Akara Njirimara YouVersion
Akara Eji Eme Ọchịchọ

ಆದಿಕಾಂಡ 35

35
ಬೇತೇಲಿನಲ್ಲಿ ದೇವರು ಯಕೋಬನಿಗೆ ಕೊಟ್ಟ ಆಶೀರ್ವಾದ
1ದೇವರು ಯಕೋಬನಿಗೆ, “ನೀನು ಈ ಸ್ಥಳವನ್ನು ಬಿಟ್ಟು ಬೇತೇಲಿಗೆ ಹೋಗಿ ಅಲ್ಲೇ ವಾಸಮಾಡು. ನೀನು ನಿನ್ನ ಅಣ್ಣ ಏಸಾವನ ಬಳಿಯಿಂದ ಓಡಿಹೋಗುವಾಗ ನಿನಗಲ್ಲಿ ದರ್ಶನ ಇತ್ತ ದೇವರು ನಾನೇ. ನನಗೊಂದು ಬಲಿಪೀಠವನ್ನು ಅಲ್ಲಿ ಕಟ್ಟಿಸು,” ಎಂದು ಹೇಳಿದರು.
2ಆಗ ಯಕೋಬನು ತನ್ನ ಮನೆಯವರಿಗೂ ಹಾಗು ತನ್ನ ಸಂಗಡ ಇದ್ದ ಎಲ್ಲರಿಗೂ, “ನಿಮ್ಮಲ್ಲಿ ಇರುವ ಅನ್ಯ ದೇವರುಗಳನ್ನು ತೊರೆದುಬಿಡಿ; ನಿಮ್ಮನ್ನೇ ಶುದ್ಧೀಕರಿಸಿಕೊಂಡು ಮಡಿವಸ್ತ್ರಗಳನ್ನು ಹಾಕಿಕೊಳ್ಳಿ; ನಾವು ಬೇತೇಲಿಗೆ ಹೊರಟುಹೋಗೋಣ. 3ಕಷ್ಟಕಾಲದಲ್ಲಿ ನನ್ನ ವಿಜ್ಞಾಪನೆಯನ್ನು ಆಲಿಸಿ, ನಾನು ಹೋದ ಕಡೆಯೆಲ್ಲ ನನ್ನೊಂದಿಗಿದ್ದ ದೇವರಿಗೆ ಅಲ್ಲೊಂದು ಬಲಿಪೀಠವನ್ನು ಕಟ್ಟಿಸುತ್ತೇನೆ,” ಎಂದು ಹೇಳಿದನು. 4ಅಂತೆಯೆ ಅವರು ತಮ್ಮಲ್ಲಿದ್ದ ಎಲ್ಲ ಅನ್ಯದೇವರುಗಳನ್ನೂ ತಮ್ಮ ಕಿವಿಗಳಲ್ಲಿದ್ದ ಮುರುವುಗಳನ್ನೂ ಯಕೋಬನಿಗೆ ಒಪ್ಪಿಸಿಬಿಟ್ಟರು. ಅವನು ಅವುಗಳನ್ನು ಶೆಕೆಮ್ ಪಟ್ಟಣದ ಹತ್ತಿರ ಇದ್ದ ಒಂದು ಓಕ್ ಮರದ ಬುಡದಡಿಯಲ್ಲಿ ಹೂಳಿಬಿಟ್ಟನು.
5ಅವರು ಪ್ರಯಾಣಮಾಡುತ್ತಿದ್ದಾಗ ದೇವರು ಸುತ್ತಮುತ್ತಣದ ಊರಿನವರಲ್ಲಿ ಭಯ ಹುಟ್ಟಿಸಿದರು. ಇದರಿಂದಾಗಿ ಆ ಊರಿವನರಾರೂ ಯಕೋಬನ ಮಕ್ಕಳನ್ನು ಹಿಂದಟ್ಟಿ ಬರಲಿಲ್ಲ. 6ಯಕೋಬನೂ ಅವನ ಸಂಗಡವಿದ್ದ ಜನರೆಲ್ಲರೂ ಕಾನಾನ್ ನಾಡಿನಲ್ಲಿದ್ದ ಬೇತೇಲೆಂಬ ಊರಿಗೆ ಬಂದು ಸೇರಿದರು. 