ಲೂಕ. 17

17
ಪಾಪಪ್ರಚೋದಕನಿಗೆ ಧಿಕ್ಕಾರ; ಪಶ್ಚಾತ್ತಾಪಕ್ಕೆ ಕ್ಷಮೆ
(ಮತ್ತಾ. 18:6-7,21-22; ಮಾರ್ಕ. 9:42)
1ಯೇಸುಸ್ವಾಮಿ ತಮ್ಮ ಶಿಷ್ಯರನ್ನು ಉದ್ದೇಶಿಸಿ, “ಪಾಪಪ್ರಚೋದನೆಗಳು ಬಂದೇ ಬರುತ್ತವೆ. ಆದರೆ ಅವು ಯಾರಿಂದ ಬರುತ್ತವೋ ಅವನಿಗೆ ಧಿಕ್ಕಾರ! 2ಅಂಥವನು ಈ ಚಿಕ್ಕವರಲ್ಲಿ ಒಬ್ಬನಿಗೆ ಪಾಪಕ್ಕೆ ಕಾರಣನಾಗುವುದಕ್ಕಿಂತ ಬೀಸುವ ಕಲ್ಲನ್ನು ಕುತ್ತಿಗೆಗೆ ಬಿಗಿಸಿಕೊಂಡು ಸಮುದ್ರದಲ್ಲಿ ದಬ್ಬಿಸಿಕೊಳ್ಳುವುದೇ ಲೇಸು. 3ನೀವಾದರೋ ಎಚ್ಚರಿಕೆಯಿಂದಿರಿ!
“ನಿನ್ನ ಸಹೋದರನು ತಪ್ಪುಮಾಡಿದರೆ ಅವನನ್ನು ಖಂಡಿಸು; ಪಶ್ಚಾತ್ತಾಪಪಟ್ಟರೆ ಕ್ಷಮಿಸಿಬಿಡು. 4ಅವನು ದಿನಕ್ಕೆ ಏಳುಸಾರಿ ನಿನಗೆ ವಿರುದ್ಧ ತಪ್ಪುಮಾಡಿ ಪ್ರತಿಯೊಂದು ಸಾರಿಯೂ ಪಶ್ಚಾತ್ತಾಪಪಟ್ಟು ನಿನ್ನ ಬಳಿಗೆ ಬಂದು, ‘ಕ್ಷಮಿಸು,’ ಎಂದು ಕೇಳಿಕೊಂಡರೆ ನೀನು ಅವನನ್ನು ಕ್ಷಮಿಸಲೇಬೇಕು,’ ಎಂದರು.
ಸಶಕ್ತ ವಿಶ್ವಾಸ
5“ಸ್ವಾಮೀ, ನಮ್ಮ ವಿಶ್ವಾಸವನ್ನು ಹೆಚ್ಚಿಸಿರಿ,” ಎಂದು ಪ್ರೇಷಿತರು ಕೇಳಿಕೊಂಡರು. 6ಆಗ ಯೇಸುಸ್ವಾಮಿ, “ಸಾಸಿವೆಕಾಳಿನಷ್ಟು ವಿಶ್ವಾಸ ನಿಮ್ಮಲ್ಲಿದ್ದು, ನೀವು ಈ ಅತ್ತಿಮರಕ್ಕೆ, ‘ನೀನು ಬೇರುಸಹಿತ ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ನಾಟಿಕೊ,’ ಎಂದು ಆಜ್ಞಾಪಿಸಿದ್ದೇ ಆದರೆ ಅದು ನಿಮಗೆ ವಿಧೇಯವಾಗಿ ನಡೆದುಕೊಳ್ಳುವುದು.
ಮಾನವರು ದೇವರ ಊಳಿಗದವರು
7“ನಿಮಗೆ ಒಬ್ಬ ಆಳಿದ್ದಾನೆಂದು ಭಾವಿಸೋಣ. ಅವನು ಹೊಲ ಉತ್ತೋ, ಕುರಿ ಮೇಯಿಸಿಯೋ ಮನೆಗೆ ಬರುತ್ತಾನೆ. ಬಂದಾಕ್ಷಣವೇ, ‘ಬಾ, ನನ್ನೊಂದಿಗೆ ಊಟಮಾಡು,’ ಎಂದು ನಿಮ್ಮಲ್ಲಿ ಯಾರಾದರೂ ಅವನಿಗೆ ಹೇಳುತ್ತಾರೆಯೇ? ಇಲ್ಲ. 8ಅದಕ್ಕೆ ಬದಲಾಗಿ ‘ಊಟ ಸಿದ್ಧಮಾಡು; ನಾನು ಊಟಮಾಡಿ ಮುಗಿಸುವ ತನಕ ನಡುಕಟ್ಟಿಕೊಂಡು ನನಗೆ ಉಪಚಾರಮಾಡು. ಅನಂತರ ನೀನು ಊಟಮಾಡುವೆಯಂತೆ,’ ಎಂದು ಹೇಳುತ್ತಾರಲ್ಲವೇ? 