ಆದಿಕಾಂಡ 25
25
ಕೆಟೂರಳ ಸಂತತಿ
(೧ ಪೂರ್ವ. 1:32-33)
1ಅಬ್ರಹಾಮನು ಕೆಟೂರಳೆಂಬ ಇನ್ನೊಬ್ಬ ಹೆಂಡತಿಯನ್ನು ಮದುವೆ ಮಾಡಿಕೊಂಡನು. 2ಆಕೆ ಅವನಿಗೆ ಜಿಮ್ರಾನ್, ಯೊಕ್ಷಾನ್, ಮೆದಾನ್, ಮಿದ್ಯಾನ್, ಇಷ್ಬಾಕ್, ಶೂಹ ಇವರನ್ನು ಹೆತ್ತಳು. 3ಯೊಕ್ಷಾನನು ಶೆಬಾ, ದೆದಾನ್ ಎಂಬವರನ್ನು ಪಡೆದನು. ಅಶ್ಯೂರ್ಯರು, ಲೆಟೂಶ್ಯರೂ ಲೆಯುಮ್ಯರು ದೆದಾನನಿಂದ ಹುಟ್ಟಿದರು. 4ಗೇಫಾ, ಗೇಫೆರ್, ಹನೋಕ್ ಅಬೀದಾ, ಎಲ್ದಾಗ ಎಂಬವರು ಮಿದ್ಯಾನನಿಂದ ಹುಟ್ಟಿದರು. ಇವರೆಲ್ಲರು ಕೆಟೂರಳ ಸಂತತಿಯವರು.
5ಅಬ್ರಹಾಮನು ತನಗಿದ್ದ ಆಸ್ತಿಪಾಸ್ತಿಯನ್ನೆಲ್ಲ ಇಸಾಕನಿಗೆ ಕೊಟ್ಟನು. 6ತನ್ನ ಉಪಪತ್ನಿಯರ ಮಕ್ಕಳಿಗೆ ಕೆಲವು ಸೊತ್ತುಗಳನ್ನು ದಾನಮಾಡಿ ತಾನು ಇನ್ನೂ ಜೀವದಿಂದಿರುವಾಗಲೇ ಅವರನ್ನು ತನ್ನ ಮಗ ಇಸಾಕನ ಬಳಿಯಿಂದ ದೂರಕ್ಕೆ ಪೂರ್ವದಿಕ್ಕಿನಲ್ಲಿದ್ದ ಕೆದೆಮ್ ನಾಡಿಗೆ, ಕಳಿಸಿಬಿಟ್ಟನು.
ಅಬ್ರಹಾಮನ ಮರಣ
7ಅಬ್ರಹಾಮನು ನೂರೆಪ್ಪತ್ತೈದು ವರ್ಷ ಬದುಕಿದ್ದನು. 8ಪೂರ್ಣ ಆಯುಷ್ಯವನ್ನು ಕಳೆದು, ಹಣ್ಣು ಹಣ್ಣು ಮುದುಕನಾಗಿ ಪ್ರಾಣಬಿಟ್ಟು ಅವನು ತನ್ನ ಪಿತೃಗಳ ಬಳಿಗೆ ಸೇರಿದನು. 9ಅವನ ಮಕ್ಕಳಾದ ಇಸಾಕ್ - ಇಷ್ಮಾಯೇಲರು ಅವನನ್ನು ಹಿತ್ತಿಯನಾದ ಚೋಹರನ ಮಗ ಎಫ್ರೋನನ ಹೊಲದಲ್ಲಿದ್ದ ಮಕ್ಪೇಲದ ಗವಿಯಲ್ಲಿ ಸಮಾಧಿಮಾಡಿದರು. ಅದು ಮಮ್ರೆಗೆ ಪೂರ್ವದಿಕ್ಕಿನಲ್ಲಿದೆ. 10ಅಬ್ರಹಾಮನೇ ಹಿತ್ತಿಯರಿಂದ ಕೊಂಡುಕೊಂಡ ಹೊಲ ಅದು. ಅದರಲ್ಲೇ ಅವನಿಗೂ ಅವನ ಹೆಂಡತಿ ಸಾರಳಿಗೂ ಸಮಾಧಿ ಆಯಿತು. 11ಅಬ್ರಹಾಮನು ಕಾಲವಾದ ಬಳಿಕ ಅವನ ಮಗ ಇಸಾಕನನ್ನು ದೇವರು ಆಶೀರ್ವದಿಸಿದರು. ಇಸಾಕನು ‘ಲಹೈರೋಯಿ’ ಎಂಬ ಬಾವಿಯ ಹತ್ತಿರ ವಾಸವಾಗಿದ್ದನು.
