ಆದಿಕಾಂಡ 28

28
1ಇಸಾಕನು ಯಾಕೋಬನನ್ನು ಕರೆದು ಅವನನ್ನು ಆಶೀರ್ವದಿಸಿ ಅವನಿಗೆ, “ನೀನು ಕಾನಾನಿನ ಸ್ತ್ರೀಯನ್ನು ಮದುವೆಯಾಗಕೂಡದು. 2ಆದ್ದರಿಂದ ಈ ಸ್ಥಳವನ್ನು ಬಿಟ್ಟು ಪದ್ದನ್‌ಅರಾಮಿಗೆ ಹೊರಟು ನಿನ್ನ ತಾಯಿಯ ತಂದೆಯಾದ ಬೆತೂವೇಲನ ಮನೆಗೆ ಹೋಗು. ನಿನ್ನ ತಾಯಿಯ ಅಣ್ಣನಾದ ಲಾಬಾನನು ಅಲ್ಲಿ ವಾಸಿಸುತ್ತಿದ್ದಾನೆ. ಅವನ ಹೆಣ್ಣುಮಕ್ಕಳಲ್ಲಿ ಒಬ್ಬಳನ್ನು ಮದುವೆ ಮಾಡಿಕೊ. 3ಸರ್ವಶಕ್ತನಾದ ದೇವರು ನಿನ್ನನ್ನು ಆಶೀರ್ವದಿಸಿ, ನಿನಗೆ ಅನೇಕ ಮಕ್ಕಳನ್ನು ಕೊಡುವಂತೆಯೂ ನೀನು ಮಹಾಜನಾಂಗದ ತಂದೆಯಾಗುವಂತೆಯೂ ನಾನು ಪ್ರಾರ್ಥಿಸುವೆನು. 4ದೇವರು ಅಬ್ರಹಾಮನನ್ನು ಆಶೀರ್ವದಿಸಿದ ರೀತಿಯಲ್ಲಿ ನಿನ್ನನ್ನೂ ನಿನ್ನ ಮಕ್ಕಳನ್ನೂ ಆಶೀರ್ವದಿಸುವಂತೆಯೂ ನೀನು ವಾಸಿಸುವ ಸ್ಥಳದಲ್ಲಿ ಸ್ವಂತ ಭೂಮಿಯನ್ನು ಪಡೆದುಕೊಳ್ಳುವಂತೆಯೂ ನಾನು ಪ್ರಾರ್ಥಿಸುವೆನು. ದೇವರು ಅಬ್ರಹಾಮನಿಗೆ ಕೊಟ್ಟ ಭೂಮಿಯೇ ಅದು” ಎಂದು ಹೇಳಿ ಕಳುಹಿಸಿಕೊಟ್ಟನು.
5ಅಂತೆಯೇ ಯಾಕೋಬನು ಪದ್ದನ್‌ಅರಾಮಿಗೆ ಹೊರಟು ರೆಬೆಕ್ಕಳ ಅಣ್ಣನಾದ ಲಾಬಾನನ ಬಳಿಗೆ ಹೋದನು. ಬೆತೂವೇಲನು ಲಾಬಾನನ ಮತ್ತು ರೆಬೆಕ್ಕಳ ತಂದೆ. ರೆಬೆಕ್ಕಳು ಯಾಕೋಬನ ಮತ್ತು ಏಸಾವನ ತಾಯಿ.
6ತನ್ನ ತಂದೆಯಾದ ಇಸಾಕನು ಯಾಕೋಬನನ್ನು ಆಶೀರ್ವದಿಸಿದ್ದೂ, ಮದುವೆ ಮಾಡಿಕೊಳ್ಳಲು ಪದ್ದನ್‌ಅರಾಮಿಗೆ ಕಳುಹಿಸಿದ್ದೂ, ಕಾನಾನಿನ ಸ್ತ್ರೀಯನ್ನು ಮದುವೆಯಾಗಕೂಡದೆಂದು ಯಾಕೋಬನಿಗೆ ಆಜ್ಞಾಪಿಸಿರುವುದೂ ಏಸಾವನಿಗೆ ತಿಳಿಯಿತು. 7ಇದಲ್ಲದೆ ಯಾಕೋಬನು ತನ್ನ ತಂದೆತಾಯಿಗಳಿಗೆ ವಿಧೇಯನಾಗಿ ಪದ್ದನ್‌ಅರಾಮಿಗೆ ಹೋದದ್ದೂ ಏಸಾವನಿಗೆ ಗೊತ್ತಾಯಿತು. 8ತನ್ನ ತಂದೆಗೆ ತನ್ನ ಗಂಡುಮಕ್ಕಳು ಕಾನಾನಿನ ಸ್ತ್ರೀಯರನ್ನು ಮದುವೆಯಾಗುವುದು ಇಷ್ಟವಿಲ್ಲವೆಂಬುದೂ ಏಸಾವನಿಗೆ ತಿಳಿಯಿತು. 