ಯೋಹಾನ 7
7
ಯೇಸು ಪರ್ಣಶಾಲೆಗಳ ಜಾತ್ರೆಗೆ ಹೋಗಿ ಉಪದೇಶಮಾಡಿದ್ದು; ಆತನ ವಿಷಯವಾಗಿ ಜನರಲ್ಲಿ ವಾಗ್ವಾದ ನಡೆದದ್ದು ಅಧಿಕಾರಸ್ಥರು ಆತನನ್ನು ಹಿಡಿಯುವದಕ್ಕೆ ಪ್ರಯತ್ನಮಾಡಿದ್ದು
1ಈ ಸಂಗತಿಗಳಾದ ಮೇಲೆ ಯೇಸು ಗಲಿಲಾಯದಲ್ಲಿ ಸಂಚಾರಮಾಡುತ್ತಿದ್ದನು; ಯೆಹೂದ್ಯರು ಆತನನ್ನು ಕೊಲ್ಲುವ ಪ್ರಯತ್ನದಲ್ಲಿದ್ದದರಿಂದ ಆತನಿಗೆ ಯೂದಾಯದಲ್ಲಿ ಸಂಚಾರಮಾಡುವ ಮನಸ್ಸಿರಲಿಲ್ಲ. 2ಪರ್ಣಶಾಲೆಗಳ ಹಬ್ಬವೆಂಬ ಯೆಹೂದ್ಯರದೊಂದು ಜಾತ್ರೆಯು ಸಮೀಪವಾದಾಗ 3ಆತನ ತಮ್ಮಂದಿರು ಆತನಿಗೆ - ನೀನು ಮಾಡುವ ಕಾರ್ಯಗಳನ್ನು ನಿನ್ನ ಶಿಷ್ಯರು ಸಹ ನೋಡುವಂತೆ ಇಲ್ಲಿಂದ ಹೊರಟು ಯೂದಾಯಕ್ಕೆ ಹೋಗು; 4ಪ್ರಸಿದ್ಧಿಗೆ ಬರಬೇಕೆಂದಿರುವ ಯಾವನಾದರೂ ತಾನು ಮಾಡುವದನ್ನು ಮರೆಯಲ್ಲಿ ಮಾಡುವದಿಲ್ಲವಲ್ಲಾ; ನೀನು ಇಂಥ ಕಾರ್ಯಗಳನ್ನು ಮಾಡುವವನಾದ್ದರಿಂದ ಲೋಕಕ್ಕೆ ತಿಳಿಯಪಡಿಸಿಕೋ ಎಂದು ಹೇಳಿದರು. 5ಯಾಕಂದರೆ ಆತನ ಸಹೋದರರು ಸಹ ಆತನನ್ನು ನಂಬದೆ ಇದ್ದರು. 6ಯೇಸು ಅವರಿಗೆ - ನನ್ನ ಸಮಯವು ಇನ್ನೂ ಬಂದಿಲ್ಲ; ನಿಮ್ಮ ಸಮಯವು ಯಾವಾಗಲೂ ಸಿದ್ಧವಾಗಿದೆ. 7ಲೋಕವು ನಿಮ್ಮನ್ನು ಹಗೆಮಾಡಲಾರದು; ಆದರೆ ನಾನು ಅದರ ಕ್ರಿಯೆಗಳು ಕೆಟ್ಟವುಗಳೆಂದು ಸಾಕ್ಷಿಹೇಳುವದರಿಂದ ನನ್ನನ್ನು ಹಗೆಮಾಡುತ್ತದೆ. 8ನೀವೇ ಜಾತ್ರೆಗೆ ಹೋಗಿರಿ; ನನ್ನ ಸಮಯವು ಇನ್ನೂ ಒದಗದೆ ಇರುವದರಿಂದ ನಾನು ಈ ಜಾತ್ರೆಗೆ ಈಗ ಹೋಗುವದಿಲ್ಲವೆಂದು ಹೇಳಿದನು. 9ಇದನ್ನು ಹೇಳಿ ಗಲಿಲಾಯದಲ್ಲಿಯೇ ನಿಂತನು.
