ಯೊವಾನ್ನ 5
5
ಸಬ್ಬತಿನಂದು ಸ್ವಸ್ಥನಾದ ರೋಗಿ
1ಇದಾದ ಮೇಲೆ ಯೆಹೂದ್ಯರ ಹಬ್ಬ ಬಂದಿತು. ಯೇಸು ಸ್ವಾಮಿ ಜೆರುಸಲೇಮಿಗೆ ತೆರಳಿದರು. 2ಅಲ್ಲಿ, ‘ಕುರಿಬಾಗಿಲು’ ಎಂಬ ಸ್ಥಳದ ಬಳಿ ಐದು ಮಂಟಪಗಳಿಂದ ಕೂಡಿದ ಒಂದು ಕೊಳವಿದೆ. ಅದನ್ನು ಹಿಬ್ರಿಯ ಭಾಷೆಯಲ್ಲಿ ‘ಬೆತ್ಸಥ’ ಎಂದು ಕರೆಯುತ್ತಾರೆ. 3-4ಕುರುಡರು, ಕುಂಟರು, ಪಾರ್ಶ್ವವಾಯು ಪೀಡಿತರು ಮೊದಲಾದ ಅನೇಕ ರೋಗಿಗಳು ಆ ಮಂಟಪಗಳಲ್ಲಿ ಬಿದ್ದುಕೊಳ್ಳುತ್ತಾ ಇದ್ದರು.#5:3-4 ಕೆಲವು ಪ್ರತಿಗಳಲ್ಲಿ : 4 ನೀರು ಉಕ್ಕುವುದನ್ನೇ ಅವರು ಕಾದು ನೋಡುತ್ತಿದ್ದರು. ಕಾರಣ - ಕೆಲವೊಮ್ಮೆ ದೇವದೂತನು ಇಳಿದುಬಂದು ನೀರನ್ನು ಕದಡಿಸುತ್ತಿದ್ದನು. ಕದಡಿದೊಡನೆ ಮೊತ್ತ ಮೊದಲು ಕೊಳಕ್ಕಿಳಿದವನು ಯಾವ ರೋಗದಿಂದ ನರಳುತ್ತಿದ್ದರೂ ಗುಣಹೊಂದುತ್ತಿದ್ದನು. 5ಮೂವತ್ತೆಂಟು ವರ್ಷ ಕಾಯಿಲೆಯಿಂದ ನರಳುತ್ತಿದ್ದ ಒಬ್ಬ ರೋಗಿ ಅಲ್ಲಿ ಮಲಗಿದ್ದನು. 6ಯೇಸು ಅವನನ್ನು ನೋಡಿ, ದೀರ್ಘಕಾಲದಿಂದ ಅವನು ಹಾಗೆ ಬಿದ್ದುಕೊಂಡಿರುವುದನ್ನು ತಿಳಿದು, “ನಿನಗೆ ಗುಣಹೊಂದಲು ಮನಸ್ಸಿದೆಯೇ?’ ಎಂದು ಕೇಳಿದರು. 7“ಸ್ವಾಮೀ, ನೀರು ಉಕ್ಕಿದಾಗ ನನ್ನನ್ನು ಕೊಳಕ್ಕಿಳಿಸಲು ಸಹಾಯಕರು ಇರುವುದಿಲ್ಲ; ನಾನು ಹೋಗುವಷ್ಟರಲ್ಲೇ ಬೇರೆ ಯಾರಾದರೂ ಇಳಿದುಬಿಡುತ್ತಾರೆ,” ಎಂದು ಉತ್ತರಿಸಿದ ಆ ರೋಗಿ. 8ಯೇಸು ಅವನಿಗೆ, “ಎದ್ದು ನಿಲ್ಲು, ನಿನ್ನ ಹಾಸಿಗೆಯನ್ನು ಸುತ್ತಿಕೊಂಡು ನಡೆ,” ಎಂದರು. 9ಆ ಕ್ಷಣವೇ ಅವನು ಗುಣಹೊಂದಿ, ತನ್ನ ಹಾಸಿಗೆಯನ್ನು ಸುತ್ತಿಕೊಂಡು ನಡೆಯತೊಡಗಿದನು.