9ಏಸಾವನಿಗೆ ಈಗಾಗಲೇ ಇಬ್ಬರು ಹೆಂಡತಿಯರಿದ್ದರು. ಆದರೂ ಅವನು ಇಷ್ಮಾಯೇಲನ ಬಳಿಗೆ ಹೋಗಿ ಅವನ ಮಗಳಾದ ಮಹಲತ್ ಎಂಬಾಕೆಯನ್ನು ಮದುವೆ ಮಾಡಿಕೊಂಡನು. ಇಷ್ಮಾಯೇಲನು ಅಬ್ರಹಾಮನ ಮಗನು. ಮಹಲತಳು ನೆಬಾಯೋತನ ತಂಗಿ.
ದೇವರ ಮನೆ — ಬೇತೇಲ್
10ಯಾಕೋಬನು ಬೇರ್ಷೆಬವನ್ನು ಬಿಟ್ಟು ಹಾರಾನಿಗೆ ಹೋದನು. 11ಯಾಕೋಬನು ಪ್ರಯಾಣ ಮಾಡುತ್ತಿರುವಾಗ ಸೂರ್ಯಾಸ್ತವಾಯಿತು. ಆದ್ದರಿಂದ ಯಾಕೋಬನು ಆ ರಾತ್ರಿ ಇಳಿದುಕೊಳ್ಳಲು ಒಂದು ಸ್ಥಳಕ್ಕೆ ಹೋದನು. ಯಾಕೋಬನು ಆ ಸ್ಥಳದಲ್ಲಿ ಒಂದು ಕಲ್ಲನ್ನು ಕಂಡು ಅದರ ಮೇಲೆ ತಲೆಯಿಟ್ಟು ಮಲಗಿಕೊಂಡನು. 12ಯಾಕೋಬನಿಗೆ ಒಂದು ಕನಸಾಯಿತು. ಆ ಕನಸಿನಲ್ಲಿ ಒಂದು ಏಣಿ ನೆಲದ ಮೇಲೆ ನಿಂತಿತ್ತು, ಅದರ ತುದಿ ಆಕಾಶವನ್ನು ಮುಟ್ಟಿತ್ತು. ದೇವದೂತರು ಅದರಲ್ಲಿ ಮೇಲೆರುತ್ತಾ ಕೆಳಗಿಳಿಯುತ್ತಾ ಇರುವುದನ್ನು ಯಾಕೋಬನು ಕಂಡನು. 13ಯೆಹೋವನು ಏಣಿಯ ತುದಿಯಲ್ಲಿ ನಿಂತಿರುವುದನ್ನು ಯಾಕೋಬನು ಕಂಡನು. ಯೆಹೋವನು ಅವನಿಗೆ, “ನಿನ್ನ ತಾತನಾದ ಅಬ್ರಹಾಮನ ದೇವರಾಗಿರುವ ಯೆಹೋವನೇ ನಾನು. ನಾನು ಇಸಾಕನ ದೇವರು. ಈಗ ನೀನು ಮಲಗಿಕೊಂಡಿರುವ ದೇಶವನ್ನು ನಾನು ನಿನಗೆ ಕೊಡುವೆನು. ನಾನು ಈ ದೇಶವನ್ನು ನಿನಗೂ ನಿನ್ನ ಮಕ್ಕಳಿಗೂ ಕೊಡುವೆನು. 14ಭೂಮಿಯ ಮೇಲೆ ಧೂಳಿನ ಕಣಗಳಿರುವಂತೆ ನಿನಗೆ ಅನೇಕಾನೇಕ ಸಂತತಿಗಳಿರುವರು. ಅವರು ಪೂರ್ವಪಶ್ಚಿಮಗಳಿಗೂ ಉತ್ತರದಕ್ಷಿಣಗಳಿಗೂ ಹರಡಿಕೊಳ್ಳುವರು. ನಿನ್ನ ಮೂಲಕವೂ ನಿನ್ನ ಸಂತತಿಯವರ ಮೂಲಕವೂ ಭೂಮಿಯ ಮೇಲಿರುವ ಎಲ್ಲಾ ಕುಲಗಳವರು ಆಶೀರ್ವಾದ ಹೊಂದುವರು.
