ಲೂಕ. 24

24
ಮೃತ್ಯುಂಜಯ
(ಮತ್ತಾ. 28:1-10; ಮಾರ್ಕ. 16:1-8; ಯೊವಾ. 20:1-10)
1ಭಾನುವಾರ ಮುಂಜಾನೆ ಆ ಮಹಿಳೆಯರು ತಾವು ಸಿದ್ಧಮಾಡಿದ್ದ ಸುಗಂಧದ್ರವ್ಯಗಳನ್ನು ತೆಗೆದುಕೊಂಡು ಸಮಾಧಿಯ ಬಳಿಗೆ ಬಂದರು. 2ಸಮಾಧಿಯ ದ್ವಾರಕ್ಕೆ ಮುಚ್ಚಿದ್ದ ಕಲ್ಲು ಅಲ್ಲಿಂದ ಉರುಳಿ ಬಿದ್ದಿತ್ತು. 3ಒಳಕ್ಕೆ ಪ್ರವೇಶಿಸಿ ನೋಡಿದಾಗ ಪ್ರಭು ಯೇಸುವಿನ ಪಾರ್ಥಿವ ಶರೀರ ಕಾಣಲಿಲ್ಲ. 4ಅವರು ತಬ್ಬಿಬ್ಬಾಗಿ ಅಲ್ಲೇ ನಿಂತರು. ಆಗ ತೇಜೋಮಯವಾದ ಉಡುಪನ್ನು ಧರಿಸಿದ್ದ ಇಬ್ಬರು ವ್ಯಕ್ತಿಗಳು ಫಕ್ಕನೆ ಅಲ್ಲೇ ಕಾಣಿಸಿಕೊಂಡರು. 5ಮಹಿಳೆಯರು ಭಯಭ್ರಾಂತರಾದರು. ಅವರ ದೃಷ್ಟಿ ನೆಲನಾಟಿತು. ಆಗ ಆ ವ್ಯಕ್ತಿಗಳು, “ಸಜೀವವಾಗಿರುವವರನ್ನು ಸತ್ತವರ ಮಧ್ಯೆ ಹುಡುಕುವುದೇನು? ಅವರು ಇಲ್ಲಿಲ್ಲ; ಪುನರುತ್ಥಾನ ಹೊಂದಿದ್ದಾರೆ.#24:5 ಜೀವಂತರಾಗಿ ಎದ್ದಿದ್ದಾರೆ,’ ಎಂದೂ ಕೆಲವರು ಭಾಷಾಂತರಿಸಿದ್ದಾರೆ. 6ಗಲಿಲೇಯದಲ್ಲಿದ್ದಾಗಲೇ ಅವರು ನಿಮಗೆ, 7‘ನರಪುತ್ರನು ಪಾಪಿಮಾನವರ ಕೈವಶವಾಗಿ, ಶಿಲುಬೆಯ ಮರಣಕ್ಕೀಡಾಗಿ, ಮೂರನೆಯ ದಿನ ಪುನರುತ್ಥಾನ ಹೊಂದಬೇಕಾಗಿದೆ,’ ಎಂದು ತಿಳಿಸಿದ್ದನ್ನು ಮರೆತುಬಿಟ್ಟಿರೋ?” ಎಂದರು.
8ಆಗ ಆ ಮಹಿಳೆಯರಿಗೆ ಯೇಸುಸ್ವಾಮಿಯ ಈ ಮಾತುಗಳು ಜ್ಞಾಪಕಕ್ಕೆ ಬಂದವು. 9ಅವರು ಸಮಾಧಿಯಿಂದ ಹಿಂದಿರುಗಿಹೋಗಿ ನಡೆದುದೆಲ್ಲವನ್ನು ಹನ್ನೊಂದು ಮಂದಿ ಶಿಷ್ಯರಿಗೂ ಮತ್ತಿತರರಿಗೂ ತಿಳಿಸಿದರು. 10ಆ ಮಹಿಳೆಯರ ಹೆಸರುಗಳು: ಮಗ್ದಲದ ಮರಿಯಳು, ಯೊವಾನ್ನಳು ಮತ್ತು ಯಕೋಬನ ತಾಯಿಯಾದ ಮರಿಯಳು. ಇವರಲ್ಲದೆ, ಇವರ ಸಂಗಡ ಇದ್ದ ಇತರ ಮಹಿಳೆಯರೂ ಪ್ರೇಷಿತರಿಗೆ ಈ ಸುದ್ದಿಯನ್ನು ತಿಳಿಸಿದರು. 11ಪ್ರೇಷಿತರಾದರೋ ಇದೆಲ್ಲ ಕಟ್ಟುಕತೆಯೆಂದು ಭಾವಿಸಿ ನಂಬದೆಹೋದರು.