10ಅದು ಸಬ್ಬತ್ತಿನ ದಿನವಾಗಿತ್ತು. ಆದುದರಿಂದ ಯೆಹೂದ್ಯ ಅಧಿಕಾರಿಗಳು ಗುಣಹೊಂದಿದ ಆ ಮನುಷ್ಯನಿಗೆ, “ಇಂದು ಸಬ್ಬತ್ತಿನ ದಿನ, ನೀನು ಹಾಸಿಗೆಯನ್ನು ಎತ್ತಿಕೊಂಡು ನಡೆಯುವುದು ನಿಷಿದ್ಧ,” ಎಂದು ಹೇಳಿದರು. 11ಅದಕ್ಕೆ ಅವನು: “ನನ್ನನ್ನು ಗುಣಪಡಿಸಿದವರೇ, ‘ನಿನ್ನ ಹಾಸಿಗೆಯನ್ನು ಎತ್ತಿಕೊಂಡು ನಡೆ’ ಎಂದು ಹೇಳಿದರು,” ಎಂದು ಉತ್ತರಕೊಟ್ಟನು. 12ಅಧಿಕಾರಿಗಳು, “ಅದನ್ನು ಎತ್ತಿಕೊಂಡು ನಡೆ ಎಂದ ಅವನು ಯಾರು?” ಎಂದು ಪ್ರಶ್ನಿಸಿದರು. 13ತನ್ನನ್ನು ಗುಣಪಡಿಸಿದವರು ಯಾರೆಂದು ಅವನಿಗೆ ತಿಳಿದಿರಲಿಲ್ಲ; ಅಲ್ಲದೆ ಜನಸಂದಣಿಯ ನಿಮಿತ್ತ ಯೇಸು ಆಗಲೇ ಮರೆಯಾಗಿಬಿಟ್ಟಿದ್ದರು.
14ಅನಂತರ ದೇವಾಲಯದಲ್ಲಿ ಯೇಸು ಆ ಮನುಷ್ಯನನ್ನು ಕಂಡು, “ನೋಡು, ನೀನು ಗುಣಹೊಂದಿರುವೆ; ಇನ್ನುಮೇಲೆ ಪಾಪಮಾಡುವುದನ್ನು ಬಿಟ್ಟುಬಿಡು. ಇಲ್ಲದಿದ್ದರೆ ನಿನ್ನ ಗತಿ ಇನ್ನಷ್ಟು ಚಿಂತಾಜನಕವಾದೀತು,” ಎಂದರು.
15ಆ ಮನುಷ್ಯ ಅಲ್ಲಿಂದ ಯೆಹೂದ್ಯರ ಬಳಿಗೆ ಹೋಗಿ, “ನನ್ನನ್ನು ಗುಣಪಡಿಸಿದವನು ಯೇಸುವೇ,” ಎಂದು ತಿಳಿಸಿದನು. 16ಯೇಸು ಇದನ್ನು ಸಬ್ಬತ್ ದಿನದಲ್ಲಿ ಮಾಡಿದ್ದರಿಂದ ಯೆಹೂದ್ಯರು ಅವರಿಗೆ ಕಿರುಕುಳಕೊಡಲು ತೊಡಗಿದರು. 17ಅದಕ್ಕೆ ಉತ್ತರವಾಗಿ ಯೇಸು, “ನನ್ನ ಪಿತ ಸತತವೂ ಕಾರ್ಯನಿರತರು. ಅವರಂತೆಯೇ ನಾನು ಸದಾ ಕಾರ್ಯನಿರತನಾಗಿದ್ದೇನೆ,” ಎಂದು ನುಡಿದರು. 18ಯೇಸು ಸಬ್ಬತ್ತಿನ ನಿಯಮವನ್ನು ಮುರಿದುದೇ ಅಲ್ಲದೆ, ದೇವರನ್ನು ತನ್ನ ಪಿತನೆಂದು ಹೇಳಿಕೊಳ್ಳುತ್ತಾ, ತನ್ನನ್ನೇ ದೇವರಿಗೆ ಸರಿಸಮ ಮಾಡಿಕೊಳ್ಳುತ್ತಿದ್ದಾನೆಂದು ಯೆಹೂದ್ಯರು ಅವರನ್ನು ಕೊಲ್ಲಲು ಮತ್ತಷ್ಟು ಹವಣಿಸಿದರು.