9ತಮ್ಮ ಆಜ್ಞೆಯ ಪ್ರಕಾರ ನಡೆದುಕೊಂಡ ಆಳಿಗೆ ಅವರು ಕೃತಜ್ಞತೆ ಸಲ್ಲಿಸುತ್ತಾರೆಯೇ? ಇಲ್ಲ. 10ಹಾಗೆಯೇ ನೀವು ಸಹ. ನಿಮಗೆ ವಿಧಿಸಿದ್ದನ್ನು ಮಾಡಿ ಮುಗಿಸಿದ ನಂತರ, ‘ನಾವು ಕೇವಲ ಆಳುಗಳು; ನಮ್ಮ ಕರ್ತವ್ಯವನ್ನು ನಾವು ಮಾಡಿದ್ದೇವೆ,’ ಎಂದುಕೊಳ್ಳಿರಿ,” ಎಂದರು.
ಕೃತಜ್ಞನಾದ ಕುಷ್ಠರೋಗಿ
11ಯೇಸುಸ್ವಾಮಿ ಜೆರುಸಲೇಮಿಗೆ ಪ್ರಯಾಣ ಮಾಡುತ್ತಾ ಸಮಾರಿಯ ಹಾಗೂ ಗಲಿಲೇಯ ಗಡಿಗಳ ನಡುವೆ ಹಾದುಹೋಗುತ್ತಿದ್ದರು. 12ಒಂದು ಗ್ರಾಮವನ್ನು ಸಮೀಪಿಸಿದಾಗ ಕುಷ್ಠರೋಗದಿಂದ ನರಳುತ್ತಿದ್ದ ಹತ್ತುಮಂದಿ ಅವರಿಗೆ ಎದುರಾಗಿ ಬಂದರು. ದೂರದಲ್ಲೇ ನಿಂತು, 13‘ಯೇಸುವೇ, ಗುರುವೇ, ನಮ್ಮ ಮೇಲೆ ಕರುಣೆಯಿಡಿ,’ ಎಂದು ಕೂಗಿ ಕೇಳಿಕೊಂಡರು.
14ಯೇಸು ಅವರನ್ನು ನೋಡಿ, “ನೀವು ಯಾಜಕರ ಬಳಿಗೆ ಹೋಗಿರಿ. ಅವರು ನಿಮ್ಮನ್ನು ಪರೀಕ್ಷಿಸಲಿ,” ಎಂದರು.
ಅಂತೆಯೇ, ಅವರು ದಾರಿಯಲ್ಲಿ ಹೋಗುತ್ತಿರುವಾಗಲೇ ಗುಣಹೊಂದಿದರು. 15ಅವರಲ್ಲಿ ಒಬ್ಬನು ತಾನು ಗುಣಹೊಂದಿದ್ದನ್ನು ಕಂಡು, ಹರ್ಷೋದ್ಗಾರದಿಂದ ದೇವರನ್ನು ಸ್ತುತಿಸುತ್ತಾ ಹಿಂದಿರುಗಿ ಬಂದನು. 16ಯೇಸುವಿನ ಪಾದಕ್ಕೆ ಸಾಷ್ಟಾಂಗವೆರಗಿ ಕೃತಜ್ಞತೆಯನ್ನು ಸಲ್ಲಿಸಿದನು. ಇವನೋ ಸಮಾರಿಯದವನು! 17ಆಗ ಯೇಸು, “ಹತ್ತುಮಂದಿ ಗುಣಹೊಂದಿದರಲ್ಲವೆ? ಮಿಕ್ಕ ಒಂಬತ್ತು ಮಂದಿ ಎಲ್ಲಿ? 18ದೇವರನ್ನು ಸ್ತುತಿಸುವುದಕ್ಕೆ ಈ ಹೊರನಾಡಿನವನು ಹೊರತು ಬೇರಾರೂ ಬರಲಿಲ್ಲವೇ?” ಎಂದರು. 19ಅನಂತರ ಆ ಸಮಾರಿಯದವನಿಗೆ, “ಎದ್ದುಹೋಗು; ನಿನ್ನ ವಿಶ್ವಾಸವೇ ನಿನ್ನನ್ನು ಸ್ವಸ್ಥಪಡಿಸಿದೆ,” ಎಂದು ಹೇಳಿದರು.