10ಆದರೆ ಆತನ ಸಹೋದರರು ಜಾತ್ರೆಗೆ ಹೋದ ಮೇಲೆ ಆತನು ಸಹ ಹೋದನು; ಜನರಿಗೆ ಕಾಣುವಂತೆ ಹೋಗದೆ ಮರೆಯಾಗಿ ಹೋದನು. 11ಜಾತ್ರೆಯಲ್ಲಿ ಯೆಹೂದ್ಯರು - ಅವನು ಎಲ್ಲಿದ್ದಾನೆಂದು ಆತನನ್ನು ಹುಡುಕುತ್ತಿದ್ದರು. 12ಮತ್ತು ಜನರ ಗುಂಪುಗಳಲ್ಲಿ ಆತನ ವಿಷಯವಾಗಿ ಬಹಳ ಗುಜುಗುಜು ಮಾತು ನಡೆಯುತ್ತಿತ್ತು. ಕೆಲವರು - ಆತನು ಒಳ್ಳೆಯವನು ಅಂದರು; ಇನ್ನು ಕೆಲವರು - ಅಲ್ಲ, ಜನರನ್ನು ತಪ್ಪಾದ ಮಾರ್ಗಕ್ಕೆ ಎಳೆಯುತ್ತಾನೆ ಅಂದರು. 13ಆದರೂ ಯೆಹೂದ್ಯರ ಭಯದಿಂದ ಯಾರೂ ಆತನ ವಿಷಯದಲ್ಲಿ ಧಾರಾಳವಾಗಿ ಮಾತಾಡಲಿಲ್ಲ.
14ಜಾತ್ರೆಯ ಮಧ್ಯಕಾಲದಲ್ಲಿ ಯೇಸು ದೇವಾಲಯಕ್ಕೆ ಹೋಗಿ ಬೋಧಿಸುತ್ತಿದ್ದನು. 15ಯೆಹೂದ್ಯರು ಅದಕ್ಕೆ ಆಶ್ಚರ್ಯಪಟ್ಟು - ವಿದ್ಯಾಭ್ಯಾಸ ಮಾಡದಿರುವ ಈತನಿಗೆ ಶಾಸ್ತ್ರಗಳು ತಿಳಿದಿರುವದು ಹೇಗೆ ಎಂದು ಹೇಳುತ್ತಿದ್ದರು. 16ಅದಕ್ಕೆ ಯೇಸು - ನಾನು ಹೇಳುವ ಬೋಧನೆಯು ನನ್ನದಲ್ಲ, ನನ್ನನ್ನು ಕಳುಹಿಸಿದಾತನದು. 17ಆತನ ಚಿತ್ತದಂತೆ ನಡೆಯುವದಕ್ಕೆ ಯಾರಿಗೆ ಮನಸ್ಸದೆಯೋ ಅವರಿಗೆ ಈ ಬೋಧನೆಯು ದೇವರಿಂದ ಬಂದದ್ದೋ ನಾನೇ ಕಲ್ಪಿಸಿ ಹೇಳಿದ್ದೋ ಗೊತ್ತಾಗುವದು. 