12ಆದರೆ ಪೇತ್ರನು ಎದ್ದು ಸಮಾಧಿಯ ಬಳಿಗೆ ಧಾವಿಸಿದನು. ಸಮಾಧಿಯೊಳಕ್ಕೆ ಬಗ್ಗಿನೋಡಿದಾಗ, ಶವಕ್ಕೆ ಸುತ್ತಿದ್ದ ನಾರುಮಡಿ ವಸ್ತ್ರಗಳು ಮಾತ್ರ ಅಲ್ಲಿ ಬಿದ್ದಿರುವುದನ್ನು ಕಂಡನು. ಇವೆಲ್ಲಾ ಎಷ್ಟೋ ಆಶ್ಚರ್ಯಕರವಾಗಿದೆ ಎಂದುಕೊಂಡು ಹಿಂದಿರುಗಿದನು.
ಎಮ್ಮಾವು ಗ್ರಾಮದ ಹಾದಿಯಲ್ಲಿ
(ಮಾರ್ಕ. 16:12-13)
13ಅದೇ ದಿನ ಶಿಷ್ಯರಲ್ಲಿ ಇಬ್ಬರು ಜೆರುಸಲೇಮಿಗೆ ಹನ್ನೊಂದು ಕಿಲೊಮೀಟರಿನಷ್ಟು ದೂರದಲ್ಲಿದ್ದ ಎಮ್ಮಾವು ಎಂಬ ಗ್ರಾಮಕ್ಕೆ ಹೋಗುತ್ತಿದ್ದರು. 14ಇತ್ತೀಚೆಗೆ ನಡೆದ ವಿಷಯಗಳನ್ನೆಲ್ಲಾ ಕುರಿತು ಅವರು ಸಂಭಾಷಣೆ ಮಾಡುತ್ತಾ ನಡೆಯುತ್ತಿದ್ದರು. 15ಹೀಗೆ ಮಾತನಾಡಿಕೊಂಡು ಚರ್ಚೆಮಾಡುತ್ತಾ ಹೋಗುತ್ತಿರುವಾಗ, ಯೇಸುಸ್ವಾಮಿಯೇ ಖುದ್ದಾಗಿ ಸಮೀಪಿಸಿ ಅವರ ಜೊತೆ ಸೇರಿಕೊಂಡರು. 16ಆದರೆ ಇವರಾರೆಂದು ಅವರು ಗುರುತು ಹಚ್ಚಲಿಲ್ಲ. ಕಾರಣ - ಶಿಷ್ಯರಿಗೆ ಕಣ್ಣುಕಟ್ಟಿದಂತಾಗಿತ್ತು. 17“ನೀವು ತರ್ಕಮಾಡಿಕೊಂಡು ಹೋಗುತ್ತಿರುವಿರಲ್ಲಾ, ಏನು ವಿಷಯ?” ಎಂದು ಯೇಸು ಕೇಳಿದರು. ಶಿಷ್ಯರು ಸಪ್ಪೆ ಮುಖಮಾಡಿ ನಿಂತರು. 18ಆಗ ಅವರಲ್ಲಿ ಒಬ್ಬನಾದ ಕ್ಲೆಯೋಫ, “ಇತ್ತೀಚೆಗೆ ಜೆರುಸಲೇಮಿನಲ್ಲಿ ಜರುಗಿದ ಘಟನೆಗಳನ್ನು ಪಟ್ಟಣಕ್ಕೆ ಪಟ್ಟಣವೇ ತಿಳಿದಿದೆ; ನಿನಗೊಬ್ಬನಿಗೇ ಅವು ತಿಳಿಯದೆ?” ಎಂದನು. 19“ಏನು ನಡೆಯಿತು?” ಎಂದು ಯೇಸು ಪುನಃ ಕೇಳಿದಾಗ ಆ ಶಿಷ್ಯರಿಬ್ಬರು, “ಇವು ನಜರೇತಿನ ಯೇಸುವಿಗೆ ಸಂಭವಿಸಿದ ಘಟನೆಗಳು. ಅವರು ನಡೆಯಲ್ಲೂ ನುಡಿಯಲ್ಲೂ ದೇವರ ಹಾಗೂ ಸಕಲ ಮಾನವರ ದೃಷ್ಟಿಯಲ್ಲಿ ಪ್ರವಾದಿಯಾಗಿದ್ದರು. 