ದೇವರ ಸಾಮ್ರಾಜ್ಯದ ಭವ್ಯ ಆಗಮನ
(ಮತ್ತಾ. 24:22-28,37-41)
20ದೇವರ ಸಾಮ್ರಾಜ್ಯವು ಯಾವಾಗ ಬರುವುದೆಂದು ಫರಿಸಾಯರು ಕೇಳಿದಾಗ ಯೇಸುಸ್ವಾಮಿ ಪ್ರತ್ಯುತ್ತರವಾಗಿ, “ದೇವರ ಸಾಮ್ರಾಜ್ಯವು ಕಣ್ಣುಗಳಿಗೆ ಕಾಣಿಸುವಂತೆ ಬರುವುದಿಲ್ಲ. 21‘ಇಗೋ, ಅದು ಇಲ್ಲಿದೆ ಅಥವಾ ಅಲ್ಲಿದೆ,’ ಎಂದು ಹೇಳುವಂತಿಲ್ಲ. ಏಕೆಂದರೆ, ದೇವರ ಸಾಮ್ರಾಜ್ಯವು ನಿಮ್ಮೊಳಗೇ ಇದೆ,” ಎಂದರು.
22ಅನಂತರ ಶಿಷ್ಯರನ್ನು ಉದ್ದೇಶಿಸಿ, “ಕಾಲ ಒಂದು ಬರುವುದು, ಆಗ ನರಪುತ್ರನೊಂದಿಗೆ ಒಂದು ದಿನವನ್ನಾದರೂ ಕಳೆಯಲು ಹಂಬಲಿಸುವಿರಿ. ಆದರೆ ನಿಮಗದು ಲಭಿಸದು. 23‘ಇಗೋ, ಇಲ್ಲಿದ್ದಾನೆ; ಅಗೋ ಅಲ್ಲಿದ್ದಾನೆ,’ ಎಂದು ಜನರು ಸುದ್ದಿ ಎಬ್ಬಿಸುವರು. ಅದನ್ನು ನೀವು ನೋಡಲು ಹೋಗಬೇಡಿ; ಅಂಥವರನ್ನು ಹಿಂಬಾಲಿಸಲೂ ಬೇಡಿ. 24ಆಕಾಶದ ಒಂದು ದಿಕ್ಕಿನಿಂದ ಇನ್ನೊಂದು ದಿಕ್ಕಿನವರೆಗೆ ಮಿನುಗಿ ಹೊಳೆಯುವ ಮಿಂಚಿನಂತೆ ನರಪುತ್ರನು ತಾನು ಬರುವ ಕಾಲದಲ್ಲಿ ಕಾಣಿಸಿಕೊಳ್ಳುವನು. 25ಆದರೆ ಅದಕ್ಕೆ ಮೊದಲು ಆತನು ತೀವ್ರ ಯಾತನೆಯನ್ನು ಅನುಭವಿಸಿ ಈ ಪೀಳಿಗೆಯಿಂದ ತಿರಸ್ಕೃತನಾಗಬೇಕು. 26ನೋವನ ಕಾಲದಲ್ಲಿ ನಡೆದಂತೆಯೇ ನರಪುತ್ರನು ಬರುವ ಕಾಲದಲ್ಲೂ ನಡೆಯುವುದು. 27ನೋವನು ನಾವೆಯನ್ನು ಹತ್ತುವ ದಿನದ ತನಕ ಜನರು ತಿನ್ನುತ್ತಾ ಕುಡಿಯುತ್ತಾ ಇದ್ದರು; ಮದುವೆ ಮಾಡಿಕೊಳ್ಳುತ್ತಾ, ಮಾಡಿಕೊಡುತ್ತಾ ಇದ್ದರು; ಜಲಪ್ರಳಯ ಬಂದು ಎಲ್ಲರನ್ನು ನಾಶಮಾಡಿತು. 28ಅಂತೆಯೇ, ಲೋತನ ಕಾಲದಲ್ಲೂ ನಡೆಯಿತು. ಜನರು ಅನ್ನಪಾನೀಯಗಳಲ್ಲಿ ಆಸಕ್ತರಾಗಿದ್ದರು; ಲೇವಾದೇವಿಯಲ್ಲಿ ತೊಡಗಿದ್ದರು; ನೆಡುವುದರಲ್ಲೂ ನಿರ್ಮಿಸುವುದರಲ್ಲೂ ನಿರತರಾಗಿದ್ದರು. 29ಲೋತನು ಸೊದೋಮ್ ಊರನ್ನು ಬಿಟ್ಟು ತೆರಳಿದ ದಿನದಂದೇ ಆಕಾಶದಿಂದ ಅಗ್ನಿ ಮತ್ತು ಗಂಧಕದ ಮಳೆ ಸುರಿದು ಎಲ್ಲರನ್ನು ನಾಶಮಾಡಿತು. 30ನರಪುತ್ರನು ಪ್ರತ್ಯಕ್ಷನಾಗುವ ದಿನದಲ್ಲೂ ಹಾಗೆಯೇ ನಡೆಯುವುದು.