18ಕಲ್ಪಿಸಿ ಹೇಳುವವನು ತನಗೆ ಮಾನ ಬರಬೇಕೆಂದು ಅಪೇಕ್ಷಿಸುತ್ತಾನೆ; ತನ್ನನ್ನು ಕಳುಹಿಸಿದವನಿಗೆ ಮಾನಬರಬೇಕೆಂದು ಅಪೇಕ್ಷಿಸುವವನು ಸತ್ಯವಂತನು, ಅಧರ್ಮವು ಅವನಲ್ಲಿ ಇಲ್ಲ. 19ಮೋಶೆಯು ನಿಮಗೆ ಧರ್ಮಶಾಸ್ತ್ರವನ್ನು ಕೊಟ್ಟಿದ್ದರೂ ನಿಮ್ಮಲ್ಲಿ ಒಬ್ಬನಾದರೂ ಧರ್ಮಶಾಸ್ತ್ರದಂತೆ ನಡೆಯುವದಿಲ್ಲವಲ್ಲಾ; ಯಾಕೆ ನನ್ನನ್ನು ಕೊಲ್ಲುವದಕ್ಕೆ ನೋಡುತ್ತೀರಿ? ಎಂದು ಹೇಳಿದನು. 20ಅದಕ್ಕೆ ಆ ಜನರು - ನಿನಗೆ ದೆವ್ವ ಹಿಡಿದದೆ; ಯಾರು ನಿನ್ನನ್ನು ಕೊಲ್ಲುವದಕ್ಕೆ ನೋಡುತ್ತಾರೆ? ಅಂದರು. 21ಯೇಸು ಅವರಿಗೆ - ಒಂದೇ ಕ್ರಿಯೆಯನ್ನು ಮಾಡಿದೆನು; ಅದಕ್ಕೆ ನೀವೆಲ್ಲರು ಬೆರಗಾಗಿದ್ದೀರಿ. 22ಮೋಶೆಯು ನಿಮಗೆ ಸುನ್ನತಿಯೆಂಬ ಸಂಸ್ಕಾರವನ್ನು ನೇವಿುಸಿದನು. ಅದು ಮೋಶೆಯಿಂದ ಬಂದದ್ದೆಂದು ನಾನು ಹೇಳುವದಿಲ್ಲ, ಮೂಲಪುರುಷರ ಕಾಲದಿಂದ ಬಂದದ್ದು. ಮತ್ತು ಆ ಸುನ್ನತಿಯನ್ನು ಸಬ್ಬತ್‍ದಿನದಲ್ಲಿಯೂ ಮಾಡುತ್ತೀರಿ. 23ಮೋಶೆಯ ನೇಮವನ್ನು ಮೀರಬಾರದೆಂದು ಒಬ್ಬನು ಸಬ್ಬತ್‍ದಿನದಲ್ಲಿ ಸುನ್ನತಿಮಾಡಿಸಿಕೊಳ್ಳುವದಾದರೆ ನಾನು ಸಬ್ಬತ್‍ದಿನದಲ್ಲಿ ಒಬ್ಬ ಮನುಷ್ಯನನ್ನು ಸಂಪೂರ್ಣವಾಗಿ ಸ್ವಸ್ಥಮಾಡಿದ್ದಕ್ಕೆ ನನ್ನ ಮೇಲೆ ಕೋಪಗೊಳ್ಳುತ್ತೀರೋ? 24ಕಣ್ಣಿಗೆ ತೋರಿದ್ದರ ಮೇಲೆ ತೀರ್ಪುಮಾಡಬೇಡಿರಿ; ನ್ಯಾಯವಾದ ತೀರ್ಪುಮಾಡಿರಿ ಎಂದು ಹೇಳಿದನು.