7ಯಕೋಬನು ತನ್ನ ಅಣ್ಣನ ಬಳಿಯಿಂದ ಓಡಿಹೋಗುವಾಗ ದೇವರು ಅವನಿಗೆ ಪ್ರತ್ಯಕ್ಷವಾದುದು ಅಲ್ಲಿಯೇ. ಎಂದೇ ಅವನು ಅಲ್ಲಿ ಒಂದು ಬಲಿಪೀಠವನ್ನು ಕಟ್ಟಿಸಿ, ಆ ಸ್ಥಳಕ್ಕೆ ‘ಏಲ್ ಬೇತೇಲ್’#35:7 ಎಂದರೆ - ಬೇತೇಲಿನ ದೇವರು. ಎಂದು ಹೆಸರಿಟ್ಟನು. 8ಅಲ್ಲಿರುವಾಗ ರೆಬೆಕ್ಕಳ ದಾದಿ ದೆಬೋರಳು ಸತ್ತುಹೋದಳು. ಆಕೆಯನ್ನು ಬೇತೇಲಿನ ಕಣಿವೆಯಲ್ಲಿರುವ ಮತ್ತೊಂದು ಓಕ್ ಮರದ ಬುಡದಲ್ಲಿ ಸಮಾಧಿಮಾಡಿ ಅದಕ್ಕೆ ‘ಅಲ್ಲೋನ್ ಬಾಕೂತ್’#35:8 ಎಂದರೆ - ಶೋಕದ ಓಕ್ ಮರ. ಎಂದು ಹೆಸರಿಟ್ಟರು.
9ಯಕೋಬನು ಮೆಸಪೊಟೇಮಿಯಾದಿಂದ ಹಿಂದಿರುಗಿ ಬಂದಾಗ ದೇವರು ಮತ್ತೆ ಅವನಿಗೆ ದರ್ಶನಕೊಟ್ಟು ಅವನನ್ನು ಆಶೀರ್ವದಿಸಿದರು. 10ಅವನಿಗೆ ದೇವರು, “ನಿನ್ನ ಹೆಸರು; ಯಕೋಬ ಅಲ್ಲವೇ? ಇನ್ನು ಮೇಲೆ ನೀನು ಯಕೋಬನೆನಿಸಿಕೊಳ್ಳದೆ 'ಇಸ್ರಯೇಲ್' ಎನಿಸಿಕೊಳ್ಳಬೇಕು” ಎಂದು ಹೇಳಿದರು. ಹೀಗೆ ಅವನ ಹೆಸರು ಇಸ್ರಯೇಲ್ ಆಯಿತು. 11ಇದಲ್ಲದೆ ಅವನಿಗೆ ದೇವರು, “ನಾನೇ ಸರ್ವವಲ್ಲಭನಾದ ದೇವರು; ನೀನು ವೃದ್ಧಿಯಾಗಿ ಬಹುಸಂತಾನವುಳ್ಳವನಾಗು. ನಿನ್ನಿಂದ ರಾಷ್ಟ್ರವೊಂದು ಉಂಟಾಗುವುದು, ಅನೇಕ ರಾಷ್ಟ್ರಗಳೂ ರಾಜರುಗಳೂ ನಿನ್ನಿಂದ ಹುಟ್ಟುವರು. 12ನಾನು ಅಬ್ರಹಾಮ್, ಇಸಾಕರಿಗೆ ವಾಗ್ಡಾನ ಮಾಡಿದ ನಾಡನ್ನು ನಿನಗೂ ನಿನ್ನ ತರುವಾಯ ಬರುವ ನಿನ್ನ ಸಂತತಿಗೂ ಕೊಡುವೆನು,” ಎಂದು ಹೇಳಿದರು. 13ಬಳಿಕ ಅವನ ಸಂಗಡ ಮಾತನಾಡಿದ ಆ ಸ್ಥಳದಿಂದ ಮೇಲಕ್ಕೇರಿ ಹೋದರು. 