31“ಆ ದಿನದಲ್ಲಿ ಮಾಳಿಗೆಯ ಮೇಲಿರುವವನು ಮನೆಯಲ್ಲಿರುವ ಸರಕುಸಾಮಗ್ರಿಗಳನ್ನು ತೆಗೆದುಕೊಳ್ಳಲು ಕೆಳಗಿಳಿಯದಿರಲಿ. ಅಂತೆಯೇ, ಹೊಲದಲ್ಲಿರುವವನು ಮನೆಗೆ ಹಿಂದಿರುಗದಿರಲಿ. 32ಲೋತನ ಪತ್ನಿಗಾದ ಗತಿಯನ್ನು ನೆನಪಿಗೆ ತಂದುಕೊಳ್ಳಿರಿ!
33“ಯಾರು ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಇಚ್ಛಿಸುತ್ತಾನೋ ಅವನು ಅದನ್ನು ಕಳೆದುಕೊಳ್ಳುತ್ತಾನೆ; ಯಾರು ತನ್ನ ಪ್ರಾಣವನ್ನು ಕಳೆದುಕೊಳ್ಳುತ್ತಾನೋ ಅವನು ಅದನ್ನು ರಕ್ಷಿಸಿಕೊಳ್ಳುತ್ತಾನೆ. 34ಆ ರಾತ್ರಿ ಒಂದೇ ಹಾಸಿಗೆಯಲ್ಲಿ ಇಬ್ಬರು ಮಲಗಿದ್ದರೆ, ಆ ಇಬ್ಬರಲ್ಲಿ ಒಬ್ಬನನ್ನು ತೆಗೆದುಕೊಂಡು ಹೋಗಲಾಗುವುದು; ಒಬ್ಬನನ್ನು ಬಿಡಲಾಗುವುದು. 35ಒಂದೇ ಕಲ್ಲಲ್ಲಿ ಬೀಸುತ್ತಿರುವ ಇಬ್ಬರು ಮಹಿಳೆಯರಲ್ಲಿ, ಒಬ್ಬಳನ್ನು ತೆಗೆದುಕೊಂಡು ಹೋಗಲಾಗುವುದು, ಇನ್ನೊಬ್ಬಳನ್ನು ಬಿಡಲಾಗುವುದು. (36ಹೊಲದಲ್ಲಿದ್ದ ಇಬ್ಬರಲ್ಲಿ ಒಬ್ಬನನ್ನು ತೆಗೆದುಕೊಂಡು ಹೋಗಲಾಗುವುದು ಮತ್ತೊಬ್ಬನನ್ನು ಬಿಡಲಾಗುವುದು)” ಎಂದರು. 37“ಸ್ವಾಮೀ, ಇದು ಎಲ್ಲಿ ನಡೆಯುವುದು?” ಎಂದು ಶಿಷ್ಯರು ಕೇಳಿದಾಗ, ಯೇಸು, “ಹೆಣವಿದ್ದಲ್ಲಿ ರಣಹದ್ದುಗಳು ಬಂದು ಕೂಡುವುವು,” ಎಂದರು.

હાલમાં પસંદ કરેલ:

ಲೂಕ. 17: KANCLBSI

Highlight

શેર કરો

નકલ કરો

None

Want to have your highlights saved across all your devices? Sign up or sign in