ಇಷ್ಮಾಯೇಲನ ಸಂತಾನ
(೧ ಪೂರ್ವ. 1:28-31)
12ಅಬ್ರಹಾಮನಿಗೆ ಸಾರಳ ದಾಸಿಯೂ ಈಜಿಪ್ಟಿನವಳೂ ಆದ ಹಾಗರಳಲ್ಲಿ ಹುಟ್ಟಿದ ಇಷ್ಮಾಯೇಲನ ವಂಶಾವಳಿ: 13ಇಷ್ಮಾಯೇಲನ ಮಕ್ಕಳಿಗೂ ಅವರಿಂದ ಹುಟ್ಟಿದ ಕುಲಗಳಿಗೂ ಇಡಲಾಗಿದ್ದ ಹೆಸರುಗಳು ಇವು - ಮೊದಲು ಹುಟ್ಟಿದವನು ನೆಬಾಯೋತ್, ಆಮೇಲೆ ಹುಟ್ಟಿದವರು ಕೇದಾರ್, ಅದ್ಬಯೇಲ್, 14ಮಿಬ್ಸಾಮ್, ಮಿಷ್ಮಾ, ದೂಮಾ, ಮಸ್ಸಾ, 15ಹದದ್, ತೇಮಾ, ಯಟೂರ್, ನಾಫೀಷ್ ಹಾಗೂ ಕೇದ್ಮಾ. 16ಇವರೇ ಆ ಹನ್ನೆರಡು ಕುಲದ ಮೂಲಪುರುಷರು. ಈ ಹೆಸರುಗಳನ್ನು ಅವರು ವಾಸಿಸಿದ್ದ ಊರುಗಳಿಗೂ ಪಾಳೆಯಗಳಿಗೂ ಇಡಲಾಗಿತ್ತು. 17ಇಷ್ಮಾಯೇಲನು ನೂರಮೂವತ್ತೇಳು ವರ್ಷ ಬದುಕಿದ್ದನು. ಅನಂತರ ಸತ್ತು ತನ್ನ ಪಿತೃಗಳ ಬಳಿಗೆ ಸೇರಿದನು. 18ಇಷ್ಮಾಯೇಲ್ಯರು ಹವೀಲ ಹಾಗು ಶೂರಿನ ಮಧ್ಯೆಯಿರುವ ಪ್ರದೇಶದಲ್ಲಿ ವಾಸಮಾಡಿದರು. ಶೂರ್ ಈಜಿಪ್ಟಿನ ಪೂರ್ವಕ್ಕೆ ಅಸ್ಸೀರಿಯಗೆ ಹೋಗುವ ಹಾದಿಯಲ್ಲಿದೆ. ಹೀಗೆ ಇಷ್ಮಾಯೇಲ್ಯರು ತಮ್ಮ ಸಂಬಂಧಿಕರಿಗೆ ಎದುರುಬದುರಿನಲ್ಲೇ ವಾಸಮಾಡಿದರು.
