ಆದಿಕಾಂಡ 29
29
ಯಾಕೋಬನು ರಾಹೇಲಳನ್ನು ಭೇಟಿಯಾದದ್ದು
1ಬಳಿಕ ಯಾಕೋಬನು ತನ್ನ ಪ್ರಯಾಣವನ್ನು ಮುಂದುವರಿಸಿದನು. ಅವನು ಪೂರ್ವ ದಿಕ್ಕಿನಲ್ಲಿದ್ದ ನಾಡಿಗೆ ಹೋದನು. 2ಯಾಕೋಬನು ದೃಷ್ಟಿಸಿ ನೋಡಿದಾಗ, ಹೊಲದಲ್ಲಿ ಅವನಿಗೆ ಒಂದು ಬಾವಿ ಕಾಣಿಸಿತು. ಬಾವಿಯ ಸಮೀಪದಲ್ಲಿ ಮೂರು ಕುರಿಮಂದೆಗಳು ಮಲಗಿಕೊಂಡಿದ್ದವು. ಕುರಿಗಳಿಗೆ ಆ ಬಾವಿಯ ನೀರನ್ನೇ ಕುಡಿಸುತ್ತಿದ್ದರು. ಬಾವಿಯ ಮೇಲೆ ಅಗಲವಾದ ದೊಡ್ಡ ಕಲ್ಲನ್ನು ಮುಚ್ಚಲಾಗಿತ್ತು. 3ಕುರಿಮಂದೆಗಳೆಲ್ಲ ಒಟ್ಟಿಗೆ ಸೇರಿದ ಮೇಲೆ, ಕುರುಬರು ಬಾವಿಯ ಮೇಲಿನ ಕಲ್ಲನ್ನು ಉರುಳಿಸುತ್ತಿದ್ದರು. ಆಮೇಲೆ ಎಲ್ಲಾ ಕುರಿಗಳು ಬಾವಿಯ ನೀರನ್ನು ಕುಡಿಯುತ್ತಿದ್ದವು. ಕುರಿಗಳು ನೀರು ಕುಡಿದಾದ ಮೇಲೆ ಕುರುಬರು ಕಲ್ಲನ್ನು ಮತ್ತೆ ಮುಚ್ಚುತ್ತಿದ್ದರು.
4ಯಾಕೋಬನು ಅಲ್ಲಿದ್ದ ಕುರುಬರಿಗೆ, “ಸಹೋದರರೇ, ನೀವು ಎಲ್ಲಿಯವರು?” ಎಂದು ಕೇಳಿದನು.
ಅವರು “ನಾವು ಹಾರಾನಿನವರು” ಎಂದು ಉತ್ತರಕೊಟ್ಟರು.
5ನಂತರ ಯಾಕೋಬನು ಅವರಿಗೆ, “ನಾಹೋರನ ಮೊಮ್ಮಗನಾದ ಲಾಬಾನನು ನಿಮಗೆ ಗೊತ್ತೆ?” ಎಂದು ಕೇಳಿದನು.
ಕುರುಬರು, “ನಮಗೆ ಗೊತ್ತು” ಎಂದು ಉತ್ತರಿಸಿದರು.
6ಯಾಕೋಬನು, “ಅವನು ಕ್ಷೇಮವಾಗಿರುವನೇ?” ಎಂದು ಕೇಳಿದನು.
ಅವರು, “ಅವನು ಕ್ಷೇಮವಾಗಿದ್ದಾನೆ. ಅಗೋ, ಆ ಕುರಿಗಳೊಂದಿಗೆ ಬರುತ್ತಿರುವವಳೇ ಅವನ ಮಗಳಾದ ರಾಹೇಲಳು” ಎಂದು ಉತ್ತರಿಸಿದರು.
7ಯಾಕೋಬನು, “ನೋಡಿ, ಇನ್ನೂ ಹೊತ್ತಾಗಿಲ್ಲ; ರಾತ್ರಿಗಾಗಿ ಕುರಿಗಳನ್ನು ಒಟ್ಟಿಗೆ ಸೇರಿಸುವ ಸಮಯವಾಗಿಲ್ಲ; ನೀರು ಕುಡಿಸಿ ಅವುಗಳನ್ನು ಮೇಯಿಸಿರಿ” ಎಂದನು.
