ಆದಿಕಾಂಡ 12
12
ಅಬ್ರಾಮನು ದೇವರ ಆಜ್ಞೆಯನ್ನು ಹೊಂದಿ ಸ್ವದೇಶದಿಂದ ಕಾನಾನ್‍ದೇಶಕ್ಕೆ ಬಂದದ್ದು
1ಯೆಹೋವನು ಅಬ್ರಾಮನಿಗೆ - ನೀನು ಸ್ವದೇಶವನ್ನೂ ಬಂಧು ಬಳಗವನ್ನೂ ತಂದೆಯ ಮನೆಯನ್ನೂ ಬಿಟ್ಟು ನಾನು ತೋರಿಸುವ ದೇಶಕ್ಕೆ ಹೊರಟುಹೋಗು. 2ನಾನು ನಿನ್ನನ್ನು ದೊಡ್ಡ ಜನಾಂಗವಾಗುವಂತೆ ಮಾಡಿ ಆಶೀರ್ವದಿಸಿ ನಿನ್ನ ಹೆಸರನ್ನು ಪ್ರಖ್ಯಾತಿಗೆ ತರುವೆನು. 3ನೀನು ಆಶೀರ್ವಾದನಿಧಿಯಾಗುವಿ. ನಿನ್ನನ್ನು ಹರಸುವವರನ್ನು ಹರಸುವೆನು; ನಿನ್ನನ್ನು ಶಪಿಸುವವರನ್ನು ಶಪಿಸುವೆನು. ನಿನ್ನ#12.3 ಅಥವಾ: ಭೂಲೋಕದ ಎಲ್ಲಾ ಕುಲದವರೂ ನಿನಗಿರುವಂಥ ಆಶೀರ್ವಾದವೇ ತಮಗೂ ಆಗಬೇಕೆಂದು ಕೋರುವರು. ಆದಿ. 18.18; 22.18; 26.5; 28.14; ಅ. ಕೃ. 3.25; ಗಲಾ. 3.8,16. ಮೂಲಕ ಭೂಲೋಕದ ಎಲ್ಲಾ ಕುಲದವರಿಗೂ ಆಶೀರ್ವಾದವುಂಟಾಗುವದು ಎಂದು ಹೇಳಿದನು.
4ಯೆಹೋವನು ಹೇಳಿದ ಮೇರೆಗೆ ಅಬ್ರಾಮನು ಹೊರಟುಹೋದನು; ಲೋಟನೂ ಸಂಗಡ ಹೋದನು. ಅಬ್ರಾಮನು ಖಾರಾನ್ ಪಟ್ಟಣವನ್ನು ಬಿಟ್ಟು ಹೊರಟಾಗ ಎಪ್ಪತ್ತೈದು ವರುಷದವನಾಗಿದ್ದನು. 5ಅವನು ತನ್ನ ಹೆಂಡತಿಯಾದ ಸಾರಯಳನ್ನೂ ತನ್ನ ತಮ್ಮನ ಮಗನಾದ ಲೋಟನನ್ನೂ ತಾನೂ ಲೋಟನೂ ಖಾರಾನಿನಲ್ಲಿ ಸಂಪಾದಿಸಿದ್ದ ಎಲ್ಲಾ ಸೊತ್ತನ್ನೂ ದಾಸದಾಸಿಯರನ್ನೂ ತೆಗೆದುಕೊಂಡು ಹೋಗಿ ಕಾನಾನ್ ದೇಶಕ್ಕೆ ಸೇರಿದನು.