14ಯಕೋಬನು ತನ್ನೊಡನೆ ದೇವರು ಮಾತನಾಡಿದ ಆ ಸ್ಥಳದಲ್ಲಿ ಕಲ್ಲಿನ ಸ್ತಂಭವೊಂದನ್ನು ನಿಲ್ಲಿಸಿ, ಅದರ ಮೇಲೆ ಪಾನಕಾ ಅಭಿಷೇಕಮಾಡಿ, ಎಣ್ಣೆಹೊಯ್ದು ಅಭ್ಯಂಗಿಸಿದನು. 15ಆ ಸ್ಥಳವನ್ನು ‘ಬೇತೇಲ್’ ಎಂದು ಹೆಸರಿಸಿದನು.
ರಾಖೇಲಳ ನಿಧನ
16ಆ ಬಳಿಕ ಅವರು ಬೇತೇಲನ್ನು ಬಿಟ್ಟು ಹೊರಟರು. ಎಫ್ರಾತೂರಿಗೆ ಸೇರುವುದಕ್ಕೆ ಇನ್ನು ಸ್ವಲ್ಪ ದೂರವಿದ್ದಾಗ ರಾಖೇಲಳಿಗೆ ಹೆರಿಗೆಯ ಕಾಲ ಬಂದಿತು. 17ಆಕೆ ಪ್ರಸವ ವೇದನೆಯಿಂದ ಬಹಳ ಕಷ್ಟಪಡುತ್ತಿದ್ದಾಗ ಸೂಲಗಿತ್ತಿಯು ಆಕೆಗೆ, “ಅಂಜಬೇಡ, ನಿನಗೆ ಇನ್ನೊಬ್ಬ ಮಗ ಹುಟ್ಟಿದ್ದಾನೆ,” ಎಂದು ಹೇಳಿದಳು. 18ಆದರೆ ರಾಖೇಲಳು ಸತ್ತುಹೋದಳು. ಪ್ರಾಣಹೋಗುತ್ತಿದ್ದಾಗ ಆಕೆ ಆ ಮಗುವಿಗೆ ‘ಬೆನೋನಿ’#35:18 ಹಿಬ್ರೂ ಮೂಲ “ಎಲ್ ಶದ್ಧಯ್". ಎಂದು ಹೆಸರಿಟ್ಟಳು. ಅದರ ತಂದೆಯಾದರೋ ಅದಕ್ಕೆ ಬೆನ್ಯಾಮೀನ್#35:18 ಅದೃಷ್ಟವಂತನ ಮಗ ಎಂದು ಹೆಸರಿಟ್ಟನು.
19ಅನಂತರ ರಾಖೇಲಳು ಸತ್ತುಹೋದಳು, ಆಕೆಯನ್ನು ಬೆತ್ಲೆಹೇಮೆಂಬ ಎಫ್ರಾತಿಗೆ ಹೋಗುವ ದಾರಿಪಕ್ಕದಲ್ಲಿ ಸಮಾಧಿ ಮಾಡಿದರು. 20ಯಕೋಬನು ಆಕೆಯ ಸಮಾಧಿಯ ಮೇಲೆ ಸ್ಮಾರಕಸ್ತಂಭವನ್ನು ನಿಲ್ಲಿಸಿದನು. ಅದು ಇಂದಿನವರೆಗೂ ರಾಖೇಲಳ ಸಮಾಧಿಸ್ತಂಭ ಎನಿಸಿಕೊಳ್ಳುತ್ತದೆ. 21ಅಲ್ಲಿಂದ ಇಸ್ರಯೇಲನು ಪ್ರಯಾಣ ಬೆಳೆಸಿ ಮಿಗ್ದಲದ ಏದನ ಆಚೆಕಡೆಯಲ್ಲಿ ತನ್ನ ಗುಡಾರವನ್ನು ಹಾಕಿಸಿದನು.
ಯಕೋಬನ ಹನ್ನೆರಡು ಮಕ್ಕಳು