15“ನಾನು ನಿನ್ನ ಸಂಗಡವಿದ್ದು ನೀನು ಹೋಗುವ ಪ್ರತಿಯೊಂದು ಸ್ಥಳದಲ್ಲಿಯೂ ನಿನ್ನನ್ನು ಕಾಪಾಡುವೆನು; ನಿನ್ನನ್ನು ಈ ಸ್ಥಳಕ್ಕೆ ಮತ್ತೆ ಕರೆದುಕೊಂಡು ಬರುವೆನು. ನಾನು ವಾಗ್ದಾನ ಮಾಡಿದ್ದನ್ನು ನೆರವೇರಿಸುವ ತನಕ ನಾನು ನಿನ್ನನ್ನು ಬಿಟ್ಟು ಹೋಗುವುದಿಲ್ಲ” ಎಂದು ಹೇಳಿದನು.
16ಆಗ ಯಾಕೋಬನು ನಿದ್ರೆಯಿಂದ ಎಚ್ಚೆತ್ತು, “ಖಂಡಿತವಾಗಿಯೂ ಈ ಸ್ಥಳದಲ್ಲಿ ದೇವರಿದ್ದಾನೆ, ಆದರೆ ಅದು ನನಗೆ ಗೊತ್ತಿರಲಿಲ್ಲ” ಎಂದು ಹೇಳಿದನು.
17ಯಾಕೋಬನಿಗೆ ಭಯವಾಗಿತ್ತು. ಅವನು, “ಇದು ತುಂಬ ಮಹತ್ವವಾದ ಸ್ಥಳ. ಇದು ದೇವರ ಮನೆ. ಇದು ಸ್ವರ್ಗಕ್ಕೆ ಬಾಗಿಲು” ಎಂದು ಹೇಳಿದನು.
18ಯಾಕೋಬನು ಮರುದಿನ ಮುಂಜಾನೆ ಬೇಗನೆ ಎದ್ದು, ತಾನು ಮಲಗಿಕೊಂಡಿದ್ದ ಕಲ್ಲನ್ನು ತೆಗೆದುಕೊಂಡು ಅದನ್ನು ಕಂಬವಾಗಿ ನೆಲದಲ್ಲಿ ನಿಲ್ಲಿಸಿದನು. ನಂತರ ಆ ಕಲ್ಲಿನ ಮೇಲೆ ಎಣ್ಣೆಯನ್ನು ಸುರಿದನು. ಹೀಗೆ ಅವನು ಆ ಕಲ್ಲನ್ನು ದೇವರ ನೆನಪಿಗಾಗಿ ಪ್ರತಿಷ್ಠಿಸಿದನು. 19ಆ ಸ್ಥಳದ ಹೆಸರು ಲೂಜ್. ಆದರೆ ಯಾಕೋಬನು ಅದಕ್ಕೆ ಬೇತೇಲ್ ಎಂದು ಹೆಸರಿಟ್ಟನು.
20ನಂತರ ಯಾಕೋಬನು ಈ ಪ್ರಮಾಣವನ್ನು ಮಾಡಿದನು: “ದೇವರು ನನ್ನ ಸಂಗಡವಿದ್ದು ನಾನು ಹೋದಲ್ಲೆಲ್ಲ ನನ್ನನ್ನು ಕಾಪಾಡಿ ಊಟಕ್ಕೆ ಆಹಾರವನ್ನೂ, ಉಡಲು ಬಟ್ಟೆಗಳನ್ನೂ ಕೊಟ್ಟು, 21ನಾನು ಸಮಾಧಾನದಿಂದ ನನ್ನ ತಂದೆಯ ಮನೆಗೆ ಹಿಂತಿರುಗಿ ಬರುವಂತೆ ಮಾಡಿದರೆ ಯೆಹೋವನೇ ನನ್ನ ದೇವರಾಗಿರುವನು. 22ನಾನು ಕಲ್ಲನ್ನು ನೆಟ್ಟಿರುವ ಈ ಸ್ಥಳವು ದೇವರ ಪವಿತ್ರಸ್ಥಳವಾಗುವುದು. ಇದಲ್ಲದೆ ದೇವರು ನನಗೆ ಕೊಡುವುದರಲ್ಲೆಲ್ಲಾ ಹತ್ತನೆಯ ಒಂದು ಭಾಗವನ್ನು ನಾನು ಆತನಿಗೆ ಕೊಡುತ್ತೇನೆ.”

Áherslumerki

Deildu

Afrita

None

Want to have your highlights saved across all your devices? Sign up or sign in