ದೈವಪುತ್ರನಿಗೆ ಸರ್ವಾಧಿಕಾರ
19ಯೇಸು ಸ್ವಾಮಿ ಅವರನ್ನು ಉದ್ದೇಶಿಸಿ ಹೀಗೆಂದರು: “ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ; ಪುತ್ರನು ತನ್ನಷ್ಟಕ್ಕೆ ತಾನೇ ಏನೂ ಮಾಡಲಾರನು; ಪಿತನು ಮಾಡುವುದನ್ನು ಕಂಡು ತಾನೂ ಹಾಗೆಯೇ ಮಾಡುತ್ತಾನೆ. ಪಿತನು ಮಾಡುವುದನ್ನೇ ಪುತ್ರನೂ ಮಾಡುವುದು. 20ಪುತ್ರನೆಂದರೆ ಪಿತನಿಗೆ ಪ್ರೀತಿ. ಆದುದರಿಂದ ತಾವು ಮಾಡುವುದನ್ನೆಲ್ಲಾ ಪುತ್ರನಿಗೆ ತೋರಿಸುತ್ತಾರೆ. ಇದಲ್ಲದೆ ಇನ್ನೂ ಎಷ್ಟೋ ಮಿಗಿಲಾದ ಕಾರ್ಯಗಳನ್ನು ಪುತ್ರನಿಗೆ ತೋರಿಸುತ್ತಾರೆ. ಅವುಗಳನ್ನು ಕಂಡು ನೀವು ಬೆರಗಾಗುವಿರಿ. 21ಪಿತನು ಸತ್ತವರನ್ನು ಎಬ್ಬಿಸಿ ಅವರಿಗೆ ಜೀವವನ್ನು ಕೊಡುವಂತೆಯೇ ಪುತ್ರನೂ ತನಗೆ ಬೇಕಾದವರಿಗೆ ಜೀವವನ್ನು ಕೊಡುತ್ತಾನೆ. 22ಅಲ್ಲದೆ, ಪಿತನು ಯಾರನ್ನೂ ತೀರ್ಪಿಗೆ ಗುರಿಮಾಡುವುದಿಲ್ಲ. ತೀರ್ಪುಕೊಡುವ ಅಧಿಕಾರವನ್ನೆಲ್ಲಾ ಅವರು ಪುತ್ರನಿಗೆ ಕೊಟ್ಟಿದ್ದಾರೆ. 23ಏಕೆಂದರೆ, ತಮ್ಮನ್ನು ಗೌರವಿಸುವಂತೆಯೇ ಜನರೆಲ್ಲರು ಪುತ್ರನನ್ನು ಗೌರವಿಸಬೇಕೆಂಬುದು ಅವರ ಬಯಕೆ. ಪುತ್ರನನ್ನು ಗೌರವಿಸದವನು ಆತನನ್ನು ಕಳುಹಿಸಿದ ಪಿತನನ್ನೂ ಗೌರವಿಸುವುದಿಲ್ಲ.
24“ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ನನ್ನ ಮಾತಿಗೆ ಕಿವಿಗೊಟ್ಟು ನನ್ನನ್ನು ಕಳುಹಿಸಿದ ಆತನಲ್ಲಿ ವಿಶ್ವಾಸವಿಡುವವನು ನಿತ್ಯಜೀವವನ್ನು ಪಡೆದಿರುತ್ತಾರೆ. ಅವನು ಖಂಡನೆಗೆ ಗುರಿ ಆಗನು; ಅವನು ಈಗಾಗಲೇ ಸಾವನ್ನು ದಾಟಿ ಜೀವವನ್ನು ಸೇರಿರುತ್ತಾನೆ. 25ಸತ್ಯವಾಗಿ ನಿಮಗೆ ಮತ್ತೆ ಹೇಳುತ್ತೇನೆ; ಸತ್ತವರು ದೇವರ ಪುತ್ರನ ಧ್ವನಿಯನ್ನು ಕೇಳುವ ಕಾಲ ಬರುವುದು; ಈಗಾಗಲೇ ಬಂದಿದೆ; ಈ ಧ್ವನಿಯನ್ನು ಕೇಳುವವರು ಜೀವಿಸುವರು. 26ಪಿತನು ತಾವೇ ಸ್ವಯಂ ಜೀವಮೂಲವಾಗಿರುವಂತೆ ಪುತ್ರನು ಸಹ ಸ್ವಯಂ ಜೀವಮೂಲವಾಗಿರುವಂತೆ ಕರುಣಿಸಿದ್ದಾರೆ. 27ಅದೂ ಅಲ್ಲದೆ, ಆತನು ನರಪುತ್ರನಾಗಿರುವ ಕಾರಣ ತೀರ್ಪನ್ನು ಕೊಡುವ ಹಕ್ಕನ್ನು ಆತನಿಗೇ ದಯಪಾಲಿಸಿದ್ದಾರೆ. 28ಇದನ್ನು ಕೇಳಿ ನೀವು ಬೆರಗಾಗುವುದು ಬೇಡ. ಸತ್ತು ಸಮಾಧಿಯಲ್ಲಿರುವವರೆಲ್ಲರೂ ಆತನ ಧ್ವನಿಯನ್ನು ಕೇಳುವ ಕಾಲ ಬರುವುದು. 29ಹಾಗೆ ಕೇಳಿದವರೆಲ್ಲಾ ಸಮಾಧಿಯನ್ನು ಬಿಟ್ಟು ಎದ್ದುಬರುವರು; ಸಜ್ಜನರು ಸಜ್ಜೀವಕ್ಕಾಗಿ ಪುನರುತ್ಥಾನರಾಗುವರು, ದುರ್ಜನರು ದಂಡನಾ ತೀರ್ಪಿಗಾಗಿ ಪುನರುತ್ಥಾನ ಆಗುವರು.