8ಆ ಕುರುಬರು, “ಕುರಿಮಂದೆಗಳೆಲ್ಲ ಒಟ್ಟಿಗೆ ಸೇರುವವರೆಗೆ ನಾವು ಬಾವಿಯ ಮೇಲಿರುವ ಕಲ್ಲನ್ನು ತೆಗೆದು ಕುರಿಗಳಿಗೆ ನೀರು ಕುಡಿಸುವಂತಿಲ್ಲ; ಅವು ಒಟ್ಟಿಗೆ ಕೂಡಿಬಂದಾಗಲೇ ನೀರು ಕುಡಿಸುತ್ತೇವೆ” ಎಂದು ಹೇಳಿದರು.
9ಯಾಕೋಬನು ಕುರುಬರೊಡನೆ ಮಾತಾಡುತ್ತಿರುವಾಗ ರಾಹೇಲಳು ತನ್ನ ತಂದೆಯ ಕುರಿಗಳೊಡನೆ ಬಂದಳು. (ಕುರಿಗಳನ್ನು ನೋಡಿಕೊಳ್ಳುವುದು ರಾಹೇಲಳ ಕೆಲಸವಾಗಿತ್ತು.) 10ರಾಹೇಲಳು ಲಾಬಾನನ ಮಗಳು. ಲಾಬಾನನು ಯಾಕೋಬನ ತಾಯಿಯಾದ ರೆಬೆಕ್ಕಳ ಅಣ್ಣ. ಯಾಕೋಬನು ರಾಹೇಲಳನ್ನು ನೋಡಿದಾಗ ಬಾವಿಯ ಮೇಲಿದ್ದ ಕಲ್ಲನ್ನು ತೆಗೆದುಹಾಕಿ ತನ್ನ ತಾಯಿಯ ಅಣ್ಣನಾದ ಲಾಬಾನನ ಕುರಿಗಳಿಗೆ ನೀರು ಕೊಟ್ಟನು. 11ಬಳಿಕ ಯಾಕೋಬನು ರಾಹೇಲಳಿಗೆ ಮುದ್ದಿಟ್ಟು ಅತ್ತನು. 12ಯಾಕೋಬನು ರಾಹೇಲಳಿಗೆ, ತಾನು ಅವಳ ತಂದೆಯ ಕುಟುಂಬದವನೆಂದೂ ರೆಬೆಕ್ಕಳ ಮಗನೆಂದೂ ತಿಳಿಸಿದನು. ಆಗ ರಾಹೇಲಳು ಮನೆಗೆ ಓಡಿಹೋಗಿ ತನ್ನ ತಂದೆಗೆ ಈ ಸುದ್ದಿಯನ್ನು ತಿಳಿಸಿದಳು.
13ಲಾಬಾನನು ತನ್ನ ತಂಗಿಯ ಮಗನಾದ ಯಾಕೋಬನ ವಿಷಯವನ್ನು ಕೇಳಿ ಭೇಟಿಯಾಗಲು ಓಡಿಬಂದನು. ಲಾಬಾನನು ಅವನನ್ನು ಅಪ್ಪಿಕೊಂಡು ಮುದ್ದಿಟ್ಟು ಮನೆಗೆ ಕರೆದುಕೊಂಡು ಬಂದನು. ಯಾಕೋಬನು ನಡೆದ ಪ್ರತಿಯೊಂದನ್ನೂ ಲಾಬಾನನಿಗೆ ತಿಳಿಸಿದನು.
14ನಂತರ ಲಾಬಾನನು, “ಇದು ಆಶ್ಚರ್ಯವಾಗಿದೆ; ನೀನು ನನ್ನ ಸ್ವಂತ ಕುಟುಂಬದವನು” ಎಂದು ಹೇಳಿದನು. ಆದ್ದರಿಂದ ಯಾಕೋಬನು ಲಾಬಾನನೊಡನೆ ಒಂದು ತಿಂಗಳವರೆಗೆ ಇದ್ದನು.