ಏಸಾವ ಮತ್ತು ಯಕೋಬನ ಜನನ
19ಅಬ್ರಹಾಮನ ಮಗ ಇಸಾಕನ ವಂಶಾವಳಿ: ಅಬ್ರಹಾಮನು ಇಸಾಕನನ್ನು ಪಡೆದನು. 20ಇಸಾಕನು ನಲವತ್ತು ವರ್ಷದವನಾಗಿದ್ದಾಗ ಅರಾಮ್ಯರಾದ ಬೆತುವೇಲನ ಮಗಳೂ ಲಾಬಾನನ ತಂಗಿಯೂ ಆಗಿದ್ದ ರೆಬೆಕ್ಕಳನ್ನು ಮೆಸಪೊಟೇಮಿಯಾ#25:20 ಅಥವಾ: ಪದ್ದನ್ ಆರಾಮ್.ದಿಂದ ಬರಮಾಡಿಸಿಕೊಂಡು ಮದುವೆಯಾದನು. 21ರೆಬೆಕ್ಕಳಿಗೆ ಮಕ್ಕಳಾಗಲಿಲ್ಲ. ಸರ್ವೇಶ್ವರ ಅವನ ವಿಜ್ಞಾಪನೆಯನ್ನು ಆಲಿಸಿದರು. ರೆಬೆಕ್ಕಳು ಗರ್ಭವತಿಯಾದಳು. 22ಆಕೆಯ ಗರ್ಭದಲ್ಲಿದ್ದ ಅವಳಿ ಮಕ್ಕಳು ಒಂದನ್ನೊಂದು ಒತ್ತರಿಸಿದಾಗ ಆಕೆ, “ನನಗೇತಕ್ಕೆ ಹೀಗಾಗುತ್ತಿದೆ?” ಎಂದುಕೊಂಡು ಸರ್ವೇಶ್ವರ ಸ್ವಾಮಿಯನ್ನು ವಿಚಾರಿಸಲು ಹೋದಳು. 23ಸರ್ವೇಶ್ವರ ಆಕೆಗೆ ಇಂತೆಂದರು:
ನಿನ್ನ ಉದರದೊಳಿವೆ ಜನಾಂಗಗಳೆರಡು
ಹುಟ್ಟಿನಿಂದ ವೈರಿಗಳಾ ರಾಷ್ಟ್ರಗಳೆರಡು
ಬಲಿಷ್ಠವಿರುವುದು ಒಂದು ಮತ್ತೊಂದಕೆ
ಜ್ಯೇಷ್ಠನೇ ದಾಸನಾಗುವನು ಕನಿಷ್ಠನಿಗೆ.
24ದಿನ ತುಂಬಿದಾಗ ರೆಬೆಕ್ಕಳು ಅವಳಿ ಮಕ್ಕಳನ್ನು ಹೆತ್ತಳು. 25ಮೊದಲು ಹುಟ್ಟಿದ ಮಗು ಕೆಂಚಗೂ ಮೈಯೆಲ್ಲ ರೋಮಮಯವಾಗೂ ಇತ್ತು. ಎಂತಲೇ ಅದಕ್ಕೆ ಏಸಾವ#25:25 ಅಂದರೆ “ತುಂಬ ಕೂದಲುಳ್ಳ". ಎಂದು ಹೆಸರಿಟ್ಟರು. 26ಎರಡನೆಯ ಮಗು ಏಸಾವನ ಹಿಮ್ಮಡಿಯನ್ನು ಹಿಡಿದುಕೊಂಡು ಹುಟ್ಟಿದ್ದರಿಂದ ಅದಕ್ಕೆ ಯಕೋಬ#25:26 ಅಂದರೆ “ವಂಚಕ". ಎಂದು ಹೆಸರಿಟ್ಟರು. ಇವರು ಹುಟ್ಟಿದಾಗ ಇಸಾಕನಿಗೆ ಅರವತ್ತು ವರ್ಷವಾಗಿತ್ತು.