25ಯೆರೂಸಲೇವಿುನವರಲ್ಲಿ ಕೆಲವರು - ಇವನನ್ನಲ್ಲವೇ ಅವರು ಕೊಲ್ಲಬೇಕೆಂದಿರುವದು? 26ನೋಡಿರಿ, ಇವನು ಧಾರಾಳವಾಗಿ ಮಾತಾಡುತ್ತಾನೆ, ಅವರು ಅವನಿಗೆ ಏನೂ ಹೇಳುವದಿಲ್ಲ. ಹಿರೀಸಭೆಯವರು ಇವನೇ ಬರಬೇಕಾದ ಕ್ರಿಸ್ತನೆಂದು ನಿಶ್ಚಯಮಾಡಿಕೊಂಡಿದ್ದಾರೇನೋ? 27ಆದರೂ ಇವನು ಎಲ್ಲಿಯವನೆಂದು ಬಲ್ಲೆವು; ಕ್ರಿಸ್ತನು ಬರುವಾಗ ಅವನು ಎಲ್ಲಿಯವನೋ ಒಬ್ಬರಿಗೂ ತಿಳಿಯುವದಿಲ್ಲವೆಂದು ಮಾತಾಡಿಕೊಳ್ಳುತ್ತಿದ್ದರು. 28ಯೇಸು ಇದನ್ನು ತಿಳಿದು ದೇವಾಲಯದಲ್ಲಿ ಉಪದೇಶ ಮಾಡುವಾಗ - ನನ್ನನ್ನು ಬಲ್ಲಿರಿ, ನಾನು ಎಲ್ಲಿಯವನೆಂದು ಬಲ್ಲಿರಿ ನಿಜವೇ. ಆದರೂ ನಾನು ನನ್ನಷ್ಟಕ್ಕೆ ಬಂದವನಲ್ಲ, ನನ್ನನ್ನು ಕಳುಹಿಸಿದಾತನು ನಿಜವಾದವನು; ನೀವು ಆತನನ್ನು ಅರಿತವರಲ್ಲ. 29ನಾನು ಆತನನ್ನು ಬಲ್ಲೆನು; ಆತನ ಕಡೆಯಿಂದ ಬಂದವನಾದದರಿಂದಲೂ ನನ್ನನ್ನು ಆತನೇ ಕಳುಹಿಸಿದ್ದರಿಂದಲೂ ಆತನನ್ನು ಬಲ್ಲೆನೆಂದು ಕೂಗಿ ಹೇಳಿದನು. 30ಇದಕ್ಕಾಗಿ ಆತನನ್ನು ಹಿಡಿಯುವದಕ್ಕೆ ನೋಡುತ್ತಿದ್ದರು; ಆದರೆ ಆತನ ಕಾಲ ಇನ್ನೂ ಬಾರದೆ ಇದ್ದಕಾರಣ ಯಾರೂ ಆತನ ಮೇಲೆ ಕೈಹಾಕಲಿಲ್ಲ. 31ಜನರಲ್ಲಿ ಅನೇಕರು ಆತನನ್ನು ನಂಬಿ - ಕ್ರಿಸ್ತನು ಬಂದಾಗ ಈತನು ಮಾಡಿದ್ದಕ್ಕಿಂತ ಹೆಚ್ಚು ಸೂಚಕಕಾರ್ಯಗಳನ್ನು ಮಾಡಾನೋ ಎಂದು ಹೇಳಿದರು.
32ಜನರು ಆತನ ವಿಷಯವಾಗಿ ಗುಜುಗುಜು ಆಡಿದ ಈ ಮಾತುಗಳನ್ನು ಫರಿಸಾಯರು ಕೇಳಲು ಮಹಾಯಾಜಕರೂ ಫರಿಸಾಯರೂ ಆತನನ್ನು ಹಿಡಿಯುವದಕ್ಕೆ ಓಲೇಕಾರರನ್ನು ಕಳುಹಿಸಿದರು. 33ಆಗ ಯೇಸು - ಇನ್ನು ಸ್ವಲ್ಪಕಾಲ ನಾನು ನಿಮ್ಮಲ್ಲಿ ಇದ್ದು ಆಮೇಲೆ ನನ್ನನ್ನು ಕಳುಹಿಸಿದಾತನ ಬಳಿಗೆ ಹೊರಟು ಹೋಗುತ್ತೇನೆ. 34ನೀವು ನನ್ನನ್ನು ಹುಡುಕುವಿರಿ, ಆದರೆ ನನ್ನನ್ನು ಕಂಡುಕೊಳ್ಳದೆ ಹೋಗುವಿರಿ, ನಾನು ಇರುವಲ್ಲಿಗೆ ನೀವು ಬರಲಾರಿರಿ ಅಂದನು. 35ಅದಕ್ಕೆ ಯೆಹೂದ್ಯರು - ಇವನು ನಮಗೆ ಸಿಕ್ಕದ ಹಾಗೆ ಎಲ್ಲಿ ಹೋಗಬೇಕೆಂದಿರುತ್ತಾನೆ? ಗ್ರೀಕರೊಳಗೆ ಚದರಿಕೊಂಡಿರುವ ನಮ್ಮವರ ಬಳಿಗೆ ಹೋಗಿ ಆ ಗ್ರೀಕರಿಗೆ ಉಪದೇಶ ಮಾಡಬೇಕೆಂದಿರುತ್ತಾನೋ? 36ನನ್ನನ್ನು ಹುಡುಕುವಿರಿ, ಆದರೆ ನನ್ನನ್ನು ಕಂಡುಕೊಳ್ಳದೆ ಹೋಗುವಿರಿ, ನಾನು ಇರುವಲ್ಲಿಗೆ ನೀವು ಬರಲಾರಿರಿ ಎಂದು ಅವನು ಹೇಳಿದ ಮಾತು ಏನಿದ್ದೀತು? ಎಂಬದಾಗಿ ತಮ್ಮತಮ್ಮೊಳಗೆ ಮಾತಾಡಿಕೊಂಡರು.