20ನಮ್ಮ ಮುಖ್ಯಯಾಜಕರು ಮತ್ತು ಮುಖಂಡರು ಅವರನ್ನು ಮರಣದಂಡನೆಗೆ ಗುರಿಮಾಡಿಸಿ ಶಿಲುಬೆಗೆ ಜಡಿಸಿದರು. 21ಇಸ್ರಯೇಲನ್ನು ಬಿಡುಗಡೆಮಾಡುವ ಉದ್ಧಾರಕ ಅವರೇ ಎಂದು ನಾವು ನಂಬಿಕೊಂಡಿದ್ದೆವು. ಇಷ್ಟುಮಾತ್ರವಲ್ಲ, ಇದೆಲ್ಲಾ ಸಂಭವಿಸಿ ಇಂದಿಗೆ ಮೂರು ದಿನಗಳು ಆಗಿವೆ. 22ಆದರೂ ನಮ್ಮಲ್ಲಿ ಕೆಲವುಮಂದಿ ಮಹಿಳೆಯರು ಮುಂಜಾನೆ ಸಮಾಧಿಯ ಬಳಿಗೆ ಹೋಗಿದ್ದರು. 23ಅಲ್ಲಿ ಯೇಸುವಿನ ಪಾರ್ಥಿವ ಶರೀರವನ್ನು ಕಾಣಲಿಲ್ಲ. ಹಿಂದಿರುಗಿ ಬಂದು, ‘ನಮಗೆ ದೇವದೂತರು ಪ್ರತ್ಯಕ್ಷರಾದರು; ಇವರು ಯೇಸುಸ್ವಾಮಿ ಸಜೀವದಿಂದ ಇದ್ದಾರೆಂದು ನಮಗೆ ತಿಳಿಸಿದರು,’ ಎಂದು ಹೇಳಿ ನಮ್ಮನ್ನು ದಿಗ್ಭ್ರಾಂತರನ್ನಾಗಿ ಮಾಡಿದರು. 24ನಮ್ಮ ಸಂಗಡಿಗರಲ್ಲಿ ಕೆಲವರು ಸಮಾಧಿಯ ಬಳಿಗೆ ಹೋಗಿ ನೋಡಿದರು; ಮಹಿಳೆಯರು ಹೇಳಿದ್ದೆಲ್ಲಾ ಸರಿಯಾಗಿತ್ತು. ಆದರೆ ಯೇಸುಸ್ವಾಮಿಯನ್ನು ಮಾತ್ರ ಕಾಣಲಿಲ್ಲ,” ಎಂದರು.
25ಆಗ ಯೇಸು, “ಎಂಥ ಮತಿಹೀನರು ನೀವು! ಪ್ರವಾದಿಗಳು ಹೇಳಿರುವುದೆಲ್ಲವನ್ನು ನಂಬುವುದರಲ್ಲಿ ಎಷ್ಟು ಮಂದಮತಿಗಳು ನೀವು! 26ಕ್ರಿಸ್ತನು ಇಂತಹ ಸಂಕಷ್ಟಗಳನ್ನು ಅನುಭವಿಸಿ ತನ್ನ ಮಹಿಮಾಸಿದ್ಧಿಯನ್ನು ಪಡೆಯಬೇಕಿತ್ತು ಅಲ್ಲವೇ?” ಎಂದರು. 27ಅನಂತರ, ಮೋಶೆ ಹಾಗೂ ಪ್ರವಾದಿಗಳೆಲ್ಲರಿಂದ ಆರಂಭಿಸಿ ಎಲ್ಲಾ ಪವಿತ್ರಗ್ರಂಥಗಳಲ್ಲಿ ತಮ್ಮ ವಿಷಯವಾಗಿ ಬರೆದಿರುವುದನ್ನು ಅವರಿಗೆ ವಿವರಿಸಿದರು.