ಜ್ಯೇಷ್ಠತನದ ಮಾರಾಟ
27ಆ ಹುಡುಗರಿಬ್ಬರು ಬೆಳೆದರು. ಏಸಾವನು ಚೂಟಿಯಾದ ಬೇಟೆಗಾರನಾದ, ವನವಾಸಿಯಾದ, ಯಕೋಬನು ಸಾಧುಮನುಷ್ಯ, ಅವನದು ಗುಡಾರಗಳಲ್ಲಿ ವಾಸ, 28ಇಸಾಕನಿಗೆ ಬೇಟೆಯ ಮಾಂಸ ಇಷ್ಟ; ಎಂದೇ ಏಸಾವನ ಮೇಲೆ ಹೆಚ್ಚು ಪ್ರೀತಿ. ರೆಬೆಕ್ಕಳಿಗಾದರೋ ಯಕೋಬನ ಮೇಲೆ ಹೆಚ್ಚು ಪ್ರೀತಿ.
29ಒಮ್ಮೆ ಯಕೋಬನು ಅಡಿಗೆ ಮಾಡುತ್ತಿದ್ದ. ಏಸಾವನು ಕಾಡಿನಿಂದ ದಣಿದು ಬಂದು, 30‘ನಾನು ಬಹಳವಾಗಿ ದಣಿದು ಬಂದಿದ್ದೇನೆ. ಆ ಕೆಂಪು ಪದಾರ್ಥವನ್ನು ತಿನ್ನಲು ಕೊಡು’, ಎಂದು ಕೇಳಿದ. (ಈ ಕಾರಣದಿಂದಲೇ ಏಸಾವನಿಗೆ ಎದೋಮ್ ಎಂದು ಹೆಸರಾಯಿತು.)
31ಅದಕ್ಕೆ ಯಕೋಬ, ‘ನಿನ್ನದಾಗಿರುವ ಜ್ಯೇಷ್ಠಪುತ್ರನ ಹಕ್ಕನ್ನು ನನಗೆ ಮೊದಲು ಮಾರಿಬಿಡು,’ ಎಂದು ಹೇಳಿದ. 32ಏಸಾವನು, ‘ಆಗಲಿ, ಮಾರುತ್ತೇನೆ, ಸಾಯುತ್ತಿರುವ ನನಗೆ ಜ್ಯೇಷ್ಠತನದಿಂದ ಪ್ರಯೋನಜವೇನು? ಎಂದ. 33ಯಕೋಬನು ‘ಮಾರಿರುವುದಾಗಿ ನನಗೆ ಪ್ರಮಾಣ ಮಾಡು’, ಎಂದಾಗ ಏಸಾವನು ಪ್ರಮಾಣಮಾಡಿ ತನ್ನ ಜ್ಯೇಷ್ಠತನದ ಹಕ್ಕನ್ನು ಮಾರಿಬಿಟ್ಟ. 34ಆಗ ಯಕೋಬನು ಏಸಾವನಿಗೆ ರೊಟ್ಟಿಯನ್ನೂ ಅಲಸಂದಿ ಗುಗ್ಗರಿಯನ್ನೂ ಕೊಟ್ಟ. ಏಸಾವನು ತಿಂದು, ಕುಡಿದು, ಎದ್ದು ಹೋದ. ಜ್ಯೇಷ್ಠತನದ ಹಕ್ಕುಬಾಧ್ಯತೆಗೆ ಏಸಾವನು ಕೊಟ್ಟ ಮರ್ಯಾದೆ ಇಷ್ಟೇ!
Nke Ahọpụtara Ugbu A:
ಆದಿಕಾಂಡ 25: KANCLBSI
Mee ka ọ bụrụ isi
Kesaa
Mapịa

Ịchọrọ ka echekwaara gị ihe ndị gasị ị mere ka ha pụta ìhè ná ngwaọrụ gị niile? Debanye aha gị ma ọ bụ mee mbanye
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.