37ಆ ಜಾತ್ರೆಯ ಮಹಾದಿವಸವಾದ ಕಡೇ ದಿನದಲ್ಲಿ ಯೇಸು ನಿಂತುಕೊಂಡು - ಯಾವನಿಗಾದರೂ ನೀರಡಿಕೆಯಾಗಿದ್ದರೆ ಅವನು ನನ್ನ ಬಳಿಗೆ ಬಂದು ಕುಡಿಯಲಿ. 38ನನ್ನನ್ನು ನಂಬಿದವನ ಹೊಟ್ಟೆಯೊಳಗಿಂದ ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ ಜೀವಕರವಾದ ನೀರಿನ ಹೊಳೆಗಳು ಹರಿಯುವವು ಎಂದು ಕೂಗಿ ಹೇಳಿದನು. 39ಇದನ್ನು ಯೇಸು ತನ್ನನ್ನು ನಂಬಿದವರು ಹೊಂದಲಿರುವ ಪವಿತ್ರಾತ್ಮವರವನ್ನು ಕುರಿತು ಹೇಳಿದನು; ಆತನು ಇನ್ನೂ ತನ್ನ ಮಹಿಮೆಯ ಪದವಿಯನ್ನು ಹೊಂದದೆ ಇದ್ದಕಾರಣ ಪವಿತ್ರಾತ್ಮವರವು ಇನ್ನೂ ಬಂದಿದ್ದಿಲ್ಲ. 40ಜನರಲ್ಲಿ ಕೆಲವರು ಆ ಮಾತುಗಳನ್ನು ಕೇಳಿ - ನಿಜವಾಗಿ ಈತನು ಬರಬೇಕಾದ ಪ್ರವಾದಿ ಅಂದರು; 41ಮತ್ತು ಕೆಲವರು - ಈತನು ಬರಬೇಕಾದ ಕ್ರಿಸ್ತನು ಅಂದರು. 42ಇನ್ನೂ ಕೆಲವರು - ಕ್ರಿಸ್ತನು ಗಲಿಲಾಯದಿಂದ ಬರುವದು ಹೇಗೆ? ದಾವೀದನ ಸಂತಾನದಿಂದಲೂ ದಾವೀದನು ಇದ್ದ ಬೇತ್ಲೆಹೇಮೆಂಬ ಗ್ರಾಮದಿಂದಲೂ ಕ್ರಿಸ್ತನು ಬರುವನು ಎಂಬದಾಗಿ ಶಾಸ್ತ್ರದಲ್ಲಿ ಉಂಟಲ್ಲವೇ ಎಂದು ಹೇಳಿದರು. 43ಹೀಗೆ ಜನರಲ್ಲಿ ಆತನನ್ನು ಕುರಿತು ಭೇದ ಉಂಟಾಯಿತು. 44ಅವರಲ್ಲಿ ಕೆಲವರು ಆತನನ್ನು ಹಿಡಿಯಬೇಕೆಂದಿದ್ದರೂ ಒಬ್ಬರೂ ಆತನ ಮೇಲೆ ಕೈಹಾಕಲಿಲ್ಲ.