ಯೇಸುವಿನ ಪರವಾಗಿ ಸಾಕ್ಷ್ಯಗಳು
30“ನನ್ನಷ್ಟಕ್ಕೆ ನಾನೇ ಏನೂ ಮಾಡಲಾರೆ. ಪಿತನು ನನಗೆ ತಿಳಿಸಿದ ಪ್ರಕಾರ ನಾನು ತೀರ್ಪು ಕೊಡುತ್ತೇನೆ. ಈ ನನ್ನ ತೀರ್ಪು ನ್ಯಾಯಬದ್ಧ ಆದುದು. ಏಕೆಂದರೆ, ನಾನು ನನ್ನ ಸ್ವಂತ ಇಚ್ಛೆಯನ್ನು ನೆರವೇರಿಸದೆ ಪಿತನ ಚಿತ್ತವನ್ನೇ ನೆರವೇರಿಸಲು ಆಶಿಸುತ್ತೇನೆ.
31“ನನ್ನ ಪರವಾಗಿ ನಾನೇ ಸಾಕ್ಷಿನೀಡಿದರೆ ನನ್ನ ಸಾಕ್ಷಿಗೆ ಬೆಲೆಯಿರದು. 32ನನ್ನ ಪರವಾಗಿ ಸಾಕ್ಷಿ ನೀಡುವಾತನು ಇನ್ನೊಬ್ಬನಿದ್ದಾನೆ. ಆತನು ನೀಡುವ ಸಾಕ್ಷ್ಯಕ್ಕೆ ಬೆಲೆಯಿದೆ ಎಂದು ನಾನು ಬಲ್ಲೆ. 33ನೀವೇ ಯೊವಾನ್ನನ ಬಳಿಗೆ ದೂತರನ್ನು ಕಳುಹಿಸಿದ್ದಿರಿ. ಆತನು ಸತ್ಯವನ್ನು ಕುರಿತು ಸಾಕ್ಷಿ ಹೇಳಿದ್ದಾನೆ. 34ನನಗೆ ಮಾನವ ಸಾಕ್ಷಿ ಬೇಕೆಂದು ಅಲ್ಲ; ಆದರೆ ಇದನ್ನೆಲ್ಲಾ ನಿಮ್ಮ ಉದ್ಧಾರಕ್ಕೆಂದು ನಾನು ಹೇಳುತ್ತಿದ್ದೇನೆ. 35ಯೊವಾನ್ನನು ಉಜ್ವಲವಾಗಿ ಉರಿಯುವ ದೀಪದಂತೆ ಇದ್ದನು. ಆ ಬೆಳಕಿನಲ್ಲಿ ನೀವು ಸ್ವಲ್ಪಕಾಲ ನಲಿದಾಡಿದಿರಿ. 36ಯೊವಾನ್ನನು ನೀಡಿದ ಸಾಕ್ಷ್ಯಕ್ಕಿಂತಲೂ ಮಿಗಿಲಾದ ಸಾಕ್ಷ್ಯ ನನಗುಂಟು; ನಾನು ಸಾಧಿಸುತ್ತಿರುವ ಸುಕೃತ್ಯಗಳೇ, ಅಂದರೆ, ಪಿತನು ನನಗೆ ಮಾಡಿಮುಗಿಸಲು ಕೊಟ್ಟ ಕಾರ್ಯಗಳೇ, ನಾನು ಪಿತನಿಂದ ಬಂದವನೆಂದು ನನ್ನ ಪರವಾಗಿ ಸಾಕ್ಷಿಕೊಡುತ್ತವೆ. 37ನನ್ನನ್ನು ಕಳುಹಿಸಿದ ಪಿತನೇ ನನ್ನ ಪರವಾಗಿ ಸಾಕ್ಷಿನೀಡಿದ್ದಾರೆ. ನೀವಾದರೋ ಅವರ ಧ್ವನಿಯನ್ನು ಎಂದೂ ಕೇಳಿಲ್ಲ, ಅವರ ದರ್ಶನವನ್ನು ಎಂದೂ ಕಂಡಿಲ್ಲ. 38ಅವರ ಸಂದೇಶ ನಿಮ್ಮಲ್ಲಿ ನೆಲಸಿಲ್ಲ. ಏಕೆಂದರೆ, ಅವರು ಕಳುಹಿಸಿದವನಲ್ಲಿ ನೀವು ವಿಶ್ವಾಸವಿಡಲಿಲ್ಲ. 39ಪವಿತ್ರಗ್ರಂಥದಿಂದಲೇ ನಿತ್ಯಜೀವ ಲಭಿಸುವುದೆಂದು ಭಾವಿಸಿ, ನೀವು ಅದನ್ನು ಪರಿಶೀಲಿಸಿ ನೋಡುತ್ತೀರಿ. ಆ ಗ್ರಂಥವು ಸಹ ನನ್ನ ಪರವಾಗಿ ಸಾಕ್ಷಿಹೇಳುತ್ತದೆ. 40ಆದರೂ ನಿತ್ಯಜೀವವನ್ನು ಪಡೆಯುವುದಕ್ಕಾಗಿ ನನ್ನ ಬಳಿಗೆ ಬರಲು ನಿಮಗೆ ಇಷ್ಟವಿಲ್ಲ.