28ಅಷ್ಟರಲ್ಲಿ ಶಿಷ್ಯರು ತಲುಪಬೇಕಾಗಿದ್ದ ಗ್ರಾಮವು ಸಮೀಪಿಸಿತು. ಯೇಸುಸ್ವಾಮಿ ಇನ್ನೂ ಮುಂದಕ್ಕೆ ಸಾಗುವವರಂತೆ ಕಂಡಿತು. 29ಆಗ ಶಿಷ್ಯರು, “ಸಂಜೆಯಾಯಿತು, ಕತ್ತಲಾಗುತ್ತ ಬಂದಿತು; ಬಂದು ನಮ್ಮೊಡನೆ ತಂಗಿರಿ,” ಎಂದು ಒತ್ತಾಯಪಡಿಸಿದರು. ಯೇಸು ಅವರೊಡನೆ ತಂಗಲು ಹೋದರು. 30ಅವರ ಸಂಗಡ ಊಟಕ್ಕೆ ಕುಳಿತಾಗ, ಯೇಸು ರೊಟ್ಟಿಯನ್ನು ತೆಗೆದುಕೊಂಡು, ದೇವರಿಗೆ ಕೃತಜ್ಞತಾಸ್ತೋತ್ರ ಸಲ್ಲಿಸಿ, ಅದನ್ನು ಮುರಿದು ಅವರಿಗೆ ಕೊಟ್ಟರು. 31ಆಗಲೇ ಶಿಷ್ಯರ ಕಣ್ಣುಗಳು ತೆರೆದವು; ಯೇಸುವನ್ನು ಗುರುತುಹಚ್ಚಿದರು. ಆಗ ಯೇಸು ಅವರಿಂದ ಅದೃಶ್ಯರಾದರು. 32ಶಿಷ್ಯರು ಒಬ್ಬರಿಗೊಬ್ಚರು ಮಾತನಾಡಿಕೊಳ್ಳುತ್ತಾ, “ದಾರಿಯಲ್ಲಿ ಇವರು ನಮ್ಮ ಸಂಗಡ ಮಾತನಾಡುತ್ತಾ ಪವಿತ್ರಗ್ರಂಥದ ಅರ್ಥವನ್ನು ನಮಗೆ ವಿವರಿಸುತ್ತಾ ಇದ್ದಾಗ ನಮ್ಮ ಹೃದಯ ಕುತೂಹಲದಿಂದ ಕುದಿಯುತ್ತಾ ಇತ್ತಲ್ಲವೆ?” ಎಂದುಕೊಂಡರು.
33ಒಡನೇ ಅವರು ಅಲ್ಲಿಂದ ಎದ್ದು ಜೆರುಸಲೇಮಿಗೆ ಹಿಂದಿರುಗಿ ಹೋದರು. ಅಲ್ಲಿ ಹನ್ನೊಂದು ಮಂದಿ ಶಿಷ್ಯರೂ ಅವರ ಸಂಗಡಿಗರೂ ಒಟ್ಟುಗೂಡಿದ್ದರು. 34“ಪ್ರಭು ಜೀವಂತರಾಗಿ ಎದ್ದಿರುವುದು ನಿಜ! ಅವರು ಸಿಮೋನನಿಗೆ ಕಾಣಿಸಿಕೊಂಡರು,” ಎಂದು ಅಲ್ಲಿದ್ದವರು ಹೇಳುವುದನ್ನು ಕೇಳಿದರು. 35ಆಗ ಅವರು ತಾವು ದಾರಿಯಲ್ಲಿ ಕಂಡ ವಿಷಯವನ್ನೂ ರೊಟ್ಟಿಮುರಿದು ಕೊಡುವಾಗ ಸ್ವಾಮಿಯನ್ನು ತಾವು ಗುರುತುಹಚ್ಚಿದ ವಿಷಯವನ್ನೂ ಅಲ್ಲಿದ್ದವರಿಗೆ ವರದಿಮಾಡಿದರು.