ಯಾಕೋಬನಿಗಾದ ಮೋಸ
15ಒಂದು ದಿನ ಲಾಬಾನನು ಯಾಕೋಬನಿಗೆ, “ನೀನು ಸಂಬಳ ತೆಗೆದುಕೊಳ್ಳದೆ ನನ್ನ ಬಳಿಯಲ್ಲಿ ಕೆಲಸ ಮಾಡುವುದು ಸರಿಯಲ್ಲ. ನೀನು ನನ್ನ ಸಂಬಂಧಿಕನೇ ಹೊರತು ಸೇವಕನಲ್ಲ. ನಾನು ನಿನಗೆ ಎಷ್ಟು ಸಂಬಳ ಕೊಡಲಿ?” ಎಂದು ಕೇಳಿದನು.
16ಲಾಬಾನನಿಗೆ ಇಬ್ಬರು ಹೆಣ್ಣುಮಕ್ಕಳಿದ್ದರು. ಹಿರಿಯವಳ ಹೆಸರು ಲೇಯಾ; ಕಿರಿಯವಳ ಹೆಸರು ರಾಹೇಲ್.
17ರಾಹೇಲಳು ಸುಂದರವಾಗಿದ್ದಳು. ಲೇಯಳ ಕಣ್ಣುಗಳು ಸೌಮ್ಯವಾಗಿದ್ದವು.#29:17 ಲೇಯಳ ಕಣ್ಣುಗಳು ಸೌಮ್ಯವಾಗಿದ್ದವು ಇದರರ್ಥ: “ಲೇಯಳು ಬಹಳ ಸುಂದರವಾಗಿರಲಿಲ್ಲ.” 18ಯಾಕೋಬನು ರಾಹೇಲಳನ್ನು ಪ್ರೀತಿಸಿದನು. ಯಾಕೋಬನು ಲಾಬಾನನಿಗೆ, “ನಿನ್ನ ಚಿಕ್ಕಮಗಳಾದ ರಾಹೇಲಳನ್ನು ನನಗೆ ಮದುವೆ ಮಾಡಿಕೊಡುವುದಾದರೆ ನಾನು ನಿನಗೆ ಏಳು ವರ್ಷ ಸೇವೆ ಮಾಡುವೆನು” ಎಂದು ಹೇಳಿದನು.
19ಲಾಬಾನನು, “ಬೇರೊಬ್ಬನು ಆಕೆಯನ್ನು ಮದುವೆಯಾಗುವುದಕ್ಕಿಂತ ನೀನು ಮದುವೆಯಾಗುವುದೇ ಆಕೆಗೆ ಒಳ್ಳೆಯದು. ಆದ್ದರಿಂದ ನನ್ನೊಂದಿಗಿರು” ಎಂದು ಹೇಳಿದನು.
20ಆದ್ದರಿಂದ ಯಾಕೋಬನು ಅವನೊಂದಿಗೆ ಇದ್ದುಕೊಂಡು ಏಳು ವರ್ಷಗಳವರೆಗೆ ಲಾಬಾನನ ಸೇವೆ ಮಾಡಿದನು. ಆದರೆ ಅವನು ರಾಹೇಲಳನ್ನು ತುಂಬಾ ಪ್ರೀತಿಸುತ್ತಿದ್ದುದರಿಂದ ಆ ಸಮಯವು ಅವನಿಗೆ ತುಂಬಾ ಕಡಿಮೆಯಂತೆ ಕಾಣಿಸಿತು.
21ಏಳು ವರ್ಷಗಳಾದ ಮೇಲೆ ಯಾಕೋಬನು ಲಾಬಾನನಿಗೆ, “ನನಗೆ ರಾಹೇಲಳನ್ನು ಮದುವೆ ಮಾಡಿಕೊಡು. ನನ್ನ ಸೇವೆಯ ಕಾಲ ಮುಗಿದುಹೋಯಿತು” ಎಂದು ಹೇಳಿದನು.
