆ ನನ್ನನ್ನು ಎಳೆಯುವಂಥ ವ್ಯಕ್ತಿ ಯಾರು? ಮಂದೆಯನ್ನು ಕಾಯುವ ಯಾವನು ತಾನೆ ನನ್ನೆದುರಿಗೆ ನಿಲ್ಲಬಲ್ಲನು? 20ಹೀಗಿರಲು, ಸರ್ವೇಶ್ವರನಾದ ನಾನು, ಎದೋಮಿನ ವಿಷಯವಾಗಿ ಮಾಡಿಕೊಂಡಿರುವ ಆಲೋಚನೆಯನ್ನೂ ತೇಮಾನ್ಯರನ್ನು ಕುರಿತು ಸಂಕಲ್ಪಿಸಿರುವ ಉದ್ದೇಶವನ್ನೂ ಆಲಿಸಿರಿ; ಕಾಡುಮೃಗಗಳು ಹಿಂಡಿನ ಮರಿಗಳನ್ನು ಖಂಡಿತವಾಗಿ ಎಳೆದುಕೊಂಡು ಹೋಗುವುವು. ಅವುಗಳ ನಾಶಕ್ಕಾಗಿ ಹುಲ್ಲುಗಾವಲು ನಿಶ್ಚಯವಾಗಿ ಕಳವಳಪಡುವುದು. 21ಎದೋಮ್ಯರು ತಟ್ಟನೆ ಬೀಳುವರು, ಭೂಮಿ ಕಂಪಿಸುವುದು. ಆಗ ಉಂಟಾಗುವ ಗೋಳು ಕೆಂಪು ಸಮುದ್ರದವರೆಗೂ ಕೇಳಿಸುವುದು. 22ಶತ್ರುವು ಬೊಚ್ರದ ಮೇಲೆ ಎರಗಲು ರಣಹದ್ದಿನಂತೆ ರೆಕ್ಕೆಗಳನ್ನು ಹರಡಿ ಹಾರಿ ಏರುವನು. ಆ ದಿನದಂದು ಎದೋಮಿನ ಶೂರರ ಎದೆ ಹೆರುವ ಹೆಂಗಸಿನ ಎದೆಯಂತೆ ಅದರುವುದು.
ದಮಸ್ಕಸನ್ನು ಕುರಿತ ತೀರ್ಪು
23ದಮಸ್ಕಸ್ ಅನ್ನು ಕುರಿತು ಸರ್ವೇಶ್ವರ ಹೀಗೆನ್ನುತ್ತಾರೆ: “ಹಮಾತ್ ಮತ್ತು ಅರ್ಪಾದ್ ನಗರಗಳು ಆಶಾಭಂಗಗೊಂಡಿವೆ. ಅಶುಭ ಸಮಾಚಾರವನ್ನು ಕೇಳಿ ಕರಗಿಹೋಗಿವೆ. ಸಮುದ್ರದಂತೆ ಅವು ತಲ್ಲಣಗೊಂಡು ಅಶಾಂತವಾಗಿವೆ. 24ದಮಸ್ಕಸ್ ಕುಂದಿದೆ, ಓಡಿಹೋಗಲು ಸಿದ್ಧವಿದೆ. ಅದಕ್ಕೆ ನಡುಕ ಹುಟ್ಟಿದೆ. ಪ್ರಸವವೇದನೆಗೆ, ಕಷ್ಟಸಂಕಟಕ್ಕೆ ಅದು ಒಳಗಾಗಿದೆ. 25ಅಕಟಾ, ಹೆಸರುವಾಸಿಯಾದಂಥ ಆ ನನ್ನ ಮೆಚ್ಚುಗೆಯ ನಗರ ವಲಸೆಹೋಗಲಿಲ್ಲವೇಕೆ! 26ಅದರ ದುರ್ಗತಿಯ ದಿನದಂದು ಅಲ್ಲಿನ ಯುವಕರು ಚೌಕಗಳಲ್ಲಿ ಬಿದ್ದು ಸಾಯುವರು, ಯುದ್ಧ ವೀರರೆಲ್ಲರು ಸುಮ್ಮನಿರುವರು. 27ಆಗ ದಮಸ್ಕದ ಕೋಟೆಯಲ್ಲಿ ಬೆಂಕಿ ಹೊತ್ತಿಸುವೆನು. ಅದು ಬೆನ್‍ಹದದನ ಅರಮನೆಗಳನ್ನು ದಹಿಸಿಬಿಡುವುದು. ಇದು ಸರ್ವಶಕ್ತ ಸರ್ವೇಶ್ವರನಾದ ನನ್ನ ನುಡಿ.”