45ಬಳಿಕ ಆ ಓಲೇಕಾರರು ಮಹಾಯಾಜಕರ ಮತ್ತು ಫರಿಸಾಯರ ಬಳಿಗೆ ಬಂದಾಗ ಇವರು - ನೀವು ಯಾಕೆ ಅವನನ್ನು ಹಿಡತರಲಿಲ್ಲ? ಎಂದು ಅವರನ್ನು ಕೇಳಿದ್ದಕ್ಕೆ 46ಆ ಓಲೇಕಾರರು - ಈ ಮನುಷ್ಯನು ಮಾತಾಡುವ ರೀತಿಯಲ್ಲಿ ಯಾರೂ ಎಂದೂ ಮಾತಾಡಿದ್ದಿಲ್ಲ ಎಂದು ಉತ್ತರಕೊಟ್ಟರು. 47ಅದಕ್ಕೆ ಫರಿಸಾಯರು - ನೀವೂ ಮರುಳಾದಿರಾ? 48ಹಿರೀಸಭೆಯವರಲ್ಲಿಯಾಗಲಿ ಫರಿಸಾಯರಲ್ಲಿಯಾಗಲಿ ಯಾರಾದರೂ ಅವನನ್ನು ನಂಬಿದ್ದಾರೋ? 49ಧರ್ಮಶಾಸ್ತ್ರವನ್ನರಿಯದಂಥ ಈ ಹಿಂಡು ಶಾಪಗ್ರಸ್ತವಾದದ್ದೇ ಅಂದರು. 50ಮುಂಚೆ ಯೇಸುವಿನ ಬಳಿಗೆ ಬಂದಿದ್ದ ನಿಕೊದೇಮನು ಅವರಲ್ಲಿ ಒಬ್ಬನಾಗಿದ್ದನು; 51ಅವನು ಅವರಿಗೆ - ನಮ್ಮ ಧರ್ಮಶಾಸ್ತ್ರವು ಮೊದಲು ಒಬ್ಬನನ್ನು ವಿಚಾರಿಸಿ ಅವನು ಮಾಡುವದೇನೆಂದು ತಿಳುಕೊಳ್ಳದೆ ಅವನ ವಿಷಯವಾಗಿ ತೀರ್ಪುಮಾಡುವದುಂಟೇ? ಎಂದು ಹೇಳಿದ್ದಕ್ಕೆ 52ಅವರು - ನೀನೂ ಗಲಿಲಾಯದವನೋ? ಗಲಿಲಾಯದಲ್ಲಿ ಪ್ರವಾದಿ ಹುಟ್ಟುವದೇ ಇಲ್ಲ, ವಿಚಾರಿಸಿ ನೋಡು ಅಂದರು.
ಫರಿಸಾಯರು ವ್ಯಭಿಚಾರಿಣಿಯಾದ ಒಬ್ಬ ಹೆಂಗಸನ್ನು ಯೇಸುವಿನ ಮುಂದೆ ತೀರ್ಪಿಗಾಗಿ ನಿಲ್ಲಿಸಿದ್ದು#7.52 7.53 ಮೊದಲುಗೊಂಡು 8.11 ರ ತನಕ ಬರೆದಿರುವ ವಚನಗಳು ಕೆಲವು ಪ್ರಾಚೀನ ಪ್ರತಿಗಳಲ್ಲಿ ಸಿಕ್ಕುವದಿಲ್ಲ; ಕೆಲವು ಪ್ರತಿಗಳಲ್ಲಿ ಹೆಚ್ಚುಕಡಿಮೆ ಉಂಟು.
53[ಎಲ್ಲರು ತಮ್ಮ ತಮ್ಮ ಮನೆಗೆ ಹೋದರು.
Sélection en cours:
ಯೋಹಾನ 7: KANJV-BSI
Surbrillance
Partager
Copier
Tu souhaites voir tes moments forts enregistrés sur tous tes appareils? Inscris-toi ou connecte-toi
Kannada J.V. Bible © The Bible Society of India, 2016.
Used by permission. All rights reserved worldwide.