ಶಿಷ್ಯರಿಗೆ ದಿವ್ಯದರ್ಶನ
(ಮತ್ತಾ. 28:16-20; ಮಾರ್ಕ. 16:14-18; ಯೊವಾ. 20:19-23; ಪ್ರೇ. ಕಾ. 1:6-8)
36ಅವರು ವರದಿಮಾಡುತ್ತಿದ್ದಂತೆ ಯೇಸುಸ್ವಾಮಿಯೇ ಅವರ ಮಧ್ಯೆ ಪ್ರತ್ಯಕ್ಷವಾಗಿ ನಿಂತು, ‘ನಿಮಗೆ ಶಾಂತಿ,’ ಎಂದರು. 37ಅವರೆಲ್ಲರೂ ಚಕಿತರಾಗಿ, ದಿಗಿಲುಗೊಂಡು, ತಾವು ಕಾಣುತ್ತಿರುವುದು ಭೂತವೆಂದು ಭಾವಿಸಿದರು. 38ಆಗ ಯೇಸು, “ಏಕೆ ಕಳವಳಪಡುತ್ತೀರಿ? ನಿಮ್ಮ ಮನಸ್ಸಿನಲ್ಲಿ ಸಂಶಯವೇಕೆ? 39ನನ್ನ ಕೈಗಳನ್ನೂ ನನ್ನ ಕಾಲುಗಳನ್ನೂ ನೋಡಿ, ನಾನೇ ಅಲ್ಲವೇ? ನನ್ನನ್ನು ಮುಟ್ಟಿ ನೋಡಿರಿ, ನೀವು ನನ್ನಲ್ಲಿ ಕಾಣುವಂತೆ, ಮಾಂಸ ಮತ್ತು ಎಲುಬು ಭೂತಕ್ಕೆ ಇರುವುದಿಲ್ಲ,” ಎಂದರು. (40ಇಂತೆಂದ ಮೇಲೆ ತಮ್ಮ ಕೈಗಳನ್ನೂ ಕಾಲುಗಳನ್ನೂ ಅವರಿಗೆ ತೋರಿಸಿದರು). 41ಶಿಷ್ಯರು ಇನ್ನೂ ನಂಬದೆ, ಆನಂದಾಶ್ಚರ್ಯಭರಿತರಾಗಿದ್ದರು. ಆಗ ಯೇಸು, “ನಿಮ್ಮಲ್ಲಿ ತಿನ್ನಲು ಏನಾದರೂ ಇದೆಯೇ?’ ಎಂದು ಕೇಳಿದರು. 42ಹುರಿದ ಮೀನಿನ ತುಂಡು ಒಂದನ್ನು ಶಿಷ್ಯರು ಕೊಟ್ಟರು. 43ಯೇಸು ಅದನ್ನು ತೆಗೆದುಕೊಂಡು ಅವರ ಎದುರಿಗೇ ತಿಂದರು.