ಅರೇಬಿಯ ರಾಷ್ಟ್ರಗಳನ್ನು ಕುರಿತ ತೀರ್ಪು
28ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ಸೋಲಿಸಿದ ಕೇದಾರನ್ನು ಮತ್ತು ಹಾಜೋರಿನ ರಾಷ್ಟ್ರಗಳನ್ನು ಕುರಿತ ಹೇಳಿಕೆ:
“ಏಳಿ, ಕೇದಾರಿಗೆ ಹೋಗಿ, ಪೂರ್ವ ದೇಶದವರನ್ನು ಹಾಳುಮಾಡಿ,” ಎಂದು ಸರ್ವೇಶ್ವರ ಸ್ವಾಮಿ ಶತ್ರುಗಳಿಗೆ ಆಜ್ಞೆಮಾಡಿದ್ದಾರೆ. 29ಶತ್ರುಗಳು ಅವರ ಗುಡಾರಗಳನ್ನೂ ಹಿಂಡುಗಳನ್ನೂ ಅಪಹರಿಸಿಕೊಳ್ಳುವರು. ಅವರ ಗುಡಾರದ ಪರದೆಗಳನ್ನೂ ಸಮಸ್ತ ಸಾಮಗ್ರಿಗಳನ್ನೂ ತೆಗೆದುಕೊಂಡು ಹೋಗುವರು. ದಿಗಿಲು ನಿಮ್ಮ ಸುತ್ತಮುತ್ತಲು ಆವರಿಸಿದೆ ಎಂದು ಅವರಿಗೆ ಕೂಗಿ ಹೇಳುವರು.
30ಸರ್ವೇಶ್ವರ ಹೀಗೆನ್ನುತ್ತಾರೆ: “ಹಾಜೋರಿನವರೇ, ಓಡಿಹೋಗಿ. ದೂರ ಹೋಗಿ, ಒಳಪ್ರಾಂತ್ಯಗಳಲ್ಲಿ ಅವಿತುಕೊಳ್ಳಿ. ಏಕೆಂದರೆ ಬಾಬಿಲೋನಿನ ಅರಸ ನೆಬೂಕದ್ನೆಚ್ಚರನು ನಿಮಗೆ ಕೇಡನ್ನು ಮಾಡಬೇಕೆಂದಿದ್ದಾನೆ. ನಿಮ್ಮ ವಿನಾಶಕ್ಕೆ ಉಪಾಯವನ್ನು ಹೂಡಿದ್ದಾನೆ. ‘ಬಾಬಿಲೋನಿನವರೇ, ಏಳೀ! ನೆಮ್ಮದಿಯಿಂದ, ನಿರ್ಭಯವಾಗಿ ಪ್ರತ್ಯೇಕ ವಾಸಿಸುವ ಆ ರಾಷ್ಟ್ರದ ಮೇಲೆ ದಾಳಿಮಾಡಿ. 31ಅದಕ್ಕೆ ಬಾಗಿಲೂ ಇಲ್ಲ, ಬೀಗವೂ ಇಲ್ಲ’ ಎನ್ನುತ್ತಿದ್ದಾನೆ. 32ಅವರ ಒಂಟೆಗಳು ಕೊಳ್ಳೆಯಾಗುವುವು. ಅವರ ಲೆಕ್ಕವಿಲ್ಲದ ದನಕುರಿಗಳು ಸೂರೆಹೋಗುವುವು. ಮುಂದಲೆಗೂದಲು ಕತ್ತರಿಸಿಕೊಳ್ಳುವ ಆ ಜನರನ್ನು ಎಲ್ಲ ಕಡೆಯ ಗಾಳಿಗೂ ತೂರುವೆನು. ಎಲ್ಲ ಕಡೆಯಿಂದಲೂ ವಿಪತ್ತನ್ನು ಅವರ ಮೇಲೆ ಬರಮಾಡುವೆನು. 33ಆಗ ಹಾಜೋರು ಸದಾ ಹಾಳುಬಿದ್ದು ಮರಿಗಳಿಗೆ ಬೀಡಾಗುವುದು. ಅಲ್ಲಿ ಯಾರೂ ವಾಸಿಸರು, ಯಾವ ನರಪ್ರಾಣಿಯೂ ತಂಗದು. ಇದು ಸರ್ವೇಶ್ವರನಾದ ನನ್ನ ನುಡಿ.”