22ಆದ್ದರಿಂದ ಲಾಬಾನನು ಆ ಸ್ಥಳದಲ್ಲಿದ್ದ ಜನರಿಗೆಲ್ಲ ಒಂದು ಔತಣಕೂಟವನ್ನು ಏರ್ಪಡಿಸಿದನು. 23ಆ ರಾತ್ರಿ ಲಾಬಾನನು ತನ್ನ ಮಗಳಾದ ಲೇಯಳನ್ನು ಯಾಕೋಬನ ಬಳಿಗೆ ಕಳುಹಿಸಿದನು. ಯಾಕೋಬನು ಆಕೆಯನ್ನು ಕೂಡಿದನು. 24(ಲಾಬಾನನು ತನ್ನ ಸೇವಕಿಯಾದ ಜಿಲ್ಪಾಳನ್ನು ತನ್ನ ಮಗಳಿಗೆ ಸೇವಕಿಯನ್ನಾಗಿ ಕೊಟ್ಟನು.) 25ಮುಂಜಾನೆ ಯಾಕೋಬನು ಎದ್ದು ನೋಡಿದಾಗ ಅವನೊಂದಿಗೆ ಲೇಯಾ ಇದ್ದಳು. ಯಾಕೋಬನು ಲಾಬಾನನಿಗೆ, “ನೀನು ನನಗೆ ಮೋಸ ಮಾಡಿದೆ. ನಾನು ರಾಹೇಲಳನ್ನು ಮದುವೆ ಮಾಡಿಕೊಳ್ಳುವುದಕ್ಕಾಗಿ ತುಂಬಾ ಕಷ್ಟಪಟ್ಟು ಕೆಲಸ ಮಾಡಿದೆ. ನೀನು ನನಗೇಕೆ ಮೋಸ ಮಾಡಿದೆ?” ಎಂದು ಕೇಳಿದನು.
26ಲಾಬಾನನು, “ನಮ್ಮ ದೇಶದಲ್ಲಿ ದೊಡ್ಡ ಮಗಳು ಮದುವೆಯಾಗದ ಹೊರತು ಚಿಕ್ಕಮಗಳಿಗೆ ಮದುವೆ ಮಾಡುವುದಿಲ್ಲ. 27ಆದರೆ ಆಕೆಯ ಮದುವೆಯ ವಾರವನ್ನು ಮುಂದುವರಿಸು. ನಾನು ನಿನಗೆ ರಾಹೇಲಳನ್ನು ಸಹ ಮದುವೆ ಮಾಡಿಕೊಡುತ್ತೇನೆ. ಆದರೆ ನೀನು ನನಗೆ ಇನ್ನೂ ಏಳು ವರ್ಷ ಸೇವೆ ಮಾಡಬೇಕು” ಎಂದು ಹೇಳಿದನು.
28ಅಂತೆಯೇ ಯಾಕೋಬನು ಒಂದು ವಾರವನ್ನು ಕಳೆದನು. ಬಳಿಕ ಲಾಬಾನನು ತನ್ನ ಮಗಳಾದ ರಾಹೇಲಳನ್ನೂ ಅವನಿಗೆ ಹೆಂಡತಿಯನ್ನಾಗಿ ಕೊಟ್ಟನು. 29(ಲಾಬಾನನು ತನ್ನ ಸೇವಕಿಯಾದ ಬಿಲ್ಹಾಳನ್ನು ತನ್ನ ಮಗಳಾದ ರಾಹೇಲಳಿಗೆ ಸೇವಕಿಯನ್ನಾಗಿ ಕೊಟ್ಟನು.) 30ಯಾಕೋಬನು ರಾಹೇಲಳನ್ನೂ ಕೂಡಿದನು. ಯಾಕೋಬನು ರಾಹೇಲಳನ್ನು ಲೇಯಳಿಗಿಂತ ಹೆಚ್ಚಾಗಿ ಪ್ರೀತಿಸಿ ಆಕೆಗೋಸ್ಕರ ಇನ್ನೂ ಏಳು ವರ್ಷ ಸೇವೆ ಮಾಡಿದನು.