22ಇಸ್ರಯೇಲನು ಆ ನಾಡಿನಲ್ಲಿ ವಾಸವಾಗಿದ್ದಾಗ ರೂಬೇನ್ ತನ್ನ ತಂದೆಯ ಉಪಪತ್ನಿಯಾದ ಬಿಲ್ಹಳಲ್ಲಿ ಸಂಗಮಿಸಿದನು, ಈ ಸಂಗತಿ ತಿಳಿದುಬಂದಾಗ ಇಸ್ರಯೇಲನಿಗೆ ಕಡುಕೋಪವಾಯಿತು.
23ಯಕೋಬನ ಹನ್ನೆರಡು ಗಂಡು ಮಕ್ಕಳ ಹೆಸರು ಇವು: ಯಕೋಬನ ಚೊಚ್ಚಲಮಗ ರೂಬೇನ್, ಸಿಮೆಯೋನ್, ಲೇವಿ, ಯೆಹೂದಾ, ಇಸ್ಸಾಕಾರ್, ಜೆಬುಲೂನ್ - ಇವರು ಲೇಯಳಲ್ಲಿ ಹುಟ್ಟಿದವರು. 24ಜೋಸೆಫ್, ಬೆನ್ಯಾಮೀನ್ - ಇವರಿಬ್ಬರು ರಾಖೇಲಳಲ್ಲಿ ಹುಟ್ಟಿದವರು. 25ದಾನ್, ನಫ್ತಾಲಿ - ಇವರು ರಾಖೇಲಳ ದಾಸಿ ಬಿಲ್ಹಳಲ್ಲಿ ಹುಟ್ಟಿದವರು. 26ಗಾದ್, ಆಶೇರ್ - ಇವರಿಬ್ಬರು ಲೇಯಳ ದಾಸಿ ಜಿಲ್ಪಳಲ್ಲಿ ಹುಟ್ಟಿದವರು. ಮೆಸಪೊಟೇಮಿಯಾದಲ್ಲಿ ಯಕೋಬನಿಗೆ ಹುಟ್ಟಿದ ಮಕ್ಕಳು ಇವರೇ.
27ಯಕೋಬನು ತನ್ನ ತಂದೆ ಇಸಾಕನ ಬಳಿಗೆ ಮಮ್ರೆಗೆ ಬಂದನು. ಮಮ್ರೆಯು ಹೆಬ್ರೋನೆಂಬ ಕಿರ್ಯತರ್ಬಕ್ಕೆ ಸೇರಿದುದು. ಅದೇ ಅಬ್ರಹಾಮ್ ಹಾಗು ಇಸಾಕನು ಪರದೇಶಸ್ಥರಾಗಿ ವಾಸವಾಗಿದ್ದ ಸ್ಥಳ.
ಇಸಾಕನ ಮರಣ
28ಇಸಾಕನು ಹಣ್ಣುಹಣ್ಣು ಮುದುಕನಾಗಿದ್ದು ನೂರ ಎಂಬತ್ತನೆಯ ವರ್ಷದಲ್ಲಿ ತೀರಿಕೊಂಡು ತನ್ನ ಪಿತೃಗಳ ಬಳಿಗೆ ಸೇರಿಕೊಂಡನು. ಅವನ ಮಕ್ಕಳಾದ ಏಸಾವ ಮತ್ತು ಯಕೋಬರು ಅವನನ್ನು ಸಮಾಧಿ ಮಾಡಿದರು.

Nke Ahọpụtara Ugbu A:

ಆದಿಕಾಂಡ 35: KANCLBSI

Mee ka ọ bụrụ isi

Kesaa

Mapịa

None

Ịchọrọ ka echekwaara gị ihe ndị gasị ị mere ka ha pụta ìhè ná ngwaọrụ gị niile? Debanye aha gị ma ọ bụ mee mbanye