41“ನಾನು ಮನುಷ್ಯರಿಂದ ಬರುವ ಗೌರವವನ್ನು ಅರಸುವುದಿಲ್ಲ. 42ದೇವರ ಮೇಲೆ ನಿಮಗೆ ಪ್ರೀತಿಯಿಲ್ಲವೆಂದು ನಾನು ಚೆನ್ನಾಗಿ ಬಲ್ಲೆ. 43ನಾನು ಬಂದಿರುವುದು ಪಿತನ ಹೆಸರಿನಲ್ಲೇ. ಆದರೂ ನೀವು ನನ್ನನ್ನು ಬರಮಾಡಿಕೊಳ್ಳುವುದಿಲ್ಲ. ಬೇರೊಬ್ಬನು ತನ್ನ ಸ್ವಂತ ಹೆಸರಿನಲ್ಲಿ ಬಂದನೆಂದರೆ ಅಂಥವನನ್ನು ನೀವು ಬರಮಾಡಿಕೊಳ್ಳುತ್ತೀರಿ. 44ಕಾರಣ, ದೇವರಿಂದ ಸಿಗುವಂಥ ಗೌರವವನ್ನು ಅರಸದೆ ನಿಮ್ಮ ನಿಮ್ಮಲ್ಲೇ ಪರಸ್ಪರ ಗೌರವವನ್ನು ಬಯಸುತ್ತೀರಿ. ಹೀಗಿರುವಲ್ಲಿ ನಿಮ್ಮಲ್ಲಿ ವಿಶ್ವಾಸಮೂಡಲು ಹೇಗೆ ತಾನೆ ಸಾಧ್ಯ? ಪಿತನ ಮುಂದೆ ನಾನು ನಿಮ್ಮನ್ನು ಆಪಾದಿಸುತ್ತಿರುವೆನೆಂದು ಎಣಿಸಬೇಡಿ. 45ಆಪಾದಿಸುವವನು ಒಬ್ಬನಿದ್ದಾನೆ. ಆತನೇ ನೀವು ಆಶ್ರಯಿಸಿಕೊಂಡಿರುವ ಮೋಶೆ. 46ಮೋಶೆಯಲ್ಲಿ ನಿಮಗೆ ವಿಶ್ವಾಸ ಇದ್ದಿದ್ದರೆ ನನ್ನಲ್ಲಿ ವಿಶ್ವಾಸ ಇಡುತ್ತಿದ್ದಿರಿ. ಏಕೆಂದರೆ, ಆತನು ಬರೆದುದು ನನ್ನನ್ನು ಕುರಿತೇ. 47ಆತನೇ ಬರೆದುದರಲ್ಲಿ ನಿಮಗೆ ನಂಬಿಕೆಯಿಲ್ಲವೆಂದ ಮೇಲೆ ನನ್ನ ಮಾತಿನಲ್ಲಿ ನಿಮಗೆ ಹೇಗೆ ನಂಬಿಕೆ ಹುಟ್ಟೀತು?”
Pilihan Saat Ini:
ಯೊವಾನ್ನ 5: KANCLBSI
Sorotan
Berbagi
Salin
Ingin menyimpan sorotan di semua perangkat Anda? Daftar atau masuk
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.