ಅಂತಿಮ ಸಂದೇಶ
44ತರುವಾಯ ಯೇಸುಸ್ವಾಮಿ, “ನಾನು ನಿಮ್ಮೊಡನೆ ಇದ್ದಾಗಲೇ ನಿಮಗೆ ತಿಳಿಸಿದ ವಿಷಯ ಇದು: ಮೋಶೆಯ ನಿಯಮದಲ್ಲೂ ಪ್ರವಾದಿಗಳ ಗ್ರಂಥಗಳಲ್ಲೂ ಕೀರ್ತನೆಗಳಲ್ಲೂ ನನ್ನ ವಿಷಯವಾಗಿ ಬರೆದಿರುವುದೆಲ್ಲಾ ನೆರವೇರಲೇಬೇಕಾಗಿತ್ತು,” ಎಂದರು. 45ಆಮೇಲೆ, ಪವಿತ್ರಗ್ರಂಥವನ್ನು ಅವರು ಅರ್ಥಮಾಡಿಕೊಳ್ಳುವಂತೆ ಅವರ ಬುದ್ಧಿಯನ್ನು ವಿಕಾಸಗೊಳಿಸಿದರು. 46ಅನಂತರ, “ಮೊದಲೇ ಬರೆದಿರುವ ಪ್ರಕಾರ ಕ್ರಿಸ್ತನು ಯಾತನೆಯನ್ನು ಅನುಭವಿಸಿ ಸತ್ತು ಮೂರನೆಯ ದಿನ ಪುನರುತ್ಥಾನ ಹೊಂದಬೇಕಾಗಿತ್ತು; 47ಅಲ್ಲದೆ ಜನರು ಪಾಪಪರಿಹಾರ ಪಡೆಯಬೇಕಾದರೆ, ಪಶ್ಚಾತ್ತಾಪಪಟ್ಟು, ಪಾಪಕ್ಕೆ ವಿಮುಖರಾಗಿ, ದೈವಾಭಿಮುಖಿಗಳಾಗಬೇಕೆಂತಲೂ ಈ ಸಂದೇಶವನ್ನು ಜೆರುಸಲೇಮಿನಿಂದ ಮೊದಲ್ಗೊಂಡು ಎಲ್ಲಾ ಜನಾಂಗಗಳಿಗೂ ಆತನ ಹೆಸರಿನಲ್ಲೇ ಪ್ರಕಟಿಸಬೇಕೆಂತಲೂ ಮೊದಲೇ ಲಿಖಿತವಾಗಿತ್ತು. 48ಇದಕ್ಕೆಲ್ಲಾ ನೀವೇ ಸಾಕ್ಷಿಗಳು. 49ನನ್ನ ಪಿತ ವಾಗ್ದಾನ ಮಾಡಿದ ವ್ಯಕ್ತಿಯನ್ನು ನಾನೇ ನಿಮಗೆ ಕಳುಹಿಸಿಕೊಡುವೆನು. ಸ್ವರ್ಗದಿಂದ ಬರುವ ಶಕ್ತಿಯಿಂದ ನೀವು ಭೂಷಿತರಾಗುವ ತನಕ ಈ ಪಟ್ಟಣದಲ್ಲೇ ಕಾದಿರಿ,” ಎಂದು ಹೇಳಿದರು.
ಸ್ವರ್ಗಾರೋಹಣ
(ಮತ್ತಾ. 16:19-20; ಪ್ರೇ. ಕಾ. 1:9-11)
50ಕಟ್ಟಕಡೆಗೆ ಯೇಸುಸ್ವಾಮಿ ಶಿಷ್ಯರನ್ನು ಬೆಥಾನಿಯ ಎಂಬ ಊರಿನವರೆಗೆ ಕರೆದುಕೊಂಡು ಹೋದರು. ಅಲ್ಲಿ ತಮ್ಮ ಕರಗಳನ್ನೆತ್ತಿ ಆಶೀರ್ವದಿಸಿದರು. 51ಆಶೀರ್ವದಿಸುತ್ತಿದ್ದ ಹಾಗೆಯೇ ಅವರನ್ನು ಬೀಳ್ಕೊಟ್ಟರು. (ಮತ್ತು ಸ್ವರ್ಗಕ್ಕೆ ಒಯ್ಯಲ್ಪಟ್ಟರು). 52ಶಿಷ್ಯರು (ಅವರನ್ನು ಆರಾಧಿಸಿ) ಅತ್ಯಾನಂದದಿಂದ ಜೆರುಸಲೇಮಿಗೆ ಹಿಂದಿರುಗಿದರು. 53ಮಹಾದೇವಾಲಯದಲ್ಲಿ ದೇವರನ್ನು ಸತತವಾಗಿ ಸ್ತುತಿಮಾಡಿಕೊಂಡಿದ್ದರು.

Pilihan Saat Ini:

ಲೂಕ. 24: KANCLBSI

Sorotan

Berbagi

Salin

None

Ingin menyimpan sorotan di semua perangkat Anda? Daftar atau masuk