6ಅಬ್ರಾಮನು ಆ ದೇಶದಲ್ಲಿ ಸಂಚರಿಸುತ್ತಾ ಶೆಕೆಮ್ ಕ್ಷೇತ್ರದಲ್ಲಿರುವ ಮೋರೆಯೆಂಬ#12.6 ಅಂದರೆ ಬೋಧಕನ ವೃಕ್ಷದ; ಆದಿ. 13.18. ವೃಕ್ಷದ ಬಳಿಗೆ ಬಂದನು. ಆ ಕಾಲದಲ್ಲಿ ಕಾನಾನ್ಯರು ದೇಶದಲ್ಲಿದ್ದರು. 7ಅಲ್ಲಿ ಯೆಹೋವನು ಅಬ್ರಾಮನಿಗೆ ದರ್ಶನಕೊಟ್ಟು - ನಾನು ಈ ದೇಶವನ್ನು ನಿನ್ನ ಸಂತಾನಕ್ಕೆ ಕೊಡುವೆನು ಅಂದನು. ತನಗೆ ದರ್ಶನಕೊಟ್ಟ ಯೆಹೋವನಿಗೆ ಅಬ್ರಾಮನು ಯಜ್ಞವೇದಿಯನ್ನು ಕಟ್ಟಿಸಿದನು.
8ಅವನು ಅಲ್ಲಿಂದ ಹೊರಟು ಬೇತೇಲಿಗೆ ಮೂಡಲಲ್ಲಿರುವ ಗುಡ್ಡಕ್ಕೆ ಬಂದು ತನ್ನ ಗುಡಾರವನ್ನು ಹಾಕಿಸಿ ಇಳುಕೊಂಡನು; ಪಶ್ಚಿಮಕ್ಕೆ ಬೇತೇಲೂ ಪೂರ್ವಕ್ಕೆ ಆಯಿ ಎಂಬ ಊರೂ ಇದ್ದವು. ಅಲ್ಲಿಯೂ ಯೆಹೋವನಿಗೋಸ್ಕರ ಯಜ್ಞವೇದಿಯನ್ನು ಕಟ್ಟಿಸಿ ಆತನ ಹೆಸರನ್ನು ಹೇಳಿಕೊಂಡು ಆರಾಧಿಸಿದನು.
ಐಗುಪ್ತದೇಶದಲ್ಲಿ ಅಬ್ರಾಮನ ಹೆಂಡತಿಯ ವಿಷಯವಾಗಿ ನಡೆದ ಸಂಗತಿ
9ತರುವಾಯ ಅಬ್ರಾಮನು ಅಲ್ಲಿಂದ ಹೊರಟು ಕಾನಾನ್‍ದೇಶದ ದಕ್ಷಿಣಸೀಮೆಗೆ ಮುಂದೆ ಮುಂದೆ ಹೋಗುತ್ತಾ ಇದ್ದನು. 10ಆ ದೇಶದಲ್ಲಿ ಘೋರ ಕ್ಷಾಮವಿದ್ದದರಿಂದ ಅಲ್ಲಿರದೆ, ಐಗುಪ್ತ ದೇಶದಲ್ಲಿ ಕೆಲವು ಕಾಲ ಇರಬೇಕೆಂದು ಆ ಬೆಟ್ಟದ ಸೀಮೆಯಿಂದ ಇಳಿದುಹೋದನು. 11ಅವನು ಐಗುಪ್ತದೇಶದ ಹತ್ತಿರಕ್ಕೆ ಬಂದಾಗ, ತನ್ನ ಹೆಂಡತಿಯಾದ ಸಾರಯಳಿಗೆ - 12ಕೇಳು, ನೀನು ಸುಂದರಿ ಎಂದು ನಾನು ಬಲ್ಲೆ; ಐಗುಪ್ತದೇಶದವರು ನಿನ್ನನ್ನು ಕಂಡು - ಈಕೆಯು ಇವನ ಹೆಂಡತಿ ಎಂದು ನನ್ನನ್ನು ಕೊಂದು ನಿನ್ನನ್ನು ಉಳಿಸಾರು. 13ಆದಕಾರಣ ನೀನು ನನಗೆ ತಂಗಿಯಾಗಬೇಕೆಂದು ಅವರಿಗೆ ಹೇಳು; ಹೀಗೆ ಹೇಳಿದರೆ ನಿನ್ನ ನಿವಿುತ್ತ ನನಗೆ ಹಿತವಾಗುವದು, ನಾನು ನಿನ್ನ ದೆಸೆಯಿಂದ ಸಾಯದೆ ಬದುಕುವೆನು ಎಂದು ಹೇಳಿದನು. 