ಏಲಾಮನ್ನು ಕುರಿತ ತೀರ್ಪು
34ಜುದೇಯದ ಅರಸನಾದ ಚಿದ್ಕೀಯನ ಆಳ್ವಿಕೆಯ ಆರಂಭದಲ್ಲಿ ಏಲಾಮಿನ ವಿಷಯವಾದ ಈ ವಾಕ್ಯವನ್ನು ಪ್ರವಾದಿ ಯೆರೆಮೀಯನಿಗೆ ನೀಡಲಾಯಿತು: 35ಸೇನಾಧೀಶ್ವರ ಸರ್ವೇಶ್ವರ ಹೀಗೆಂದರು - “ಇಗೋ, ಏಲಾಮಿನ ಮುಖ್ಯ ಬಲವಾದ ಬಿಲ್ಲನ್ನು ಮುರಿದುಬಿಡುವೆನು. 36ನಾಲ್ಕು ದಿಕ್ಕುಗಳಿಂದಲೂ ನಾಲ್ಕು ಗಾಳಿಗಳನ್ನು ಏಲಾಮ್ಯರ ಮೇಲೆ ಬರಮಾಡಿ ಅವರನ್ನು ಆಯಾ ಗಾಳಿಗೆ ತೂರಿಬಿಡುವೆನು. ಏಲಾಮಿನಿಂದ ದೇಶಭ್ರಷ್ಟರಾದವರು ಆಶ್ರಯ ಹುಡುಕದ ರಾಜ್ಯವೇ ಇರದು. 37ತಮ್ಮ ಪ್ರಾಣ ಹುಡುಕುವ ಶತ್ರುಗಳ ಮುಂದೆ ಆ ಏಲಾಮ್ಯರು ನಡುಗುವಂತೆ ಮಾಡುವೆನು. ನನ್ನ ಕೋಪಾಗ್ನಿಯ ಬಿಸಿ ಅವರಿಗೆ ತಟ್ಟುವಂತೆ ಮಾಡುವೆನು. ಇದು ಸರ್ವೇಶ್ವರನಾದ ನನ್ನ ನುಡಿ. ಅವರು ನಿರ್ಮೂಲವಾಗುವ ತನಕ ಅವರ ಹಿಂದೆಯೇ ಖಡ್ಗವನ್ನು ಕಳುಹಿಸುವೆನು. 38ನನ್ನ ಸಿಂಹಾಸನವನ್ನು ಏಲಾಮಿನಲ್ಲಿ ಸ್ಥಾಪಿಸಿ ಆ ನಾಡಿನ ಅರಸನನ್ನೂ ಅಧಿಕಾರಿಗಳನ್ನೂ ಅಳಿಸಿಬಿಡುವೆನು. 39ಇದು ಸರ್ವೇಶ್ವರನಾದ ನನ್ನ ನುಡಿ. ಆದರೂ ಕಟ್ಟಕಡೆಯಲ್ಲಿ ಏಲಾಮಿನ ದುರವಸ್ಥೆಯನ್ನು ನೀಗಿಸುವೆನು. ಇದು ಸರ್ವೇಶ್ವರನಾದ ನನ್ನ ನುಡಿ.”
ಪ್ರಸ್ತುತ ಆಯ್ಕೆ ಮಾಡಲಾಗಿದೆ:
ಯೆರೆಮೀಯ 49: KANCLBSI
Highlight
ಶೇರ್
ಕಾಪಿ
Want to have your highlights saved across all your devices? Sign up or sign in
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.