ಯಾಕೋಬನ ಕುಟುಂಬದ ಅಭಿವೃದ್ಧಿ
31ಯಾಕೋಬನು ರಾಹೇಲಳನ್ನು ಲೇಯಳಿಗಿಂತ ಹೆಚ್ಚಾಗಿ ಪ್ರೀತಿಸುವುದನ್ನು ಯೆಹೋವನು ನೋಡಿದನು. ಆದ್ದರಿಂದ ಯೆಹೋವನು ಲೇಯಳಿಗೆ ಮಕ್ಕಳಾಗುವಂತೆ ಮಾಡಿದನು. ಆದರೆ ರಾಹೇಲಳಿಗೆ ಮಕ್ಕಳಿರಲಿಲ್ಲ.
32ಲೇಯಳು ಒಬ್ಬ ಮಗನನ್ನು ಹೆತ್ತಳು. ಆಕೆಯು ತನ್ನೊಳಗೆ, “ಯೆಹೋವನು ನನ್ನ ದುಃಖವನ್ನು ನೋಡಿದ್ದಾನೆ. ನನ್ನ ಗಂಡನು ನನ್ನನ್ನು ಪ್ರೀತಿಸುವುದಿಲ್ಲ. ಈಗಲಾದರೊ ಅವನು ನನ್ನನ್ನು ಪ್ರೀತಿಸಬಹುದು” ಎಂದು ಹೇಳಿ ಆ ಮಗುವಿಗೆ ರೂಬೇನ್ ಎಂದು ಹೆಸರಿಟ್ಟಳು.
33ಲೇಯಾ ಮತ್ತೆ ಬಸುರಾಗಿ ಮತ್ತೊಬ್ಬ ಮಗನನ್ನು ಹೆತ್ತಳು. ಆಕೆ ತನ್ನೊಳಗೆ, “ನಾನು ಗಂಡನ ಅಲಕ್ಷ್ಯಕ್ಕೆ ಗುರಿಯಾದೆನೆಂದು ಯೆಹೋವನು ತಿಳಿದು ನನಗೆ ಈ ಮಗುವನ್ನು ಕೊಟ್ಟಿದ್ದಾನೆ” ಎಂದು ಹೇಳಿ ಆ ಮಗುವಿಗೆ ಸಿಮೆಯೋನ್ ಎಂದು ಹೆಸರಿಟ್ಟಳು.
34ಲೇಯಾ ಮತ್ತೆ ಬಸುರಾಗಿ ಮತ್ತೊಬ್ಬ ಗಂಡುಮಗನನ್ನು ಹೆತ್ತಳು. ಆಕೆ ತನ್ನೊಳಗೆ, “ಖಂಡಿತವಾಗಿಯೂ ನನ್ನ ಗಂಡ ನನ್ನ ಜೊತೆಗೂಡಿರುವನು. ನಾನು ಅವನಿಗೆ ಮೂರು ಗಂಡುಮಕ್ಕಳನ್ನು ಕೊಟ್ಟಿರುವೆ” ಎಂದು ಹೇಳಿ ಆ ಮಗುವಿಗೆ ಲೇವಿ ಎಂದು ಹೆಸರಿಟ್ಟಳು.
35ನಂತರ ಲೇಯಾ ಮತ್ತೊಬ್ಬ ಗಂಡುಮಗನನ್ನು ಹೆತ್ತಳು. ಲೇಯಳು ತನ್ನೊಳಗೆ, “ಈಗ ನಾನು ಯೆಹೋವನನ್ನು ಸ್ತುತಿಸುವೆನು” ಎಂದು ಹೇಳಿ ಆ ಮಗುವಿಗೆ ಯೆಹೂದ ಎಂದು ಹೆಸರಿಟ್ಟಳು. ನಂತರ ಲೇಯಳಿಗೆ ಮಕ್ಕಳಾಗುವುದು ನಿಂತುಹೋಯಿತು.
Valið núna:
ಆದಿಕಾಂಡ 29: KERV
Áherslumerki
Deildu
Afrita
Want to have your highlights saved across all your devices? Sign up or sign in
Kannada Holy Bible: Easy-to-Read Version
All rights reserved.
© 1997 Bible League International