14ಅಬ್ರಾಮನು ಐಗುಪ್ತದೇಶಕ್ಕೆ ಬಂದಾಗ ಐಗುಪ್ತ್ಯರು ಅವನ ಸಂಗಡ ಇದ್ದ ಸ್ತ್ರೀಯನ್ನು ನೋಡಿ ಬಹು ಸುಂದರಿಯೆಂದರು. 15ಫರೋಹನ ಪ್ರಧಾನರು ಆಕೆಯನ್ನು ನೋಡಿ ಬಂದು ಅವನ ಮುಂದೆ ಹೊಗಳಲಾಗಿ 16ಫರೋಹನು ಆ ಸ್ತ್ರೀಯನ್ನು ಅರಮನೆಗೆ ಕರತರಿಸಿ ಆಕೆಯ ನಿವಿುತ್ತ ಅಬ್ರಾಮನಿಗೆ ಉಪಕಾರ ಮಾಡಿದನು. ಆಗ ಅಬ್ರಾಮನಿಗೆ ಕುರಿದನಗಳೂ ಗಂಡು ಹೆಣ್ಣು ಕತ್ತೆಗಳೂ ದಾಸದಾಸಿಯರೂ ಒಂಟೆಗಳೂ ದೊರೆತವು. 17ಆದರೆ ಯೆಹೋವನು ಫರೋಹನಿಗೂ ಅವನ ಮನೆಯವರಿಗೂ ಅಬ್ರಾಮನ ಹೆಂಡತಿಯಾದ ಸಾರಯಳ ನಿವಿುತ್ತ ಬಹಳ ಉಪದ್ರವಗಳನ್ನು ಉಂಟುಮಾಡಿ ಬಾಧಿಸಿದನು. 18ಆಗ ಫರೋಹನು ಅಬ್ರಾಮನನ್ನು ಕರಿಸಿ - ಯಾಕೆ ಹೀಗೆ ಮಾಡಿದೆ? ಹೆಂಡತಿಯೆಂದು ಯಾಕೆ ನನಗೆ ತಿಳಿಸಲಿಲ್ಲ? 19ತಂಗಿಯೆಂದು ಯಾಕೆ ಹೇಳಿದೆ? ಹೀಗೆ ಹೇಳಿದ್ದರಿಂದ ಆಕೆಯನ್ನು ಹೆಂಡತಿಯಾಗಲಿಕ್ಕೆ ತೆಗೆದುಕೊಂಡೆನಲ್ಲಾ. ಇಗೋ ನಿನ್ನ ಹೆಂಡತಿ; ಕರೆದುಕೊಂಡು ಹೋಗು ಎಂದು ಹೇಳಿ 20ಅವನ ವಿಷಯವಾಗಿ ತನ್ನ ಸೇವಕರಿಗೆ ಅಪ್ಪಣೆಕೊಡಲು ಅವರು ಅಬ್ರಾಮನನ್ನೂ ಅವನ ಹೆಂಡತಿಯನ್ನೂ ಅವನಿಗಿದ್ದ ಸರ್ವಸ್ವಸಹಿತವಾಗಿ ಸಾಗಕಳುಹಿಸಿದರು.
Trenutno odabrano:
ಆದಿಕಾಂಡ 12: KANJV-BSI
Istaknuto
Podijeli
Kopiraj
Želiš li svoje istaknute stihove spremiti na sve svoje uređaje? Prijavi se ili registriraj
Kannada J.V. Bible © The Bible Society of India, 2016.
Used by permission. All rights reserved worldwide.